ಬಾಲ್ಯದಲ್ಲಿ ಅಜ್ಜನ ಒಟ್ಟಿಗೆ ಯಕ್ಷಗಾನ ನೋಡಲು ಹೋಗುತ್ತಿದ್ದ ಇವರು ಅಜ್ಜ ತಂದ ಯಕ್ಷಗಾನದ ಸಿಡಿಗಳಲ್ಲಿ ಪ್ರಸಂಗದ ಬಗ್ಗೆ ನೋಡುತ್ತಿದ್ದರು. ಹಾಗೆಯೇ ಯಕ್ಷಗಾನವನ್ನು ನೋಡುತ್ತಾ ಇವರಿಗೆ ಯಕ್ಷಗಾನದ ಮೇಲೆ ಆಸಕ್ತಿಗೊಂಡು ಯಕ್ಷಗಾನ ಕಲಿಯಲು ಆರಂಭಿಸಿ ಇಂದು ಒಬ್ಬ ಒಳ್ಳೆಯ ಕಲಾವಿದನಾಗಿ ರೂಪುಗೊಳ್ಳುತ್ತಿರುವ ಯುವ ಪ್ರತಿಭೆ ಸನತ್ಕುಮಾರ್ ಆಚಾರ್ಯ.
26.10.2004 ರಂದು ಪುರುಷೋತ್ತಮ ಆಚಾರ್ಯ ಹಾಗೂ ಉಮಾವತಿ ಇವರ ಮಗನಾಗಿ ಜನನ. ಪ್ರಸ್ತುತ BSc ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶ್ರೀಮತಿ ವಿ. ಸುಮಂಗಲಾ ರತ್ನಾಕರ್ ರಾವ್ ಇವರ ಯಕ್ಷಗಾನ ಹಾಗೂ ಭರತನಾಟ್ಯ ಗುರುಗಳು.
ಹೆಚ್ಚಿನ ಎಲ್ಲಾ ಪ್ರಸಂಗಗಳು ಇಷ್ಟವೇ, ಹೆಚ್ಚಾಗಿ ಇಷ್ಟಪಡುವುದು ಪೌರಾಣಿಕ ಪ್ರಸಂಗಗಳನ್ನು.
ನೆಚ್ಚಿನ ವೇಷಗಳು:
ಎಲ್ಲಾ ಬಣ್ಣದ ವೇಷಗಳು, ಕೌಂಡ್ಲಿಕ, ಶಿಶುಪಾಲ, ಶತ್ರುಘ್ನ, ಸುದರ್ಶನ, ಬಬ್ರುವಾಹನ, ರಕ್ತಬೀಜ, ಮಾಗಧ, ಚಂಡ ಮುಂಡರು, ಹನುಮಂತ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:
ಮೊದಲು ಗುರುಗಳು ಹೇಳಿಕೊಟ್ಟದನ್ನು ಅಷ್ಟೇ ಕಂಠಪಾಠ ಮಾಡಿ ಹೇಳ್ತಾ ಇದ್ದೆ. ಮತ್ತೆ ಸ್ವಲ್ಪ ಸಮಯದ ನಂತರ ಗುರುಗಳಾದ ಸುಮಂಗಲ ಟೀಚರ್ ಪ್ರಸಂಗಕ್ಕೆ ಪೂರಕವಾದ ಒಂದಷ್ಟು ಅಂಶಗಳನ್ನು ಹೇಳಿ ಕೊಡ್ತಾ ಇದ್ರು. ಯಾವ ರೀತಿ ಕಥೆಯನ್ನು ಕೊಂಡುಹೋಗಬಹುದು, ಪ್ರಸಂಗದಲ್ಲಿರುವ ನೀತಿ ಏನು, ಪಾತ್ರದ ಸ್ವಭಾವ ಹೇಗೆ, ಮಾತಿನ ಧಾಟಿ ಹೀಗೆ ಅನೇಕ ಅಂಶಗಳನ್ನು ಹೇಳಿಕೊಡುತ್ತಿದ್ದರು.
