ಉಡುಪಿಯ ಪ್ರತಿಷ್ಠಿತ ರಾಗ ಧನ ಸಂಸ್ಥೆಯ ಆಶ್ರಯದಲ್ಲಿ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿದ್ದ 38ನೆಯ ಶ್ರೀ ಪುರಂದರದಾಸರು ಮತ್ತು ಸಂಗೀತ ತ್ರಿಮೂರ್ತಿ ಉತ್ಸವದ ಎರಡನೇ ದಿನದಂದು ಪಿಳ್ಳಾರಿ ಗೀತೆಗಳು ಹಾಗೂ ತ್ಯಾಗರಾಜರ ಘನ ಪಂಚರತ್ನ ಗೋಷ್ಠಿಗಾಯನ ಉಡುಪಿಯ ಸಂಗೀತ ಗುರುಗಳು ಹಾಗೂ ಶಿಷ್ಯಂದಿರೊಡಗೂಡಿ ಸಮರ್ಪಕವಾಗಿ ನಡೆಸಿಕೊಟ್ಟರು.

ಆ ಬಳಿಕ ಪ್ರಜ್ಞಾ ಅಡಿಗ ಇವರಿಂದ ಸಂಗೀತ ಕಛೇರಿ ನಡೆಯಿತು. ಕಾನಡ ಅಟತಾಳ ವರ್ಣ ಮುಂದೆ ‘ನಿನ್ನಚೆಪ್ಪ ಕಾರಣಮೇಮಿಮಾನಸ’ ರಾಗ ಮಂದಾರಿಯಲ್ಲಿ, ‘ಭಜರೇ ಮಾನಸ’ ಆಭೇರಿ ರಾಗದಲ್ಲಿ ನಾಟ ಕುರುಂಜಿ ರಾಗದಲ್ಲಿ ‘ಪಾರ್ವತಿ ಕುಮಾರ ಭಾವಯೇ’ ಮಿಶ್ರ ಛಾಪು ತಾಳದಲ್ಲಿ ‘ರಾಕಾಶಶಿವದನಾ’ ಟಕ್ಕ ರಾಗದಲ್ಲಿ ತುಂಬಾ ಸುಂದರವಾಗಿ ಮೂಡಿ ಬಂತು. ಎಲ್ಲ ಪ್ರಸ್ತುತಿಗಳೂ ಮನೋಹರವಾದ ಆಲಾಪನೆ ಸುಂದರವಾದ ಸ್ವರಕಲ್ಪನೆಯಿಂದ ಮೂಡಿಬಂತು.
ಮುಂದೆ ನೆರೆದಿದ್ದ ಸಂಗೀತ ಶೋತೃಗಳು ನಿರೀಕ್ಷಿಸುತ್ತಿದ್ದ ‘ರಾಗ-ತಾನ-ಪಲ್ಲವಿ’ ಪ್ರಸ್ತುತಿ ಪ್ರಾರಂಭದ ದುರ್ಗಾ ರಾಗದಲ್ಲಿ ಅತ್ಯಂತ ಮೋಹಕವಾಗಿ, ಸರಸ್ವತಿ ರಾಗದಲ್ಲಿ ದೇವಿಯ ಕೋಮಲತೆ, ಗಾಂಭೀರ್ಯವನ್ನು ಹಾಗೂ ಲಲಿತ ರಾಗದಲ್ಲಿ ಲಾಲಿತ್ಯವನ್ನೂ ಅತ್ಯಂತ ಮನೋಜ್ಞವಾಗಿ ಪ್ರಸ್ತುತ ಪಡಿಸಿದರು. ಅದೊಂದು ತ್ರಿರಾಗ ಪಲ್ಲವಿಯಾಗಿತ್ತು. ದುರ್ಗಾ, ಸರಸ್ವತಿ, ಲಲಿತ ರಾಗಗಳಲ್ಲಿ ಖಂಡಜಾತಿ ಅಟ್ಟತಾಳದಲ್ಲಿ, ಸಾಹಿತ್ಯ ದುರ್ಗೇ ಸುಖದಾಯಿದನೀ ಸರಸ್ವತಿ ವೀಣಾ ಧಾರಣೀ ಹಿರಣ್ಮಯೀ ಲಕ್ಷ್ಮೀಂ ಸದಾ ಭಜಾಮಿ ಪಲ್ಲವಿ ಹಾಡುಗಾರಿಕೆ ಮನೋಧರ್ಮ ಸಂಗೀತದ ಉತ್ಕೃಷ್ಟವಾದ ರಾಗಾಲಾಪನೆ ನೆರವಲ್, ಸ್ವರಪಸ್ತಾರದೊಂದಿಗೆ ಸುಂದರವಾಗಿ ಮೂಡಿ ಬಂದಿತು.


ಅನಂತರ ‘ವಾಸಂತಿ’ ರಾಗದಲ್ಲಿ ‘ಈಶ ನಿನ್ನ ಚರಣ ಭಜನೆ’ ಹಾಗೂ ‘ಯಮನ್’ನಲ್ಲಿ ‘ನಗುವುಲು ನಿಜಮನಿ’, ‘ಮಧುವಂತಿ’ ರಾಗದಲ್ಲಿ ತಿಲ್ಲಾನದೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು. ವಯೊಲಿನ್‌ನಲ್ಲಿ ವೈಭವ್ ರಮಣಿ ಬೆಂಗಳೂರು ಹಾಗೂ ಪ್ರಜ್ವಲ್ ಭಾರದ್ವಾಜ್ ಬೆಂಗಳೂರು ಕಲಾವಿದೆಗೆ ಸರಿಸಾಟಿಯಾಗಿ ಸಹಕಾರ ನೀಡಿದ್ದು ಶ್ಲಾಘನೀಯ. ಒಟ್ಟಿನಲ್ಲಿ ಪ್ರಜ್ಞಾ ಅಡಿಗ ಅವರ ಕಛೇರಿ ಅವಿಸ್ಮರಣೀಯವಾಗಿ ಮೂಡಿಬಂತು.
ವಿದುಷಿ ವಾರಿಜಾಕ್ಷಿ ಆರ್.ಎಲ್. ಭಟ್
