ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಅತ್ಯುತ್ತಮ ಪ್ರಕಾಶನ ಸಂಸ್ಥೆಗೆ ನೀಡುವ ʻಅಂಕಿತ ಪುಸ್ತಕ ಪುರಸ್ಕಾರʼ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 18-08-2023ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ. ಸತೀಶಕುಮಾರ ಎಸ್.ಹೊಸಮನಿ ಅವರು “ಸಾಮಾಜಿಕ ಬದಲಾವಣೆ ಸಾಹಿತ್ಯದಿಂದಲೇ ಸಾಧ್ಯ. ರಾಜ್ಯಾದಂತ ಇರುವ ಸಾಹಿತಿಗಳು, ಲೇಖಕರು ಪ್ರಕಾಶಕರು ಅಕ್ಷರ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದ್ದಾರೆ. ಜೊತೆಗೆ ಶ್ರೀ ಸಾಮಾನ್ಯ ವ್ಯಕ್ತಿಗಳ ವಿಶ್ವ ವಿದ್ಯಾಲಯ ಎಂದು ಗುರುತಿಸಿಕೊಂಡ ಗ್ರಂಥಾಲಯಗಳನ್ನು ಉಳಿಸಿದ್ದರು ಅದೇ ಸಾಹಿತ್ಯ. ಸಾಹಿತ್ಯ ಪರಂಪರೆ ಉಳಿಸಿ ಬೆಳೆಸುವಲ್ಲಿ ಪ್ರಕಾಶಕರ ಕೊಡುಗೆ ಮರೆಯುವಂತಿಲ್ಲ” ಎಂದು ಹೇಳಿದರು. ಕನ್ನಡ ಪುಸ್ತಕಗಳ ಡಿಜಿಟಲೀಕರಣವನ್ನು ಮಾಡುತ್ತಿರುವುದರ ಕುರಿತು ವಿವರಗಳನ್ನು ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಲೇಖಕ ಹಾಗೂ ಪತ್ರಕರ್ತರಾದ ಶ್ರೀ ಗಿರೀಶ್‌ರಾವ್ ಹತ್ವಾರ್ (ಜೋಗಿ) ಮಾತನಾಡಿ “ಪ್ರಕಾಶಕರಿಗೆ ಪ್ರಶಸ್ತಿಗಳನ್ನು ಕೊಡುವ ಪದ್ಧತಿ ತೀರಾ ಕಡಿಮೆ. ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಂತೆ ಲೇಖಕರ ಸಂಘವು ಪ್ರಕಾಶಕರಿಗೆ ಗುರುತಿಸುವ ಕೆಲಸ ಮಾಡಬೇಕಿದೆ. ಹಿಂದೆ ಲೇಖಕರು ಪ್ರಕಾಶಕರನ್ನು ಹುಡುಕ ಬೇಕಿತ್ತು. ನಂತರ ಪ್ರಕಾಶಕರು ಲೇಖಕರನ್ನು ಹುಡುಕುವ ಪ್ರಮೇಯ ಬಂತು. ಈಗ ಇಬ್ಬರೂ ಸೇರಿ ಓದುಗರನ್ನು ಹುಡುಕುವ ಸ್ಥಿತಿ ಬಂದಿದೆ“ ಎಂದು ಕಳವಳ ವ್ಯಕ್ತ ಪಡಿಸಿದರು.
