ಮಣಿಪಾಲ : ಪಿಂಗಾರ ಸಾಹಿತ್ಯ ಬಳಗ ಮಂಗಳೂರು ಇದರ ವತಿಯಿಂದ 24ನೇ ‘ಸಾಹಿತ್ಯ ಸಂಭ್ರಮ ಮತ್ತು ಕವಿಗೋಷ್ಠಿ’ಯು ದಿನಾಂಕ 15 ಮಾರ್ಚ್ 2025ರಂದು ಮಣಿಪಾಲದ ದಶರಥನಗರ ಬಡಾವಣೆಯ ಮೂರನೇ ಅಡ್ಡ ರಸ್ತೆಯಲ್ಲಿರುವ ಆಂಟನಿ ಲೂಯಿಸ್ ಇವರ ಅಂಗಳದಲ್ಲಿ ನಡೆಯಿತು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಣಿಪಾಲ ಟಿ.ಎಂ.ಎ. ಪೈ ಫೌಂಡೇಶನ್ ಇದರ ಪನ್ವಾರ್ ಕೊಂಕಣಿ ಮಾಸ ಪತ್ರಿಕೆಯ ಸಂಪಾದಕ ಜ್ಞಾನದೇವ ಮಲ್ಯ “ಯಾರು ಬರೆದರೂ ಅವರ ಕಿಂಚಿತ್ತಾದರೂ ಅನುಭವ ಅದರಲ್ಲಿ ಇದ್ದರೆ ಜನರು ಸುಲಭವಾಗಿ ಮೆಚ್ಚಿಕೊಳ್ಳುವ ಸಾಹಿತ್ಯ ಅದಾಗುತ್ತದೆ” ಎಂದು ನುಡಿದರು.
ಗಝಲ್ ಓದಿ ಚಾಲನೆ ನೀಡಿದ ಬಂಟ್ವಾಳ ಕನ್ನಡ ಸಾಹಿತ್ಯ ಸಮ್ಮೇಳನದ ಮಾಜಿ ಅಧ್ಯಕ್ಷ ಸಾಹಿತಿ ವೈದ್ಯ ಸುರೇಶ ನೆಗಳಗುಳಿ ಮಾತನಾಡಿ “ಮನೆಯಲ್ಲಿ ಸಾಹಿತ್ಯ ಅಂದರೆ ಮನದಲ್ಲಿ ಉಳಿಯುವಂತಹದು. ದೊಡ್ಡದಾದ ಸಮ್ಮೇಳನದ ವಹಿವಾಟು ನಿಭಾಯಿಸಲು ಅದಕ್ಕೆ ವ್ಯಾಪಾರೀಕರಣದ ಒಂದಂಶ ಲೇಪಿತವಾಗುತ್ತದೆ. ಇದು ಅನಿವಾರ್ಯ ಕೂಡಾ ಆಗುತ್ತದೆ” ಎಂದರು.
ಈ ಸಮಯದಲ್ಲಿ ಸಾಹಿತಿಗಳು ಗೂಗಲ್ ಬ್ಲಾಗ್, ಗೂಗಲ್ ಟೈಪ್, ಸಾಹಿತ್ಯ ಉಳಿಸಿಕೊಳ್ಳಲು ವಿವಿಧ ಮೊಬೈಲ್ ಟೂಲ್ ಗಳ ಬಗ್ಗೆ ಕವಿ, ಆಂಗ್ಲ ಶಿಕ್ಷಕಿ ಪ್ರೇಮಾ ಶೆಟ್ಟಿ ವಿವರಿಸಿದರು. ಕಾರ್ಯಕ್ರಮ ಆಯೋಜಿಸಿದ ಹಿರಿಯ ಪತ್ರಕರ್ತ ಮತ್ತು ಸಾಹಿತಿ ರೇಮಂಡ್ ಡಿಕೂನಾ ತಾಕೊಡೆ ಇವರು ಇಂಗ್ಲೀಷ್, ತುಳು, ಕೊಂಕಣಿ, ಕನ್ನಡ ಹೀಗೆ ನಾಲ್ಕು ಭಾಷೆಯಲ್ಲಿ ಬರೆದ ವಿವಿಧ ಚುಟುಕು ವಾಚಿಸಿದರು.