ಬೆಳ್ತಂಗಡಿ : ಧರ್ಮಸ್ಥಳ ಸಮೀಪದ ನಿಡ್ಲೆಯ ಕರುಂಬಿತ್ತಿಲ್ ಮನೆಯಲ್ಲಿ ಅಂತಾರಾಷ್ಟ್ರೀಯ ‘ಕರುಂಬಿತ್ತಿಲ್ ಶಿಬಿರ 2023’ ದಿನಾಂಕ 24-05-2023ರಿಂದ 28-05-2023ರವರೆಗೆ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಎಡನೀರು ಮಠದ ಪರಮ ಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು “ಗ್ರಾಮೀಣ ಪ್ರದೇಶದ ಮನೆಯಂಗಳದಲ್ಲಿ ಪ್ರತೀ ವರ್ಷ ನಡೆಯುವ ಸಂಗೀತ ಶಿಬಿರ ಸಂಗೀತ ಕಲೆಯ ಯುವ ಅಭ್ಯಾಸಿಗಳಿಗೆ ಅಪೂರ್ವ ನಿಧಿ. ಸಂಗೀತ ಯುವ ಮನಸ್ಸುಗಳನ್ನು ಅರಳಿಸುವ ಅದ್ಬುತ ಕಲೆ. ಮಾನಸಿಕ ಶಾಂತಿ, ನೆಮ್ಮದಿ ವಿಕಾಸಕ್ಕೆ ಸಂಗೀತ ಚೈತನ್ಯದಾಯಕ” ಎಂದು ನುಡಿದರು. ಕಾರ್ಯಕ್ರಮದ ಸಂಯೋಜಕ ವಿದ್ವಾನ್ ವಿಠಲ ರಾಮಮೂರ್ತಿ, ಕೃಷ್ಣವೇಣಿ ಅಮ್ಮ, ಧರ್ಮಸ್ಥಳದ ಸೀತಾರಾಮ ತೋಳ್ಪಡಿತ್ತಾಯ ಉಪಸ್ಥಿತರಿದ್ದರು.
ದಿನಾಂಕ 24-05-2023 ಮೊದಲ ದಿನದ ಸಂಪನ್ಮೂಲ ಸಂಗೀತಗಾರರಾಗಿ ಚೆನ್ನೈಯ ವಿದ್ವಾನ್ ಡಾ. ರಾಜಕುಮಾರ್ ಭಾರತಿಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಕುರಿತಾದ ‘ಮಂಜುನಾದ’ ಕೃತಿ ಪ್ರಸ್ತುತ ಪಡಿಸಿದರು. ಆ ದಿನದ ವಿಶೇಷ ಕಾರ್ಯಕ್ರಮವಾಗಿ ವಿದ್ವಾನ್ ಕೆ.ಎಸ್. ವಿಷ್ಣುದೇವ್, ವಿದ್ವಾನ್ ಬಿ. ಅನಂತಕೃಷ್ಣನ್, ವಿದ್ವಾನ್ ಹರಿಹರನ್ ಸುಂದರ ರಾಮನ್ ಮತ್ತು ವಿದ್ವಾನ್ ಶ್ರೀ ರಾಮಾವಡಿವಳ್ಳಿ ಸಂಗೀತ ಕಛೇರಿ ನಡೆಸಿಕೊಟ್ಟರು.
ದಿನಾಂಕ 25-05-2023 ಎರಡನೇ ದಿನದ ಸಂಪನ್ಮೂಲ ಸಂಗೀತಗಾರರಾಗಿ ಚೆನ್ನೈಯ ವಿದ್ವಾನ್ ಪ್ರೊ. ವಿ.ವಿ. ಸುಬ್ರಹ್ಮಣ್ಯಂ ಹಾಗೂ ಚೆನ್ನೈಯ ವಿದ್ವಾನ್ ಅಭಿಷೇಕ್ ರಘುರಾಮ್ ರವರು ‘ಸಂಗೀತಾನುಭವ’ ಪ್ರಸ್ತುತ ಪಡಿಸಿದರು.