ದತ್ತಿ ದಾನಿಗಳಾಗಿರುವ ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆಯ ಶ್ರೀ ಪ್ರಕಾಶ ಕಂಬತ್ತಳ್ಳಿ ಮಾತನಾಡಿ “ಪುಸ್ತಕೋದ್ಯಮ ಸಾಕಷ್ಟು ಬೆಳೆದು ನಿಂತಿದೆ. ಹಿಂದೆ ಪುಸ್ತಕಕ್ಕೆ ಪುಸ್ತಕಗಳೇ ಪೈಪೋಟಿ ಕೊಡುತ್ತಿದ್ದವು. ಈಗ ಕಾಲ ಬದಲಾಗಿದೆ ಪುಸ್ತಕಗಳಿಗೆ ಸಾಮಾಜಿಕ ಜಾಲ ತಾಣಗಳು, ಓಟಿಟಿ, ಆನ್‌ಲೈನ್, ಇ-ಬುಕ್ ಇತ್ಯಾದಿಗಳ ಜೊತೆಗೆ ಸ್ಪರ್ಧೆಮಾಡಬೇಕಿದೆ. ಮತ್ತೆ ಪುಸ್ತಕ ಓದುವ ವೈಭವ ಮರುಕಳಿಸಬೇಕಿದೆ” ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು “ನಾಡಿನಲ್ಲಿ ವರ್ಷಕ್ಕೆ ಕನ್ನಡ ಭಾಷೆಯ ಸರಾಸರಿ 7000 ಕನ್ನಡ ಪುಸ್ತಕಗಳು ಹಾಗೂ ಮರು ಮುದ್ರಣವಾಗುವ 1000 ಪುಸ್ತಕಗಳು ಸೇರಿ ಸುಮಾರು 8000 ಕನ್ನಡ ಪುಸ್ತಕಗಳು ಪ್ರಕಟವಾಗುತ್ತವೆ ಎಂಬುದು ಹೆಮ್ಮೆಯ ಸಂಗತಿ. ವರ್ಷದ ಕೊನೆಯಲ್ಲಿ ಸರಿಸುಮಾರು 2000 ಪುಸ್ತಕಗಳು ಪ್ರಕಟವಾಗುತ್ತವೆ. ಇದು ಕನ್ನಡ ಸಾರಸ್ವತ ಲೋಕದ ಉತ್ತಮ ಬೆಳವಣಿಗೆ 70ರ ದಶಕದವರೆಗೂ ಗಳಗನಾಥರ ಕಾದಂಬರಿಗಳು, ಅನಕೃ, ತ.ರಾ.ಸು, ಬಸವರಾಜ ಕಟ್ಟೀಮನಿ ಮೊದಲಾದವರ ಕಾದಂಬರಿಗಳು, ತ್ರಿವೇಣಿ, ಎಂ.ಕೆ.ಇಂದಿರಾ ಅವರ ಕಾದಂಬರಿಗಳು ಮತ್ತು ಇತರರ ಸಾಹಿತ್ಯವನ್ನು ಹಳ್ಳಿ-ಪಟ್ಟಣಗಳಲ್ಲಿ ಗೃಹಿಣಿಯರು ಸೇರಿದಂತೆ ಬಹುತೇಕರು ಆಸ್ಥೆಯಿಂದ ಓದುತ್ತಿದ್ದರು. ಅಂದು ಗ್ರಂಥಾಲಯದಿಂದ ಪುಸ್ತಕಗಳನ್ನು ತರಿಸಿಕೊಂಡು ಓದುವ ಪರಿಪಾಠವಿತ್ತು, ಆದರೆ ಇಂದು ಆ ರೀತಿಯ ಚಿತ್ರಣ ಮಾಯವಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗವು ಮೌಲ್ಯಯುತ ಕೃತಿಗಳನ್ನು ಪ್ರಕಟಿಸುತ್ತಿದೆ. ಬಹು ಮೌಲಿಕ ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ಪರಂಪರೆಯನ್ನು ಜಗತ್ತಿಗೆ ಅನಾವರಣಗೊಳಿಸಿದ್ದ ಪರಿಷತ್ತಿನ ಕಾರ್ಯ ಜನಮೆಚ್ಚುಗೆ ಪಡೆದಿದೆ. ಪಂಪಭಾರತ, ಆದಿಪುರಾಣ, ಕರ್ಣಾಟಕ ಪಂಚತಂತ್ರ, ಪ್ರಭುಲಿಂಗಲೀಲೆ, ಕರ್ಣಾಟಕ ಕಾದಂಬರಿ, ತೊರವೆ ರಾಮಾಯಣ, ನಳಚರಿತ್ರೆ, ಹದಿಬದೆಯ ಧರ್ಮ, ಭರತೇಶ ವೈಭವ, ಯಶೋಧರ ಚರಿತೆ, ಇತರ ಪ್ರಾಚೀನ ಕೃತಿಗಳು, ಆಧುನಿಕ ಕಾಲಘಟ್ಟದ ಪ್ರಮುಖ ಕೃತಿಗಳು, ವ್ಯಾಕರಣ ಗ್ರಂಥಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸುತ್ತಿದೆ.ನಿಘಂಟು ಯೋಜನೆ ಸಾರಸ್ವತ ಲೋಕಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಕಾಲಕಾಲಕ್ಕೆ ಬಹುಬೇಡಿಕೆಯ ಕೃತಿಗಳನ್ನು ಮರುಮುದ್ರಣಗೊಳಿಸುವ ಮೂಲಕ ಓದುಗರಿಗೆ ತಾಯಿ ಸರಸ್ವತಿಯ ನುಡಿಗಳನ್ನು ಉಣಬಡಿಸುತ್ತ ಬಂದಿದೆ. ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಪ್ರಕಾಶಕರೊಂದಿಗೆ ಸೇರಿ ʻಪುಸ್ತಕ ಉತ್ಸವʼ ಮಾಡಬೇಕೆಂಬ ಯೋಜನೆಯನ್ನು ಹೊಂದಿದೆ” ಎಂದು ಅವರು ತಿಳಿಸಿದರು.
ʻಶಿವಮೊಗ್ಗ ಜಿಲ್ಲೆಯ, ಸಾಗರದ ರವೀಂದ್ರ ಪುಸ್ತಕಾಲಯಕ್ಕೆʼ 2022ನೆಯ ಸಾಲಿನ ಹಾಗೂ ಬೆಂಗಳೂರಿನ ʻಛಂದ ಪುಸ್ತಕʼ ಸಂಸ್ಥೆಗೆ 2023ನೆಯ ಸಾಲಿನ ಅಂಕಿತ ಪುಸ್ತಕ ಪುರಸ್ಕಾರ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರಾದ ರವೀಂದ್ರ ಪುಸ್ತಕಾಲಯದ ಶ್ರೀ ಯಲ್ಲಪ್ಪ ಅಪ್ಪಾಜಿರಾವ್ ದಂತಿ ಅವರು ಮಾತನಾಡಿ “ಉದ್ಯಮ ಮತ್ತು ಸಂಸ್ಥೆಗಳು ಜೀವಂತವಾಗಿರಬೇಕು ಎಂದರೆ ನಡೆಸುವ ವ್ಯಕ್ತಿಗೆ ಆಸಕ್ತಿ, ನಂಬಿಕೆ, ಉತ್ಸಾಹ ನಿತ್ಯವೂ ಇರಬೇಕು ಅಂದಾಗಲೇ ಯಶಸ್ಸುಸಿಗುವುದಕ್ಕೆ ಸಾಧ್ಯ” ಎಂದರು. ಇನ್ನೋರ್ವ ಪ್ರಶಸ್ತಿ ಪುರಸ್ಕೃತ ʻಛಂದ ಪುಸ್ತಕʼ ಸಂಸ್ಥೆಯ ವಸುದೇಂದ್ರ ಅವರು ಮಾತನಾಡಿ “ನನ್ನ ಅನುಭವದಲ್ಲಿ ಎಂದೂ ಕಾಣದ ಪುಸ್ತಕ ಮಾರಾಟದ ಅಬ್ಬರವನ್ನು ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೋಡಿದ್ದೇನೆ. ಮುಂದಿನ ದಿನಗಳಲ್ಲಿ ಪುಸ್ತಕೋದ್ಯಮದಲ್ಲಿ ಸಾಕಷ್ಟು ಬದಲಾವಣೆಗಳು ಬರವ ಎಲ್ಲಾ ಲಕ್ಷಣಗಳು ತೋರುತ್ತಿವೆ. ಆದ್ದರಿಂದ ಪ್ರಕಾಶಕರು ಒಂದು ರಾಜ್ಯಕ್ಕೆ, ಭಾಷೆಗೆ ಸಿಮಿತವಾಗಿರದೆ ಗಡಿದಾಟಿ ಅಕ್ಷರ ವ್ಯಾಪಾರವನ್ನು ಮಾಡುವುದಕ್ಕೆ ಸಿದ್ದರಾಗಬೇಕು” ಎಂದು ಕರೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ ಅವರು ಸ್ವಾಗತಿಸಿ, ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಮ್. ಪಟೇಲ್ ಪಾಂಡು ಅವರು ಕಾರ್ಯಕ್ರಮವನ್ನು ನಿರೂಪಿಸಿ, ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಪ್ರೊ. ಎನ್.ಎಸ್. ಶ್ರೀಧರ್ ಮೂರ್ತಿ ಅವರು ವಂದಿಸಿದರು.