ಮೈಸೂರು : ಮೈಸೂರಿನ ಸಮತೆಂತೋ ಪ್ರಸ್ತುತಿಯ ಡಾ. ಶ್ರೀಪಾದ ಭಟ್ ಇವರ ರಂಗಪಠ್ಯ ವಿನ್ಯಾಸ ನಿರ್ದೇಶನದಲ್ಲಿ ಇಂದಿರಾ ನಾಯರ್ ಅಭಿನಯಿಸುವ ‘ನೀರ್ಮಾದಳ ಹೂವಿನೊಂದಿಗೆ…’ ಏಕವ್ಯಕ್ತಿ ರಂಗ ಪ್ರಯೋಗವು ದಿನಾಂಕ 22 ಮಾರ್ಚ್ 2026ರಂದು ಸಂಜೆ 6-30 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರದ ನಟನ ರಂಗಮಂದಿರದಲ್ಲಿ ನಡೆಯಲಿದೆ. ಕಮಲಾ ದಾಸ್ ಇವರ ಜೀವನ ಮತ್ತು ಬರಹಗಳನ್ನು ಆಧರಿಸಿದ ಏಕವ್ಯಕ್ತಿ ಪ್ರದರ್ಶನ ಕನ್ನಡದಲ್ಲಿ ಮೊದಲ ಬಾರಿಗೆ ನಡೆಯಲಿದೆ. ಅನುಷ್ ಶೆಟ್ಟಿ ಮತ್ತು ಮುನ್ನಾ ಸಂಗೀತ ಹಾಗೂ ಮಧುಸೂದನ್ ನೀನಾಸಂ ಬೆಳಕಿನ ವಿನ್ಯಾಸ ಮಾಡಿರುತ್ತಾರೆ. ಟಿಕೆಟ್ ಮತ್ತು ಹೆಚ್ಚಿನ ಮಾಹಿತಿಗಾಗಿ 80888 86388 ಮತ್ತು 74831 36251 ಸಂಖ್ಯೆಯನ್ನು ಸಂಪರ್ಕಿಸಿರಿ.

ಶ್ರೀಮತಿ ಇಂದಿರಾ ನಾಯರ್ ರವರು ಮೈಸೂರಿನ ಪ್ರತಿಭಾವಂತ ನಟಿ. ವೃತ್ತಿಯಲ್ಲಿ ವಾಕ್ ಶ್ರವಣ ಕ್ಷೇತ್ರದಲ್ಲಿನ ತಜ್ಞರು. ಕಾಲೇಜಿನ ದಿನಗಳಲ್ಲಿ ವಾಕ್ ಶ್ರವಣ ಸಂಸ್ಥೆಯಲ್ಲಿ ನಡೆಯುತ್ತಿದ್ದ ಅನೇಕ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಉಲ್ಲಾಳ್ ಶೀಲ್ಡ್ ಮುಂತಾದ ಇತರ ಅನೇಕ ನಾಟಕೋತ್ಸವಗಳಲ್ಲಿ ಪಾಲ್ಗೊಂಡು ಪ್ರಶಸ್ತಿಗಳನ್ನು ಪಡೆದಿದ್ದರು. ಓದಿನ ನಂತರ ಸಮತೆಂತೋವಿನ ಅನೇಕ ನಾಟಕಗಳಲ್ಲಿ ಪಾತ್ರವಹಿಸಿದ್ದಾರೆ. 1974ರಲ್ಲಿ ಮದುವೆಯಾದ ನಂತರ ಸುಮಾರು 35 ವರ್ಷಗಳವರೆಗೆ ರಂಗಭೂಮಿಯ ನಂಟು ಇರಲಿಲ್ಲ. ಸಂಸಾರದ ಜವಾಬ್ದಾರಿಗಳಿಂದಾಗಿ ಅವರು ಹಿಂದೆ ಸರಿದಿದ್ದರು. 2010ರ ನಂತರ ಮತ್ತೆ ಅವರು ಮೈಸೂರಿನ ರಂಗಭೂಮಿಗೆ ಮರಳಿದರು.
ಮೈಸೂರು ರಂಗಭೂಮಿಯ ಒಬ್ಬ ಮುಖ್ಯ ನಟಿಯಾಗಿ ಕಾರ್ಯಕರ್ತೆಯಾಗಿ ಬೆಳೆದಿರುವುದು ಇವರ ವೈಶಿಷ್ಟ್ಯ 2010ರಿಂದ ಇಂದಿನವರೆಗೂ ಮೈಸೂರಿನ ರಂಗಭೂಮಿಯ ಸುಮಾರು ನಾಟಕಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಭೂತಗಳು, ಹುಲಿಯ ನೆರಳು, ಅಂಧಗಾಂಧಾರ, ಪುರುಷಾರ್ಥ, ಬೇರಿಲ್ಲದವರು, ಕಾಕೈಲ್ ಪಾರ್ಟಿ, ರುಡಾಲಿ, ಸೊನಾಟ, ಕದಡಿದ ನೀರು, ಮಾದ್ರಿಯ ಚಿತೆ, ಸ್ತ್ರೀ ಸಂಭ್ರಮ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಇವರು ಯಾವ ಪಾತ್ರ ವಹಿಸಿದರೂ ಆ ಪಾತ್ರಗಳ ಸೂಕ್ಷತೆಯನ್ನು ಅರಿತು ನಟಿಸುತ್ತಾರೆ. ಜೊತೆಗೆ ಆನೇಕ ಹಿರಿಯ ಕಿರಿಯ ತಂಡಗಳಿಗೆ ತಮ್ಮದೇ ಆದ ರೀತಿಯಲ್ಲಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ರಂಗ ಭೂಮಿಯ ಬಗ್ಗೆ ಅವರ ಬದ್ಧತೆ ಅತ್ಯಂತ ಶ್ಲಾಘನೀಯ.

ಇವರು ರಂಗಭೂಮಿ ಅಲ್ಲದೆ ಸಿನಿಮಾ ಧಾರಾವಾಹಿಗಳಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕನ್ನಡ ಮತ್ತು ಮಲಯಾಳಂ ಎರಡೂ ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿ ಮೆಚ್ಚುಗೆ ಪಡೆದಿದ್ದಾರೆ.
‘ಕಾಕಪೂ’, ‘ಕಡಲಾಸವೂ’, ಮತ್ತು ‘ಏಕಾಂತತ’ ಈ ಕಿರು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಕಡಲಾಸಪೂ’ ಚಿತ್ರದ ನಟನೆಗೆ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಎರಡೂ ಚಿತ್ರಗಳು ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿಗಳನ್ನು ಪಡೆದಿವೆ. ಈ ಎರಡು ಚಿತ್ರದ ನಿರ್ಮಾಣದ ಹೊಣೆಯನ್ನು ಹೊತ್ತಿದ್ದರು. ಇವರು ನಟಿಸಿದ ಕನ್ನಡದ ‘ಅವಲಕ್ಕಿ ಪವಲಕ್ಕಿ’ ಚಲನಚಿತ್ರದ ನಟನೆಗೆ ಉತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದಾರೆ. ಇಂತಹ ಬಹುಮುಖ ಪ್ರತಿಭೆಯ ಇಂದಿರಾ ನಾಯರ್ ರವರು ಈಗ ‘ಕಮಲದಾಸ್ ರವರ ಜೀವನವನ್ನಾಧರಿಸಿದ ನೀರ್ಮಾದಳದ ಹೂವಿನೊಂದಿಗೆ.. ನಾಟಕದ ಏಕವ್ಯಕ್ತಿ ಪ್ರದರ್ಶನವನ್ನು ನೀಡುತ್ತಿದ್ದಾರೆ.

ಸಮತೆಂತೋ ಮೈಸೂರು : ಸರಸ್ವತಿಪುರಂ ಮಧ್ಯದಲ್ಲಿರುವ ತೆಂಗಿನ ತೋಪಿನ ಹವ್ಯಾಸಿಗಳು – ಸಮತೆಂತೋ ಹವ್ಯಾಸಿ” ಹೆಸರಿನಲ್ಲಿ ನಾಟಕಗಳನ್ನಾಡಲು 1967ರಲ್ಲಿ ಪ್ರಾರಂಭವಾದ ಗೆಳೆಯರ ಗುಂಪು. ಕಾಲಕ್ರಮದಲ್ಲಿ ನಮ್ಮ ಪ್ರೇಕ್ಷಕರು ‘ಸಮತೆಂತೋ’ ಎಂದೇ ಹೇಳತೊಡಗಿ ಈಗ ಸಮತೆಂತೋ ಹೆಸರೇ ಶಾಶ್ವತವಾಗಿ ಉಳಿದಿದೆ. ಸಮತೆಂತೋ ಹೊಸತನಕ್ಕೆ ಪ್ರಯೋಗಶೀಲತೆಗೆ ಮೊದಲಿಟ್ಟದ್ದು ತನ್ನ ಈ ಹೆಸರಿನಿಂದಲೇ.
ಸಮತೆಂತೋ ಪ್ರಯೋಗಾತ್ಮಕ ನಾಟಕಗಳನ್ನು ಆಗಿಂದಾಗ್ಗೆ ರಂಗದ ಮೇಲೆ ತಂದು ನಾಟಕದ ಬಗ್ಗೆ ಶ್ರದ್ದೆ ಬೆಳೆಯಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಹಲವು ಹೊಸ ನಾಟಕಗಳ ಮೊದಲ ಪ್ರಯೋಗ ಸಮತೆಂತೋ ಮೂಲಕ ಆಗಿರುವುದು ನಮಗೆ ದೊರೆತಿರುವ ಸಮಾಧಾನಗಳಲ್ಲೊಂದು. ರಂಗಶ್ರೇಷ್ಠರ ಬಗೆಗೆ ನಮಗಿರುವ ಗೌರವ ಸೂಚಕವಾಗಿ ಸಂಪತ್, ಪರ್ವತವಾಣಿ, ಗುರುರಾಜರಾವ್, ಜಿ.ಬಿ ಜೋಷಿ ಮೊದಲಾದ ಹಲವು ರಂಗ ಗಣ್ಯರನ್ನು ಸನ್ಮಾನಿದ್ದೇವೆ
ಮೈಸೂರಿನಲ್ಲಿ ಮೊದಲ ಬಾರಿಗೆ ನಾಟಕ ಕಲೆಗೆ ಸಂಬಂಧಿಸಿದಂತೆ ಒಂದು ವಸ್ತುಪ್ರದರ್ಶನ – ರಂಗ ವೇಶ ಭೂಷಣಗಳ ಪ್ರದರ್ಶನ – ಖ್ಯಾತನಾಮರಾದ ಸುಬ್ಬಯ್ಯನಾಯ್ಡು ಅವರು ತೊಡುತ್ತಿದ್ದ ವೇಶ ಭೂಷಣಗಳ ಸಹಿತ – ಏರ್ಪಡಿಸಿದ ಹೆಗ್ಗಳಿಕೆಯೂ ಸಮತೆಂತೋಗೆ ಸಲ್ಲುತ್ತದೆ. ಹೀಗೆ ಹಲವು ಅನನ್ಯ ಕಾರ್ಯಕ್ರಮಗಳನ್ನು ಸಮತೆಂತೋ ನಡೆಯಿಸಿಕೊಂಡು ಬಂದಿದೆ. ಹಲವು ಹೊಸ ನಟರು. ಹೊಸ ನಿರ್ದೇಶಕರು, ಹೊಸ ನಾಟಕಕಾರನ್ನು ಪರಿಚಯಿಸಿದ ಶ್ರೇಯಸ್ಪೂ ಸಮತೆಂತೋಗೆ ಸೇರುತ್ತದೆ.
