ಮೂಡುಬಿದಿರೆ : ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ದಿನಾಂಕ 19-07-2023 ಬುಧವಾರ ನಡೆದ ಸಾಂಸ್ಕೃತಿಕ ಚಟುವಟಿಕೆಗಳನ್ನು ಕಾಂತಾರದ ಕಮಲಕ್ಕ ಖ್ಯಾತಿಯ ವಿದುಷಿ ಮಾನಸಿ ಸುಧೀರ್ ಉದ್ಘಾಟಿಸಿ ಮಾತನಾಡಿ, “ಎಲ್ಲಾ ಕಲಾವಿದರ ಆರಾಧ್ಯ ದೈವ ಶಿವ. ಸತತ ಪ್ರಯತ್ನದಿಂದ ಕೌಶಲ್ಯ ಬರುತ್ತದೆ. ಕಲೆ ಕೌಶಲ್ಯವನ್ನು ಮೀರಿದ್ದು ಕಲಾ ಆರಾಧಕರಾಗಿ ಕಲೆಯನ್ನು ಪ್ರೀತಿಸಿದಾಗ ಮಾನಸಿಕ ನೆಮ್ಮದಿಯ ಜೊತೆಗೆ ಸಾಧಕರಾಗಲು ಸಾಧ್ಯವಾಗುತ್ತದೆ. ಎಕ್ಸಲೆಂಟ್ ವಿದ್ಯಾಸಂಸ್ಥೆ ಧನಾತ್ಮಕ ಚಿಂತನೆ ಹೊಂದಿದೆ. ಈ ಚಿಂತನೆಯಡಿಯಲ್ಲಿ ಪ್ರತಿಭಾವಂತ ಗುರುಗಳನ್ನು ಹೊಂದಿರುವುದು ಹೆಗ್ಗಳಿಕೆ. ಅವರ ಮಾರ್ಗದರ್ಶನದಲ್ಲಿ ಉತ್ತಮ ಸಾಧನೆ ಮಾಡಬೇಕು. ತಂತ್ರಜ್ಞಾನಕ್ಕೂ ಮೀರಿದ ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು” ಎಂದರು.
ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, “ಕಲಾ ಚಟುವಟಿಕೆಗಳನ್ನು ಪ್ರೀತಿಯಿಂದ ಆಸ್ವಾದಿಸಿ ವಿದ್ಯಾರ್ಥಿಗಳನ್ನು ಕಲೆಯಲ್ಲಿ ಮಾಸ್ ಮಾಡುವುದು ನಮ್ಮ ಕನಸಾಗಿದೆ” ಎಂದರು. ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, “ಕಲೆ ಮನುಷ್ಯನನ್ನ ಸಂತೋಷವಾಗಿಡುತ್ತದೆ. ಪ್ರತಿದಿನ ತಮ್ಮ ಕಲೆಯ ಮೂಲಕ ಸಂತೋಷವನ್ನು ಉಣಬಡಿಸುತ್ತಿರುವ ನಟಿ ಮಾನಸಿ ಸುಧೀರ್ ಇವರಿಗೆ ‘ಅಭಿನಯ ಶಂಕರಿ’ ಎಂಬ ಬಿರುದು ನೀಡಿ ಗೌರವಿಸುವುದು ನಮಗೆ ಹೆಮ್ಮೆಯೆನಿಸುತ್ತದೆ” ಎಂದರು.
ಇದೇ ಸಂದರ್ಭದಲ್ಲಿ ನಟಿ ಮಾನಸಿ ಸುಧೀರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಸಂಪತ್ ಕುಮಾರ್, ಪ್ರಾಂಶುಪಾಲ ಶ್ರೀ ಪ್ರದೀಪ್ ಕುಮಾರ್, ಮುಖ್ಯ ಶಿಕ್ಷಕ ಶ್ರೀ ಶಿವಪ್ರಸಾದ್ ಭಟ್, ಉಪನ್ಯಾಸಕ ಶ್ರೀ ವಾದಿರಾಜ, ಸಹ ಮುಖ್ಯೋಪಾಧ್ಯಾಯ ಶ್ರೀ ಜಯಶೀಲ, ಸೆಂಟ್ರಲ್ ಶಾಲೆಯ ಉಪ ಪ್ರಾಂಶುಪಾಲೆ ಶ್ರೀಮತಿ ವಿಮಲಾ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮೌಲ್ಯ ಸ್ವಾಗತಿಸಿ, ಶ್ಯಾಮಿಲಿ ಹೆಗ್ಡೆ ವಂದಿಸಿ, ವಿದ್ಯಾರ್ಥಿ ಸಂಜಿತ್ ನಿರೂಪಿಸಿದರು.