ಕಿನ್ನಿಗೋಳಿ : ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕದ ಆಶ್ರಯದಲ್ಲಿ ಮಧ್ಯೆ ಮಳೆ ನೀರು ಬೀಳುವ ಕೊಡೆತ್ತೂರು ಗುತ್ತುವಿನ ನಾಲ್ಕಂಕಣದ ಚೌಕಿಮನೆಯಲ್ಲಿ ಆಯೋಜಿಸಿದ ‘ಮಳೆ ಮತ್ತು ಸಾಹಿತ್ಯ’ ಕಾರ್ಯಕ್ರಮವು ದಿನಾಂಕ 13-08-2023ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಖ್ಯಾತ ಪರಿಸರವಾದಿ, ಬರಹಗಾರ ದಿನೇಶ್ ಹೊಳ್ಳರು ಮಾತನಾಡುತ್ತಾ “ನೀರನ್ನು ದುಡ್ಡು ಕೊಟ್ಟು ಕೊಳ್ಳಬೇಕಾದ, ಸಾಲ ಪಡೆದುಕೊಳ್ಳಬೇಕಾದ ದಿನಗಳು ಬಂದಿವೆ. ಮಳೆಯಿಲ್ಲದೆ ಪ್ರಕೃತಿಯಿಲ್ಲ. ಪ್ರಕೃತಿಯಿಲ್ಲದೆ ಬದುಕಿಲ್ಲ. ಪ್ರಕೃತಿಯೊಂದಿಗೆ ಬದುಕುವುದನ್ನು ಕಲಿಯಬೇಕು. ನದಿ ತಿರುಗಿಸಿದರೆ, ಪ್ಲಾಸ್ಟಿಕ್ ವಿಪರೀತ ಬಳಸುತ್ತಲೇ ಹೋದರೆ, ಕಾಡು ಕಡಿಯುತ್ತಲೇ ಇದ್ದರೆ ಅಲ್ಲಿ ಹುಟ್ಟುವ ನದಿ ತೊರೆಗಳು ಬತ್ತಿ, ಕಷ್ಟದ ದಿನಗಳು ಬರಲಿವೆ. ಹುಲಿ ದಾಳಿ, ಅಂಗಳಕ್ಕೆ ಬಂದ ಚಿರತೆ, ತೋಟಕ್ಕೆ ನುಗ್ಗಿದ ಆನೆ ಎಂದೆಲ್ಲ ಓದುತ್ತಿದ್ದೇವೆ. ಕಾಡು ಕಡಿದಿದ್ದೇವೆ. ಪ್ಲಾಸ್ಟಿಕ್ ಬಾಟಲಿ ಕಸ ತುಂಬಿಸಿ, ನೀರಿನ ಮೂಲ ಹಾಳು ಮಾಡಿ ಭೂಕುಸಿತಕ್ಕೆ ಕಾರಣವಾಗುತ್ತಿದ್ದೇವೆ. ಆಧುನಿಕತೆಯ, ಅಭಿವೃದ್ಧಿಯ ನೆಪದಲ್ಲಿ ಸ್ಮಾರ್ಟ್ ಸಿಟಿಯ ಹೆಸರಿನಲ್ಲಿ ಪ್ರಕೃತಿಯ ನಾಶ ಮಾಡಿ, ಮಳೆ ಇಲ್ಲ ಎಂದು ರಜೆ ಕೊಡುವ ನಾವೇ ಎಂಥಾ ಸೆಕೆ ಮಾರ್ರೆ ಎಂದು ಬಳಲುತ್ತೇವೆ. ಒಳ್ಳೆಯ ಮಳೆ ಬಂದರೆ ಅಯ್ಯೋ ಎಂತ ಮಳೆ ಮಾರ್ರೆ ಎಂದು ಬೈಯುತ್ತೇವೆ. ನಮ್ಮ ಮನಃಸ್ಥಿತಿಯಲ್ಲಿ ಬದಲಾಗಬೇಕಾಗಿದೆ. ಪ್ರಕೃತಿಯೆಡೆಗಿನ ಕಾಳಜಿ ಮಕ್ಕಳಲ್ಲೂ ಹೆಚ್ಚಾಗಿ ಮೂಡಿಸಬೇಕಾಗಿದೆ” ಎಂದು ಹೇಳಿದ ದಿನೇಶ್ ಹೊಳ್ಳ ತನ್ನ ಕಾಡು ಮತ್ತು ಬೆಟ್ಟಗಳೆಡೆಗಿನ ಚಾರಣ, ಪ್ರಕೃತಿಯೊಂದಿಗಿನ ಒಡನಾಟದ ಅನುಭವಗಳನ್ನು ಹಂಚಿಕೊಂಡರು.