ಹೊರಗಿನ ತಂಡದಲ್ಲಿ ವೇಷ ಮಾಡುವಾಗಲೂ ಗುರುಗಳ ಸಲಹೆ ಪಡೆದು, ಪ್ರಸಂಗ ಕಥೆ ಏನು ಎಂಬುವುದನ್ನು ಮೊದಲು ಅರ್ಥ ಮಾಡಿಕೊಂಡು ಹಿರಿಯ ಕಲಾವಿದರ ಪಾತ್ರ ನಿರ್ವಹಣೆಯ ಶೈಲಿಯನ್ನು ನೋಡಿ, ಮತ್ತೆ ಕೊಟ್ಟ ವೇಷದ ಬಣ್ಣಗಾರಿಕೆ ಹೇಗೆ ಅನ್ನುವುದನ್ನು ಗಮನಿಸಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಸನತ್ಕುಮಾರ್.
ಯಕ್ಷಗಾನದ ಇಂದಿನ ಸ್ಥಿತಿಗತಿ:
ಯಕ್ಷಗಾನದ ಇಂದಿನ ಸ್ಥಿತಿಗತಿ ಹೇಳುವಷ್ಟು ದೊಡ್ಡವನಲ್ಲ.
ಮೊದಲೆಲ್ಲ ಪೂರ್ತಿ ರಾತ್ರಿಯ ಆಟ, ಪೂರ್ಣ ಪ್ರಮಾಣದ ಪ್ರಸಂಗ ಜ್ಞಾನ ಸಿಗುತ್ತಿತ್ತು. ಈಗ ಕಾಲಮಿತಿ ಆಗಿದೆ. ಒಂದು ಕಥೆಯನ್ನು ಕಡಿಮೆ ಸಮಯದಲ್ಲಿ ಮುಗಿಸುವ ಅನಿವಾರ್ಯತೆ, ಆದರೆ ಇಡಿರಾತ್ರಿ ಆಟ ನೋಡುವ ಹಾಗೆ ಆಗುವುದಿಲ್ಲ. ಅಪರೂಪಕ್ಕೆ ಆಗುವ ಪ್ರಸಂಗಗಳ ಕಥೆ ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ನನಗು ಅಷ್ಟೇ. ಕಥೆ ಅರ್ಥ ಆಗುವ ಸಮಯಕ್ಕೆ ಭಾಗವತರು ಮಂಗಳ ಹೇಳ್ತ ಇರ್ತಾರೆ, ಅದೇ ಇಡೀ ರಾತ್ರಿಯ ಪ್ರಸಂಗ ಇದ್ದರೆ ಪ್ರಸಂಗದ ಆಳ ಗೊತ್ತಾಗುತ್ತದೆ, ಸ್ಪಷ್ಟವಾಗಿದೆ ಅರ್ಥ ಆಗುತ್ತದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:
ಪ್ರೇಕ್ಷಕರಿಗೆ ಬಡ ಬಡ ಓಡುವ ಪ್ರಸಂಗಗಳು ಬೇಕು, ಹಾಗಂತ ಕೆಲವರು ಮಾತನ್ನು ಇಷ್ಟ ಪಡುವವರು ಇದ್ದಾರೆ. ಮತ್ತೆ ಹೆಚ್ಚಿನವರಿಗೆ ದಿಗಿಣ ಬೇಕು, ಕುಣಿತ ಬೇಕು. ನಮ್ಮ ಪ್ರಾಯದವರು ಬಯಸುವುದು ಇದನ್ನೇ, ಒಂದೋ ಅಬ್ಬರ ಇರ್ಬೇಕು ಇಲ್ವೋ ಸರಿ ದಿಗಿಣ ಹಾಕ್ಬೇಕು. ಅರ್ಥಗಾರಿಕೆಯನ್ನು ನೋಡುವವರಿಲ್ಲ, ಹಾಗಂತ ಎಲ್ಲರೂ ಇದೇ ರೀತಿ ಇಲ್ಲ.
