ಪೆರ್ಲ : ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠ, ಕನಕದಾಸ ಸಂಶೋಧನಾ ಕೇಂದ್ರ ಮತ್ತು ನಾಲಂದ ಕಲಾ ಮತ್ತು ವಿಜ್ಞಾನ ಕಾಲೇಜು ಪೆರ್ಲ ಇವರ ಸಹಯೋಗದೊಂದಿಗೆ ದಿನಾಂಕ 18 ಆಗಸ್ಟ್ 2026ರಂದು ಪೆರ್ಲದಲ್ಲಿ ‘ಕನಕದಾಸರ ಸಾಹಿತ್ಯದಲ್ಲಿ ಸಾಮಾಜಿಕ ಪರಿಕಲ್ಪನೆ’ ಕುರಿತ ಕನ್ನಡ ಮಲಯಾಳಂ ಉಭಯಭಾಷಾ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರಿನ ವಿದ್ವಾಂಸರಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಇವರು ಮಾತನಾಡಿ “ಕನಕದಾಸರಲ್ಲಿ ಮೌಢ್ಯದ ನಿರಾಕರಣೆ ಹಾಗೂ ವೈಚಾರಿಕ ಚಿಂತನೆಗಳಿವೆ. ಆದರೆ ಕೋಣ ಪ್ರಸಂಗ, ಕನಕನ ಕಿಂಡಿ ಮುಂತಾದ ಕಲ್ಪನೆಗಳನ್ನು ಪ್ರಚಾರಗೊಳಿಸುವ ಮೂಲಕ ಅವೈಚಾರಿಕ ಚಿಂತನೆಗಳನ್ನು ಬಿತ್ತರಿಸಲಾಗುತ್ತಿದೆ. ಉಡುಪಿಯಲ್ಲಿ ವ್ಯಾಸರಾಯರು ಕನಕದಾಸರಿಗೆ ಮೊದಲ ಪ್ರಸಾದ ನೀಡುತ್ತಿದ್ದರು ಎಂದು ಹರ್ಮನ್ ಮೋಗ್ಲಿಂಗ್ ದಾಖಲಿಸಿದ್ದಾರೆ. ಕನಕದಾಸರ ಮೋಹನ ತರಂಗಿಣಿಯ ಕನಕ – ವಧೂಟಿಯರ ಸಂವಾದ ಮುದ್ದಣ – ಮನೋರಮೆ ಸಂವಾದಕ್ಕೆ ಪ್ರೇರಣೆಯಾಗಿದೆ. ಅವರ ರಾಮಧಾನ್ಯ ಚರಿತೆಯ ಕೊನೆಯಲ್ಲಿ ಬರುವ ಅತಿಹಿತದಲಿ ನೀವಿಹುದು ಎಂಬ ಮಾತು ಸಮಾಜದಲ್ಲಿ ಸಾಮರಸ್ಯ ಇರಬೇಕು ಎಂಬುದನ್ನು ಸೂಚುಸುತ್ತದೆ” ಎಂದು ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ಆಶಯ ನುಡಿಗಳನ್ನಾಡಿ “ಕನಕದಾಸರ ಸಾಮಾಜಿಕ ಚಿಂತನೆಗಳು ಜಾತಿ ಅಸಮಾನತೆಗೆ ಮಾತ್ರ ಸೀಮಿತಗೊಳ್ಳದೆ ಮನುಷ್ಯ ಬದುಕನ್ನು ಎತ್ತರಿಸುವ ಅನೇಕ ಮೌಲ್ಯಗಳು, ಮೌಢ್ಯ ನಿರಾಕರಣೆಯ ಅಂಶಗಳು ಅವರ ಕೀರ್ತನೆಗಳಲ್ಲಿವೆ” ಎಂದರು.
ವಿಚಾರಗೋಷ್ಠಿಯಲ್ಲಿ ವಿದ್ವಾಂಸರಾದ ಡಾ. ವರದರಾಜ ಚಂದ್ರಗಿರಿ ಮಾತನಾಡಿ “ಕನಕದಾಸರು ರಾಜಪ್ರಭುತ್ವದ ಬದಲಾಗಿ ದೇವಪ್ರಭುತ್ವವನ್ನು ಪ್ರತಿಪಾದಿಸಿದವರು. ಸತ್ಯ ಶಾಂತ, ದುರ್ವೃತ್ತಿ ನಿಗ್ರಹ ಹಾಗೂ ಸಮಚಿತ್ತವೆಂಬ ಮಕ್ಕಳಿದ್ದರೆ ಹೆತ್ತರೇನು ಹೆರದಿದ್ದರೇನು ಅಂದವರು. ಅವರ ಕೀರ್ತನೆಗಳಲ್ಲಿ ಸ್ತ್ರೀಪರವಾದ ಅನೇಕ ವಿಚಾರಗಳಿವೆ” ಎಂದರು. ಅನುವಾದಕ ಪಯ್ಯನ್ನೂರು ಕುಂಞಿರಾಮನ್ ಮಲಯಾಳಂನಲ್ಲಿ ಉಪನ್ಯಾಸ ನೀಡಿದರು. ಬಳಿಕ ಉಪನ್ಯಾಸಕಿ ದಿಶಾ ಎ. ಇವರ ಅಧ್ಯಕ್ಷತೆಯಲ್ಲಿ ಯುವ ಸಂಶೋಧಕರಿಂದ ಪ್ರಬಂಧ ಮಂಡನೆ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎ. ಮೋಹನ ಕುಂಟಾರ್ “ಕನಕದಾಸರು ಒಪ್ಪಿಕೊಳ್ಳದ ಆಶಯಗಳಿಗೆ ಅವರನ್ನು ಬಂಧಿಸುವ ಪ್ರಯತ್ನ ಇಂದು ಆಗುತ್ತಿದೆ. ಅದು ಸರಿಯಲ್ಲ. ಕನಕರ ಭಾಷೆಯ ಸ್ವರೂಪದ ಅಧ್ಯಯನ ನಡೆಯಲಿ” ಎಂದರು. ಸಮಾರಂಭದಲ್ಲಿ ಕಾಲೇಜಿನ ಟ್ರಸ್ಟಿ ಸತೀಶ್ಚಂದ್ರ ಭಂಡಾರಿ ಉಪಸ್ಥಿತರಿದ್ದರು. ಉಪನ್ಯಾಸಕ ವರ್ಷಿತ್ ಕೆ. ಸ್ವಾಗತಿಸಿ, ಅಶ್ವಿನಿ ಕೆ.ಬಿ. ವಂದಿಸಿ, ಅನುಪಮ ಪಿ. ಮತ್ತು ಆಶಾಲತಾ ಪಿ. ನಿರೂಪಿಸಿದರು.
