ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರರ 133ನೆಯ ಜನ್ಮದಿನೋತ್ಸವ ಕಾರ್ಯಕ್ರಮವು ದಿನಾಂಕ 06-06-2024ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಮಾತನಾಡಿ “ಉತ್ತಮ ಆಡಳಿತಗಾರರಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಳೆಸಿದರು, ಜೀವನ ಪತ್ರಿಕೆಯನ್ನು ನಡೆಸಿದರು. ಬರಹಗಾರರಿಗೆ ಬೆಂಬಲವಾಗಿ, ಪುಸ್ತಕ ಪ್ರಕಾಶನಕ್ಕೆ ಸಹಾಯ ಮಾಡಿದ್ದರಿಂದ ಕನ್ನಡ ಸಾಹಿತ್ಯ ಬಹುಮುಖಿಯಾಗಿ ಬೆಳೆಯುವುದು ಸಾಧ್ಯವಾಯಿತು. ಕರ್ಣಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಬೇಕು ಎಂದು ಸೂಚಿಸಿದವರಲ್ಲಿ ಮಾಸ್ತಿಯವರೂ ಪ್ರಮುಖರು. 1943ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದ ಮಾಸ್ತಿಯವರ ಮುಖ್ಯವಾದ ಕೊಡುಗೆ ಕನ್ನಡ ಸಾಹಿತ್ಯ ಪರಿಷತ್ತಿನ ವಿಕೇಂದ್ರೀಕರಣ. ಅವರ ಕಾಲದಲ್ಲಿ ಸದಸ್ಯರ ಸಂಖ್ಯೆ 2,500ಕ್ಕೆ ಏರಿತು. ಮಹಿಳಾ ಶಾಖೆ ಕೂಡ ಆರಂಭವಾಯಿತು. ‘ಕನ್ನಡ ಸರಸ್ವತಿ ಹಳ್ಳಿಗೆ ಬಂದಳು’ ಎನ್ನುವ ಯೋಜನೆಯಡಿ ಹಳ್ಳಿ-ಹಳ್ಳಿಗಳಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ನಡೆದವು. ಮಾಸ್ತಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಕಲಾಪಗಳಿಗೆ ಎಷ್ಟೇ ದೂರ ಪ್ರಯಾಣ ಮಾಡಿದರೂ ಪ್ರಯಾಣ ಭತ್ಯವನ್ನು ಪಡೆಯುತ್ತಿರಲಿಲ್ಲ”ವೆನ್ನುತ್ತಾ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆಗೆ ಮಾಸ್ತಿಯವರ ಕೊಡುಗೆಗಳನ್ನು ಸ್ಮರಿಸಿಕೊಂಡರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತರಾದ ಶಿವಾನಂದ ಎಚ್. ಕಲಕೇರಿಯವರು ಮಾತನಾಡಿ “ಮಾಸ್ತಿಯವರು ಕನ್ನಡದ ಮೊದಲ ಕಥೆಗಾರರಲ್ಲ, ಆದರೆ ಅವರಷ್ಟು ಉತ್ತಮ ಕಥೆಗಳನ್ನು ಕನ್ನಡದಲ್ಲಿ ಬರೆದವರು ವಿರಳ. ಕಥೆಗಳಿಗೂ ಮಾಸ್ತಿಯವರಿಗೂ ಅವಿನಾಭಾವ ಸಂಬಂಧ. ಮಾಸ್ತಿಯವರ ಸಣ್ಣಕಥೆಗಳ ಭಾಷೆ, ನಿರೂಪಣೆ, ಶೈಲಿ ಸರಳ. ಕನ್ನಡ ಕಥಾಬ್ರಹ್ಮ, ಸಣ್ಣಕಥೆಗಳ ಪಿತಾಮಹ, ಕಥೆಗಾರರ ಅಣ್ಣ ಎಂಬ ಹೇಳಿಕೆಗಳು ಇದಕ್ಕೆ ಸಾಕ್ಷಿ” ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟಿ, ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ್ ಪಾಂಡು ಅವರು ಸೇರಿದಂತೆ ಪರಿಷತ್ತಿನ ಸಿಬ್ಬಂದಿ ವರ್ಗದವರು ಮತ್ತು ಮಾಸ್ತಿಯವರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.