ಮಂಗಳೂರು : ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ 79ನೇ ವಾರ್ಷಿಕೋತ್ಸವವು ದೇಲಂಪಾಡಿಯ ಕೀರಿಕ್ಕಾಡು ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದಲ್ಲಿ ದಿನಾಂಕ 23-12-2023ರಂದು ಜರಗಿತು. ಈ ಸಂದರ್ಭದಲ್ಲಿ ಸಂಘದ ಸಂಸ್ಥಾಪಕರಾದ ಕೀರ್ತಿಶೇಷ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಎಡನೀರಿನ ನಿವೃತ್ತ ಪ್ರಾಂಶುಪಾಲ ರಾಜೇಂದ್ರ ಕಲ್ಲೂರಾಯ ಅವರು ಮಾತನಾಡಿ “ಯಕ್ಷಗಾನ ಕಲಾ ಕ್ಷೇತ್ರದಲ್ಲಿ ಗುರುಕುಲವನ್ನು ಸ್ಥಾಪಿಸಿ ಅನೇಕ ಮಂದಿ ಶಿಷ್ಯರನ್ನು ತಯಾರು ಮಾಡಿದ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರು ಓರ್ವ ಅನನ್ಯ ಸಾಧಕರು. ಹಳೆಯ ತಲೆಮಾರಿನ ಪ್ರಮುಖ ಅರ್ಥಧಾರಿಯಾಗಿ, ಹಲವು ಪ್ರಸಂಗಗಳ ಕರ್ತೃವಾಗಿ ಅವರ ಕೊಡುಗೆ ಅಪಾರ. ಅವರು ಹುಟ್ಟು ಹಾಕಿದ ಈ ಸಂಘ ಇಷ್ಟು ದೀರ್ಘಕಾಲ ಕಲಾ ಸೇವೆಯಲ್ಲಿ ನಿರತವಾಗುವುದಕ್ಕೆ ಅವರ ಸಂಕಲ್ಪ ಶಕ್ತಿಯೇ ಪ್ರಮುಖ ಕಾರಣ” ಎಂದರು.
ಹಿರಿಯ ಕವಯಿತ್ರಿ ಸತ್ಯವತಿ ಯಸ್. ಭಟ್ ಕೊಳಚಪ್ಪು ಸಂಸ್ಮರಣ ಭಾಷಣ ಮಾಡಿ ಕೀರಿಕ್ಕಾಡು ಅವರ ಬದುಕು ಮತ್ತು ಸಾಧನೆಗಳನ್ನು ವಿವರಿಸಿದರು. ಯಕ್ಷಗಾನ ರಂಗದ ಹಿರಿಯ ಮದ್ದಳೆಗಾರರಾದ ಪದ್ಯಾಣ ಶಂಕರನಾರಾಯಣ ಭಟ್ಟ ಅವರಿಗೆ 2023ನೇ ಸಾಲಿನ ‘ಕೀರಿಕ್ಕಾಡು ಪ್ರಶಸ್ತಿ’ಯನ್ನಿತ್ತು ಸಭೆಯಲ್ಲಿ ಸನ್ಮಾನಿಸಲಾಯಿತು. ಖ್ಯಾತ ಅರ್ಥಧಾರಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ನುಡಿಗಳನ್ನಾಡಿದರು. ಪದ್ಯಾಣದವರೊಂದಿಗೆ ಇದ್ದ ಸುದೀರ್ಘ ಒಡನಾಟವನ್ನು ಸ್ಮರಿಸಿಕೊಂಡ ಅವರು ಚೆಂಡೆಯಲ್ಲಿ, ಮದ್ದಳೆಯಲ್ಲಿ ಶಂಕರ ಭಟ್ಟರು ತೋರಿಸುತ್ತಿದ್ದ ಕೈಚಳಕವನ್ನು ಸೋದಾಹರಣವಾಗಿ ಉಲ್ಲೇಖಿಸಿದರು. “ಪದ್ಯಾಣರಂಥವರು ಒಂದು ಕುಟುಂಬಕ್ಕೆ ಅಥವಾ ಒಂದು ವರ್ಗಕ್ಕೆ ಸೀಮಿತವಾದ ಕಲಾವಿದರಲ್ಲ. ಅವರು ಇಡೀ ಸಮಾಜಕ್ಕೆ ಸಂಪತ್ತಾಗಿ ಪರಿಣಮಿಸುವಂತಹ ಅಪೂರ್ವ ಕಲಾವಿದರು. ಯಕ್ಷಗಾನದ ಕುಲಪತಿ ಎನಿಸಿದ ಕೀರಿಕ್ಕಾಡು ಮಾಸ್ತರರ ಪ್ರಶಸ್ತಿ ಅವರಿಗೆ ಸಹಜವಾಗಿಯೇ ಲಭಿಸಿದೆ” ಎಂದವರು ನುಡಿದರು.
