ಬದಿಯಡ್ಕ : ರಂಗಸಿರಿ ಸಾಂಸ್ಕೃತಿಕ ವೇದಿಕೆ ಬದಿಯಡ್ಕ ಇದರ ನೇತೃತ್ವದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಸಹಯೋಗದೊಂದಿಗೆ ಬದಿಯಡ್ಕ ಗ್ರಾಮ ಪಂಚಾಯತಿನಾದ್ಯಂತ ನಡೆಯುತ್ತಿರುವ “ಗ್ರಾಮ ಪರ್ಯಟನೆ” ಅಭಿಯಾನದ 5ನೇ ಸರಣಿ ಕಾರ್ಯಕ್ರಮ ದಿನಾಂಕ 02-07-2023 ರಂದು ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ನಡೆಯಿತು.
ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಪ್ರಭಾವತಿ ಕೆದಿಲಾಯ ಪುಂಡೂರು ಇವರ ಅಧ್ಯಕ್ಷತೆಯಲ್ಲಿ ಜರಗಿದ ಸಭಾಕಾರ್ಯಕ್ರಮದಲ್ಲಿ ಪತ್ರಕರ್ತ ಜಯ ಮಣಿಯಂಪಾರೆಯವರು “ಗಡಿನಾಡಿನ ಕನ್ನಡ ಮಾಧ್ಯಮದ ಸವಾಲುಗಳು” ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು. ಈ ಸಂದರ್ಭದಲ್ಲಿ ಸಾಮಾಜಿಕ ಧಾರ್ಮಿಕ ಮುಂದಾಳು ಸುಬ್ರಹ್ಮಣ್ಯ ಭಟ್ ನೀರ್ಚಾಲು ಇವರನ್ನು ಸನ್ಮಾನಿಸಲಾಯಿತು.
ಆಶ್ರಯ ಆಶ್ರಮದ ಜನಸೇವಾ ವಿಶ್ವಸ್ಥ ನಿಧಿ ಅಧ್ಯಕ್ಷರಾದ ಶ್ರೀ ಕೃಷ್ಣ ಭಟ್ ಪುದುಕೋಳಿ ಶುಭಾಶಂಸನೆಗೈದರು. ಯಕ್ಷ ಗುರು ಸೂರ್ಯನಾರಾಯಣ ಪದಕಣ್ಣಾಯ, ಕರಿಂಬಿಲ ಲಕ್ಷ್ಮಣ ಪ್ರಭು, ಗುಣಾಜೆ ಶಿವಶಂಕರ ಭಟ್, ರಮೇಶ್ ಕಳೇರಿ, ದಿನೇಶ್ ಬೊಳುಂಬು ಮೊದಲಾದವರು ಉಪಸ್ಥಿತರಿದ್ದರು. ಈಸಂದರ್ಭದಲ್ಲಿ ಭಾಗವತಿಕೆಯ ರಂಗಪ್ರವೇಶಗೈದ ಕು.ವರ್ಷಾ ಲಕ್ಷ್ಮಣ್ ಬದಿಯಡ್ಕ ಅವರನ್ನು ಗೌರವಿಸಲಾಯಿತು. ಡಾ. ಶ್ರೀಶ ಕುಮಾರ ಪಂಜಿತಡ್ಕ ಸ್ವಾಗತಿಸಿ ನಿರೂಪಿಸಿದರು. ಕು.ಅಭಿಜ್ಞಾ ಭಟ್ ವಂದಿಸಿದರು. ಬಳಿಕ ರಂಗಸಿರಿಯ ನುರಿತ ಕಲಾವಿದರ ಕೂಡುವಿಕೆಯಿಂದ “ಪಂಚವಟಿ” ಪ್ರಸಂಗದ ಯಕ್ಷಗಾನ ತಾಳಮದ್ದಲೆ ಜರಗಿತು. ಭಾಗವತಿಕೆಯಲ್ಲಿ ವಾಸುದೇವ ಕಲ್ಲೂರಾಯ ಮಧೂರು ಚೆಂಡೆ ಮದ್ದಳೆಯಲ್ಲಿ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಹಾಗೂ ಪವನ್ ರಾಜ್ ಕಲ್ಲೂರಾಯ ಪಾತ್ರಧಾರಿಗಳಾಗಿ ಬಾಲಕೃಷ್ಣ ಆಚಾರ್ಯ ನೀರ್ಚಾಲು , ಶ್ರೀಶಕುಮಾರ ಪಂಜಿತ್ತಡ್ಕ, ಅಭಿಜ್ಞಾ ಭಟ್ ಬೊಳುಂಬು, ಮನ್ವಿತ್ ನಾರಾಯಣಮಂಗಲ, ಪ್ರಭಾವತಿ ಕೆದಿಲಾಯ ಪುಂಡೂರು, ಲಕ್ಷ್ಮಣ ಪ್ರಭು, ಮನ್ವಿತ್ ನಾರಾಯಣಮಂಗಲ ಸಹಕರಿಸಿದರು.