ನವ್ಯೋತ್ತರ ಕಾಲಘಟ್ಟದ ಗಣ್ಯ ಕನ್ನಡ ಸಾಹಿತಿಗಳಲ್ಲಿ ಲೇಖಕರಲ್ಲಿ ಡಾ. ಜನಾರ್ದನ ಭಟ್ ಇವರ ಸಾಧನೆ ಅನನ್ಯವಾದುದು. ಕಳೆದ ಐದು ದಶಕಗಳಿಂದ ನಿರಂತರವಾಗಿ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಇವರು ನಡೆಸುತ್ತಾ ಬಂದಿರುವ ಸಾಹಿತ್ಯ ಕೃಷಿ ಅಷ್ಟೇ ಗಮನಾರ್ಹವಾದುದು. ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಅಂಕಣ ಸಾಹಿತ್ಯ, ಸಂಶೋಧನೆ, ಕೃತಿ ಸಂಪಾದನೆ ಮೊದಲಾದ ಕ್ಷೇತ್ರಗಳ ವಿಕಾಸ ವೈವಿಧ್ಯಕ್ಕೆ ತಮ್ಮ ಪ್ರತಿಭೆ ಚಿಂತನೆಗಳನ್ನು ಇವರು ಧಾರೆಯೆರೆಯುತ್ತಾ ಬಂದಿರುವುದು ಉಲ್ಲೇಖನೀಯ ಅಂಶ. ಡಾ. ಭಟ್ ಇವರು ಪ್ರತಿಭೆ, ವ್ಯುತ್ಪತ್ತಿ ಮತ್ತು ಅಭ್ಯಾಸ ಇವುಗಳ ಒಂದು ಮಣಿಮಯ ಮೂರ್ತಿಯೂ ಆಗಿದ್ದಾರೆ. ಇವರು ಪ್ರತಿಯೊಂದರಲ್ಲೂ ತಮ್ಮತನದ ಮುದ್ರೆಯನ್ನು ಒತ್ತಿದ್ದಾರೆ. ಕನ್ನಡ ಸಾಹಿತ್ಯದ ಆರೋಗ್ಯಕರ ಬೆಳವಣಿಗೆಗೆ ಇವರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆಂಬುದು ಅಭಿಮಾನದ ಸಂಗತಿ.
‘ಪ್ರಾಚೀನ ತುಳುನಾಡು, ಚಾರಿಷನ್ ಪ್ರಹಸನ ಮತ್ತು ಭೂತಾಳಪಾಂಡ್ಯನ ಅಳಿಯಸಂತಾನದ ಕಟ್ಟು ಕಟ್ಟಳೆ’ ಹೀಗೆ ಮೂರು ಪ್ರಮುಖ ಅಧ್ಯಾಯಗಳು ಹಾಗೂ ಕನ್ನಡದ ಮೊದಲನೆಯ ತಾಮ್ರಶಾಸನ ಆಳುಪರ ಬೆಳ್ಮಣ್ಣು ಶಾಸನ, ತುಳುನಾಡಿನ ಬೆರ್ಮರ ಆರಾಧನೆ ಎಂಬ ಮತ್ತೆರೆಡು ಒಳ ತೆನೆಗಳಿಂದ ಕೂಡಿರುವ ಡಾ. ಬಿ. ಜನಾರ್ದನ ಭಟ್ ವಿರಚಿತ ಈ ನೂತನ ಕೃತಿ ಅನೇಕ ದೃಷ್ಟಿಯಿಂದ ನಮ್ಮ ಗಮನವನ್ನು ಸೆಳೆಯುತ್ತದೆ. ಕರಾವಳಿ ಕರ್ನಾಟಕದ, ಪ್ರಾಚೀನ ತುಳುನಾಡಿನ ಸಮಗ್ರ ಇತಿಹಾಸ ಸಾಹಿತ್ಯ ಸಂಸ್ಕೃತಿ ಪರಂಪರೆ ಇವುಗಳ ಸಂತತ ಅಧ್ಯಯನ ಸಂಪಾದನೆಗಳ ಮೂಲಕ ಲಿಟರರಿ ಸ್ಕಾಲರ್‌ಶಿಪ್ ಬಲಪಡಿಸುವ ಉದ್ದೇಶ ಡಾ. ಜನಾರ್ದನ ಭಟ್ ಇವರದು. ಇವರ ಒಟ್ಟೂ ಬದುಕು ಬರಹದಲ್ಲಿ ತುಳು-ಕನ್ನಡ-ದೇಸಿ ಸಮುದಾಯದೊಂದಿಗಿನ ಅನುಸಂಧಾನ ನಿಚ್ಚಳವಾಗಿ ಕಾಣಿಸುತ್ತದೆ. ತುಳು, ಕನ್ನಡ ಸಂಕರ ಸಂಸ್ಕೃತಿಯ ಎಲ್ಲ ಮುಖಗಳನ್ನು ಸಮಗ್ರವಾಗಿ ಇಡಿಯಾಗಿ ನೋಡುವುದು ಅವರ ಒಟ್ಟಾರೆ ಜೀವನ ದೃಷ್ಟಿ. ತುಳುನಾಡಿನ ಸಾಂಸ್ಕೃತಿಕ ಚರಿತ್ರೆಯ ಕುರಿತು ಅವರಿಗೆ ವಿಶೇಷವಾದ ಆಸ್ಥೆ. ಇಲ್ಲಿನ ಜನತೆಯ ಏಳು ಬೀಳು ಕನಸು ಕನವರಿಕೆ ಸಾಹಸಮಯ ಬದುಕು ಹೋರಾಟಗಳನ್ನು ವಿವರಿಸಲು ಸ್ಥಳೀಯವಾಗಿ ಲಭ್ಯವಿರುವ ಆಕರ ಸಾಮಗ್ರಿಗಳನ್ನು ಬಳಸಿಕೊಂಡು ಚಾರಿತ್ರಿಕ ಪ್ರಜ್ಞೆಯ ನೆಲೆಯಲ್ಲಿ ವಿಶ್ಲೇಷಿಸಿರುವುದು ಮಹತ್ವದ ಸಂಗತಿ. ಜೊತೆಗೆ ತುಳುನಾಡಿನ ಇತಿಹಾಸದ ಒಡವೆಗಳನ್ನು ಸಾಹಿತ್ಯಕ್ಕೆ ತೊಡಿಸುವ ಹಾಗೂ ಸಾಹಿತ್ಯದ ತೊಡವುಗಳನ್ನು ಇತಿಹಾಸದ ಜೊತೆಗಿಟ್ಟು ನೋಡುವ ಆ ಮೂಲಕ ಹೊಸ ಹೊಸ ನೋಟಗಳನ್ನು ನೀಡುವ ವಿಶಿಷ್ಟ ಶೋಧಕ್ರಮ ಇವರ ಪ್ರಸ್ತುತ ಕೃತಿಯಲ್ಲಿದೆ. ಈ ಮೂಲಕ ನಮಗೆ ಗೊತ್ತಿಲ್ಲದ, ಉಪೇಕ್ಷೆಗೆ ಒಳಗಾದ ತುಳುನಾಡಿನ ಜನಜೀವನದ ನಾನಾ ಮುಖಗಳನ್ನು ಇಲ್ಲಿ ಮುನ್ನೆಲೆಗೆ ತಂದು ವಿಶ್ಲೇಷಿಸಿದ್ದಾರೆ. ಬೌದ್ಧರಿಂದ ತೊಡಗಿ ಶಾತವಾಹನರು, ಪಾಂಡ್ಯರು, ತೌಳವ ಅರಸರು, ಅದೆಷ್ಟೋ ಸಾಮಂತ ದೊರೆಗಳ ಇತಿಹಾಸ ತುಳುನಾಡಿನ ಜೊತೆಗೆ ತುಳುಕು ಹಾಕಿಕೊಂಡಿರುವುದನ್ನು ಅವರಿಲ್ಲಿ ಬಿಚ್ಚಿಬಿಚ್ಚಿ ತೋರಿಸಿಕೊಟ್ಟಿದ್ದಾರೆ. ತುಳುನಾಡಿನ ಗತಕಾಲದ ಜನಜೀವನದ ಸಮಗ್ರ ಚಿತ್ರಣವನ್ನು ಕಲ್ಪಿಸುವ ಅನನ್ಯ ವರ್ತಮಾನದ ಜರೂರಿನ ಪ್ರಯತ್ನವೂ ಇದಾಗಿದೆ.
