ಕರಾವಳಿಯ ಸೌಂದರ್ಯದ ಕಲೆ ಯಕ್ಷಗಾನದ ಮುಮ್ಮೇಳದ ಸೂತ್ರವಿರುವುದು ಹಿಮ್ಮೇಳದಲ್ಲಿ. ಇಂತಹ ಹಿಮ್ಮೇಳದಲ್ಲಿರುವ ಚೆಂಡೆ, ಮದ್ದಳೆಯ ನಾದ ಮಾಧುರ್ಯದಲ್ಲಿ ರಂಗಸ್ಥಳ ರಂಗೇರುತ್ತದೆ. ಹೀಗೆ ಯಕ್ಷಗಾನ ರಂಗದಲ್ಲಿ ತಮ್ಮ ಚೆಂಡೆವಾದನದಿಂದ ರಂಗಸ್ಥಳ ರಂಗೆರಿಸುತ್ತಿರುವ ಕಲಾವಿದ ಪ್ರಜ್ವಲ್ ಮುಂಡಾಡಿ.
31.05.2006 ರಂದು ಬಸವ ಮರಕಾಲ ಹಾಗೂ ಗಿರಿಜ ದಂಪತಿಗಳ ಮಗನಾಗಿ ಜನನ. ತಂದೆ ಯಕ್ಷಗಾನದಲ್ಲಿ ಇರುವ ಕಾರಣ ಚಿಕ್ಕ ವಯಸ್ಸಿನಿಂದ ಯಕ್ಷಗಾನದ ಮೇಲೆ ಪ್ರೀತಿ ಬಹಳ ತಂದೆಯವರು ಮನೆಯಲ್ಲಿ ಚಂಡೆ ಮದ್ದಲೆ ಮುಟ್ಟುವುದಕ್ಕೆ ಬಿಡ್ತಾ ಇರ್ಲಿಲ್ಲ ತಂದೆಯವರ ಜೊತೆ ಯಕ್ಷಗಾನ ಕಾರ್ಯಕ್ರಮಕ್ಕೆ ಹೋಗಿ ನೋಡಿ ಕಲಿತು, ಮೇಳಗಳಿಗೆ ಬದಲಿಗೆ ಹೋಗಿ ಚಂಡೆವಾದನ್ನು ಕಲಿತೆ ಎಂದು ಹೇಳುತ್ತಾರೆ ಮುಂಡಾಡಿ.
ಶ್ರೀಕಾಂತ್ ಶೆಟ್ಟಿ ಯಾಡಮಗೆ, ರಾಕೇಶ್ ಮಲ್ಯ, ಸುನಿಲ್ ಭಂಡಾರಿ, ಅಕ್ಷಯ ಆಚಾರ್ಯ, ಶಶಾಂಕ್ ಆಚಾರ್ಯ, ಚೈತನ್ಯ ಕೃಷ್ಣ ಪದ್ಯಾಣ, ಸುಜನ್ ಕುಮಾರ್ ನೆಚ್ಚಿನ ಚೆಂಡೆ ಮದ್ದಳೆ ವಾದಕರು. ಗದಾಯುದ್ಧ, ಅಭಿಮನ್ಯು ಕಾಳಗ, ರತ್ನಾವತಿ ಕಲ್ಯಾಣ, ನಾಗಶ್ರೀ ನೆಚ್ಚಿನ ಪ್ರಸಂಗಗಳು. ರಾಘವೇಂದ್ರ ಆಚಾರ್ಯ ಜನ್ಸಾಲೆ, ಹೆರೆಂಜಾಲು ಗೋಪಾಲ್ ಗಾಣಿಗ, ನಗರ ಸುಬ್ರಮಣ್ಯ ಆಚಾರ್ಯ, ರವಿಚಂದ್ರ ಕನ್ನಡಿಕಟ್ಟೆ ನೆಚ್ಚಿನ ಭಾಗವತರು.