ಭರತನಾಟ್ಯದ ಬಗ್ಗೆ ಹೇಳುವುದಾದ್ರೆ ಸಣ್ಣದ್ರಿಂದಲೂ ಆಸಕ್ತಿ ಇತ್ತು. ಮೊದಲು ಕಲಿತ ಸರಕಾರಿ ಪ್ರಾಥಮಿಕ ಶಾಲೆ ಉಪ್ಪಳಿಗೆ ಪುತ್ತೂರು ಇಲ್ಲಿ ಭರತನಾಟ್ಯ ತರಗತಿಗಳು ನಡೆಯುತ್ತಿರುವಾಗ ಎರಡನೇ ತರಗತಿಯಲ್ಲಿದ್ದಾಗ ಸೇರಿದ್ದೆ, ಮೂರನೇ ತರಗತಿ ಕಳೆದ ಮೇಲೆ ನಾನು ಮಂಗಳೂರಿಗೆ ಅಪ್ಪ ಅಮ್ಮನ ಮನೆಗೆ ಬಂದೆ. ಅಲ್ಲಿ ಅವರೆಗೂ ಅಜ್ಜ ಅಜ್ಜಿ ಒಟ್ಟಿಗೆ ಬೆಳೆದವ. ಹಾಗೇ ಅಲ್ಲಿ ಅದನ್ನು ಮುಂದುವರೆಸಲಿಕ್ಕೆ ಆಗ್ಲಿಲ್ಲ. ಆಗ ಕಲಿಸುತ್ತಿದ್ದ ಗುರುಗಳ ಹೆಸರು ನನಗೆ ಗೊತ್ತಿಲ್ಲ.
ಮತ್ತೆ ಮಂಗಳೂರಿಗೆ ಬಂದ ಮೇಲೆ ಭರತನಾಟ್ಯ ತರಗತಿಗೆ ಸೇರ್ಬೇಕುಂತ ಮನಸಿತ್ತು, ಆದ್ರೆ ಸಮಯ ನನ್ನ ಜೊತೆ ಇರ್ಲಿಲ್ಲ. ಸುಮಂಗಲ ಟೀಚರ್ ಹತ್ತಿರ ಯಕ್ಷಗಾನ ಅಭ್ಯಾಸಕ್ಕೆ ಸೇರಿದೆ. ಯಕ್ಷಗಾನದ ಅಂಗಶುದ್ಧಿಗೆ ಬೇಕಾಗಿ ಹಸ್ತಮುದ್ರೆಗಳನ್ನೆಲ್ಲ ಹೇಳಿ ಕೊಡ್ತಾ ಇದ್ರು. ಮತ್ತೆ ದಿನಗಳು ಕಳೆದ ಹಾಗೇ ಮನೆಯವರಿಗೆ ಹೇಳದೆ ಟೀಚರ್ ಹತ್ತಿರವೆ ಭರತನಾಟ್ಯ ತರಗತಿಗೆ ಸೇರಿದೆ. ಒಂದು ಕಾರ್ಯಕ್ರಮ ಕೊಡುವ ಒಂದು ವಾರ ಮೊದಲು ಮನೆಯವರಿಗೆ ಗುರೂಮುಖೇನ ವಿಷಯ ತಿಳಿಯಿತು. ನಾನು ಕೂಡ ಆಗ್ಲೇ ಹೇಳಿದೆ, ಮತ್ತೆ ಎಲ್ಲರಿಗೂ ಒಪ್ಪಿಗೆ ಆಯ್ತು.
ಭರತನಾಟ್ಯದಲ್ಲಿ ನಾನೊಂದು ಸಣ್ಣ ಚಿಗುರು ಮಾತ್ರ.
ನನ್ನ ಗುರುಗಳೇ ನನ್ನ ಸ್ಫೂರ್ತಿ. ನನ್ನ ಈ ಬೆಳವಣಿಗೆಗೆ ಮುಖ್ಯ ಕಾರಣರು ಅವರೆ, ಹಾಗೆಯೇ ನನ್ನ ಪೋಷಕರು ಕೂಡ.
ಇನ್ನು ಭರತನಾಟ್ಯದ ಬಗ್ಗೆ ಹೆಚ್ಚು ಮಾತಾಡುವಷ್ಟು ಬೆಳೆದವ ನಾನಲ್ಲ.
