ಮುಂಬೈ : ಕರ್ನಾಟಕ ಸಂಘ ಶಿವಮೊಗ್ಗ ಕೊಡಮಾಡುವ 2024ರ ಸಾಲಿನ ಎಂ.ಕೆ. ಇಂದಿರಾ ವಾರ್ಷಿಕ ಪುಸ್ತಕ ಬಹುಮಾನಕ್ಕೆ ಮುಂಬೈ ವಿಶ್ವವಿದ್ಯಾಲಯದ ಸಂಶೋಧನ ವಿದ್ಯಾರ್ಥಿ ಪ್ರತಿಭಾ ರಾವ್ ಇವರು ಆಯ್ಕೆಯಾಗಿದ್ದಾರೆ.
ಪ್ರತಿಭಾ ರಾವ್ ಇವರು ರಚಿಸಿರುವ ಡಾ. ಸುಧಾಮೂರ್ತಿಯವರ ಸಾಹಿತ್ಯ ಸಾಧನೆಯ ಹಿನ್ನೆಲೆಯ ಕೃತಿ ‘ಜೀವನ್ಮುಖಿ’ ಈ ಸಾಲಿನ ಎಂ.ಕೆ. ಇಂದಿರಾ ಪುರಸ್ಕಾರಕ್ಕೆ ಭಾಜನವಾಗಿದೆ. ಇದನ್ನು ಮುಂಬೈ ವಿ.ವಿ. ಕನ್ನಡ ವಿಭಾಗ ಪ್ರಕಟಿಸಿದೆ. ಮೂಲತಃ ಮಂಗಳೂರಿನವರಾದ ಪ್ರತಿಭಾ ರಾವ್ ಇವರು ಮುಂಬೈ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿಯನ್ನು ಎಂ.ಬಿ. ಕುಕ್ಯಾನ್ ಚಿನ್ನದ ಪದಕದೊಂದಿಗೆ ಪಡೆದಿರುತ್ತಾರೆ. ನೂರರ ಸಂಭ್ರಮವನ್ನು ಆಚರಿಸುತ್ತಿರುವ ಮುಂಬೈಯ ಪ್ರತಿಷ್ಠಿತ ಸಂಸ್ಥೆಯಾದ ಬಿ.ಎಸ್.ಕೆ.ಬಿ. ಅಸೋಸಿಯೇಷನ್ ಕುರಿತ ಇವರ ಎರಡು ಕೃತಿಗಳಾದ ‘ಶತಮಾನದ ಯಾನ’ ಹಾಗೂ ‘ಸೆಂಟಿನಿಯಲ್ ಒಡಿಸ್ಸಿ’ ಈಗಾಗಲೇ ಪ್ರಕಟಗೊಂಡಿವೆ. ‘ಶೋಧ ಸಿರಿ’ ಶಿಷ್ಯವೇತನ ಪುರಸ್ಕಾರವನ್ನು ಪಡೆದಿರುವ ಇವರು ಪ್ರಸ್ತುತ ಪ್ರೊ. ಜಿ.ಎನ್. ಉಪಾಧ್ಯ ಇವರ ಮಾರ್ಗದರ್ಶನದಲ್ಲಿ ‘ಶಿಲಾಹಾರರು – ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದ ಬಗೆಗೆ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಉತ್ತಮ ಚಿತ್ರ ಕಲಾವಿದರಾಗಿರುವ ಪ್ರತಿಭಾರವರು ಕನ್ನಡವಲ್ಲದೆ ಸಂಖ್ಯಾಶಾಸ್ತ್ರದಲ್ಲೂ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ.