ದಿನೇಶ ಹೊಳ್ಳರ ಮಾತಿನ ಮಧ್ಯೆ ಮಧ್ಯೆ ಕುಮಾರಿ ಗ್ರೀಷ್ಮಾ ಕಟೀಲು ಹಾಡಿದ ‘ಮಾಯದಂತ ಮಳೆ ಬಂತಣ್ಣಾ’, ‘ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ’, ‘ಮಳೆಯಲಿ ಜೊತೆಯಲಿ’, ‘ಗಗನದಲಿ ಮಳೆಯ ದಿನ’, ‘ಮಳೆ ಸುರಿಯಲಿ’, ‘ಚಿತ್ತಾರ ಬಿಡಿಸ್ಯಾವೆ’, ‘ಮುಂಗಾರಿನ ಅಭಿಷೇಕಕೆ’ ಮುಂತಾದ ಮಳೆ ಕುರಿತಾದ ಹಾಡುಗಳು ಕೇಳುಗರನ್ನು ಮುದಗೊಳಿಸಿದವು. ಮಳೆ ಹಾಡುಗಳಿಗೆ ತಬಲಾದಲ್ಲಿ ಸುರೇಶ್ ಕಡಂದಲೆ, ಗಿಟಾರ್‌ನಲ್ಲಿ ಶರತ್ ಹಳೆಯಂಗಡಿ ಸಾಥ್ ನೀಡಿದರು.
ಶ್ರೀ ರವೀಂದ್ರ ಅತ್ತೂರು, ಡಾ. ಪದ್ಮನಾಭ ಭಟ್, ಶ್ರೀ ವೇದವ್ಯಾಸ ಉಡುಪ ಮಳೆಯ ಕುರಿತಾಗಿ ಅಭಿಪ್ರಾಯಗಳನ್ನು ಹಂಚಿಕೊಂಡರು. ಶ್ರೀ ಬಿ.ಆರ್. ಪ್ರಸಾದ್ 140 ವರ್ಷಗಳ ಹಳೆಯದಾದ ಕೊಡೆತ್ತೂರುಗುತ್ತಿನ ಮನೆಯ ಬಗ್ಗೆ ಮಾಹಿತಿ ನೀಡಿದರು. ಮೂವತ್ತಕ್ಕೂ ಹೆಚ್ಚು ಮಕ್ಕಳಿಗೆ ಕತೆ ಪುಸ್ತಕಗಳನ್ನು ವಿತರಿಸಿಲಾಯಿತು. ಮೂಲ್ಕಿ ಕ.ಸಾ.ಪ. ಅಧ್ಯಕ್ಷರಾದ ಶ್ರೀ ಮಿಥುನ ಕೊಡೆತ್ತೂರು, ದೇವಸ್ಯ ಮತ್ತು ಕೊಡೆತ್ತೂರುಗುತ್ತು ಫ್ಯಾಮಿಲಿ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ನಿತಿನ್ ಶೆಟ್ಟಿ ಮತ್ತಿತರರಿದ್ದರು. ಜೊಸ್ಸಿ ಪಿಂಟೋ ಸ್ವಾಗತಿಸಿ, ವೆಂಕಟೇಶ್ ಹೆಬ್ಬಾರ್ ವಂದಿಸಿ, ರಾಜಶೇಖರ್ ನಿರೂಪಿಸಿದರು.