ಪ್ರಶಸ್ತಿ ಸ್ವೀಕರಿಸಿದ ಪದ್ಯಾಣ ಅವರು “ಮಹಾನ್ ಕಲಾವಿದರ ಹೆಸರಿನಲ್ಲಿರುವ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆಯುವುದು ಬದುಕಿನ ಒಂದು ಯೋಗ” ಎಂದು ಧನ್ಯತೆ ವ್ಯಕ್ತಪಡಿಸಿದರು. ಪ್ರಶಸ್ತಿ ಪ್ರದಾನ ಸಂದರ್ಭ ವನಜಾಕ್ಷಿ ಶಂಕರನಾರಾಯಣ ಭಟ್ ಅವರನ್ನೂ ಗೌರವಿಸಲಾಯಿತು. ಬನಾರಿ ಶ್ರೀ ಗೋಪಾಲಕೃಷ್ಣ ಕಲಾಸಂಘದ ಅಧ್ಯಕ್ಷ ಡಾ. ರಮಾನಂದ ಬನಾರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ವಿಶ್ವವಿನೋದ ಬನಾರಿ ಸನ್ಮಾನ ಪತ್ರ ವಾಚಿಸಿದರು. ನಾರಾಯಣ ದೇಲಂಪಾಡಿ ಕಾರ್ಯಕ್ರಮ ನಿರೂಪಿಸಿದರು. ರಾಮಣ್ಣ ಮಾಸ್ಟರ್ ವಂದಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ಸಂಘದ ಸದಸ್ಯರು ಮತ್ತು ಅತಿಥಿ ಕಲಾವಿದರಿಂದ ‘ವಿಭೀಷಣ ನೀತಿ’ ಯಕ್ಷಗಾನ ತಾಳಮದ್ದಳೆ ಜರಗಿತು. ಕು. ರಚನಾ ಚಿದ್ಗಲ್ ಮತ್ತು ಮೋಹನ ಮೆಣಸಿನಕಾಯಿ ಅವರ ಭಾಗವತಿಕೆಗೆ ಪದ್ಯಾಣ ಶಂಕರನಾರಾಯಣ ಭಟ್, ಕುಮಾರ ಸುಬ್ರಹ್ಮಣ್ಯ, ಟಿ.ಡಿ. ಗೋಪಾಲಕೃಷ್ಣ ಭಟ್, ವಿಷ್ಣುಶರಣ ಬನಾರಿ, ಶ್ರೀವತ್ಸ ಸುಳ್ಯ ಭಾಗವಹಿಸಿದರು. ಡಾ. ರಮಾನಂದ ಬನಾರಿ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ವೆಂಕಟರಾಮ ಭಟ್ ಸುಳ್ಯ, ಸದಾಶಿವ ರೈ ಬೆಳ್ಳಿಪಾಡಿ, ಗಣೇಶ ಕಂಬಳಿಕೆರೆ, ಎಂ. ರಮಾನಂದ ರೈ ಮತ್ತು ವಿದ್ಯಾಭೂಷಣ ಪಂಜಾಜೆ ಅರ್ಥಧಾರಿಗಳಾಗಿದ್ದರು.
ದಿನಪೂರ್ತಿ ನಡೆದ ಕಾರ್ಯಕ್ರಮದಲ್ಲಿ ರಾಮಕೃಷ್ಣ ಕಾಟುಕುಕ್ಕೆ ಅವರ ಮಾರ್ಗದರ್ಶನದಲ್ಲಿ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಬನಾರಿ ಮತ್ತು ಶ್ರೀ ವಾಗ್ದೇವಿ ಭಜನಾ ಮಂಡಳಿ ಕಾವು ಇವರಿಂದ ಭಜನಾ ಕಾರ್ಯಕ್ರಮ, ಮಹಿಳಾ ಕಲಾವಿದರಿಂದ ‘ಸಮರ ಸನ್ನಾಹ’ ತಾಳಮದ್ದಳೆ, ಶಾಲಾ ಮಕ್ಕಳಿಂದ ನೃತ್ಯ ವೈವಿಧ್ಯ, ಬನಾರಿ ಅಂಗನವಾಡಿ ಪುಟಾಣಿಗಳಿಂದ ‘ಚಿನ್ನರ ಚಿಲಿಪಿಲಿ’ ಜರಗಿತು. ರಾತ್ರಿ ನೃತ್ಯ ಗುರುಗಳಾದ ಸರೋಜಿನಿ ಬನಾರಿ ನಿರ್ದೇಶನದಲ್ಲಿ ಉದಯೋನ್ಮುಖ ಕಲಾವಿದರಿಂದ ‘ಶಕಟಾಸುರ ವಧೆ – ತರಣಿಸೇನ ಕಾಳಗ – ಗಿರಿಜಾ ಕಲ್ಯಾಣ’ ಯಕ್ಷಗಾನ ಬಯಲಾಟ ನೆರವೇರಿತು.