ಯಕ್ಷಗಾನವಂತೂ ಗಂಡುಕಲೆಯೆಂದೇ ಪ್ರಸಿದ್ಧವಾಗಿದೆ. ವೃತ್ತಿ ಕಲಾವಿದರು, ಹವ್ಯಾಸೀ ಕಲಾವಿದರು ರಂಗವೇರಿ ಮಿಂಚುತ್ತಿದ್ದಾರೆ. ಇಂತಹ ಶ್ರೀಮಂತ ಕಲೆಯಾದ ಯಕ್ಷಗಾನದಲ್ಲಿ ಕಲಾ ಸೇವೆಯನ್ನು ಮಾಡುತ್ತಿರುವ ಯುವ ಕಲಾವಿದೆ ಚೈತ್ರ ಹೆಚ್. 03.11.1998ರಂದು ಹೆಚ್ ಜಿತೇಂದ್ರಿಯ ರಾವ್ ಹಾಗೂ ವೀಣಾ ಜೆ.ಹೆಚ್ ಇವರ ಮಗಳಾಗಿ ಜನನ. Mcom ಇವರ ವಿದ್ಯಾಭ್ಯಾಸ.
ಚಿಕ್ಕ ವಯಸ್ಸಿನಿಂದ ಯಕ್ಷಗಾನವನ್ನು ಟಿವಿಯಲ್ಲಿ ಹಾಗೂ ರಂಗದಲ್ಲಿ ಕಲಾವಿದರು ಕುಣಿವುದನ್ನು ನೋಡಿ ನಾನು ಕೂಡ ಯಕ್ಷಗಾನ ಕಲಿಯಬೇಕು ಎಂದು ಆಸೆ ಹುಟ್ಟಿತು. ೬ನೇ ತರಗತಿಯಲ್ಲಿ ಶಾಲಾ ವಾರ್ಷಿಕೋತ್ಸವದಲ್ಲಿ ಯಕ್ಷಗಾನ ಮಾಡುವ ಎಂದು ಶಾಲೆಯಲ್ಲಿ ಹೇಳಿದರು, ಆಸಕ್ತಿ ಇರುವವರು ಬನ್ನಿ ಎಂದರು. ಹಾಗೆ ಯಕ್ಷಗಾನದ ರಂಗದ ಪಯಣ ಶುರುವಾಯಿತು ಹಾಗೂ ಮನೆಯಲ್ಲಿ ತಂದೆ ಹಾಗೂ ತಾಯಿಯ ಹತ್ತಿರ ಏನಾದರೂ ಕಲಿಯಬೇಕು ಎಂದು ಹೇಳಿದರೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ಇದು ನಾನು ಯಕ್ಷಗಾನ ರಂಗದಲ್ಲಿ ಸಾಧನೆ ಮಾಡಲು ತುಂಬಾ ಪ್ರೇರಣೆ ಎಂದು ಹೇಳುತ್ತಾರೆ ಚೈತ್ರ.
ರಮೇಶ್ ಶೆಟ್ಟಿ ಬಾಯಾರು ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಕಲಾವಿದೆ ಶ್ರೀಮತಿ ಪೂರ್ಣಿಮಾ ಯತೀಶ್ ರೈ ಇವರ ಯಕ್ಷಗಾನದ ಗುರುಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಗುರುಗಳ ಹತ್ತಿರ ಪ್ರಸಂಗದ ನಡೆ ಹಾಗೂ ಪಾತ್ರದ ಬಗ್ಗೆ ಕೇಳಿ, ಪ್ರಸಂಗದ ಕಥೆ ಅರ್ಥ ಮಾಡಿಕೊಂಡು, ಕೊಟ್ಟ ಪಾತ್ರದ ಬಗ್ಗೆ ಒಂದು ಚಿತ್ರಣವನ್ನು ಕೇಳಿ ಹಾಗೂ ಭಾಗವತರ ಹತ್ತಿರ ಪ್ರಸಂಗದ ಪದ್ಯ ಬಗ್ಗೆ ತಿಳಿದು ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಚೈತ್ರ.
