ಮಂಗಳೂರು: ನಗರದ ಚಿಲಿಂಬಿಯಲ್ಲಿರುವ ಶ್ರೀ ಶಿರಿಡಿ ಸಾಯಿಬಾಬಾ ಮಂದಿರ ಆಶ್ರಿತ ಸಾಯಿಶಕ್ತಿ ಯಕ್ಷಕಲಾ ಬಳಗದ ವತಿಯಿಂದ ಸುಮಾರು 60 ವರ್ಷಗಳ ಹಿಂದೆ ನಡೆಯುತ್ತಿದ್ದ ‘ಸೀನು ಸೀನರಿಯ ಯಕ್ಷಗಾನ’ದ ಪ್ರದರ್ಶನ ಜುಲೈ 3ರಂದು ಸಂಜೆ 5ರಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ.
ಆರು ದಶಕಗಳ ಪೂರ್ವದಲ್ಲಿ ಮಂಗಳೂರು ಕೇಂದ್ರ ಮೈದಾನದಲ್ಲಿ ಕರ್ನಾಟಕ ಯಕ್ಷಗಾನ ಸಭಾ ವತಿಯಿಂದ ಟೆಂಟ್ ಹಾಕಿ ವರ್ಷವಿಡೀ ಸೀನು ಸೀನರಿಯ ಯಕ್ಷಗಾನ ನಡೆಯುತ್ತಿತ್ತು. ಬಹಳ ಯಶಸ್ವಿಯಾಗಿ ನಡೆಯುತ್ತಿದ್ದ ಆ ಯಕ್ಷಗಾನ ಪ್ರದರ್ಶನ 60 ವರ್ಷಗಳ ಬಳಿಕ ಹೊಸ ಸ್ವರೂಪದಲ್ಲಿ ಪ್ರದರ್ಶನವಾಗಲಿದೆ. ಸುಮಾರು 15 ನಿಮಿಷಗಳ ಸಭಾ ಕಾರ್ಯಕ್ರಮದ ಬಳಿಕ ‘ಶ್ವೇತಕುಮಾರ ಚರಿತ್ರೆ’ ಯಕ್ಷ ನಾಟಕ ವಿನೂತನ ರೀತಿಯಲ್ಲಿ ಪ್ರದರ್ಶನ ಕಾಣಲಿದೆ.
ಸಾಯಿಶಕ್ತಿ ಕಲಾ ಬಳಗದ ಸಂಚಾಲಕ ವಿಶ್ವಾಸ್ ಕುಮಾರ್‌ದಾಸ್ ದಂಪತಿ ಈ ಅಪೂರ್ವ ಕಾರ್ಯಕ್ರಮ ಸಂಯೋಜಿಸಿದ್ದಾರೆ. ಯಕ್ಷಗಾನದ ವೇಷಭೂಷಣ, ಮಾತು ಮತ್ತು ಅಭಿನಯ ಎಲ್ಲವೂ ಯಕ್ಷಗಾನೀಯ ರೀತಿಯಲ್ಲಿಯೇ ಇರಲಿದೆ. ‘ಸೀನು ಸೀನರಿಯ’ ವಿವಿಧ ದೃಶ್ಯಾವಳಿಗಳನ್ನು ಒಳಗೊಂಡ ರಂಗಸ್ಥಳ ವಿಶೇಷ ಆಕರ್ಷಣೆಯಾಗಲಿದೆ. ಸಾಮಾನ್ಯ ಯಕ್ಷಗಾನದಲ್ಲಿ ಭಾಗವತರು ವೇದಿಕೆ ಹಿಂಭಾಗದಲ್ಲಿ ಕಾಣುವ ಹಾಗೆ ಕುಳಿತರೆ, ಈ ಯಕ್ಷಗಾನದಲ್ಲಿ ಹಿಮ್ಮೇಳದವರು ಪ್ರೇಕ್ಷಕರಿಗೆ ಕಾಣುವುದಿಲ್ಲ. ಅವರು ವೇದಿಕೆಯ ಮುಂಬಾಗ ಇರುತ್ತಾರೆ. ಖ್ಯಾತ ಯಕ್ಷಗುರು ರಕ್ಷಿತ್ ಶೆಟ್ಟಿಯವರ ನಿರ್ದೇಶನದ ತಂಡದಲ್ಲಿ ಪ್ರಶಸ್ತಿ ವಿಜೇತ ವಿದ್ಯಾರ್ಥಿ ಕಲಾವಿದರನ್ನು ಒಳಗೊಂಡು ‘ಶ್ವೇತ ಕುಮಾರ ಚರಿತ್ರೆ’ ಯಕ್ಷನಾಟಕ ಪ್ರದರ್ಶನವಾಗಲಿದೆ. ಮೂರು ತಾಸಿನ ಪ್ರಸ್ತುತಿಯಲ್ಲಿ ವಿವಿಧ ದೃಶ್ಯಾವಳಿಗಳನ್ನು ಅಪೂರ್ವವಾಗಿ ಕಾಣಿಸಲಾಗುತ್ತದೆ. ಸಾಯಿಶಕ್ತಿ ಕಲಾ ಬಳಗದ ‘ಬೊಳ್ಳಿ ಮಲೆತ ಶಿವಶಕ್ತಿಲು’ ನಾಟಕ ತಂಡದ ರಂಗಭೂಮಿಯನ್ನು ಈ ಯಕ್ಷಗಾನಕ್ಕೆ ಸಾಯಿಶಕ್ತಿ ಕಲಾ ಬಳಗದ ಸಂಚಾಲಕಿ ಲಾವಣ್ಯ ಕುಮಾರ್ ದಾಸ್ ಸಿದ್ಧಗೊಳಿಸಿದ್ದಾರೆ.
ಅಂದು ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಉದ್ಘಾಟಿಸಲಿದ್ದು, ಕಲ್ಮಾಡಿ ದೇವಿಪ್ರಸಾದ್ ಶೆಟ್ಟಿ, ಪಳ್ಳಿ ಕಿಶನ್ ಹೆಗ್ಡೆ ಮುಂತಾದ ಗಣ್ಯರು ಉಪಸ್ಥಿತರಿರುವರು. ಇದೇ ಸಂದರ್ಭ 60 ವರ್ಷಗಳ ಹಿಂದೆ ಸೀನು ಸೀನರಿಯ ಯಕ್ಷಗಾನ ಕಾರ್ಯಕ್ರಮದಲ್ಲಿ ಕಲಾವಿದರಾಗಿದ್ದ ಪೆರುವಾಯಿ ನಾರಾಯಣ ಶೆಟ್ಟಿ, ಬಾಯಾರು ರಘುನಾಥ ಶೆಟ್ಟಿ ಇವರನ್ನು ಅಭಿನಂದಿಸಲಾಗುವುದು.