ತಮ್ಮ 89 ವಯಸ್ಸಿನಲ್ಲಿ ಡಾ. ನ. ರತ್ನ ಅವರು ಬರೆದ ವೃದ್ಧಾಪ್ಯದ ವಿರಾಟ್ ರೂಪದರ್ಶನ ಮಾಡಿಸುವ “ಆಯಾನ್ ಶಾಂತಿ ಕುಟೀರ” ನಾಟಕವನ್ನು 70-80 ವರ್ಷ ಮೀರಿದ ಹಿರಿಯರೇ ರಂಗದ ಮೇಲೆ ತಂದದ್ದು ಒಂದು ರಂಗದ ವಿಶೇಷ. ‘ಇಂದಿಗೂ ಸಹ ಸಮತೆಂತೋ ಕಾರ್ಯಕ್ರಮಗಳಲ್ಲಿ ಮೈಸೂರಿನ ಎಲ್ಲಾ ರಂಗ ತಂಡಗಳೂ ಆತ್ಮೀಯತೆಯಿಂದ ಪಾಲ್ಗೊಳ್ಳುತ್ತವೆ
ನಾಟಕದ ಕುರಿತು : ಇದು ಕಮಲಾದಾಸ್ ಅವರ ಬರಹಗಳಿಂದ ಪ್ರೇರಿತಗೊಂಡ ಅವರ ವ್ಯಕ್ತಿಚಿತ್ರ, ಅವರ ಕಾವ್ಯ ಹಾಗೂ ಬದುಕಿನ ಕತೆಯಿಂದ ರೂಪುಗೊಂಡ ರೂಪಕ. ಕಮಲಾದಾಸ್ ಎಂದರೆ ಆಸೀಮ ಸ್ವಾತಂತ್ರ್ಯದ ಸಂಕೇತ. ಚೌಕಟ್ಟಿನಾಚೆಗಿನ ಜಿಗಿತ. ಸಾಂಪ್ರದಾಯಿಕ ಬದುಕಿನಲ್ಲಿ ಮರಗಟ್ಟಿದ ಮಹಿಳೆಯರ ಕುತೂಹಲ. ಅಂಚಿಗೆ ಒತ್ತಲ್ಪಟ್ಟ ಮಹಿಳೆಯರ ಆದಮ್ಯ ದನಿ, ಹಸಿವು, ಕಾಮದ ಕುರಿತ ನೇರ ಅಭಿವ್ಯಕ್ತಿಯಿಂದ ಸಮಾಜವನ್ನು ಬೆಚ್ಚಿಬೀಳಿಸಿದ ಬಂಡುಕೋರ ಧೀರತನ, ತುಂಟುತನದ ನಟೋರಿಯಸ್ ವ್ಯಕ್ತಿತ್ವ, ಆಸೀಮ ಪ್ರೀತಿಯ ಹುಡುಕಾಟದ ಸಂತೆ.
ಇಂಗ್ಲೀಷ್ ಮತ್ತು ಮಲಯಾಳಂನಲ್ಲಿ ನೂರಾರು ಕವನಗಳು, ನೂರಾರು ಸಣ್ಣಕತೆಗಳು, ಹತ್ತು ಹಲವು ಕಾದಂಬರಿಗಳು, ಹಲವಾರು ಪ್ರಬಂಧಗಳು, ಆತ್ಮಕತೆಗಳು, ಅನುವಾದಗಳು ಅವರಿಂದ ರಚಿತಗೊಂಡಿವೆ. ರಾಷ್ಟ್ರ, ಅಂತರಾಷ್ಟ್ರಗಳ ಹಲವು ಪ್ರಶಸ್ತಿಗಳಿಂದ ಪುರಸ್ಕೃತಗೊಂಡ, ಕೆ. ದಾಸ್. ಮಾಧವಿ ಕುಟ್ಟಿ, ಕಮಲಾ ಸುರೈಯ್ಯಾ ಹೀಗೆ ಹಲವು ನಾಮ ರೂಪಗಳ ಬಹುಮುಖಿ ಅವರು, ಕಮಲಾದಾಸ್ ಹೇಗಿದ್ದರು ಎಂಬುದನ್ನು ಕಾಣಿಸುವ ಪ್ರಯತ್ನ ಇದಲ್ಲ ಬದಲಾಗಿ ತಮ್ಮ ಬರಹಗಳ ಮೂಲಕ ಕಮಲಾದಾಸ್ ನಮಗೆ ಹೇಗೆ ಕಂಡಿದ್ದಾರೆ ಎಂಬುದನ್ನು ಕಾಣಿಸುವ ಪ್ರಯತ್ನವಿದು. ಕಾವ್ಯ ಮತ್ತು ಬದುಕು ಇವೆರಡನ್ನೂ ಒಂದಾಗಿಸಿನೋಡುತ್ತ ಕಟ್ಟಿದ ಪ್ರತಿಮೆಯಿದು. ಇಲ್ಲಿನ ಮಾತುಗಳೆಲ್ಲ ಅವರವು ಆದರೆ ಅದನ್ನು ಕಂಡ ಬಗೆ ಮಾತ್ರ ನಮ್ಮದು. ಹೀಗಾಗಿ ಇದು ಕಮಲಾದಾಸ್ ಅವರ ಕುರಿತ ಒಂದು ರಂಗ ಓದು. ನಿರಂತರ ವಿಪ್ಲವಗಳ ಮಹಿಳಾ ಬದುಕಿಗೆ ಕಮಲಾದಾಸ್ ಅವರ ಬದುಕಿನ ನೋಟ ಒಂದು ಘನತೆಯನ್ನು ತಂದುಕೊಡಬಲ್ಲದು ಎಂಬ ನಂಬಿಕೆ ನಮ್ಮದು.
ಪಠ್ಯ ನಿರ್ಮಾಣದಲ್ಲಿ ನೆರವಾದ ಶಾಲೋಮ್ ಸನ್ನುತಾ, ಸೋಪಾನಮ್ ಸಂತೋಷ್ ಮಾಧವನ್, ಕೆ. ಪ್ರಭಾಕರನ್ ಕಮಲಾದಾಸ್ ಕವನಗಳ ಕನ್ನಡ ಅನುವಾದ ದೊರಕಿಸಿದ ಭಾರತಿ ಬಿ.ವಿ., ತೇರಳಿಶೇಖರ್, ಸುಧಾ ಆಡುಕಳ, ಸಂಗೀತ: ಅನುಷ್ ಶೆಟ್ಟಿ ಮತ್ತು ಮುನ್ನ ಮೈಸೂರು, ಸಂಗೀತ ನಿರ್ವಹಣೆ : ಪ್ರವೀಣ್ ಬೆಳ್ಳಿ, ಬೆಳಕು: ಮಧುಸೂಧನ ನೀನಾಸಂ
ನಿರ್ದೇಶಕರ ಕುರಿತು : ಡಾ. ಶ್ರೀಪಾದ ಭಟ್ ಉತ್ತರ ಕನ್ನಡ ಜಿಲ್ಲೆಯ ಧಾರೇಶ್ವರದವರು. ತಂದೆಯಿಂದ ದೊರಕಿದ ಯಕ್ಷಗಾನ ತರಬೇತಿಯ ಮೂಲಕ ರೂಪುಗೊಂಡ ಕಲಾತ್ಮಕತೆ, ಸಾಹಿತ್ಯದ ಸಾಹಚರ್ಯದಿಂದ ದೊರಕಿದ ಲೋಕಗ್ರಹಿಕೆ, ಸಮುದಾಯ, ಸಾಕ್ಷರತೆ, ವಿಜ್ಞಾನ ಚಳುವಳ ಮೂಲಕ ದಕ್ಕಿದ ಸಾಮಾಜಿಕ ಪ್ರಜ್ಞೆ ಇವೆಲ್ಲವೂ ಸೇರಿ ಇವರ ರಂಗಚಟುವಟಿಕೆಗಳನ್ನು ನಿರ್ದೇಶಿಸಿದೆ. ಜನಪದ ರಂಗಭೂಮಿ, ಯಕ್ಷಗಾನ ಹಾಗೂ ಆಧುನಿಕ ರಂಗಭೂಮಿಯ ಕುರಿತ ಇವರ ಸಂಶೋಧನೆಗಳು ಇವರಿಗೆ ಪಿಎಚ್.