ಸುದರ್ಶನ ವಿಜಯ, ದೇವಿ ಮಹಾತ್ಮೆ, ಕೃಷ್ಣ ಲೀಲೆ ಕಂಸ ವಧೆ, ದಕ್ಷಾಧ್ವರ, ಶಶಿಪ್ರಭೆ ಪರಿಣಯ ಇವರ ನೆಚ್ಚಿನ ಪ್ರಸಂಗಗಳು.
ಲಕ್ಷ್ಮೀ, ದೇವಿ, ಕೃಷ್ಣ, ಮಾಲಿನಿ, ಶಶಿಪ್ರಭೆ ಹಾಗೂ ಎಲ್ಲಾ ಸ್ತ್ರೀ ಹಾಗೂ ಪುಂಡು ವೇಷಗಳು ಇವರ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನ ಒಳ್ಳೆಯ ರೀತಿಯಲ್ಲಿ ಮೂಡಿ ಬರ್ತಾ ಇದೆ. ಇದೇ ರೀತಿಯಲ್ಲಿ ಮುಂದುವರೆಯಬೇಕು. ನಮ್ಮ ಕರಾವಳಿಯ ಗಂಡು ಕಲೆಯಾದ ಯಕ್ಷಗಾನ ಪರಂಪರೆ ನಡೆಯಲ್ಲಿ ಇರಬೇಕು. ಯಾಕೆಂದರೆ ನಮ್ಮ ಚರಿತ್ರೆಯ ಬಗ್ಗೆ ಜನರಿಗೆ ಅತ್ಯಂತ ಸುಲಭದ ರೀತಿಯಲ್ಲಿ ಅರ್ಥ ಆಗುವ ಹಾಗೆ ತಿಳಿಸುವ ಕಲೆ ಯಕ್ಷಗಾನ. ಯಕ್ಷಗಾನ ನೋಡಿದರೆ ಪುರಾಣ ಕಥೆಗಳು ಅರ್ಥವಾಗುತ್ತದೆ. ಈಗಿನ ಮಕ್ಕಳಿಗೆ ಪುರಾಣ ಕಥೆಗಳು ಏನು ಗೊತಿಲ್ಲ, ಮಕ್ಕಳಿಗೆ ಟಿವಿಯಲ್ಲಿ ಕಾರ್ಟೂನ್ ತೋರಿಸುವ ಬದಲು ಯಕ್ಷಗಾನ ತೋರಿಸಿದರೆ ಪುರಾಣ ಕಥೆಗಳ ಬಗ್ಗೆ ತಿಳಿದು ಅವರು ಕೂಡ ಯಕ್ಷಗಾನದ ಬಗ್ಗೆ ಆಸಕ್ತಿ ಬೆಳೆದು ಯಕ್ಷಗಾನ ರಂಗಕ್ಕೆ ನಿಮ್ಮ ಮಕ್ಕಳು ಬರುವ ಹಾಗೆ ಮಾಡಿದರೆ ಯಕ್ಷಗಾನ ರಂಗಕ್ಕೆ ಇನ್ನೂ ಹೆಚ್ಚಿನ ಕಲಾವಿದರು ಹಾಗೂ ಪ್ರಾಶಸ್ತ್ಯ ಸಿಕ್ಕಿದ ಹಾಗೆ ಆಗುತ್ತೆ ಎಂದು ಚೈತ್ರ ಅವರು ಹೇಳುತ್ತಾರೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನ ರಂಗದಲ್ಲಿ ಒಳ್ಳೆಯ ರೀತಿಯ ಪ್ರೇಕ್ಷಕರು ಇದ್ದಾರೆ. ಬೇರೆ ಕಾರ್ಯಕ್ರಮ ಮಾಡುವ ಹಾಗೆಯೇ ಯಕ್ಷಗಾನ ಕಾರ್ಯಕ್ರಮವನ್ನು ತುಂಬಾ ಆಸಕ್ತಿಯಿಂದ ಮಾಡುತ್ತಿದ್ದಾರೆ. ಬಹುತೇಕ ಪ್ರೇಕ್ಷಕರು ಇಡೀ ರಾತ್ರಿ ಆಟ ನೋಡುವ ಮನಸ್ಥಿತಿ ಇಲ್ಲದಿರುವುದರಿಂದ ಸಮಯ ಮಿತಿ ಪ್ರದರ್ಶನಗಳು ನಡೆಯುತ್ತಿದೆ ಹಾಗೂ ಇತ್ತೀಚೆಗೆ ಮಕ್ಕಳು, ಯುವ ಪ್ರೇಕ್ಷಕರು ಯಕ್ಷಗಾನದ ಕಡೆಗೆ ವಾಲುತ್ತಿರುವುದು ಯಕ್ಷಗಾನಕ್ಕೆ ಪೂರಕ ಬೆಳವಣಿಗೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಕೊಟ್ಟ ಪಾತ್ರವನ್ನು ಚೆನ್ನಾಗಿ ಮಾಡಬೇಕು, ಪಾತ್ರ ಚಿತ್ರಣದ ಬಗ್ಗೆ ಮತ್ತು ತಿಳಿಯದೆ ಇರುವ ವಿಷಯದ ಬಗ್ಗೆ ಗುರುಗಳ ಬಳಿ ಕೇಳಿ ಯಕ್ಷಗಾನ ರಂಗದಲ್ಲಿ ಒಳ್ಳೆಯ ವೇಷಧಾರಿಯಾಗಿ ಬೆಳೆಯಬೇಕು. ಇದುವೇ ಮುಂದಿನ ಯೋಜನೆ ಎಂದು ಹೇಳುತ್ತಾರೆ ಚೈತ್ರ.
