ಶಿವಮೊಗ್ಗ : ಶಿವಮೊಗ್ಗದ ಮಾನಸ ಇಂಟರ್ನ್ಯಾಷನಲ್ ಸ್ಕೂಲ್ ವತಿಯಿಂದ ಪ್ರತಿ ವರ್ಷ ಕೊಡ ಮಾಡುವ ಪ್ರತಿಷ್ಠಿತ ‘ಮಾನಸ ರತ್ನ ಪ್ರಶಸ್ತಿ’ಯನ್ನು ಖ್ಯಾತ ರಂಗಭೂಮಿ ಕಲಾವಿದ, ಜನಪ್ರಿಯ ಕಾರ್ಯಕ್ರಮ ನಿರೂಪಕ, ಕ್ರಿಯಾಶೀಲ ಶಿಕ್ಷಕ ಹಾಗೂ ಹಲವಾರು ಸಾಮಾಜಿಕ ಶೈಕ್ಷಣಿಕ ಧಾರ್ಮಿಕ ಹಾಗೂ ನೌಕರರ ಸಂಘಟನೆಯ ಮುಂಚೂಣಿಯಲ್ಲಿದ್ದು ಕಾರ್ಯನಿರ್ವಹಿಸುತ್ತಿರುವ ಸುಬ್ರಹ್ಮಣ್ಯ ಜಿ. ಉಪ್ಪುಂದ ಇವರಿಗೆ ದಿನಾಂಕ 04-01-2024ರಂದು ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ನೀಡಿ ಗೌರವಿಸಲಾಯಿತು.
ಲಾವಣ್ಯ (ರಿ.) ಬೈಂದೂರು ನಾಟಕ ಸಂಸ್ಥೆಯ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಅಭಿಮಾನಿಗಳ ಮನೆಗೆದ್ದಿರುವ ಸುಬ್ರಹ್ಮಣ್ಯ ಜಿ. ಉಪ್ಪುಂದ ಅವರು ಕಳೆದ ಎರಡು ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ಅಭಿನಯಿಸಿದ ‘ಮರಣ ಮೃದಂಗ’ ನಾಟಕದಲ್ಲಿ ಇವರ ಶ್ರೇಷ್ಠ ಅಭಿನಯವನ್ನು ಗುರುತಿಸಿ, ಕಾರ್ಯಕ್ರಮ ನಿರೂಪಕರಾಗಿ, ಶಿಕ್ಷಕರ ಮತ್ತು ನೌಕರರ ಸಂಘಟನೆ ಮುಖ್ಯಸ್ಥರಾಗಿ, ಹಲವಾರು ಸಾಮಾಜಿಕ ಧಾರ್ಮಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡ ಪರಿಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಎಚ್. ಸುಬ್ಬಯ್ಯ, ಗುರು ಪೀಠ ವನಶ್ರೀ ಮಠ ವಿಜಯಪುರ ಇಲ್ಲಿನ ಪೂಜ್ಯ ಡಾ. ಶ್ರೀ ಜಯಬಸವ ಕುಮಾರ ಸ್ವಾಮೀಜಿ, ನವ ಮಾನಸ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಶ್ರೀ ಎಚ್.ಟಿ. ನರಸಿಂಹ, ಶಿವಮೊಗ್ಗದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ನಾಗರಾಜ್ ಪಿ., ಸಂಸ್ಥೆಯ ಕಾರ್ಯದರ್ಶಿ ಶ್ರೀ ಜನಾರ್ದನ್ ಹಾಗೂ ಶಾಲೆಯ ಆಡಳಿತ ಮಂಡಳಿಯ ಸದಸ್ಯರು, ಗಣ್ಯರು, ಶಾಲಾ ಸಿಬ್ಬಂದಿಗಳು ಮತ್ತು ಅಪಾರ ಅಭಿಮಾನಿಗಳು ಉಪಸ್ಥಿತರಿದ್ದರು.