ಸುರತ್ಕಲ್ : ಸುರತ್ಕಲ್ ಶ್ರೀ ಮಹಮ್ಮಾಯಿ ಕೃಪಾಪೋಷಿತ ಯಕ್ಷಗಾನ ನಾಟಕ ಸಭಾದಲ್ಲಿ ಹಲವಾರು ವರ್ಷಗಳಿಂದ ಕಲಾಸೇವೆ ಸಲ್ಲಿಸಿದ ಕಲಾವಿದರಿಗೆ ‘ಕೆ.ವಿ. ಪೈ ಪ್ರಶಸ್ತಿ 2026’ ಪ್ರದಾನ ಸಮಾರಂಭವು ದಿನಾಂಕ 05 ಜುಲೈ 2026ರಂದು ಜರಗಿತು.
ಮೇಳದಲ್ಲಿ ಸೇವೆ ಸಲ್ಲಿಸಿದ್ದ ಪ್ರಸಿದ್ದ ಕಲಾವಿದರಾದ ದಿ. ಬಾಬು ಕುಡ್ತಡ್ಕ, ಪೆರ್ಲ ಜಗನ್ನಾಥ ಶೆಟ್ಟಿ, ದಿ. ಶಿರಂಕಲ್ ನಾರಾಯಣ ಭಟ್ ಇವರ ಪರವಾಗಿ ಅವರ ಧರ್ಮಪತ್ನಿ ಯಶೋದಾ ಎಸ್. ಭಟ್ ಸಮ್ಮಾನ ಸ್ವೀಕರಿಸಿದರು. ಪೆರ್ಲ ಜಗನ್ನಾಥ ಶೆಟ್ಟಿ ಇವರು ಕೆ.ವಿ.ಪೈ ಸಂಸ್ಮರಣಾ ಭಾಷಣಗೈದರು. ಎಣ್ಣೆಹೊಳೆ ರಾಘವೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿ, “ಸುರತ್ಕಲ್ ಮೇಳದ ಆಟಗಳು ಮತ್ತು ಯಜಮಾನ ಹಾಗೂ ಕಲಾವಿದರ ನಡುವಿನ ಸಂಬಂಧ ಒಂದು ಕುಟುಂಬದಂತೆ ಇತ್ತು” ಎಂದು ಹೇಳಿದರು. ಪ್ರವೀಣ ಪ್ರಭು, ಸದಾಶಿವ ಪೈ, ಪ್ರತಿಭಾ ನಾಯಕ್ ಸಮ್ಮಾನ ಪತ್ರ ವಾಚಿಸಿದರು. ಅರುಣ್ ಪೈ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ರವಿ ಅಲೆವೂರು ಬಳಗದವರಿಂದ ‘ತುಳುನಾಡ ಬಲಿಯೇಂದ್ರ’ ತುಳು ಯಕ್ಷಗಾನ ತಾಳಮದ್ದಳೆ ಪ್ರದರ್ಶನಗೊಂಡಿತು.