ಮತ್ತೆ ಈಗಿನವರಿಗೆ ಪಾರಂಪರಿಕ ಶೈಲಿ ಹಿಡಿಸುವುದಿಲ್ಲ. ಅವರಿಗೆ ಹೊಸತನ ಬೇಕಾಗ್ತದೆ, ಹೊಸ ಹೊಸ ಆವಿಷ್ಕಾರ ಗಳನ್ನು ಇಷ್ಟಪಡ್ತಾರೆ. ಹಾಗಂತ ಹೇಳಿ ಕಲಾವಿದರು ಪರಂಪರೆ ಬಿಟ್ಟು ಬಿಡ್ಬಾರ್ದು ಮೂಲವನ್ನು ಹಿಡ್ಕೊಂಡು, ಹೊಸತನ್ನು ಅಳವಡಿಸಿಕೊಂಡು ಕಲೆಗೆ ಚ್ಯುತಿ ಬಾರದ ಹಾಗೇ ಪ್ರದರ್ಶನ ನೀಡಬೇಕಾಗ್ತದೆ.
ಯಕ್ಷಗಾನ ಮೇಳದಲ್ಲಿ ತಿರುಗಾಟ ಮಾಡ್ಲಿಲ್ಲ. ಎರಡು ಬಾರಿ ಕಟೀಲು ಮೇಳದ ಆಟ ಹತ್ತಿರದಲ್ಲಿ ಇದ್ದಾಗ ಸೇವೆ ಮಾಡಿದ್ದೇನೆ ಆಷ್ಟೆ, ಮತ್ತೆ ನಮ್ಮ ತಂಡ ಯಕ್ಷಾರಾಧನಾ ಕಲಾ ಕೇಂದ್ರದಲ್ಲಿ ವೇಷ ಮಾಡಿದ್ದು, ಅದಲ್ಲದೆ ಅಂತರ ಕಾಲೇಜು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. ಮತ್ತೆ ಹವ್ಯಾಸಿ ಕಲಾ ಬಳಗಗಳಾದ ನಾಗಬ್ರಹ್ಮ ಯಕ್ಷ ಕಲಾ ವೃಂದ ಕೋಡಿಕಲ್, ಚಾಮುಂಡೇಶ್ವರಿ ಯಕ್ಷಗಾನ ಮಂಡಳಿ ಹೊಯಿಗೆಬೈಲ್, ಹಾಗೇ ಗುರು ನರಸಿಂಹ ಮಯ್ಯ ಅಲೆತ್ತೂರ್ ರವರ ಯಕ್ಷ ಕದಂಬ ತಂಡದಲ್ಲಿ ವೇಷ ಮಾಡಿದ್ದೇನೆ.
ಸನ್ಮಾನ ಸಿಗುವಷ್ಟು ದೊಡ್ಡ ಸಾಧನೆ ಇನ್ನೂ ಏನು ಮಾಡಲಿಲ್ಲ.
ಅಂತರ್ ಕಾಲೇಜು ಸ್ಪರ್ಧೆಯಲ್ಲಿ ಬಹುಮಾನಗಳು ಸಿಕ್ಕಿವೆ.
ಚಿತ್ರಕಲೆ, ಭರತನಾಟ್ಯ, ಪುಸ್ತಕ ಓದುವುದು, ಸಣ್ಣ ಪುಟ್ಟ ಮರದ ಕಲಾಕೃತಿ ತಯಾರಿ ಇತ್ಯಾದಿ ಇವರ ಹವ್ಯಾಸಗಳು.
ಯಕ್ಷಗಾನ ಹಾಗೂ ಭರತನಾಟ್ಯ ಕ್ಷೇತ್ರದಲ್ಲಿ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಯೋಜನೆ ಏನು ಇಲ್ಲ. ಆಯುರಾರೋಗ್ಯ ಇರುವವರೆಗೂ ಕಲಾ ಸೇವೆ ಮಾಡುವುದು, ಪ್ರಸಂಗಗಳ ಅಧ್ಯಯನ ಮಾಡುವುದು ಅಷ್ಟೇ ಎನ್ನುತ್ತಾರೆ ಸನತ್ಕುಮಾರ್.
ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ಹಾಗೂ ಭರತನಾಟ್ಯ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಸನತ್ಕುಮಾರ್.
- ಶ್ರವಣ್ ಕಾರಂತ್ ಕೆ.,
ಶಕ್ತಿನಗರ, ಮಂಗಳೂರು
1 Comment
Beautiful support to upcoming artist by Shravan Karanth through his article.
Thanks to Roovari for widely spreading the art and artists