ತುಳುನಾಡು ಲಾಗಾಯ್ತಿನಿಂದಲೂ ಬಹು ಭಾಷೆ, ಬಹು ಸಂಸ್ಕೃತಿಗಳ ನಾಡಾಗಿತ್ತು ಎಂಬುದನ್ನು ಇಲ್ಲಿ ಸಾಧಾರವಾಗಿ ಅವರು ತೋರಿಸಿಕೊಟ್ಟಿದ್ದಾರೆ. ತುಳುನಾಡಿನ ಸಾಂಸ್ಕೃತಿಕ ಪರಿಸರ ಹಾಗೂ ನಾಗರಿಕತೆಗಳ ಇತಿಹಾಸವನ್ನು ಡಾ. ಭಟ್ ಇವರು ಅನ್ಯಾನ್ಯ ನೆಲೆಗಳಲ್ಲಿ ಅರ್ಥೈಸಿರುವುದು ಅವಲೋಕನೀಯವಾಗಿದೆ. ತುಳು ಜಾನಪದ ಸಂಸ್ಕೃತಿಯ ಅಜ್ಞಾತ ನೆಲೆಗಳನ್ನು ಗುರುತಿಸುವ ಪ್ರಯತ್ನವು ಪ್ರಸಕ್ತ ಕೃತಿಯಲ್ಲಿ ಢಾಳಾಗಿ ಕಂಡುಬರುತ್ತದೆ. ಸೂಕ್ಷ್ಮ ಸತ್ಯಾನ್ವೇಷಕನ ಕಣ್ಣಿನಿಂದ ಪ್ರತಿಯೊಂದು ಪುರಾವೆಯನ್ನು ತೂಗಿ ನೋಡಿ ಒರಗೆ ಹಚ್ಚಿ ವಿಸ್ಮೃತಿಗೆ ಸಂದ ಹೊಸ ಹೊಸ ಸಂಗತಿಗಳನ್ನು ಲೋಕಸಮ್ಮುಖಗೊಳಿಸಿರುವುದು ಈ ಕೃತಿ ಹೆಚ್ಚುಗಾರಿಕೆ. ವರ್ತಮಾನದಲ್ಲಿ ನಿಂತು ತುಳುವರ ಗತಕಾಲದ ಅನುಭವಗಳ ಅಸ್ತಿಭಾರದ ಮೇಲೆ ಭವಿಷ್ಯದತ್ತ ಮುನ್ನೋಟ ಬೀರುವ ಪ್ರಯತ್ನ ಈ ಕೃತಿಯ ಗುಣಾತಿಶಯ. ಪ್ರಾಚೀನ ಇತಿಹಾಸ ಹಾಗೂ ನಾಗರಿಕತೆಗಳ ಸೆಳೆತ ಜೊತೆಗೆ ಸಾಂಪ್ರತ ಸ್ಥಳೀಯ ಸಮಸ್ಯೆಗಳ ತುಯ್ತ ಇವುಗಳ ತುಲನಾತ್ಮಕ ಆಲೋಚನೆ ಸಹ ಇಲ್ಲಿದೆ.
