ಆಲ್ ಔಟ್, ನಾಕ್ ಔಟ್.. ಶಬ್ದಗಳನ್ನು ಧಾರಳ ಕೇಳಿ ಮನನ ಮಾಡಿಕೊಂಡಿರುವ ನಮಗೆ ಯಾಕೋ ಗೊತ್ತಿಲ್ಲ ಈ ‘ಲೀಕ್ ಔಟ್’ ಮಾತ್ರ ಅಷ್ಟು ಸಹ್ಯವಲ್ಲ ಕೇಳಲು. ( ಇದೇ ಕಾರಣಕ್ಕೆ ಕೆಲವು ಕಡೆ ನಾಟಕ ಪ್ರದರ್ಶನಕ್ಕೆ ಒಪ್ಪುತ್ತಿಲ್ಲವಂತೆ!) ಆದರೆ ಮಂಗಳೂರು ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ನಡೆದ ನಟಿ ಅಕ್ಷತಾ ಪಾಂಡವಪುರ ಅವರ ಏಕವ್ಯಕ್ತಿ, ಆಪ್ತ ರಂಗಭೂಮಿ ಆಧಾರದ ಅತೀ ಸರಳ ರಂಗಸಜ್ಜಿಕೆಯ ‘ಲೀಕ್ ಔಟ್’ ನಾಟಕ ಸುಮಾರು ತೊಂಭತ್ತು ನಿಮಿಷ ಒಂದು ಹೊಸ ಆನುಭವ ನೀಡಿದ್ದು ಸುಳ್ಳಲ್ಲ.
ಆಧುನಿಕ ರಂಗಭೂಮಿಯ ಮುಂದುವರಿದ ಭಾಗವಾಗಿ ಆಪ್ತ ರಂಗಭೂಮಿ ಈಗೀಗ ಅಲ್ಲಲ್ಲಿ ಹೊಸದಾಗಿ ಕಂಡುಬರುತ್ತಿರುವ ವಿದ್ಯಮಾನ. ಪ್ರೇಕ್ಷಕರನ್ನು ಸಂದರ್ಭಾನುಸಾರ ನಟ ಹಾಗೂ ನಟಿಯರನ್ನಾಗಿ, ನಾಟಕದ ಒಂದು ಭಾಗವನ್ನಾಗಿ ಮಾಡುವ ಈ ಪ್ರಕ್ರಿಯೆ ಸ್ವಲ್ಪ ಸಾವಾಲಿನದ್ದೆ ನಿಜ. ಇಂತಹ ಸನ್ನಿವೇಶದಲ್ಲಿ ತಾನೇ ಬರೆದ ಕಥಾಸಂಕಲನ (ಲೀಕ್ ಔಟ್) ದ ಕಥೆಗಳಲ್ಲಿ ಪ್ರತಿ ಬಾರಿ ಎರಡನ್ನು ಆಯ್ದು ಅದಕ್ಕೆ ನಾಟಕ ರೂಪನೀಡಿ ಅವುಗಳಲ್ಲಿ ಬರುವ ಪಾತ್ರಗಳಲ್ಲಿ ಕೆಲವನ್ನು ಸುತ್ತಲಿನ ಪ್ರೇಕ್ಷಕರಿಂದ ಮಾಡಿಸಿ, ಉಳಿದದ್ದನ್ನು ತಾನೇ ಧ್ವನಿಯ ಏರಿಳಿತಗಳ ಮೂಲಕ ಮತ್ತು ಕೈಯಲ್ಲಿರುವ ಕೆಲವು ಸರಳ ವಸ್ತುಗಳ ಸಹಿತ ಬದಲಾಯಿಸಿ ಒಂದೆರಡು ಹಾಡಿನೊಂದಿಗೆ ಅಭಿನಯದಿಂದಲೇ ಸೈ ಏನಿಸಿಕೊಳ್ಳುವ ಅಕ್ಷತಾರವರ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಈಗಾಗಲೇ ಕೆಲವು ಯಶಸ್ವಿ ಕಲಾ ಪ್ರಕಾರದ ಸಿನಿಮಾಗಳಲ್ಲಿ ಅಭಿನಯಿಸಿರುವ ಇವರಿಗೆ ಇದು ಸಹಜವಾದರೂ, ಜತೆಗೆ ಭಾಗಿಯಾಗುವವವರ ಸ್ಪಂದನೆಯು ನಿರೀಕ್ಷಿತ ಮಟ್ಟದಲ್ಲಿ ಇರಬೇಕಾದದ್ದು ಬಹುಶಃ ಆಯಾ ದಿನದ ಅಗತ್ಯ ಮತ್ತು ಸಾಧ್ಯತೆ ಇರಬಹುದು. ಈ ನಿಟ್ಟಿನಲ್ಲಿ ಗೋವಿಂದದಾಸ ಕಾಲೇಜು ವಿದ್ಯಾರ್ಥಿಗಳು ಸಹ ಸಾಕಷ್ಟು ಶಹಭಾಸ್ ಗಿರಿ ಗಿಟ್ಟಿಸಿಕೊಂಡರು.
‘ಲೀಕ್ ಔಟ್’ ಕಥಾಸಂಕಲನದ ಹೆಚ್ಚಿನ ಕಥೆಗಳೇ ಸ್ತ್ರೀ ಪರ ಚಿಂತನೆಯದ್ದು, ಇಲ್ಲಿ ಆಯ್ದುಕೊಂಡ ಆಧುನಿಕ ಸಮಾಜದ ಒಂದು ಬಹುದೊಡ್ಡ ಸಕಾರಾತ್ಮಕ ಮತ್ತು ನಕಾರಾತ್ಮಕ ಎರಡನ್ನೂ ಹೊಂದಿರುವ ನಟಿಯೊಬ್ಬಳು ನಾನಾ ಕಾರಣಕ್ಕೆ ‘ಟ್ರೋಲ್’ ಆಗುವ ಸಂದರ್ಭದ ಮಾನಸಿಕ ತೊಳಲಾಟ, ಸ್ತ್ರೀ ಮತ್ತು ಪುರುಷ ಸಮಾನತೆ ಹಾಗೂ ಸ್ವಾತಂತ್ರ್ಯದಂತದ ಆನಿವಾರ್ಯತೆಯನ್ನು ಬಿಂಬಿಸುವ ಕುಟುಂಬಿಕ ಹಿನ್ನೆಲೆಯ ಚಿತ್ರಣ ಸುರತ್ಕಲ್ಲಿನಲ್ಲಿ ನಡೆದ ‘ಲೀಕ್ ಔಟ್’ ಪ್ರದರ್ಶನದಲ್ಲಿ ಕಂಡುಬಂತು. ಬಹುಶಃ ಇಡೀ ಪ್ರದರ್ಶನ ಒಂದು ಗಂಟೆಗೆ ಸೀಮಿತವಾಗಿ ಮತ್ತಷ್ಟು Fine tune ಆದರೆ ಉತ್ತಮ. ಅದಾಗಿಯೂ ಬಹಳ ಯಶಸ್ಸಿ Marketing ತಂತ್ರ ಬಳಸಿಕೊಳ್ಳುತ್ತಿರುವ social media ದಲ್ಲಿ ಈ ಸಣ್ಣ ನಾಟಕ ತಂಡ ಈಗಾಗಲೇ 80 + ಪ್ರದರ್ಶನ ನೀಡಿ ಶತಕದೆಡೆ ಸಾಗುತ್ತಿದೆ, ಎಲ್ಲೆಡೆ ‘ಲೀಕ್ ಔಟ್’ ಮಾಡಲು.
ಮಹೇಶ ಆರ್. ನಾಯಕ್, ಮಂಗಳೂರು
ಸಾಹಿತಿ, ವಿಮರ್ಶಕರು, ಕಲ್ಲಚ್ಚು ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕರು