ಮಂಗಳೂರು: ‘ಮಂಗಳೂರು ಲಿಟ್ ಫೆಸ್ಟ್’ನ ಈ ವರ್ಷದ ಪ್ರಶಸ್ತಿಗೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಾಮರ್ಥ್ಯ ಅಭಿವೃದ್ಧಿ ಆಯೋಗದ ಸದಸ್ಯ ಹಾಗೂ ‘ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್’ ಇದರ ಸಂಸ್ಥಾಪಕ ಅಧ್ಯಕ್ಷರಾದ ಡಾ. ಆರ್. ಬಾಲಸುಬ್ರಹ್ಮಣ್ಯಂ ಅವರನ್ನು ಆಯ್ಕೆ ಮಾಡಲಾಗಿದೆ.
ಮಂಗಳೂರು ಲಿಟ್ ಫೆಸ್ಟ್ (ಸಾಹಿತ್ಯ ಹಬ್ಬ) 11 ಮತ್ತು 12 ಜನವರಿ 2025ರಂದು ನಡೆಯಲಿದ್ದು, ಜನವರಿ 12ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಭಾರತ ಫೌಂಡೇಷನ್ ಇದರ ಸುನಿಲ ಕುಲಕರ್ಣಿ ಹಾಗೂ ಶ್ರೀರಾಜ ಗುಡಿ ತಿಳಿಸಿದರು.
ಸಾಹಿತ್ಯ ಹಬ್ಬವನ್ನು ಎಸ್.ಎಲ್.ಭೈರಪ್ಪ ಉದ್ಘಾಟಿಸಲಿದ್ದು, ಇದರಲ್ಲಿ 34 ಗೋಷ್ಠಿಗಳಲ್ಲಿ 72 ಪರಿಣತರು ವಿಷಯ ಮಂಡಿಸಲಿದ್ದಾರೆ. 6 ಇಂಗ್ಲಿಷ್ ಹಾಗೂ 8 ಕನ್ನಡ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ. ಅಂಧರಿಗಾಗಿ ಒಂದು ಗೋಷ್ಠಿ ಏರ್ಪಡಿಸಲಾಗಿದ್ದು, ಒಂದು ಗೋಷ್ಠಿಯನ್ನು ಸಂಪೂರ್ಣವಾಗಿ ಸಂಸ್ಕೃತದಲ್ಲಿ ನಡೆಸಲಾಗುವುದು. ಸಾಹಿತ್ಯ ಹಬ್ಬದಲ್ಲಿ ಪಾಲ್ಗೊಳ್ಳುವವರು ತಮ್ಮ ಹೆಸರನ್ನಾದರೂ ತುಳುವಿನಲ್ಲಿ ಬರೆಯುವಂತಾಗಬೇಕು ಎಂಬ ಆಶಯದೊಂದಿಗೆ ತುಳು ಲಿಪಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.