“ಪ್ರಾಚೀನ ತುಳುನಾಡಿನ ವೈಭವ, ಅದರ ಕೆಲವು ಮುಖಗಳನ್ನು ತೋರಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಫಲವತ್ತಾದ ತುಳುನಾಡಿನಲ್ಲಿ ಅಕ್ಕಿ ಮುಂತಾದ ಸಾಕಷ್ಟು ಕೃಷಿ ಉತ್ಪನ್ನಗಳು, ಏಲಕ್ಕಿ, ಕರಿಮೆಣಸಿನಂತಹ ಕಾಡುತ್ಪನ್ನಗಳು ಸಿಗುತ್ತಿದ್ದುದರಿಂದ; ವಿದೇಶಗಳಿಗೆ ರಫ್ತು ಮಾಡಲು ಸಮುದ್ರ ಮತ್ತು ಬಂದರುಗಳು; ಉತ್ಪನ್ನಗಳನ್ನು ಬಂದರುಗಳಿಗೆ ತರುವುದಕ್ಕಾಗಿ ನದಿಗಳ ಮೂಲಕ ಸಾಗಾಟ ಜಾಲ, ನದಿಗಳ ದಡದಲ್ಲಿ ಸರಕುಗಳ ಗೋದಾಮುಗಳು (ಬಂಡಸಾಲೆ ಅಥವಾ ಬಣಸಾಲೆಗಳು) ಇದ್ದುದರಿಂದ ಇದು ಎಲ್ಲ ದಿಕ್ಕುಗಳ ರಾಜರನ್ನೂ ಸೆಳೆಯುತ್ತಿದ್ದ ನಾಡಾಗಿತ್ತು. ಈ ಲೇಖನದಲ್ಲಿ ಅಂತಹ ಹಲವು ಬಗೆಯ ಜನವರ್ಗಗಳು ಇಲ್ಲಿಗೆ ಬರುತ್ತಿದ್ದುದರ, ಅವರ ಸಂಸ್ಕೃತಿಯ ಛಾಯೆಗಳನ್ನು ಇಲ್ಲಿನ ಬದುಕಿಗೆ ಸೇರಿಸುತ್ತಿದ್ದುದನ್ನು ಸೂಕ್ಷ್ಮವಾಗಿ ತೋರಿಸಿಕೊಡಲಾಗಿದೆ” ವ್ಯಾಪಕ ಓದು, ಅಧ್ಯಯನ, ಚಿಂತನೆ, ಸಾಂದ್ರ ವಿಶ್ಲೇಷಣೆಗಳಿಂದ ಈ ಕೃತಿ ಮೈದಾಳಿದೆ.
“ತುಳುನಾಡಿನಲ್ಲಿದ್ದ ಪ್ರಾಚೀನ ಜನಸಮುದಾಯವಾದ ಕೋಶರರು ನಾಲ್ಕು ಭಾಷೆಗಳಲ್ಲಿ ವ್ಯವಹರಿಸುತ್ತಿದ್ದವರೆಂದು ಇತಿಹಾಸ ಹೇಳುತ್ತದೆ. ಅದಕ್ಕೆ ಕಾರಣವನ್ನು ಊಹಿಸಬಹುದಾದರೆ – ತುಳು ಈ ನಾಡಿನ ಭಾಷೆ. ತಮಿಳು ಪಾಂಡ್ಯರ ಮೂಲಕ ತಮಿಳು, ಸಾತವಾಹನರ ಆಂಧ್ರ ಸಂಪರ್ಕದ ಕಾರಣದಿಂದಾಗಿ ತೆಲುಗು, ವಲಸೆಗಳ ಕಾರಣದಿಂದಾಗಿ ಮತ್ತು ಕನ್ನಡ ಜನಸಮುದಾಯಗಳ ಮತ್ತು ಅರಸರ ಸಂಪರ್ಕದಿಂದಾಗಿ ಕನ್ನಡ ಈ ಮೂರು ದ್ರಾವಿಡ ಭಾಷೆಗಳೂ ಇಲ್ಲಿಗೆ ಬಂದು ಸೇರಿಕೊಂಡವು. “ಎರಡನೆಯ ಶತಮಾನದಲ್ಲಿ ನಡೆಯಿತೆಂದು ಭಾವಿಸಲಾದ ‘ಚಾರಿಷನ್’ ನಾಟಕ ತುಳುನಾಡಿನ ಕಡಲ ಕಿನಾರೆಯ ಒಂದು ಬಂದರು ಪಟ್ಟಣದಲ್ಲಿ ನಡೆಯುತ್ತದೆ. ಅಲ್ಲಿನ ‘ಚಂದ್ರ’ ದೇವಿಯ ಗುಡಿಯ ಹೊರಗೆ ಈ ನಾಟಕ ನಡೆಯುತ್ತದೆ. ಉದ್ಯಾವರದ ಶಂಭುಕಲ್ಲು ದೇವಾಲಯದ ಪರಿಸರವೇ ಇದಾಗಿರಬಹುದು; ಬಹಳ ಹಿಂದಿನಿಂದಲೂ ಉದ್ಯಾವರ ವಿದೇಶೀ ವ್ಯಾಪಾರಕ್ಕೆ ಹೆಸರಾದ ಒಂದು ಬಂದರಾಗಿತ್ತು” ಎಂಬುದನ್ನು ವಿಪುಲ ಉದಾಹರಣೆಗಳೊಂದಿಗೆ ತೋರಿಸಿಕೊಟ್ಟಿದ್ದಾರೆ.