ದಿನಾಂಕ 26-05-2023 ಮೂರನೇ ದಿನದ ಸಂಪನ್ಮೂಲ ಸಂಗೀತಗಾರರಾಗಿ ಮೈಸೂರಿನ ವಿದುಷಿ ಆರ್.ಎನ್. ಶ್ರೀ ಲತಾ ಇವರು ಮೈಸೂರು ವಾಗ್ಗೇಯಕಾರರ ಕೃತಿಗಳನ್ನು ಬೆಂಗಳೂರಿನ ವಿದ್ವಾನ್ ತಿರುಮಲೆ ಶ್ರೀನಿವಾಸನ್ ಇವರು ದಾಸರ ಪದಗಳನ್ನು ಹಾಗೂ ಬೆಂಗಳೂರಿನ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಲಯ ಪ್ರಾತ್ಯಕ್ಷಿಕೆ ಪ್ರಸ್ತುತ ಪಡಿಸಿದರು.
ದಿನದ ವಿಶೇಷ ಕಾರ್ಯಕ್ರಮದಲ್ಲಿ ವಿದುಷಿ ಆರ್.ಎನ್. ಶ್ರೀಲತಾ, ವಿದುಷಿ ವೀಣಾ ಸುರೇಶ್, ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ, ವಿದ್ವಾನ್ ಸುನಾದ ಆನೂರು, ವಿದ್ವಾನ್ ತಿರುಮಲೆ ಶ್ರೀನಿವಾಸನ್, ವಿದ್ವಾನ್ ವಿಠಲ ರಂಗನ್, ವಿದ್ವಾನ್ ವಿನೋದ ಶ್ಯಾಮ್, ವಿದ್ವಾನ್ ಸೋಮಶೇಖರ ಜೋಯಿಸ ಸಂಗೀತ ಕಛೇರಿ ನಡೆಸಿಕೊಟ್ಟರು.
27-05-2023 ನಾಲ್ಕನೇ ದಿನದ ಸಂಪನ್ಮೂಲ ಸಂಗೀತಗಾರರಾಗಿ ಚೆನ್ನೈಯ ವಿದ್ವಾನ್ ಪಿ. ಉನ್ನಿ ಕೃಷ್ಣನ್ ಸಂಗೀತ ಕಛೇರಿ ನಡೆಸಿಕೊಟ್ಟರು. ನಂತರದಲ್ಲಿ ‘ಚಲನಚಿತ್ರದಲ್ಲಿ ಶಾಸ್ತ್ರೀಯ ಸಂಗೀತ’ ಎಂಬ ವಿಷಯದ ಬಗ್ಗೆ ಪ್ರಾತ್ಯಕ್ಷಿಕೆ ನಡೆದು ವಿದ್ವಾನ್ ಪಿ. ಉನ್ನಿ ಕೃಷ್ಣನ್ ಇವರ ಸುಪುತ್ರಿ ಕು. ಉತ್ತರಾ ಉನ್ನಿ ಕೃಷ್ಣನ್ ಚಲನಚಿತ್ರದಲ್ಲಿ ಬರುವ ಶಾಸ್ತ್ರೀಯ ಸಂಗೀತವನ್ನು ಹಾಡಿ ಪ್ರಸ್ತುತ ಪಡಿಸಿದರೆ ತಂದೆ ವಿದ್ವಾನ್ ಪಿ. ಉನ್ನಿ ಕೃಷ್ಣನ್ ಅದರ ಬಗ್ಗೆ ತಿಳಿಸಿ ಹೇಳಿದರು. ಚೆನ್ನೈಯ ವಿದುಷಿ ರಾಧಾ ವೆಂಕಟ್ರಾಮನ್ ಇವರು ಲಾಲ್ಗುಡಿ ಜಿ. ಜಯರಾಮನ್ ಅವರ ಕೃತಿಗಳನ್ನು ಪ್ರಸ್ತುತ ಪಡಿಸಿದರು. ದಿನದ ವಿಶೇಷ ಕಾರ್ಯಕ್ರಮದಲ್ಲಿ ಯಕ್ಷಗಾನ–ಗಾನ-ವೈಭವ ಹಾಗೂ ಸಂಗೀತ ಕಛೇರಿ ನಡೆಯಿತು. ಯಕ್ಷಗಾನ–ಗಾನ-ವೈಭವವನ್ನು ಶ್ರೀ ಸತ್ಯನಾರಾಯಣ ಪುಣಿಚಿತ್ತಾಯ ಭಾಗವತರಾಗಿ ಶ್ರೀ ಬಿ. ಸೀತಾರಾಮ ತೋಳ್ಪಾಡಿತ್ತಾಯ ಚಂಡೆ ವಾದಕರಾಗಿ ಹಾಗೂ ಶ್ರೀ ಬಿ. ಜನಾರ್ದನ ತೋಳ್ಪಾಡಿತ್ತಾಯ ಮದ್ದಳೆ ವಾದಕರಾಗಿ ನಡೆಸಿಕೊಟ್ಟರು. ಅದೇ ದಿನ ನಡೆದ ಸಂಗೀತ ಕಛೇರಿಯಲ್ಲಿ ವಿದ್ವಾನ್ ಪಿ. ಉನ್ನಿ ಕೃಷ್ಣನ್, ವಿದ್ವಾನ್ ವಿಠಲ ಮೂರ್ತಿ, ವಿದ್ವಾನ್ ಶ್ರೀ ಮುಷ್ಣಂ ರಾಜಾರಾಮ್ ಹಾಡುಗಾರರಾಗಿ ಭಾಗವಹಿಸಿದರು.