ಡಿ. ಪದವಿ ನೀಡಿವೆ. ಕಳೆದ 40 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಕೊಂಡ ಇವರು ಮಕ್ಕಳ ನಾಟಕ, ಬೀದಿನಾಟಕ, ಪ್ರೊಸೀನಿಯಂ ಮಾದರಿಯ ನಾಟಕ, ಕಾವ್ಯನಾಟಕ ಹೀಗೆ ವಿವಿಧ ಪ್ರಕಾರಗಳಲ್ಲಿ ಇವರು ನೂರಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಶಿಕ್ಷಣ ಹಾಗೂ ರಂಗಭೂಮಿಯ ಸಮಾಸಕ್ಕಾಗಿ ಅವಿರತ ಪ್ರಯತ್ನ ನಡೆಸಿದ್ದಾರೆ. ಇವರು ನಿರ್ದೇಶಿಸಿದ ಕಾವ್ಯರಂಗ, ಪಾಪುಬಾಪು ನಾಟಕಗಳ ಸಾವಿರಾರು ಪ್ರಯೋಗಗಳು ಕನ್ನಡ ರಂಗಭೂಮಿಯ ಮಹತ್ವದ ದಾಖಲೆಗಳು.
ಬಹುಭೂಮಿಕೆ, ಉತ್ತರಕನ್ನಡ ರಂಗಭೂಮಿ, ಉತ್ತರಕನ್ನಡ ಜನಪದ ರಂಗಭೂಮಿ, ಯಕ್ಷಗಾನ, ನಟನೆಯ ಕೈಪಿಡಿ, ದಡವನಕ್ಕಿದ ಹೊಳೆ ಇವು ಇವರ ಪ್ರಕಟಿತ ಪುಸ್ತಕಗಳು, ಇವರು ನಿರ್ದೇಶಸಿದ ನಾಟಕಗಳು, ರಾಜ್ಯಾದ್ಯಂತ ಮಾತ್ರವಲ್ಲದೇ ದೆಹಲಿ, ಕಲ್ಕತ್ತಾ, ಹೈದರಾಬಾದ್, ಚೆನ್ನೈ, ಮುಂಬಯಿ ಮುಂತಾದ ಕಡೆ ಪ್ರಯೋಗಕಂಡಿವೆ. ಇವರು ಸಂಗೀತ ಸಂಯೋಜಿಸಿದ ರಂಗಸಂಗೀತದ ಧ್ವನಿಮುದ್ರಿಕೆಯನ್ನು ಲಹರಿ ಸಂಸ್ಥೆ ಬಿಡುಗಡೆಗೊಳಿಸಿದೆ. ಸಿರಿವಾದ ಎನ್ನುವ ಇವರ ರಂಗಬದುಕಿನ ವಿಮರ್ಶೆಯ ಗ್ರಂಥ ಪ್ರಕಟವಾಗಿದೆ. ಅವಧಿ ಮ್ಯಾಗಝಿನ್ ಇವರ ಹೆಸರಿನ ರಂಗೋತ್ಸವವನ್ನೂ ಸಂಘಟಿಸಿದೆ. ಇವರು ನಿರ್ದೇಶಿಸಿದ ರಾಧಾ, ಊರ್ಮಿಳಾ, ಉರಿಯ ಉಯ್ಯಾಲೆ, ಅವಳ ಕಾಗದ, ನೃತ್ಯಗಾಥಾ, ದೀಪಧಾರಿಣಿ ಮುಂತಾದ ಏಕವ್ಯಕ್ತಿ ರಂಗಪ್ರಯೋಗಗಳ ಸಾಲಿಗೆ ಈಗ ಕಮಲಾದಾಸ್ ಸಹ ಸೇರ್ಪಡೆಯಾಗುತ್ತಿದ್ದಾರೆ. ಕನ್ನಡದಲ್ಲಿ ಕಮಲಾದಾಸ್ ಮೊದಲಬಾರಿಗೆ ರಂಗದಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ನಿಮ್ಮ ಪ್ರೀತಿ ಜತೆಗಿರಲಿ.
