ಬಿ.ಸಿ.ರೋಡ್ : ಸಂಸ್ಕಾರ ಭಾರತೀ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ದಿನಾಂಕ 02 ಆಗಸ್ಟ್ 2026ರಂದು ‘ನಾಟ್ಯಂ ಅವಧಾರಯೇ–ನಟರಾಜ ಪೂಜನ’ ಕಾರ್ಯಕ್ರಮ ಭಕ್ತಿಭಾವ ಹಾಗೂ ಕಲಾ ವೈಭವದೊಂದಿಗೆ ನಡೆಯಿತು. ಸಂಸ್ಕಾರ ಭಾರತೀ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ತಾರಾನಾಥ ಕೊಟ್ಟಾರಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ, ಸಂಸ್ಕಾರ ಭಾರತೀಯ ದ್ಯೇಯ ಉದ್ದೇಶ ತಿಳಿಸಿದರು.
ಕಾರ್ಯಕ್ರಮವನ್ನು ಸಂಸ್ಕಾರ ಭಾರತೀ ದಕ್ಷಿಣ ಕನ್ನಡ ಜಿಲ್ಲಾ ಗೌರವಾಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ, ಪ್ರಾಂತ ಕಾರ್ಯದರ್ಶಿ ನಾಗರಾಜ ಶೆಟ್ಟಿ, ಪ್ರಾಂತ ಉಪಾಧ್ಯಕ್ಷೆ ರೂಪಲೇಖಾ, ಪ್ರಾಂತ ಸಹಕೋಶ ಪ್ರಮುಖ್ ರಘುವೀರ ಘಟ್ಟಿ, ಸನಾತನ ನಾಟ್ಯಾಲಯದ ಮುಖ್ಯಸ್ಥ ಚಂದ್ರಶೇಖರ ಶೆಟ್ಟಿ ಜಿಲ್ಲಾ ಉಪಾಧ್ಯಕ್ಷರಾದ ಅನಿಲ್ ಪಂಡಿತ್, ದತ್ತಾತ್ರೇಯ ರಾವ್ ಹಾಗೂ ಜಿಲ್ಲಾ ಪದಾಧಿಕಾರಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ವೇದಘೋಷ, ವಾದ್ಯ ಸಂಗೀತ ಹಾಗೂ ನಾಟ್ಯ ಕಲಾವಿದರೊಂದಿಗೆ ಪಲ್ಲಕ್ಕಿಯಲ್ಲಿ ನಟರಾಜನ ಆಗಮನದ ಬಳಿಕ ವೇದಿಕೆಯಲ್ಲಿ ನಟರಾಜನ ಪ್ರತಿಷ್ಠಾಪನೆ, ಪುಷ್ಪಾರ್ಚನೆ ಹಾಗೂ ಆರತಿ ನೆರವೇರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿದುಷಿ ಸೌಜನ್ಯ ಪಡುವೆಟ್ನಾಯ ಅವರು ‘ನಟರಾಜ’ ಕುರಿತು ವಿಚಾರ ಪ್ರಸ್ತುತಿ ನೀಡಿದರು. “ಭಾರತೀಯ ಆಚಾರ-ವಿಚಾರ ಹಾಗೂ ಧಾರ್ಮಿಕ ನಂಬಿಕೆಗಳ ಹಿಂದೆ ವೈಜ್ಞಾನಿಕ ಮತ್ತು ತಾತ್ತ್ವಿಕ ಚಿಂತನೆ ಅಡಕವಾಗಿದೆ. ಜಗತ್ತು ನಿರಂತರ ಚಲನೆಯಲ್ಲಿ ಇರುವಂತೆ ನಟರಾಜನೂ ಚಲನೆಯ ಪ್ರತೀಕವಾಗಿದ್ದಾನೆ. ನಟರಾಜನ ರೂಪವನ್ನು ಆಳವಾಗಿ ಅರ್ಥಮಾಡಿಕೊಂಡಾಗ ಜೀವನದ ಹಲವು ಆಯಾಮಗಳನ್ನು ಅರಿಯಬಹುದು. ನಾವು ನಮ್ಮ ಕಾರ್ಯದಲ್ಲಿ ಸಂಪೂರ್ಣವಾಗಿ ತಲ್ಲೀನರಾದಾಗ ಅನುಭವಿಸುವ ಏಕಾಗ್ರತೆ ಮತ್ತು ಧ್ಯಾನಾವಸ್ಥೆಯಂತೆಯೇ ನಟರಾಜನ ನೃತ್ಯದಲ್ಲಿಯೂ ಚಲನೆ, ಏಕಾಗ್ರತೆ ಹಾಗೂ ಧ್ಯಾನದ ಭಾವ ಅಡಕವಾಗಿದೆ. ನಟರಾಜನ ರೂಪವು ಕೇವಲ ನೃತ್ಯದ ಸಂಕೇತವಲ್ಲ; ಸೃಷ್ಟಿ, ಸ್ಥಿತಿ, ಲಯ ಹಾಗೂ ನಿರಂತರ ಚಲನೆಯನ್ನು ಪ್ರತಿಬಿಂಬಿಸುತ್ತದೆ,ನಟರಾಜ ಸಕಲ ಕಲೆಗಳ ಅಧಿಪತಿ ನಮ್ಮ ದೇಶದ ಶಿಲ್ಪಕಲೇ ಪ್ರಪಂಚವನ್ನು ಬೆರಗುಗೋಳಿಸಿದೆ” ಎಂದು ವಿವರಿಸಿದರು.

ಕಾರ್ಯಕ್ರಮದ ಅಂಗವಾಗಿ ವಿದುಷಿ ಪ್ರೀತಿಕಲಾ ಅವರ ಗೀತಂ, ಚಿಣ್ಣರ ಲೋಕ ಚೆಂಡೆ ಬಳಗದ ವಾದ್ಯಸೇವೆ ಹಾಗೂ ವಿದ್ವಾನ್ ದೀಪಕ್ ಕುಮಾರ್ ಮತ್ತು ಬಳಗದ ನೃತ್ಯಸೇವೆಯ ಮೂಲಕ ನಟರಾಜನಿಗೆ ಕಲಾಸೇವೆ ಸಮರ್ಪಿಸಲಾಯಿತು. ಬಳಿಕ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಚಿತ್ರಕಲೆ, ಗಮಕ, ಸಾಹಿತ್ಯ, ವಯೊಲಿನ್, ಡೋಲು ಕುಣಿತ ಹಾಗೂ ಕುಣಿತ ಭಜನೆ ಸೇರಿದಂತೆ ವಿವಿಧ ಕಲಾಪ್ರಕಾರಗಳ ಮೂಲಕ ‘ಸಾಂಸ್ಕೃತಿಕ ಕಲಾ ಸೇವೆ’ ನಡೆಯಿತು.
ಸಂಸ್ಕಾರ ಭಾರತೀ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನುತಾ ಕೆ. ಸಾಲೆತ್ತೂರು ವಂದನಾರ್ಪಣೆ ಸಲ್ಲಿಸಿದರು. ವಿಜಯ ಶೆಟ್ಟಿ ಸಾಲೆತ್ತೂರು ಹಾಗೂ ಕುಮಾರಿ ಹರ್ಷಿತಾ ರೈ ಸಾಲೆತ್ತೂರು ನಿರೂಪಿಸಿದರು. ವಿದ್ವಾನ್ ಗೋಪಾಲ ಕೃಷ್ಣ, ಪ್ರವೀಣ್ ಶೆಟ್ಟಿ, ವಾರಿಜ ನಿಬೈಲು, ಶಂಕರಿ ಶರ್ಮ, ಸಂದ್ಯಾ ಶಾಲೆತೂರ್ ಸಹಕರಿದರು ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು. ಕಾರ್ಯಕ್ರಮದಲ್ಲಿ 150ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
