ಸೋಮವಾರಪೇಟೆ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸೋಮವಾರಪೇಟೆ ತಾಲ್ಲೂಕು, ಕಸಬ ಹೋಬಳಿ ಪರಿಷತ್ ವತಿಯಿಂದ ಎಸ್. ಎಸ್. ರಾಮಮೂರ್ತಿ ದತ್ತಿ ಉಪನ್ಯಾಸ ಕಾರ್ಯಕ್ರಮ ದಿನಾಂಕ 28 ಸೆಪ್ಟೆಂಬರ್ 2024ರ ಶನಿವಾರದಂದು ಬಳಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ‘ಕನ್ನಡ ಸಾಹಿತ್ಯ ಬೆಳವಣಿಗೆಗೆ ಕನ್ನಡ ಕವಿಗಳ ಕೊಡುಗೆ’ ವಿಷಯದಲ್ಲಿ ಉಪನ್ಯಾಸ ನೀಡಲು ಆಗಮಿಸಿದ ಕವಯತ್ರಿ ವಸಂತಿ ರವೀಂದ್ರ ಮಾತನಾಡಿ “ಕವಿಗಳು ಮತ್ತು ಸಾಹಿತಿಗಳಿಂದ ಕನ್ನಡ ಭಾಷೆ ಶ್ರೀಮಂತವಾಗಿದೆ. 20ನೇ ಶತಮಾನದ ಪ್ರಾರಂಭದಲ್ಲಿ ಇಂಗ್ಲಿಷ್ ಸಾಹಿತ್ಯದ ಪ್ರಭಾವದಿಂದ ಕನ್ನಡ ಸಾಹಿತ್ಯವು ಹೊಸ ಹುಟ್ಟನ್ನು ಪಡೆದು ಹಳೆಗನ್ನಡ, ನಡುಗನ್ನಡ ಸಾಹಿತ್ಯಕ್ಕಿಂತ ಬೇರೆಯಾದ ನವೋದಯ ಸಾಹಿತ್ಯವೆಂದು ಹೊಸ ಪ್ರಕಾರದಲ್ಲಿ ಕಾಣಿಸಿಕೊಂಡಿತು. ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆ, ಕಾವ್ಯ, ಕವನ, ಭಾವಗೀತೆ ಹೀಗೆ ಬಹುಬೇಗ ಅಭಿವೃದ್ಧಿ ಪಡೆದು ವಿಪುಲ ಸಾಹಿತ್ಯ ಬೆಳೆವಣಿಗೆಗೆ ಕಾರಣವಾಯಿತು. ಕುವೆಂಪು, ದ. ರಾ. ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ. ಕೃ. ಗೋಕಾಕ್, ಯು. ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ್ ಕಂಬಾರ ಅವರು ಜ್ಞಾನಪೀಠ ಪ್ರಶಸ್ತಿ ಪಡೆಯುವ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ. ಇನ್ನು ಅನೇಕ ಕವಿಗಳು ಕನ್ನಡ ಭಾಷಾ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ.” ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿಕ್ಷಕ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿ ಡಿ. ಆರ್. ಗಿರೀಶ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಕ. ಸಾ. ಪ. ಜಿಲ್ಲಾಧ್ಯಕ್ಷ ಎಂ. ಪಿ. ಕೇಶವ ಕಾಮತ್, ತಾಲೂಕು ಅಧ್ಯಕ್ಷ ಎಸ್. ಡಿ. ವಿಜೇತ್, ಮಾಜಿ ಅಧ್ಯಕ್ಷ ಜೆ. ಸಿ. ಶೇಖರ್, ಕ. ಸಾ. ಪ. ಹೋಬಳಿ ಅಧ್ಯಕ್ಷ ನಂಗಾರು ಕೀರ್ತಿಪ್ರಸಾದ್, ಜಲಜಾ ಶೇಖರ್, ಕೆ. ಪಿ. ಸುದರ್ಶನ್, ಕೆ. ಎಸ್. ಭಾಗ್ಯ ಉಪಸ್ಥಿತರಿದ್ದರು. ಶಿಕ್ಷಕಿ ಅನುಸೂಯ ಕಾರ್ಯಕ್ರಮ ನಿರ್ವಹಿಸಿದರು.