Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಯಕ್ಷಗಾನ ವಿಮರ್ಶೆ | ಬೆಂಗಳೂರಿನಲ್ಲಿ ‘ಭೃಗು ಶಾಪ’ ನೂತನ ಪ್ರಸಂಗದ ಯಶಸ್ವೀ ಜಯಭೇರಿ
    Review

    ಯಕ್ಷಗಾನ ವಿಮರ್ಶೆ | ಬೆಂಗಳೂರಿನಲ್ಲಿ ‘ಭೃಗು ಶಾಪ’ ನೂತನ ಪ್ರಸಂಗದ ಯಶಸ್ವೀ ಜಯಭೇರಿ

    August 11, 2023Updated:August 19, 2023No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಬೆಂಗಳೂರು :  ವಲಸಿಗರ ಸ್ವರ್ಗದಂತಿರುವ  ಬೆಂಗಳೂರು ಮಹಾನಗರಕ್ಕೆ ಕರಾವಳಿ ಹಾಗೂ ಮಲೆನಾಡಿನಿಂದ ಬಂದ ತರುಣ ಜನಾಂಗದವರು ಯಕ್ಷಗಾನ ಕಲೆಯ ಮೇಲೆ ತಮಗಿರುವ ಅತೀವ ಪ್ರೀತಿಯನ್ನು ಬಿಡಲಾರದೆ, ಹವ್ಯಾಸಿ ಸಂಘಗಳನ್ನು ಕಟ್ಟಿಕೊಂಡು, ಯಕ್ಷಗಾನವನ್ನು ಗುರುಮುಖೇನ ಕಲಿತು ಪ್ರದರ್ಶನ ಮಾಡುತ್ತಿರುವುದು ಇತ್ತೀಚಿನ ಆಶಾದಾಯಕ ಬೆಳವಣಿಗೆಯಾಗಿದೆ.  ಹೀಗೆ  ಕೆಲವು ಉತ್ಸಾಹಿ ತರುಣರು  ಹದಿನಾಲ್ಕು ವರ್ಷಗಳ ಹಿಂದೆ ಯಕ್ಷ ಸಿಂಚನ ಟ್ರಸ್ಟ್ ಎಂಬ  ಸಂಸ್ಥೆಯನ್ನು ಕಟ್ಟಿ, ಯಕ್ಷಗಾನಕ್ಕೆ ಸಂಬಂಧಿಸಿದಂತೆ  ಅನೇಕ  ಕಾರ್ಯಕ್ರಮಗಳನ್ನು ಹಾಕಿಕೊಂಡು,  ತಮ್ಮ ವಿಶೇಷತೆಯನ್ನು ಮೆರೆಯುತ್ತಿದ್ದಾರೆ.  ಕೇವಲ ಪ್ರಶಸ್ತಿ ಪ್ರದಾನ , ಯಕ್ಷಗಾನ ಪ್ರದರ್ಶನಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ,  ಪ್ರಸಂಗ ರಚನಾ ಸ್ಪರ್ಧೆ, ಪ್ರಸಂಗ ರಚನಾ ತರಬೇತಿ ಕಮ್ಮಟ, ಯಕ್ಷ ರಸಪ್ರಶ್ನೆ ಕಾರ್ಯಕ್ರಮ, ಸಾರ್ಥಕ ಸಾಧಕ ಪ್ರಶಸ್ತಿ ವಿತರಣೆ ಮುಂತಾದ ವಿನೂತನ ಕಾರ್ಯಕ್ರಮಗಳನ್ನು ನಡೆಸುವ ಮೂಲ ತಮ್ಮ ಅಸ್ತಿತ್ವವನ್ನು ಬೆಂಗಳೂರಿನಲ್ಲಿ ಯಶಸ್ವಿಯಾಗಿ  ಮೂಡಿಸಿದ್ದಾರೆ. ಇತ್ತೀಚೆಗೆ ಅವರ 14ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ಸಾರ್ಥಕ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭ ಸಂಪನ್ನವಾಗಿತ್ತು. ದಿನಾಂಕ 6-8-2023ರಂದು ಬೆಂಗಳೂರಿನ ಉದಯಭಾನು ಕಲಾ ಸಂಘದಲ್ಲಿ ಮಧ್ಯಾಹ್ನ  ಯಕ್ಷಕಲಾ ಅಕಾಡೆಮಿಯ ಬಾಲ ಕಲಾವಿದರ ಪ್ರದರ್ಶನ, ನಂತರ ಪ್ರಶಸ್ತಿ ಪ್ರದಾನ ಸಮಾರಂಭ, ಹಾಗೂ ಕೊನೆಯಲ್ಲಿ  ಯಕ್ಷ ಸಿಂಚನ ಟ್ರಸ್ಟ್ ಬೆಂಗಳೂರು ಇದರ ಕಲಾವಿದರಿಂದ ‘ಭೃಗು ಶಾಪ’, ಪೌರಾಣಿಕ ಯಕ್ಷಗಾನ ಪ್ರಸಂಗದ ಪ್ರದರ್ಶನ  ನಡೆಸಿದರು.
