ಮಂಗಳಾದೇವಿ : ಯಕ್ಷ ಪ್ರತಿಭೆ ಮಂಗಳೂರು ವತಿಯಿಂದ 15ನೇ ವರ್ಷದ ಸಂಭ್ರಮ, ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಕಾರ್ಯಕ್ರಮವು ಶ್ರೀ ಮಂಗಳಾದೇವಿ ದೇವಸ್ಥಾನದ ಮುಂಭಾಗದಲ್ಲಿ ದಿನಾಂಕ 23-12-2023ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಕಟೀಲು ಕ್ಷೇತ್ರದ ಪ್ರಧಾನ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ ಇವರು ಉದ್ಘಾಟಿಸಿ ಮಾತನಾಡುತ್ತಾ “ಕಲಾವಿದರನ್ನು, ಕಲಾ ಪೋಷರಕನ್ನು ಗುರುತಿಸಿ ಅವರಿಗೆ ಸಮ್ಮಾನ, ಪ್ರಶಸ್ತಿ ಪ್ರದಾನ ಮಾಡುವುದು ಶ್ರೇಷ್ಠ ಕಾರ್ಯ. ವರ್ಷದಿಂದ ವರ್ಷಕ್ಕೆ ಗೋಪಾಲಕೃಷ್ಣ ಆಸ್ರಣ್ಣ ಅವರನ್ನು ಸಂಸ್ಮರಣೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಾಕಷ್ಟು ಸಂಘಟನೆಗಳು ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿದೆ ಇಂದು ಸಂತೋಷದ ವಿಚಾರ, ಕಟೀಲಿನ ಒಂದು ಮೇಳ ಆರು ಮೇಳಗಳಾಗಿ ವಿಸ್ತರಣೆಗೊಳ್ಳಲೂ ಅವರೇ ಕಾರಣ ಎನ್ನಲು ಹೆಮ್ಮೆಯಾಗುತ್ತಿದೆ” ಎಂದು ಹೇಳಿದರು.
ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಮೂಡುಬಿದಿರೆಯ ಉದ್ಯಮಿ ಶ್ರೀಪತಿ ಭಟ್, ಬರ್ಕೆ ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷ ಸುಚೇಂದ್ರ ಅಮೀನ್, ಹರಿನಾರಾಯಣ ಬೈಪಡಿತ್ತಾಯ, ಸಂಸ್ಮರಣಾ ಸಮಿತಿ ಗೌರವಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು, ಗೌರವ ಸಲಹೆಗಾರ ಅಗರಿ ರಾಘವೇಂದ್ರ ರಾವ್, ಮಂಗಳಾದೇವಿ ದೇಗುಲದ ಟ್ರಸ್ಟಿ ಪ್ರೇಮಲತಾ ಉಪಸ್ಥಿತರಿದ್ದರು. ಶಾಸಕ ವೇದವ್ಯಾಸ ಕಾಮತ್ ಮತ್ತು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಭಾಗವಹಿಸಿದ್ದರು. ಯಕ್ಷಗಾನ ಪ್ರೋತ್ಸಾಹಕ ಮತ್ತು ಸಮಾಜ ಸೇವಕ ಪ್ರವೀಣ್ ಶೆಟ್ಟಿ ಪುತ್ತೂರು-ಉಡುಪಿ (ಪುಣೆ) ಅವರಿಗೆ ‘ಗೋಪಾಲಕೃಷ್ಣ ಆಸ್ರಣ್ಣ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಸ್ವಾಗತಿ ಮಹಿಳಾ ಭಾಗವತರಾದ ಲೀಲಾವತಿ ಬೈಪಡಿತ್ತಾಯ, ಮಹಾತ್ಮಾಗಾಂಧಿ ಅಂತಾರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಪುರಸ್ಕೃತ ಅದಾನಿ ಗ್ರೂಪ್‌ನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಎ.ಸುರೇಶ್ ರೈ ಅವರನ್ನು ಅಭಿನಂದಿಸಲಾಯಿತು. ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್, ಸಮಾಜ ಸೇವಕ ಯಜ್ಞೇಶ್ವರ ಬರ್ಕೆ, ಯಕ್ಷಗಾನ ಪ್ರೋತ್ಸಾಹಕ ವೆಂಕಟೇಶ ನಾವಡ ಅವರನ್ನು ಗೌರವಿಸಲಾಯಿತು. ಯಕ್ಷ ಪ್ರತಿಭೆ ಸಂಚಾಲಕ, ಸಂಸ್ಮರಣ ಸಮಿತಿ ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಶೆಟ್ಟಿ ಗೋಣಿಬೀಡು ಸ್ವಾಗತಿಸಿ, ಪ್ರಸ್ತಾವಿಸಿದರು. ಕದ್ರಿ ನವನೀತ್ ಶೆಟ್ಟಿ ಅವರು ಸಂಸ್ಮರಣೆ ಮತ್ತು ಅಭಿನಂದನ ನುಡಿಗಳನ್ನಾಡಿದರು. ಸುಧಾಕರ ರಾವ್ ಪೇಜಾವರ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಪಾವಂಜೆ ಮೇಳದವರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಿತು.