ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2023ನೇ ಸಾಲಿನ ʻಅಭಯಲಕ್ಷ್ಮೀ ದತ್ತಿನಿಧಿʼ ಪ್ರಶಸ್ತಿಗೆ ಡಾ. ಎಚ್.ಎ. ಪಾರ್ಶ್ವನಾಥ ಹಾಗೂ ಶ್ರೀಮತಿ ಪ್ರೇಮಾ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ.
ಶ್ರೀಮತಿ ಪಿ. ಅಭಯಕುಮಾರ್ ಅವರು ತಮ್ಮ ಪತಿ ದಿ. ಎಸ್.ಎ. ಅಭಯಕುಮಾರ್ ಅವರ ಪುಣ್ಯ ಸ್ಮರಣಾರ್ಥ ಕನ್ನಡಿಗರ ಸಾರ್ವಭೌಮ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ʻಅಭಯಲಕ್ಷ್ಮೀ ದತ್ತಿನಿಧಿʼ ಹೆಸರಿನಲ್ಲಿ ವಿಶೇಷ ದತ್ತಿ ನಿಧಿಯನ್ನು ಸ್ಥಾಪಿಸಿ, ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರದ ಮೂಲಕ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸುತ್ತಿರುವ ಇಬ್ಬರನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಬೇಕು ಎನ್ನವುದು ದತ್ತಿ ದಾನಿಗಳ ಆಶಯವಾಗಿದೆ. ದತ್ತಿಯ ಆಶಯದಂತೆ ರಂಗಭೂಮಿ ಕ್ಷೇತ್ರದಲ್ಲಿ ಅಗಣಿತ ಸೇವೆ ಸಲ್ಲಿಸಿದ ಹಾಗೂ ಸಾಹಿತ್ಯ ಕ್ಷೇತ್ರದ ಮೂಲಕ ಕನ್ನಡ ನಾಡು ನುಡಿಯ ಸೇವೆಯಲ್ಲಿ ಗುರುತಿಸಿಕೊಂಡಿರುವ ಇಬ್ಬರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದ್ದು. ಪ್ರಶಸ್ತಿಯು ತಲಾ ರೂ10,000/-(ಹತ್ತು ಸಾವಿರ) ನಗದು, ಫಲ ತಾಂಬೂಲ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.
2023ನೇ ಸಾಲಿನ ಈ ಪ್ರಶಸ್ತಿಗಾಗಿ ರಂಗಭೂಮಿ ಕ್ಷೇತ್ರದಿಂದ ಡಾ. ಎಚ್.ಎ. ಪಾರ್ಶ್ವನಾಥ ಹಾಗೂ ಸಾಹಿತ್ಯ ಕ್ಷೇತ್ರದಿಂದ ಶ್ರೀಮತಿ ಪ್ರೇಮಾ ಭಟ್ ಅವರನ್ನು ಆಯ್ಕೆ ಮಾಡಲಾಗಿದ್ದು. ರಂಗಭೂಮಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮಾಡಿ ಕನ್ನಡ ನಾಡು ನುಡಿಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಗಣ್ಯರನ್ನು ಗುರುತಿಸಿ ದತ್ತಿ ದಾನಿಗಳ ಆಶಯಕ್ಕೆ ಯಾವುದೇ ಚ್ಯುತಿಯಾಗದ ರೀತಿಯಲ್ಲಿ ಆಯ್ಕೆ ಸಮಿತಿ ಆಯ್ಕೆ ಮಾಡಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ದತ್ತಿ ದಾನಿಗಳಾದ ಶ್ರೀಮತಿ ಜಯಲಕ್ಷ್ಮಿ ಅಭಯಕುಮಾರ್, ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ.ಪಟೇಲ್ ಪಾಂಡು ಅವರು ಉಪಸ್ಥಿತರಿದ್ದರು.