ಬೆಳಗಾವಿ : ಕನ್ನಡ ಸಾಹಿತ್ಯ ಭವನದಲ್ಲಿ ಡಾ. ಡಿ.ಎಸ್. ಕರ್ಕಿ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಡಾ. ಡಿ.ಎಸ್. ಕರ್ಕಿ 116ನೇ ಜನ್ಮದಿನೋತ್ಸವ ಹಾಗೂ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 31-12-2023ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಾವೇರಿ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ವಿಭಾಗದ ಡಾ. ಗೀತಾಂಜಲಿ ಕುರಡಗಿ ಇವರು ಮಾತನಾಡುತ್ತಾ “ಗಡಿಯಲ್ಲಿ ಕನ್ನಡ ಕಟ್ಟಿ ಬೆಳೆಸಿದ ಕೀರ್ತಿ ಡಾ. ಡಿ.ಎಸ್. ಕರ್ಕಿ ಅವರಿಗೆ ಸಲ್ಲುತ್ತದೆ. ಅವರು, ಹಚ್ಚಿದ ಕನ್ನಡ ದೀಪ ನಿರಂತರವಾಗಿ ಬೆಳಗುತ್ತಿದ್ದು, ನಾಡು-ನುಡಿಗೆ ಕರ್ಕಿಯವರ ಅಪಾರ ಕೊಡುಗೆಯನ್ನು ಸ್ಮರಿಸುವಂತಿದೆ. 1907ರಲ್ಲಿ ಬೆಳಗಾವಿಯ ಬೆಲ್ಲದ ಬಾಗೇವಾಡಿಯಲ್ಲಿ ಹುಟ್ಟಿದ ಕರ್ಕಿಯವರು ಹುಟ್ಟಿ, ಶಿಕ್ಷಕರಾಗಿ ಜೀವನ ನಿರ್ವಹಿಸಿ, ಕನ್ನಡ ಜ್ಯೋತಿ ಬೆಳೆಗಿದವರು. ಡಿ.ಎಸ್. ಕರ್ಕಿ ಅವರಿಗೆ ಕಾವ್ಯ ಕೃಷಿ ವಿಶೇಷ ಕ್ಷೇತ್ರವಾದರೂ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿಯೂ ಜನಪರ ವಿಚಾರಗಳನ್ನು ನೀಡಿದ್ದಾರೆ” ಎಂದು ಹೇಳಿದರು.
ಡಾ. ಡಿ.ಎಸ್.ಕರ್ಕಿಯವರು ನವೋದಯ ಪಾವಿತ್ರ್ಯತೆ ಕಾಪಾಡಿಕೊಂಡು ಬಂದ ನಾಡಿನ ಅಗ್ರಗಣ್ಯ ಕವಿಗಳು. ಸತ್ಯವನ್ನು ಕೊಲ್ಲಲು ಆಗಲ್ಲ, ಸತ್ಯ ಹೇಳುವವರನ್ನು ಕೊಲ್ಲುತ್ತಾರೆ. ಹೀಗಾಗಿ ಪ್ರಶಸ್ತಿಗಾಗಿ ಸಾಹಿತ್ಯ ಬರೆಯಬಾರದು. ಜನಪರ ಕಾಳಜಿ ಇರುವುದೇ ನಿಜವಾದ ಸಾಹಿತ್ಯ. ನಾಡಿನ ಕುವೆಂಪು ಸೇರಿ ಎಲ್ಲಾ ಕವಿಗಳಿಗೆ ದೊಡ್ಡ ಗುರು ಬಸವಣ್ಣ ಎಂದು ಸ್ಮರಿಸಿಕೊಂಡರು. ಇವರ ಕನ್ನಡ ಸೇವೆಗೆ ಅತ್ಯುತ್ತಮ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಹಿರಿಯ ಸಾಹಿತಿ ಪಾಟೀಲ ಪುಟ್ಟಪ್ಪ ಅವರು ಡಾ. ಡಿ.ಎಸ್. ಕರ್ಕಿಯವರಿಗೆ ಚಿರಂಜೀವಿ ಕವಿ ಎಂದು ಕರೆದರು. ಕನ್ನಡಕ್ಕೆ ಉತ್ತಮ ಕೃತಿ ನೀಡಿದ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಿ, ಶುಭಹಾರೈಸಿದರು.
