ವಿಜಯಪುರ : ವಿಜಯಪುರದ ಶ್ರೀ ಕುಮಾರವ್ಯಾಸ ಭಾರತ ವೇದಿಕೆಯಡಿಯಲ್ಲಿ ದಾಸಶ್ರೇಷ್ಠ ಕನಕದಾಸರ ಜಯಂತಿಯನ್ನು ದಿನಾಂಕ 18-02-2024ರಂದು ಗುಜ್ಜರಗಲ್ಲಿಯ `ಶ್ರೀ ಗುರುವಿಠ್ಠಲ ಕೃಪಾ’ ಭವನದಲ್ಲಿ ವೈಭವದಿಂದ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ, ದೀಪ ಬೆಳಗಿ ಉದ್ಘಾಟಿಸಿದ ಶ್ರೀಮತಿ ಭೂದೇವಿ ಕುಲಕರ್ಣಿಯವರು ಗದುಗಿನ ಭಾರತದ ಪೀಠಿಕಾ ಸಂಧಿಯ ಐದು ಪದ್ಯಗಳನ್ನು ವಾಚಿಸಿ ಕುಮಾರವ್ಯಾಸರು ಹಾಗೂ ಕನಕದಾಸರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಅವರು “ಕನಕದಾಸರು ಜ್ಞಾನ, ಭಕ್ತಿ ಹಾಗೂ ವೈರಾಗ್ಯದೊಂದಿಗೆ ಕನ್ನಡಿಗರಿಗೆ ಭಕ್ತಿಗೀತೆ, ಮಹಾಕಾವ್ಯ ನೀಡಿದ ಮಹನೀಯರು. ಕನಕದಾಸರು ಭಕ್ತಿ ಸಾಮ್ರಾಜ್ಯದ ಮಹಾನ್ ನಾಯಕರು.” ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಕನಕದಾಸರ `ನಳಚರಿತ್ರೆ’ ಕಾವ್ಯದ `ನಳ ದಮಯಂತಿ’ ಪರಿಣಯ ಪ್ರಸಂಗದ ಗಮಕ ವಾಚನ ವ್ಯಾಖ್ಯಾನವನ್ನು ಹಿರಿಯ ಗಮಕಿ ಶ್ರೀಮತಿ ಶಾಂತಾ ಕೌತಾಳ ಹಾಗೂ ಕಲ್ಯಾಣರಾವ್ ದೇಶಪಾಂಡೆ ಇವರುಗಳು ನಡೆಸಿಕೊಟ್ಟರು. ಕಥೆಯಲ್ಲಿ ಕಾಣಬರುವ ನಳನ ಸದ್ಗುಣಗಳು, ದಮಯಂತಿಯ ಭಕ್ತಿ ಹಾಗೂ ವಿನಯವಂತಿಕೆ ಕೇಳುಗರ ಮನ ಸೆಳೆದವು.
ಅತಿಥಿಗಳಾದ ಶ್ರೀಮತಿ ಭೂದೇವಿಯರಿಗೆ, ವೇದಿಕೆಯ ಸದಸ್ಯರಾದ ಶ್ರೀಮತಿ ಶ್ರೀ ಲಕ್ಷ್ಮೀ ಕೌತಾಳ ಶಾಲು ಹೊದಿಸಿ, ಹೂಹಾರ ಹಾಕಿ ಫಲ ಪುಷ್ಪ ನೀಡಿ ಸನ್ಮಾನಿಸಿದರು. ವೇದಿಕೆಯ ಸಂಚಾಲಕ ಕಲ್ಯಾಣರಾವ್ ದೇಶಪಾಂಡೆಯವರು ಮಾತನಾಡಿ “ಶಾಂತಾ ಕೌತಾಳ ವಿಜಯಪುರ ಜಿಲ್ಲೆಯಲ್ಲಿ ಸುಗಮ ಸಂಗೀತ ಹಾಗೂ ಗಮಕ ಕಾರ್ಯಕ್ರಮಗಳ ಮೂಲಕ ಕನ್ನಡ ಸಂಸ್ಕೃತಿಯನ್ನು ಪ್ರಚಾರ ಹಾಗೂ ಪ್ರಸಾರ ಮಾಡುತ್ತಿದ್ದು, ಇವರು ವಿಜಯಪುರ ಜಿಲ್ಲೆಯ `ಸಾಂಸ್ಕೃತಿಕ ನಾಯಕಿ’,” ಎಂದು ಘೋಷಿಸಿದರು.
ಸಮಾರಂಭದಲ್ಲಿ ಸಂಗೀತ ಕಲಾವಿದರಾದ ಶ್ರೀಮತಿ ಲತಾ ಜಹಾಗೀರದಾರ್ (ಹಿಂದುಸ್ತಾನಿ ಗಾಯಕಿ), ಶ್ರೀಮತಿ ಗೀತಾ ಕುಲಕರ್ಣಿ, ವನಶ್ರೀ ಕುಲಕರ್ಣಿ, ವಿನಾಯಕ್ ಕಟ್ಟಿ, ಶಾಂತಾ ಕೌತಾಳ್, ಸಂಧ್ಯಾ ಕುಲಕರ್ಣಿ ಇವರುಗಳು ಕನಕದಾಸರ ಕೀರ್ತನೆಗಳನ್ನು ಇಂಪಾಗಿ ಹಾಡಿದರು. ಶ್ರೀನಿಧಿ ಕುಲಕರ್ಣಿ ಹಾಗೂ ಓಂಕಾರ್ ಇವರುಗಳು ತಬಲಾ ಸಾಥ್ ನೀಡಿದರು. ಸಮಾರಂಭದಲ್ಲಿ ವಿಜಯಪುರ ಜಿಲ್ಲಾ ಗಮಕ ಪರಿಷತ್ ಅಧ್ಯಕ್ಷ
ಶ್ರೀ ಬಿ. ಎಂ. ಪಾಟೀಲ್, ಶಾರದಾ ಉಮರ್ಜಿ, ಪೂರ್ಣಿಮಾ ಯಾತಗಿರಿ, ರೂಪಾ, ಪ್ರಮಿಳಾ ದೇಶಪಾಂಡೆ, ಮಂಜುಳಾ ಪಾಟೀಲ್, ವಿಜಯೀಂದ್ರ, ಮೋಹನ ಕೌತಾಳ, ಶ್ರೀಲಕ್ಷ್ಮೀ ಕೌತಾಳ, ಪದ್ಮಾ ಕುಲಕರ್ಣಿ ಮುಂತಾದವರುಗಳು ಭಾಗವಹಿಸಿದ್ದರು.
1 Comment
Sir I am much thankful to Ruvari channel for introduction of North karnataka cultural programmes. This is a great work. Kannadigas appreciate your work.