28-05-2023ರಂದು ಶಿಬಿರದ ಸಮಾರೋಪದ ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮ ಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಬೆಳಗಾವಿಯ ನಿಡಸೂಸಿಯ ಸಿದ್ದ ಸಂಸ್ಥಾನ ಮಠದ ಶ್ರೀ ಪಂಚಮ ನಿಜಲಿಂಗೇಶ್ವರ ಮಹಾ ಸ್ವಾಮೀಜಿ ಭಾಗವಹಿಸಿ ಆಶೀರ್ವಚನ ನೀಡಿದರು. ಶಿಬಿರದ ಸಂಯೋಜಕರಾದ ವಿಠಲ ರಾಮಮೂರ್ತಿಯವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಗೌರವಿಸಿದರು. ಡಾ. ಹೇಮಾವತಿ ಹೆಗ್ಗಡೆ ಹಾಗೂ ವಿಠಲ ರಾಮಮೂರ್ತಿಯವರ ಮಾತೃಶ್ರೀಯವರಾದ ಕೃಷ್ಣವೇಣಿ ಅಮ್ಮ ಉಪಸ್ಥಿತರಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಬೆಳಗಾವಿ ನಿಡಸೂಸಿಯ ಸಿದ್ದ ಸಂಸ್ಥಾನ ಮಠದ ಶ್ರೀ ಪಂಚಮ ನಿಜಲಿಂಗೇಶ್ವರ ಮಹಾಸ್ವಾಮಿಯವರು “ಮಕ್ಕಳಲ್ಲಿ ಬದಲಾವಣೆಯಾದರೆ ಮಾತ್ರ ಸ್ವಚ್ಛ ಭಾರತ ನಿರ್ಮಾಣವಾಗುವುದು. ಹಿರಿಯರ ಮಾರ್ಗದರ್ಶನ, ದೃಷ್ಟಿಕೋನ ಬದಲಾದರೆ ಭಾರತ ವಿಶ್ವಕ್ಕೆ ಮಾದರಿಯಾಗುವುದರಲ್ಲಿ ಸಂದೇಹವಿಲ್ಲ. ಭಾರತದ ಸತ್ವ ಗ್ರಾಮೀಣ ಪ್ರದೇಶದ ಇಂತಹ ಶಿಬಿರಗಳಲ್ಲಿದೆ. ಯಾವುದೇ ಕಲೆಯನ್ನು ಶಿಕ್ಷಣದ ಭಾಗವಾಗಿ ಅಭ್ಯಾಸ ನಡೆಸಿದರೆ ಅದು ಶಾಶ್ವತವಾಗಿ ಉಳಿದು ಮನಸ್ಸು, ಬುದ್ಧಿ ಹಾಗೂ ಹೃದಯ ವೈಶಾಲ್ಯತೆ ಹೊಂದುವುದು. ಕಲೆ ಪಠ್ಯದ ವಿಷಯವಾಗಿ ಸೇರ್ಪಡೆಗೊಂಡರೆ ಮಕ್ಕಳಲ್ಲಿ ವ್ಯಕ್ತಿತ್ವದ ಸರ್ವಾಂಗೀಣ ಬೆಳವಣಿಗೆಯಾಗುತ್ತದೆ. ಶಿಬಿರಗಳು ಮನಸ್ಸು ಹಾಗೂ ಬೌದ್ಧಿಕ ವಿಕಾಸಕ್ಕೆ ಸಹಕಾರಿಯಾಗಲಿ” ಎಂದು ಶುಭ ಹಾರೈಸಿದರು.