ಭರತನಾಟ್ಯದಲ್ಲಿ ಗುರುಗಳಾದ ವಿದುಷಿ ಶ್ರೀಮತಿ ಭಾರತಿ ಸುರೇಶ್ ಅವರ ಮಾರ್ಗದರ್ಶನದಲ್ಲಿ ಸೀನಿಯರ್ ಪರೀಕ್ಷೆಯನ್ನು ತೇರ್ಗಡೆ ಹೊಂದಿರುತ್ತಾರೆ. ಸಂಗೀತ ಕೇಳುವುದು, ನೃತ್ಯ ಕಾರ್ಯಕ್ರಮಕ್ಕೆ ಹೋಗುವುದು ಇವರ ಹವ್ಯಾಸಗಳು.
ಸನ್ಮಾನ ಹಾಗೂ ಪ್ರಶಸ್ತಿ:-
– ಯಕ್ಷ ಪ್ರತಿಭೆ.
– ಜ್ಞಾನಶ್ರೀ ರಾಜ್ಯ ಪ್ರಶಸ್ತಿ.
– ನವದುರ್ಗಾ ಫ್ರೆಂಡ್ಸ್ ಸರ್ಕಲ್ ಇವರು ಯುವ ಪ್ರತಿಭೆ ಎಂದು ಬಿರುದು ನೀಡಿ ಗೌರವಿಸಿದ್ದಾರೆ.
– ಯುವ ಚೇತನ ಹೊಸಬೆಟ್ಟು ಇವರ ಪ್ರತಿಭೆಯನ್ನು ನೋಡಿ ಗೌರವಿಸಿದ್ದಾರೆ.
ಯಕ್ಷಗಾನ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಬಹುಮಾನ ಹಾಗೂ ಪ್ರಶಸ್ತಿಗಳು ಸಿಕ್ಕಿರುತ್ತದೆ. ಗುರುಗಳಾದ ಪೂರ್ಣಿಮಾ ಯತೀಶ್ ರೈ ಅವರ ಜೊತೆಗೆ ಅನೇಕ ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ಚೆನೈ, ಮುಂಬೈ, ಬೆಂಗಳೂರು, ದೆಹಲಿ ಹೀಗೆ ಹಲವು ಕಡೆ ಯಕ್ಷಗಾನ ಕಾರ್ಯಕ್ರಮಗಳನ್ನು ನೀಡಿದ್ದೇನೆ ಎಂದು ಚೈತ್ರ ಅವರು ಹೇಳುತ್ತಾರೆ.
ಶ್ರೀ ಮಹಾಗಣಪತಿ ಮಕ್ಕಳ ಮತ್ತು ಮಹಿಳಾ ಯಕ್ಷಗಾನ ಸಂಘ ಬಾಳ ಕಾಟಿಪಳ್ಳ ಮೇಳದಲ್ಲಿ ೧೩ ವರ್ಷದಿಂದ ತಿರುಗಾಟವನ್ನು ಮಾಡುತ್ತಿದ್ದಾರೆ ಚೈತ್ರ.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು