18 ಎಪ್ರಿಲ್ 2023, ಮೂಡುಬಿದಿರೆ: ಶಿಕ್ಷಕಿ ಶ್ರೀಮತಿ ನಾಗಶ್ರೀ ನಾಗರಕಟ್ಟೆ ಅವರ ಚೊಚ್ಚಲ ಕವನ ಸಂಕಲನ ‘ಕೃಷ್ಣ ಸಿಗಲಿಲ್ಲ’ ಕೃತಿಯು ಮೂಡುಬಿದಿರೆ ಎಂ.ಸಿ.ಎಸ್.ಬ್ಯಾಂಕಿನ ಕಲ್ಪವೃಕ್ಷ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತು. ಎಂಸಿ.ಎಸ್ ಬ್ಯಾಂಕಿನ ಅಧ್ಯಕ್ಷರಾಗಿರುವ ಎಂ. ಬಾಹುಬಲಿ ಪ್ರಸಾದ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರೆ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಕವನ ಸಂಕಲನ ಬಿಡುಗಡೆಗೊಳಿಸಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಸಾಹಿತಿಗಳ ಪಾತ್ರವೂ ಪ್ರಮುಖವಾಗಿದ್ದು ಅವರನ್ನು ಬೆಂಬಲಿಸುವುದು ಕೂಡಾ ಸಾಹಿತ್ಯದ ಆರಾಧನೆಯೇ ಆಗುತ್ತದೆ ಎಂಬುದಾಗಿ ತಿಳಿಸಿದರು. ಪತ್ರಕರ್ತ, ಸಂಘಟಕ ಶೇಖರ್ ಅಜೆಕಾರು ಅವರು ಸಭಾಧ್ಯಕ್ಷತೆಯನ್ನು ವಹಿಸಿದ್ದು ಮುನಿರಾಜ ರೆಂಜಾಳ, ಉಗ್ಗಪ್ಪ ಪೂಜಾರಿ, ಕೆ.ಎನ್.ಪ್ರಕಾಶ್ ಭಂಢಾರಿ, ಸತೀಶ್ ಭಂಡಾರಿ, ಕಿಶೋರ್ ಬೆಳ್ತಂಗಡಿ, ಸದಾನಂದ ನಾರಾವಿ ಮತ್ತು ಪದ್ಮಶ್ರೀ ಭಟ್ ನಿಡ್ಡೋಡಿ ಇವರು ಮುಖ್ಯ ಅತಿಥಿಗಳಾಗಿದ್ದರು ಹಿರಿಯ ಪತ್ರಕರ್ತರಾದ ಧನಂಜಯ ಮೂಡುಬಿದಿರೆಯವರು ಕೃತಿಯನ್ನು ಪರಿಚಯಿಸಿದರು. ಶ್ರೀ ಮುನಿರಾಜ ರೆಂಜಾಳ ಹಾಗೂ ಶೇಖರ್ ಅಜೆಕಾರು ಅವರಿಗೆ ವಿಶೇಷ ಗುರುವಂದನೆ ಗೌರವ ಸನ್ಮಾನವನ್ನು ನೀಡಲಾಯಿತು. ಜೊತೆಗೆ 27 ಮಂದಿ ಗುರುಗಳಿಗೆ ವಿಶೇಷ ಗೌರವ ಸಮರ್ಪಿಸಲಾಯಿತು. ನಂತರ ಪ್ರಿಯಾ ಸುಳ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಒಂಬತ್ತು ಜನ ಕವಿಗಳು ಭಾಗವಹಿಸಿದ್ದರು. ಕವಿಗೋಷ್ಠಿಯ ನಂತರ ನಾಗಶ್ರೀ ಮತ್ತು ಸಂತೋಷ ಭಂಡಾರಿ ದಂಪತಿಯ ಪುತ್ರಿ ಕು| ಚಾರ್ವಿಯ ಹುಟ್ಟುಹಬ್ಬವನ್ನು ಇದೇ ಸಂದರ್ಭದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಗೆ ಮುನ್ನ ಭರತನಾಟ್ಯ ಕಲಾವಿದೆ ಆದ್ಯ ಮೂಡುಬಿದಿರೆ ಅವರಿಂದ ಸ್ವಾಗತ ನೃತ್ಯ ಕಾರ್ಯಕ್ರಮ ನೆರವೇರಿತು.
ಚೈತ್ರಾ ಉಜಿರೆ ಅವರು ಕಾರ್ಯಕ್ರಮ ನಿರ್ವಹಿಸಿದರು ನಾಗಶ್ರೀ ನಾಗರಕಟ್ಟೆಯವರು ಸ್ವಾಗತಿಸಿ ರಿಶಾಂತ್ ತೋಡಾರು ವಂದಿಸಿದರು.