ಅಪ್ಪನ ಕಾಯುತ್ತಾ
ಇನ್ನೂ ನೆನೆಪಿದೆ…
ಅದೊಂದು ಬದುಕಿತ್ತು
ಅಪ್ಪ ಅಮ್ಮನಿಂದ ಜಗತ್ತು ಬೆಳಗಿತ್ತು
ಅಮ್ಮನ ಮಡಿಲು ಅಪ್ಪನ ಹೆಗಲು
ಎಲ್ಲವೂ ಚೆನ್ನಾಗಿತ್ತು!
ನಾನು ಕಿಲ ಕಿಲ ನಗುತ್ತ
ಕಣ್ಣು ಅರಳಿಸಿ ನೋಡುತ್ತಾ
ಜಗತ್ತು ಚೆಂದ ವಿತ್ತು.
ಅಪ್ಪನಿಗೆ ಕನಸಿತ್ತು
ಮನೆಯಲ್ಲಿ
ನಗುವಿತ್ತು!
ಅಂಗಳದ ತುಂಬಾ ಸಂಭ್ರಮವಿತ್ತು!
ಅಪ್ಪನಿಗೆ ಸ್ನೇಹಿತರ ಗುಂಪು ಜೊತೆಯಾಯ್ತು
ಮೊದ ಮೊದಲು ಖುಷಿಗೆಂದು, ನಂತರ ತಲೆಬಿಸಿಗೆಂದು
ಕುಡಿತ ನಮ್ಮನೇಲಿ ತಳವೂರಿತು!
ಕುರುಕಲು ತಿಂಡಿಯೇನೋ ಸಿಗುತಿತ್ತು! ಆದರೆ ಬಾಲ್ಯವೇ ಸುಟ್ಟು ಕರಕಲಾಯ್ತು!
ಅಪ್ಪನೆಂಬ ಆಕಾಶ
ಮುರಿದು ಬಿದ್ದಿತು!
ಅಪ್ಪನೆಂದರೆ ಈಗ ಅಭದ್ರತೆ !
ಅಮ್ಮ ಎಂದರೆ ರೋಧನ!
ನೆಂಟರ ಅವಹೇಳನ, ಸ್ನೇಹಿತರ ಅಪಹಾಸ್ಯ. ಕುಸಿದು ಕುಳಿತಿದ್ದೇನೆ
ಕುರುಡು ದೀಪವಿಟ್ಟು
ಕಳೆದು ಹೋದ ಅಪ್ಪನ
ದಾರಿ ಕಾಯುತ್ತಾ… ಮರಳಿ ಬಂದು ಬಿಡಪ್ಪ. ನನ್ನನ್ನು ನಾನು. ಕಳೆದು ಕೊಳ್ಳುವ ಮೊದಲು!
-ಅಕ್ಷತಾ ಪ್ರಶಾಂತ್
ಕವಯಿತ್ರಿ/ಆಪ್ತಸಮಾಲೋಚಕಿ/
ಬ್ಯಾಂಕ್ ಉದ್ಯೋಗಿ, ಟೀಚರ್ಸ್ ಬ್ಯಾಂಕ್ ಉಡುಪಿ