ನಂತರ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ. ಡಾ. ಡಿ. ವೀರೇಂದ್ರ ಹೆಗ್ಗಡೆಯವರು “ಪ್ರಕೃತಿಯ ಜೊತೆಗೆ ಮಣ್ಣಿನ ಸತ್ವ ಶಕ್ತಿಯಿಂದ ಗೃಹ ಸಂಗೀತ ಶಿಬಿರ ಹೆಚ್ಚು ಆಪ್ಯಾಯಮಾನವಾಗಿದೆ. ಮುಂದಿನ ಜನಾಂಗವನ್ನು ಸಿದ್ಧ ಮಾಡಲು ವ್ಯಕ್ತಿತ್ವ ನಿರ್ಮಾಣಕ್ಕೆ ಅಂತರಂಗದಲ್ಲಿ ಸಂಸ್ಕೃತಿ, ಸಂಸ್ಕಾರ ಕೊಡುವ ಶಿಕ್ಷಣ ಅಗತ್ಯ. ಸಂಸಾರದಲ್ಲಿ ನೆಮ್ಮದಿಯಿರಲು ಸಂಸ್ಕಾರ ಬೇಕು. ಭಾರತೀಯರನ್ನಾಗಿ ಮಾಡುವ ದೊಡ್ಡ ಕೆಲಸ ಇಂತಹ ಶಿಬಿರಗಳಿಂದ ಆಗುತ್ತಿದೆ. ಇದನ್ನು ಆನಂದಿಸುವ ವರ್ಗ ಕಡಿಮೆಯಾದರೂ ಎಲ್ಲಾ ಕಲಾವಿದರ ಸಮ್ಮಿಲನ ಆಯೋಜಕರ ಪ್ರೀತಿ ಇವುಗಳಿಗೆ ಸರಿಸಮಾನ ಯಾವುದೂ ಇಲ್ಲ. ಉತ್ತಮ ವಾತಾವರಣದಲ್ಲಿ ಪ್ರತಿ ವರ್ಷ ಶಿಬಿರದ ಮೂಲಕ ಕಲಾವಿದರ ಸೃಷ್ಟಿಯಾಗಲಿ” ಎಂದು ಶುಭ ಹಾರೈಸಿದರು. ಹೆಗ್ಗಡೆ ದಂಪತಿಯವರನ್ನು ಶಾಲು ಹೊದಿಸಿ ತಂಬೂರಿಯನ್ನು ಸ್ಮರಣಿಕೆಯಾಗಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಹೆಗ್ಗಡೆ ದಂಪತಿಯವರು ಶಿವಮೊಗ್ಗದ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ ಹಾಗೂ ಬೆಂಗಳೂರಿನ ಶ್ರೀಮತಿ ಮಂಜುಳಾ ಮೂರ್ತಿಯವರನ್ನು ಸನ್ಮಾನಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ವಾನ್ ಪಿ. ಉನ್ನಿ ಕೃಷ್ಣನ್ ಮತ್ತು ಉತ್ತರ ಉನ್ನಿ ಕೃಷ್ಣನ್ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮದ ಬಳಿಕ ವಿದ್ವಾನ್ ಮೈಸೂರು ನಾಗರಾಜ್, ವಿದ್ವಾನ್ ಡಾ. ಮಂಜುನಾಥ್, ವಿದ್ವಾನ್ ಶ್ರೀ ಮುಷ್ಟಂ ರಾಜಾರಾಮ್ ಮತ್ತು ವಿದ್ವಾನ್ ವ್ಯಾಸ ವಿಠಲರವರಿಂದ ದ್ವಂದ್ವ ವಾಯಲಿನ್ ವೈಭವ ನಡೆಯಿತು.
ಶಿಬಿರದ ಸಂಯೋಜಕರಾದ ವಿಠಲ ರಾಮಮೂರ್ತಿಯವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಗೌರವಿಸಿದರು. ಡಾ. ಹೇಮಾವತಿ ಹೆಗ್ಗಡೆಯವರು ವಿಠಲ ರಾಮಮೂರ್ತಿಯವರ ಮಾತೃಶ್ರೀಯವರಾದ ಕೃಷ್ಣವೇಣಿ ಅಮ್ಮ ಉಪಸ್ಥಿತರಿದ್ದರು.