ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ, ಅಕಾಡೆಮಿ ಸಭಾಂಗಣದಲ್ಲಿ ದಿನಾಂಕ 05 ಸೆಪ್ಟೆಂಬರ್ 2026ರಂದು ‘ಕಾವ್ಯಾಂ ವ್ಹಾಳೊ -18’ ಶೀರ್ಷಿಕೆಯಡಿ ಕವಿಗೋಷ್ಟಿ ನಡೆಯಿತು. ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಪ್ರಾಸ್ತಾವಿಕವಾಗಿ ಮಾತಾನಾಡಿ, “ಒಂದು ರೀತಿಯಲ್ಲಿ ಎಲ್ಲಾ ಕವಿ/ಕವಯಿತ್ರಿಯರು ಶಿಕ್ಷಕರೇ ಆಗಿರುತ್ತಾರೆ. ಒಂದು ಕವಿತೆಯಲ್ಲಿ ಅಗತ್ಯವಿರುವ ವಿಷಯವನ್ನು ಬಹಳ ನಾಜೂಕಾಗಿ ತಿದ್ದಿ, ಕವಿತೆಗೆ ರೂಪ ಕೊಡುವುದು ಯಾವುದೇ ಶಿಕ್ಷಕ ವೃತ್ತಿಗಿಂತ ಕಡಿಮೆಯೇನಲ್ಲ” ಎಂದು ಹೇಳಿ ಕವಿಗೋಷ್ಟಿಗೆ ನೆರೆದಿರುವ ಸರ್ವರನ್ನು ಸ್ವಾಗತಿಸಿದರು.
ಮುಖ್ಯ ಅಥಿತಿಗಳಾದ ಕೊಂಕಣಿಯ ಹೆಸರಾಂತ ನಟ, ಗಾಯಕ ಹಾಗೂ ಕಾರ್ಯಕರ್ತರಾದಂತಹ ಎಮ್. ಮುರಳೀಧರ್ ಕಾಮತ್ರವರು ಮಾತಾನಾಡಿ, “ನಾವು ಸಮಯಕ್ಕೆ ಬಹಳ ಪ್ರಾಮುಖ್ಯತೆಯನ್ನು ನೀಡಬೇಕು. ಪ್ರತಿ ಘಳಿಗೆಯೂ ನಮ್ಮ ಜೀವನದ ಉನ್ನತಿಗೆ ಅಥವಾ ಅವನತಿಗೆ ಕಾರಣಿಕರ್ತವಾಗಿರುತ್ತದೆ. ಹಾಗಾಗಿ ಸಮಯ ಅನ್ನುವುದು ನಮ್ಮ ಆತ್ಮೀಯ ಸ್ನೇಹಿತ” ಎಂದು ಹೇಳಿದರು.
ಕೊಂಕಣಿ ಅಕಾಡೆಮಿಯ ಸನ್ಮಾನವನ್ನು ಸ್ವೀಕರಿಸಿ ಮಾತಾನಾಡಿದ ಕೊಂಕಣಿಯ ಹಿರಿಯ ಕಾರ್ಯಕರ್ತರಾಗಿರುವ ಶ್ರೀ ಜೆರಾಲ್ಡ್ ರೊಡ್ರಿಗಸ್ ಇವರು, “ನಮ್ಮಂತಹ ತೆರೆಮರೆಯ ಕೊಂಕಣಿ ಕಾರ್ಯಕರ್ತರನ್ನು ಗುರುತಿಸಿ, ಸನ್ಮಾನವನ್ನು ಮಾಡಿದ್ದು ನನಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿದಷ್ಟು ಅಭಿಮಾನವಾಗುತ್ತಿದೆ. ನನ್ನ ಕೆಲಸವನ್ನು ಗುರುತಿಸಿದ್ದಕ್ಕಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ವಂದನೆಗಳು” ಎಂದು ಹೇಳಿ ಹರ್ಷ ವ್ಯಕ್ತಪಡಿಸಿದರು.

ಖ್ಯಾತ ಕವಯಿತ್ರಿಯಾದ ತಾರಾ ಲವೀನಾ ಫೆರ್ನಾಂಡಿಸ್ (ಲವಿ ಗಂಜಿಮಠ)ರವರು ಕವಿಗೋಷ್ಟಿಯನ್ನು ನಡೆಸಿ, ಕವಿ, ಕವಿತೆಗಳ ಬಗ್ಗೆ ಸವಿಸ್ತಾರ ವಿವರಗಳನ್ನು ನೀಡಿದರು. ವಲೇರಿಯನ್ ಸಿಕ್ವೇರಾ (ವಲ್ಲಿ ಬೋಳಾ), ಶನನ್ ರೀವ್ ಕ್ರಾಸ್ತಾ, ಕೃತಿಕಾ ಕಾಮತ್, ಜೆನಿಶಾ ಶರಲ್ ರೊಡ್ರಿಗಸ್, ಎಡ್ವರ್ಡ್ ಲೋಬೊ ತೊಕ್ಕೊಟ್ಟು, ವಾಯ್ಲೆಟ್ ಜೆ. ಪಿರೇರಾ, ಅಲೋಮಾ ಲೋಬೊ ಕಟೀಲ್, ಗೊಡ್ವಿನ್ ಪಿಂಟೊ, ಕಾಂತಾವರ ಶಿವಾನಂದ ಶೆಣೈ ಮತ್ತು ಪ್ರೀತಮ್ ಮಿಜಾರ್ ಇವರು ತಮ್ಮ ಕವಿತೆಗಳನ್ನು ವಾಚಿಸಿದರು. ಅಕಾಡೆಮಿ ಸದಸ್ಯರಾದ ಶ್ರೀ ರೊನಾಲ್ಡ್ ಕ್ರಾಸ್ತಾರವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಸದಸ್ಯರಾದ ಸಮರ್ಥ್ ಭಟ್ ಉಪಸ್ಥಿತರಿದ್ದರು.