ಯಕ್ಷಗಾನದ ಇಂದಿನ ಸ್ಥಿತಿಗತಿ:-
ಯಕ್ಷಗಾನ ಕಲೆ ಅತ್ಯುತ್ಕೃಷ್ಟ ಮಟ್ಟದಲ್ಲಿದೆ, ಯಕ್ಷಗಾನದ ವ್ಯಾಪ್ತಿ ವಿಸ್ತಾರವಾಗಿದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪ್ರೇಕ್ಷಕರ ಬಗ್ಗೆ ಹೇಳುವುದಾದರೆ ಈ ಕಾಲದಲ್ಲಿ ಒಬ್ಬ ಕಲಾವಿದನ ಅಭಿಮಾನಿಗಳು ಇನ್ನೊಂದು ಯುವ ಕಲಾವಿದರನ್ನು ಬೆಳಸಬೇಕು. ಆದರೆ ಅದ್ಯಾವುದೂ ಇಲ್ಲ ಅನ್ನುದೆ ಬೇಸರ ಒಬ್ಬ ಯುವ ಕಲಾವಿದ ಬೆಳೆಯುತ್ತಿದ್ದಾರೆ ಅಂತ ಹೇಳಿದ್ರೆ ಆಗುದಿಲ್ಲ ನನ್ನ ಪ್ರಕಾರ ಎಲ್ಲ ಕಲಾಭಿಮಾನಿಗಳು ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಟ್ಟರೆ ಮಾತ್ರ ಯುವ ಕಲಾವಿದರು ಬೆಳೆಯಲು ಸಾಧ್ಯ.
ತೆಂಕಿನ ಮೇಳದಲ್ಲಿ ಚಂಡೆ ಮದ್ದಳೆವಾದಕನಾಗಿ ತಿರುಗಾಟ ಮಾಡ್ಬೇಕು ಎಂಬ ಆಸೆ ಇದೆ. ಪ್ರಥಮ ವರ್ಷದ ತಿರುಗಾಟವನ್ನು ಮಾರಣಕಟ್ಟೆ ಮೇಳದಲ್ಲಿ ಪ್ರಧಾನ ಚಂಡೆವಾದಕರಾಗಿ, ಪ್ರಸ್ತುತ ವರ್ಷ ಪೆರ್ಡೂರು ಮೇಳದಲ್ಲಿ ಪ್ರಧಾನ ಚಂಡೆವಾದಕರಾಗಿ ಕರ್ತವ್ಯ ನಿರ್ವಹಿಸುತಿದ್ದೇನೆ ಮೇಳದ ಮೇಳದ ಯಜಮಾನ್ರು, ಮೆನೇಜರ್ ಹಾಗೂ ಎಲ್ಲಾ ಕಲಾವಿದರೂ ನನಗೆ ತುಂಬಾ ಪ್ರೋತ್ಸಾಹ ಕೊಟ್ಟಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ವೇಷ ಮಾಡಿದ್ದೆ, ಭಾಗವತಿಕೆ ಮಾಡ್ತೇನೆ ಆದ್ರೆ ರಂಗದಲ್ಲಿ ಪದ್ಯ ಹೇಳಿದ್ದು ಬೆರಳೆಣಿಕೆ ಎಂದು ಹೇಳುತ್ತಾರೆ ಪ್ರಜ್ವಲ್ ಮುಂಡಾಡಿ.
ತೆಂಕುತಿಟ್ಟು, ಬಡಗುತಿಟ್ಟು ಪದ್ಯ ಕೇಳುವುದು ಇವರ ಹವ್ಯಾಸಗಳು ಹಾಗೂ ತೆಂಕಿನ ಯಕ್ಷಗಾನ ನೋಡುವುದು ಅಂದ್ರೆ ತುಂಬಾ ಇಷ್ಟ.
ತಂದೆ, ತಾಯಿ ಇವರ ಪ್ರೋತ್ಸಾಹ, ಪ್ರೇರಣೆ ಹಾಗೂ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಪ್ರಜ್ವಲ್.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ ಮಂಗಳೂರು.