ಬೇಳ : ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಅಂಗ ಸಂಸ್ಥೆಯಾದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಯುವ ಏಕದಿನ ಕನ್ನಡ ಸಾಹಿತ್ಯ ಅಭಿಯಾನವಾದ, ‘ಕನ್ನಡದ ನಡಿಗೆ ಶಾಲೆಯ ಕಡೆಗೆ’ ಶೈಕ್ಷಣಿಕ ಶಿಬಿರದ 6ನೇ ಕಾರ್ಯಕ್ರಮವು ದಿನಾಂಕ 20 ಸೆಪ್ಟೆಂಬರ್ 2025ರಂದು ಬೆಳಗ್ಗೆ 9-30 ಗಂಟೆಗೆ ಬೇಳ ಸಂತ ಬರ್ತಲೋಮೆಯ ಹಿರಿಯ ಬುನಾದಿ ಶಾಲೆಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಬೇಳ ಸಂತ ಬರ್ತಲೋಮೆಯ ಹಿರಿಯ ಬುನಾದಿ ಶಾಲೆಯ ಸಂಚಾಲಕರಾದ ಸಿಸ್ಟರ್ ಮಾರ್ಸೆಲಿನ್ ಬ್ರಾಗ್ಸ್ ಇವರು ಉದ್ಘಾಟಿಸಲಿದ್ದು, ಮುಖ್ಯ ಶಿಕ್ಷಕರಾದ ಸಿಸ್ಟರ್ ಎಲಿಜಬೆತ್ ಪಿ.ಎ.ಇವರು ಸಭೆಯ ಅಧ್ಯಕ್ಷತೆ ವಹಿಸುವರು. ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕ ಅಧ್ಯಕ್ಷರಾದ ಡಾ. ಕೆ ವಾಮನ್ ರಾವ್ ಬೇಕಲ್ ಇವರು ಪ್ರಸ್ತಾವನೆ ಹಾಗೂ ಬೇಳ ಸಂತ ಬರ್ತಲೋಮೆಯ ಹಿರಿಯ ಬುನಾದಿ ಶಾಲೆಯ ಅಧ್ಯಕ್ಷರಾದ ಶಂಕರ ಡಿ. ಮತ್ತು ಶ್ರೀಮತಿ ಸರಿತಾ ಶುಭಾಶಂಸನೆಗೈಯಲಿದ್ದಾರೆ. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಸಾಹಿತಿಗಳಾದ ಡಾ. ಕೊಳಚಪ್ಪೆ ಗೋವಿಂದ ಭಟ್ ಮತ್ತು ಚಿತ್ರ ರಚನಾ ಶಿಕ್ಷಕ ಮೋಹನದಾಸ್ ಅನ್ನೆಪಲ್ಲಡ್ಕ ಭಾಗವಹಿಸುವರು.