ಜಾಗತಿಕ ಲಿಂಗಾಯತ ಮಹಾ ಸಭಾ ಅಧ್ಯಕ್ಷರಾದ ಶ್ರೀ ಬಸವರಾಜ ರೊಟ್ಟಿ ಮಾತನಾಡಿ, “ಬಡತನದಲ್ಲಿ ಬೆಳೆದು ಬ೦ದ ಡಿ.ಎಸ್ ಕರ್ಕಿಯವರು ಪ್ರಕೃತಿ ಮೇಲೆ ಅಪಾರ ಗೌರವ ಇಟ್ಟಿಕೊಂಡಿದ್ದರು. ಪ್ರಕೃತಿ ಸೌಂದರ್ಯ ಅವರ ಜೀವಾಳವೇ ಆಗಿತ್ತು. ಆದರಂತೆ, ಶಿಕ್ಷಕ ವೃತ್ತಿಜೀವನದಲ್ಲಿ ಕನ್ನಡ ಕವಿತೆಗಳನ್ನು ಬರೆದು, ಗಡಿಯಲ್ಲಿ ಕನ್ನಡ ನೆಲೆಯೂರಲು ಶ್ರಮಿಸಿದರು. ಕರ್ಕಿಯವರ ಒಂದೊಂದು ಕವಿತೆಯೂ ಅಜರಾಮರ. ಕರ್ಕಿಯವರು ನಿಸ್ವಾರ್ಥದಿಂದ ಕನ್ನಡ ಸೇವೆ ಸಲ್ಲಿಸಿದ್ದಾರೆ. ಅವರ ಟ್ರಸ್ಟ್ ನಿರ್ಮಾಣಕ್ಕೆ ಸರ್ಕಾರದಿಂದ ಯಾವುದೇ ಸಹಾಯ-ಸಹಕಾರ ಪಡೆಯದೇ ಕುಟುಂಬದ ಸದಸ್ಯರು ನಿರಂತರಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಕನ್ನಡ ಉತ್ತಮ ಬರಗಾರರಿಗೆ ಪ್ರತಿ ವರ್ಷವೂ ಡಿ.ಎಸ್ ಕರ್ಕಿ ಪ್ರತಿಷ್ಠಾನ ಟ್ರಸ್ಟಿನಿಂದ ನಿರಂತರ ಗೌರವ ಸನ್ಮಾನ ಮಾಡುತ್ತಿರುವುದು ನಮ್ಮೆಲ್ಲರ ಹೆಮ್ಮೆ” ಎಂದ ಅವರು, ಕರ್ಕಿಯವರ ಟ್ರಸ್ಟಿಗೆ ಸಮುದಾಯದಿಂದ ಕೈಲಾದಷ್ಟು ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಕೃತಿ ಪ್ರಶಸ್ತಿ ಪುರಸ್ಕೃತರಾದ, ಶ್ರೀದೇವಿ ಕೆರೆಮನೆ ಕಾರವಾರ ಇವರ ‘ಆಸೆಯೆಂಬ ಶೂಲದ ಮೇಲೆ’, ಆಶಾ ಕಡಪಟ್ಟಿ ಬೆಳಗಾವಿ ಇವರ ‘ಹರಕು ಕೌದಿಯ ಕಿಂಡಿ’ ಹಾಗೂ ಇಂದಿರಾ ಮೋಟೆಬೆನ್ನೂರ್ ಬೆಳಗಾವಿ ಇವರ ‘ಭಾವ ಬೆಳಗು’ ಇವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಡಾ.ವಿಜಯಲಕ್ಷ್ಮೀ ಮ. ಪುಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆ ಡಾ. ರಮೇಶ ಮು. ಕರ್ಕಿ, ಮಹಾದೇವಿ ಚ. ಹುಣಶೀಬೀಜ ಸ್ವಾಗತಿಸಿದರು. ಕಾರ್ಯದರ್ಶಿ ಪ್ರೋ. ಗಿರೀಶ ಮು. ಕರ್ಕಿ, ಡಾ.ರಮೇಶ ಮು. ಕರ್ಕಿ, ಡಾ. ಕಲ್ಪನಾ ರ. ಕರ್ಕಿ, ಶಶಿಧರ ಮ. ಬೈರನಟ್ಟಿ, ಶಶಿಧರ ಬ. ಕರ್ಕಿ, ಸತೀಶ ಮು. ಕರ್ಕಿ, ಮಷ್ಪಾ ಕರ್ಕಿ, ಮನೋಹರ ಕರ್ಕಿ. ಗೌರಿ ಕರ್ಕಿ, ಉಮೇಶ ಕರ್ಕಿ, ಶ್ರೀದೇವಿ ಕರ್ಕಿ ಹಾಗೂ ಇತರರು ಉಪಸ್ಥಿತರಿದ್ದರು.