ಈ ಪುಸ್ತಕದ ಮೂರನೆಯ ಅಧ್ಯಾಯ ಬಹಳ ಅಪೂರ್ವ ಕೃತಿಯೊಂದರ ಕನ್ನಡಾನುವಾದವಾಗಿದೆ. “ಕ್ರಿಸ್ತಶಕ 1ನೆಯ ಅಥವಾ 2ನೆಯ ಶತಮಾನದ ಗ್ರೀಕ್ ಪ್ರಹಸನ ಒಂದರಲ್ಲಿ (ಶೀರ್ಷಿಕೆ ಇಲ್ಲದಿದ್ದ ಆ ಪ್ರಹಸನಕ್ಕೆ ‘ಚಾರಿಷನ್’ ಎಂದು ಈಗ ಹೆಸರಿಡಲಾಗಿದೆ) ಕನ್ನಡ ಮತ್ತು ತುಳು ಪದಗಳಿವೆ ಎಂದು ವಿದ್ವಾಂಸರು ಹೇಳುವಾಗ ಕುತೂಹಲ ಹುಟ್ಟುತ್ತಿತ್ತು. ಆದರೆ ಈ ಪ್ರಹಸನದ ಕನ್ನಡ ಅನುವಾದವು ಇದುವರೆಗೆ ಲಭ್ಯವಿಲ್ಲ. (ನನ್ನ ಗಮನಕ್ಕೆ ಬಾರದೆ ಇದ್ದಿರಲೂ ಬಹುದು. ಇದ್ದರೆ ಈ ತಪ್ಪು ಮಾಹಿತಿಗೆ ಕ್ಷಮೆಯಿರಲಿ). ಅದಕ್ಕಾಗಿ ನಾನು ಈ ಪ್ರಹಸನವನ್ನು ಕನ್ನಡಕ್ಕೆ ಅನುವಾದಿಸಿ ಆಸಕ್ತರ ಓದಿಗೆ ಒದಗಿಸಿಕೊಡಲು ಮುಂದಾಗಿದ್ದೇನೆ” ಈ ಅನುವಾದವನ್ನು ಕೊಟ್ಟಿರುವುದು ಮೆಚ್ಚುವಂತಹದು. ಡಾ.ಭಟ್ ಅವರು ಮಾಡಿರುವ ಚಾರಿಷನ್ ಪ್ರಹಸನದ ಅನುವಾದದ ವೈಶಿಷ್ಟ್ಯ ಎಂದರೆ ಇದರಲ್ಲಿರುವ ದ್ರಾವಿಡ ಭಾಷೆಯ ಮಾತುಗಳು. ತುಳು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಇರುವುದನ್ನು ನಾವು ಗುರುತಿಸಬೇಕು. ಇತರ ವಿದ್ವಾಂಸರು ಈ ಸಂಭಾಷಣೆಗಳನ್ನು ಒಂದೋ ಪೂರ್ತಿಯಾಗಿ ಕನ್ನಡದಲ್ಲಿ ಇಲ್ಲವೇ ಪೂರ್ತಿಯಾಗಿ ತುಳುವಿನಲ್ಲಿ ಅನುವಾದಿಸಿದ್ದಾರೆ. ಇದರಿಂದಾಗಿ ಅವರ ಅರ್ಥೈಸುವಿಕೆಯಲ್ಲಿ ಕೆಲವು ತಪ್ಪುಗಳು ನುಸುಳಿವೆ. ಅಲ್ಲದೆ ಕನ್ನಡಕ್ಕೆ ಇದು ಅನುವಾದವಾಗಿರುವುದು ಮೊದಲನೆಯ ಬಾರಿ ಎನ್ನುವುದು ಮಹತ್ವದ ಸಂಗತಿ. ತುಳು ಮತ್ತು ಕನ್ನಡಗಳಿಗೆ ಇದ್ದ ಅವಿನಾಭಾವ ಸಂಬಂಧ ಮತ್ತು ಈ ಎರಡು ಭಾಷೆಗಳ ಪ್ರಾಚೀನತೆಯನ್ನು ಇದರಿಂದ ತಿಳಿಯಬಹುದು. ಅದಕ್ಕಿಂತಲೂ ಮುಖ್ಯವಾಗಿ ಆ ಕಾಲದಲ್ಲಿ ಗ್ರೀಕರು ನಮ್ಮ ದೇಶದಲ್ಲೆಲ್ಲ ವ್ಯಾಪಾರದ ಸಲುವಾಗಿ ಓಡಾಡುತ್ತಿದ್ದರು; ಭಾರತೀಯರೂ ಈಜಿಪ್ಟಿಗೂ, ಗ್ರೀಸ್ ದೇಶಕ್ಕೂ, ಅರಬ್ ದೇಶಗಳಿಗೂ ಹೋಗಿಬರುತ್ತಿದ್ದರು ಎನ್ನುವುದಕ್ಕೆ ಈ ನಾಟಕವೂ ಒಂದು ಸಾಕ್ಷಿಯಾಗಿದೆ.
ಈ ಗ್ರೀಕ್ ನಾಟಕದಲ್ಲಿ ದ್ರಾವಿಡ ಭಾಷೆಯನ್ನು ಸೇರಿಸಲು ಕಾರಣವೇನು ಎಂದರೆ ಭಾರತೀಯರು, ಅದರಲ್ಲಿಯೂ ತುಳುನಾಡಿನವರು ವ್ಯಾಪಾರ ವಹಿವಾಟುಗಳಿಗಾಗಿ ಆ ಪ್ರದೇಶಗಳಿಗೆ ಹೋಗುತ್ತಿದ್ದರು. ಅಲ್ಲಿ ನಡೆಯುತ್ತಿದ್ದ ನಾಟಕಗಳನ್ನು ಅವರೂ ನೋಡುವ ಸಾಧ್ಯತೆಯೂ ಖಂಡಿತ ಇದ್ದಿರಬೇಕು. ಅಲೆಕ್ಸಾಂಡರ್ ಚಕ್ರವರ್ತಿ ಕ್ರಿಸ್ತಪೂರ್ವ 332ರ ಸುಮಾರಿಗೆ ಈ ಆಕ್ಸಿರಿಂಕಸ್ ಎಂಬ ಪಟ್ಟಣವನ್ನು ನಿರ್ಮಿಸಿದ್ದ. ಅಲ್ಲಿ ಗ್ರೀಕ್ ಸಂಸ್ಕೃತಿಯ ನಾಟಕಗಳು, ಸಾಹಿತ್ಯ ರಚನೆ ಇತ್ಯಾದಿಗಳಿಗೆ ಪ್ರೋತ್ಸಾಹವಿತ್ತು. ಏಳನೆಯ ಶತಮಾನದಲ್ಲಿ ಮುಸ್ಲಿಮರ ವಶಕ್ಕೆ ಬಂದ ಮೇಲೆ ಈ ಪಟ್ಟಣ ನಾಶವಾಯಿತು; ಹೆಸರು ಬದಲಾಯಿಸಿಕೊಂಡು ಎಲ್ ಬಹ್ಮಾಸ ಎಂಬ ಸಣ್ಣ ಪೇಟೆಯಾಗಿ ಅವನತಿಗೆ ಸಂದಿತು. ಅಲ್ಲಿದ್ದ ಹಸ್ತಪ್ರತಿಗಳೆಲ್ಲ ಮಣ್ಣುಪಾಲಾದವು ಎಂಬ ಊಹೆ ಸಮರ್ಪಕವಾಗಿದೆ.
ಈ ಅಧ್ಯಯನದಲ್ಲಿ ಬರವಣಿಗೆಯಲ್ಲಿ ಸಾಂಸ್ಕೃತಿಕ ಮಾನವ ಶಾಸ್ತ್ರ, ಇತಿಹಾಸ, ಜಾನಪದ, ಭಾಷಾ ಸಂಬಂಧಿ ಅಧ್ಯಯನ, ಸ್ಥಳನಾಮ
ವಿವೇಚನೆ, ಅರ್ಥಶಾಸ್ತ್ರ, ಐತಿಹ್ಯ, ಸಾಹಿತ್ಯ, ಆರಾಧನಾ ಪರಂಪರೆ, ನೆಲಮೂಲದ ನಂಬಿಕೆ, ಬಹು ಸಂಸ್ಕೃತಿ ಹೀಗೆ ಹತ್ತು ಹಲವು ಸಂಕೀರ್ಣ ಸಂಗತಿಗಳು ತಳುಕು ಹಾಕಿಕೊಂಡರೂ ತುಳು ನಾಡಿನ ಸಾಂಸ್ಕೃತಿಕ ವಿಕಾಸಧಾರೆಯನ್ನು, ಅದರ ಹರಿವನ್ನು ಸ್ಪಷ್ಟವಾಗಿ ಗುರುತಿಸುವಲ್ಲಿ ಡಾ. ಭಟ್ ಅವರು ಸಫಲರಾಗಿದ್ದಾರೆ. ಅಧಿಕೃತತೆ ಈ ಕೃತಿಯ ಧನಾತ್ಮಕ ಅಂಶ. ಈ ಮಹತ್ವದ ಕೃತಿಗಾಗಿ ಡಾ. ಜನಾರ್ದನ ಭಟ್ ಅವರಿಗೆ ವಿಶೇಷವಾದ ಅಭಿನಂದನೆಗಳು.

ಪ್ರೊ. ಜಿ.ಎನ್. ಉಪಾಧ್ಯ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಕನ್ನಡ ವಿಭಾಗ,
ಮುಂಬೈ ವಿಶ್ವವಿದ್ಯಾಲಯ. ವಿದ್ಯಾನಗರಿ, ಮುಂಬೈ – 400098.
9220212578
ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊ. ಜಿ.ಎನ್. ಉಪಾಧ್ಯ ಅವರು ಮುಂಬೈ ಮಹಾನಗರದಲ್ಲಿ ಕನ್ನಡದ ಪ್ರಸಾರ ಮತ್ತು ಪ್ರಚಾರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಂಶೋಧನೆ, ವಿಮರ್ಶೆ, ಪತ್ರಿಕೋದ್ಯಮ, ಭಾಷಾವಿಜ್ಞಾನ ಅವರ ಆಸಕ್ತಿಯ ಕ್ಷೇತ್ರಗಳು. ವೈವಿಧ್ಯಮಯವಾದ 100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರು ತಮ್ಮದೇ ಆದ ‘ಅಭಿಜಿತ್’ ಪ್ರಕಾಶನವನ್ನು ಮುಂಬೈಯಲ್ಲಿ ಆರಂಭಿಸಿ 130ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ವಲಯವಾಗಿ ಮುಂಬೈ ಇಂದಿಗೂ ಬೆಳಗುವಂತೆ ಮಾಡಿದ್ದಾರೆ. ‘ಮಹಾರಾಷ್ಟ್ರದ ಕನ್ನಡ ಶಾಸನಗಳು’, ‘ಗೋದಾವರಿ ತೀರದಲ್ಲಿ ಕನ್ನಡದ ಕುರುಹು’, ‘ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು’, ‘ಸಿದ್ಧರಾಮನ ಸೊನ್ನಲಿಗೆ’, ‘ಮುಂಬೈ ಕನ್ನಡ ಪರಿಸರ’, ‘ಮುಂಬೈ ಕನ್ನಡ ಸಾಹಿತ್ಯ ಚರಿತ್ರೆ’ ಮೊದಲಾದ ಕೃತಿಗಳು ವಿದ್ವತ್ ವಲಯದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಅವರ ಮಾರ್ಗದರ್ಶನದಲ್ಲಿ ಈವರೆಗೆ 74 ಮಂದಿ ಎಂ.