ಚೆಟ್ಟೋಳಿರ ಶರತ್ ಸೋಮಣ್ಣ ಇವರು ಮಡಿಕೇರಿಯ ಕಗ್ಗೋಡ್ಲು ಗ್ರಾಮದ ಚೆಟ್ಟೋಳಿರ ಗಣಪತಿ ಮತ್ತು ಸ್ವಾತಿ ದಂಪತಿಯ ಪುತ್ರ. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಡಿಕೇರಿಯ ಸಂತ ಮೈಕಲರ ಪ್ರಾಥಮಿಕ ಶಾಲೆ ಮತ್ತು ಕೊಡ್ಲಿಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆಯಲ್ಲಿ ಮುಗಿಸಿದ್ದಾರೆ. ನಂತರ ಹಾಸನದ ಕೃಷ್ಣ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆಯುವ ಯತ್ನ ಮಾಡಿದ್ದಾರೆ. ಪ್ರವೃತ್ತಿಯಿಂದ ಸಮಾಜ ಸೇವೆ, ಲೇಖಕ, ಸಂಘಟಕರೆಂದು ಗುರುತಿಸಿಕೊಂಡಿರುವ ಇವರು ವೃತ್ತಿಯಿಂದ ವ್ಯವಸಾಯ ಮತ್ತು ವ್ಯವಹಾರವನ್ನು ಅಪ್ಪಿಕೊಂಡಿದ್ದಾರೆ.
ಸಾರಸ್ವತ ಲೋಕಕ್ಕೆ ಇವರು ಕೊಡವ ಭಾಷೆಯಲ್ಲಿ ಒಡಂಗತೆರ ಒಡ್ಡ್ ಎಂಬ ಒಗಟುಗಳನ್ನು ಸಂಗ್ರಹಿಸಿರುವ ಕೃತಿಯನ್ನು ಕೊಡವಾಮೆರ ಕೊಂಡಾಟ ಕೂಟದ ಸಹಾಯದೊಂದಿಗೆ ಲೋಕಾರ್ಪಣೆ ಮಾಡಿದ್ದಾರೆ. ಕೊಡವ ಹಾಗೂ ಕನ್ನಡ ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇವರ ಅನೇಕ ಕಥೆ, ಕವನಗಳು, ಚುಟುಕು, ಹಾಡುಗಳು ಪ್ರಕಟಗೊಂಡಿವೆ. ಕೊಡವ ಕೂಟಾಳಿಯಡ ಕೂಟ ಸಂಘಟನೆಯಲ್ಲಿ ಎರಡನೇ ಅವಧಿಗೆ 5 ಕಾರ್ಯದರ್ಶಿಯಾಗಿ, ಜೂನಿಯರ್ ಚೇಂಬರ್ ಆಫ್ ಇಂಟರ್ನ್ಯಾಶನಲ್ ಇಂಡಿಯಾದ ಪೊನ್ನಂಪೇಟೆ ನಿಸರ್ಗ ಘಟಕದಲ್ಲಿ ಸತತ ಮೂರನೇ ಅವಧಿಗೆ ಕಾರ್ಯದರ್ಶಿಯಾಗಿ, ಕೊಡಗು ಸಿರಿಗನ್ನಡ ವೇದಿಕೆಯ ಪೊನ್ನಂಪೇಟೆ ತಾಲೂಕು ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೇಸಿಐ ವಲಯ ಹದಿನಾಲ್ಕು ಬಿ. ಪ್ರಾಂತ್ಯದಲ್ಲಿ 2023ನೆಯ ಸಾಲಿನ ಅತ್ಯುತ್ತಮ ಕಾರ್ಯದರ್ಶಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಎಳವೆಯಿಂದಲೇ ಕೊಡವರ ಆಚಾರ ವಿಚಾರ, ಪದ್ಧತಿ ಸಂಪ್ರದಾಯದ ಕುರಿತು ಅಭಿಮಾನ ಹೊಂದಿದ್ದಾರೆ. ಕವನ, ಹಾಡು, ಕಥೆ, ಕೊಡವ ಗೀತೆಗಳ ನಿರ್ದೇಶನ, ಕೊಡವ ಹಾಡುಗಳ ಸ್ಟೇಟಸ್ ವೀಡಿಯೋ ತಯಾರಿ, ವೀಡಿಯೋ ಹಾಡಿನ ಎಡಿಟಿಂಗ್, ರೀಲ್ಸ್, ಹಾಸ್ಯಭರಿತ ವೀಡಿಯೋ ಇಂತಹ ಮನೋರಂಜನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಿ ಜನಮನ ಗೆಲ್ಲುವ ಯತ್ನ ಮಾಡಿದ್ದಾರೆ. ಆ ಮೂಲಕ ಕೊಡಗಿನ ಸಾಹಿತಿಗಳು, ಕಲಾವಿದರು, ಗಾಯಕರಂತಹ ಪ್ರತಿಭೆಗಳನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತಂದು ಪ್ರೋತ್ಸಾಹ ನೀಡಬೇಕು ಎಂಬುದು ನನ್ನ ಮನೋಭಿಲಾಷೆಯಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಕೊಡಗಿನ ವಾಲಗ ನೃತ್ಯ (ವಾಲಗತ್ತಾಟ್) ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುತ್ತಾರೆ. ತಮ್ಮ ಯೂಟ್ಯೂಬ್ ಚಾನೆಲ್ ಮುಖಾಂತರ ಕೊಡವ ಲೇಖಕರಿಗೆ, ಗಾಯಕರಿಗೆ, ಚಿತ್ರಕಲಾವಿದರಿಗೆ ಪ್ರೋತ್ಸಾಹ ನೀಡಿ ಅವರ ಪ್ರತಿಭೆಯನ್ನು ಹೊರ ತರುವ ಯತ್ನ ಮಾಡುತ್ತಿದ್ದಾರೆ.
ಮಡಿಕೇರಿ ಆಕಾಶವಾಣಿಯ ಕೊಡವ ಸಿರಿ ವಿಭಾಗದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗುರುತಿಸಿಕೊಡಿದ್ದಾರೆ. ಸಾಹಿತ್ಯಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳಿಗೆ ಭಾಜನರಾಗಿದ್ದಾರೆ. ಕೊಡಗಿನ ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು, ಕೊಡವ ತಕ್ಕ್ ಎಳ್ತ್ ಕಾರಡ ಕೂಟ, ಪೊಂಬೊಳ್ಚ ಕೂಟಗಳು ಏರ್ಪಡಿಸಿರುವ ಕವಿಗೋಷ್ಠಿಗಳಲ್ಲಿ ಭಾಗವಹಿಸಿರುತ್ತಾರೆ. ವ್ಯವಹಾರ ನಿಮಿತ್ತವಾಗಿ ತಂದೆ-ತಾಯಿಯೊಂದಿಗೆ ಮೈಸೂರಿನಲ್ಲಿ ನೆಲೆಸಿರುವ ಇವರ ಮುಂದಿನ ಬದುಕು ಬರಹಗಳು ಜನ ಉನ್ನತಿಗೇರಿ ಜನಾನುರಾಗಿಯಾಗಲೆಂದು ಹಾರೈಸೋಣ.