ಫಿಲ್ ಹಾಗೂ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಗುರುನಾರಾಯಣ ಸಾಹಿತ್ಯ ಪ್ರಶಸ್ತಿ, ನರಹಳ್ಳಿ ಪ್ರಶಸ್ತಿ, ಕರ್ನಾಟಕ ಶ್ರೀ ಪುರಸ್ಕಾರ ಮೊದಲಾದ ಗೌರವಕ್ಕೂ ಡಾ. ಉಪಾಧ್ಯ ಇವರು ಪಾತ್ರರಾಗಿದ್ದು, ಮುಂಬೈ ವಿವಿಯಲ್ಲಿ ಕನ್ನಡ ವಿಭಾಗಕ್ಕೆ ‘ಎ’ ಗ್ರೇಡ್ ತಂದುಕೊಡುವಲ್ಲಿ ಇವರು ಸಫಲರಾಗಿದ್ದಾರೆ.

ಲೇಖಕ ಡಾ. ಜನಾರ್ದನ ಭಟ್
ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಡಾ. ಬಿ. ಜನಾರ್ದನ ಭಟ್ ಇವರು ಇಂಗ್ಲೀಷ್ ಉಪನ್ಯಾಸಕರಾಗಿ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ‘ಉತ್ತರಾಧಿಕಾರ’ (ವರ್ಧಮಾನ ಪ್ರಶಸ್ತಿ), ‘ಹಸ್ತಾಂತರ’ (ಕನ್ನಡ ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ) ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’ (ಕ.ಸಾ.ಪ.ದ ಭಾರತೀಸುತ ದತ್ತಿ ಪ್ರಶಸ್ತಿ), ‘ಕಲ್ಲು ಕಂಬವೇರಿದ ಹುಂಬ’ (ತರಂಗ ಮಿನಿ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ), ‘ಬೂಬರಾಜ ಸಾಮ್ರಾಜ್ಯ’ (ಕ.ಸಾ.ಪ.ದ ಗುಬ್ಬಿ ಮುರುಗಾರಾಧ್ಯ ದತ್ತಿ ಪ್ರಶಸ್ತಿ ಮತ್ತು ಮಾಸ್ತಿ ಕಾದಂಬರಿ ಪುರಸ್ಕಾರ), ‘ಗಮ್ಯ’ ಮತ್ತು ‘ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?’ ಅವರ ಕಾದಂಬರಿಗಳು. ವಿಮರ್ಶೆಗಾಗಿ ವಿ.ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ, ಶಿವರಾಮ ಕಾರಂತ ಪುರಸ್ಕಾರ ಮತ್ತು ವೀಚಿ ಸಾಹಿತ್ಯ ಪ್ರಶಸ್ತಿಗಳನ್ನೂ, ಕಾದಂಬರಿ ಕ್ಷೇತ್ರದ ಸಾಧನೆಗಾಗಿ ವ್ಯಾಸರಾಯ ಬಲ್ಲಾಳ ಕಾದಂಬರಿ ಪ್ರಶಸ್ತಿಯನ್ನೂ, ಸಮಗ್ರ ಸಾಹಿತ್ಯ ಸಾಧನೆಗಾಗಿ ವಿಶುಕುಮಾರ್ ಪ್ರಶಸ್ತಿ ಮತ್ತು ಅಮ್ಮೆಂಬಳ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಹೀಗೆ ವಿವಿಧ ಪ್ರಕಾರಗಳಲ್ಲಿ ಡಾ. ಬಿ. ಜನಾರ್ದನ ಭಟ್ ಇವರ ಕೃತಿ ರಚಿಸಿರುತ್ತಾರೆ.