– ವೈಲೇಶ್ ಪಿ.ಎಸ್. ಕೊಡಗು (8861405738 ದೂರವಾಣಿ)
ಶ್ರೀ ವೈಲೇಶ್ ಪಿ.ಎಸ್. ಇವರು ಶಿವೈ ವೈಲೇಶ್ ಪಿ.ಎಸ್. ಕೊಡಗು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುತ್ತಾರೆ. ಸಾಹಿತ್ಯ ರಚನೆ ಮತ್ತು ಸಂಘಟನೆ ಇವರ ಪ್ರವೃತ್ತಿಯಾಗಿದೆ. ಮನೆ ಮನೆ ಕಾವ್ಯಗೋಷ್ಠಿ ಸಂವರ್ಧಕ ಪರಿಷತ್ತು, ಛಂದೋಬದ್ಧ ಕಾವ್ಯ ಸಂವರ್ಧಕ ಪರಿಷತ್ತು ಮತ್ತು ಸಾಹಿತ್ಯ ಸಂವರ್ಧಕ ಪರಿಷತ್ತು ಈ ಮೂರು ಬಳಗದ ವತಿಯಿಂದ ಅನೇಕ ಯುವ ಕವಿಗಳನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಒಳಗೊಂಡಂತೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಕೊಡಗು ಜಿಲ್ಲೆಯ ಜಾನಪದ ಪರಿಷತ್ತಿನ ವತಿಯಿಂದ ನಡೆದ 2019ರ ಮಡಿಕೇರಿ ದಸರಾ ಕಾರ್ಯಕ್ರಮದಲ್ಲಿಯೂ ಸನ್ಮಾನಿಸಲಾಗಿದೆ. ‘ಅಮ್ಮ ನಿಮಗಾಗಿ’ ಮತ್ತು ‘ಕಣ್ಮರೆಯಾದ ಹಳ್ಳಿ’ ಇವು ಕವನ ಸಂಕಲನಗಳು, ‘ಬೊಮ್ಮಲಿಂಗನ ಸಗ್ಗ’ ಮುಕ್ತಕಗಳು, ‘ಮನದ ಇನಿದನಿ’ ಲೇಖನ ಮಾಲೆಗಳ ಕೃತಿ ಮತ್ತು ‘ಕೊಡಗಿನ ಸಾಹಿತ್ಯ ತಪಸ್ವಿಗಳು’ ಎಂಬ ಕೊಡಗಿನ ಸಾಹಿತಿಗಳ ಪರಿಚಯ ಮಾಲಿಕೆ ಭಾಗ-1. ಇವು ಇವರ ಪ್ರಕಟಿತ ಕೃತಿಗಳು. ಇನ್ನೂ ಹತ್ತು ಕೃತಿಗಳನ್ನು ತಯಾರಿಸಲು ಬೇಕಾದಷ್ಟು ಬರಹಗಳು ಶೇಖರವಾಗಿವೆ. ಕೊಡಗು ಜಿಲ್ಲೆ ಮತ್ತು ಕರ್ನಾಟಕ ರಾಜ್ಯದ ಹಲವಾರು ಕಡೆಗಳಲ್ಲಿ ಹಾಗೂ ಕೇರಳದ ಕಾಸರಗೋಡಿನ ಒಟ್ಟು ಇನ್ನೂರಕ್ಕೂ ಹೆಚ್ಚಿನ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಗುಲ್ಬರ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ.
ಇತ್ತೀಚೆಗೆ ಹಲವಾರು ಛಂದೋಬದ್ಧ ಪ್ರಕಾರಗಳಲ್ಲಿ ಕಾವ್ಯ ರಚನೆ ಮಾಡುತ್ತಿರುವ ಇವರು ಮುಕ್ತಕಗಳು, ಗಝಲ್, ನವ್ಯ ವಚನ ಸಾಹಿತ್ಯ, ನವ್ಯ ಕವಿತೆಗಳನ್ನೂ ರಚಿಸಿದ್ದಾರೆ. ಲಲಿತ ಪ್ರಬಂಧಗಳು, ವೈಚಾರಿಕ ಲೇಖನಗಳು, ಕೊಡಗಿನ ಕವಿ ಸಾಹಿತಿಗಳ ಪರಿಚಯ, ಹಾಯ್ಕು, ಟಂಕಾ, ರುಬಾಯಿ, ದೇಶ ಭಕ್ತಿ ಗೀತೆಗಳು, ಭಕ್ತಿ ಗೀತೆಗಳು, ಲಾವಣಿಗಳು, ಜಾನಪದ ಶೈಲಿಯ ಗೀತೆಗಳನ್ನು ಇತ್ಯಾದಿ ಇವರ ರಚನೆಗಳು. ಶಕ್ತಿ ಪತ್ರಿಕೆಯಲ್ಲಿ ಅಂಕಣ ಬರಹಗಾರರಾಗಿದ್ದಾರೆ. ಇವರು ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ, ಮುಕ್ತಕ ಸಾಹಿತ್ಯ ಸಿಂಧು ಪ್ರಶಸ್ತಿ, ಸಾಹಿತ್ಯ ರತ್ನ ಹೀಗೆ ಇನ್ನೂ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಮತ್ತು ಇತ್ತೀಚೆಗೆ ಕೃಷ್ಣರಾಜನಗರದ ಕಪ್ಪಡಿ ಕ್ಷೇತ್ರದಲ್ಲಿ ಸನ್ಮಾನವನ್ನು ಸ್ವೀಕರಿಸಿದ್ದಾರೆ.