    ಖ್ಯಾತ ಯಕ್ಷಗಾನ ಗುರು ಹಾಗೂ ಸಮರ್ಥ ಭಾಗವತರಾಗಿರುವ ಪರಮೇಶ್ವರ ಹೆಗಡೆ ಇವರಿಗೆ ಈ ಸಾಲಿನ  ಸಾರ್ಥಕ ಸಾಧಕ ಪ್ರಶಸ್ತಿಯನ್ನು ಹಿರಿಯ ಯಕ್ಷ ಕವಿ ಹಾಗೂ ಖ್ಯಾತ ಅರ್ಥದಾರಿ ಶ್ರೀಧರ ಡಿ.ಎಸ್ ಅವರು ಪ್ರದಾನ ಮಾಡಿದರು. ಬಳಿಕ ಮಾತನಾಡುತ್ತಾ “ಹೆಚ್ಚಿನ ಸಂಸ್ಥೆಗಳು ಮುಮ್ಮೇಳ ಹಾಗೂ ಭಾಗವತರನ್ನು ಗುರುತಿಸುತ್ತವೆ ವಿನಃ  ನೇಪಥ್ಯದಲ್ಲಿರುವ, ತೆರೆಮರೆಯಲ್ಲಿರುವ ಯಕ್ಷಗಾನಕ್ಕೆ ಸೇವೆ ಸಲ್ಲಿಸುತ್ತಿರುವವರನ್ನು ಕರೆದು ಗೌರವಿಸುವುದು ತೀರಾ ಅಪರೂಪ. ಆದರೆ ಇಂದು ಯಕ್ಷ ಸಿಂಚನ ತಂಡದವರು ಐನ್ಬೈಲು ಪರಮೇಶ್ವರ ಹೆಗಡೆಯವರಿಗೆ ಈ ಪ್ರಶಸ್ತಿಯನ್ನು ನೀಡಿರುವುದು ನಿಜವಾಗಿಯೂ ಸಾರ್ಥಕವೆನಿಸಿದೆ. ಯಕ್ಷಗಾನ ಗುರುವಾಗಿ, ಅಂಧರಿಗೆ, ಮಕ್ಕಳಿಗೆ, ಯುವಕರಿಗೆ, ಶ್ರೀ  ಐನಬೈಲು ಪರಮೇಶ್ವರ ಹೆಗಡೆಯವರು ಈ ಕಲೆಯನ್ನು ಧಾರೆಯೆರೆದಿದ್ದಾರೆ. ಇದರ ಜೊತೆಗೆ ಯಕ್ಷ ಸಿಂಚನ ಟ್ರಸ್ಟಿನ ಕಾರ್ಯವೈಖರಿಯನ್ನು ಶ್ರೀಧರ್ ಅವರು ಶ್ಲಾಘಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪರಮೇಶ್ವರ ಹೆಗಡೆಯವರು, ಈ ಸಂದರ್ಭದಲ್ಲಿ ತಮ್ಮ ಗುರುಗಳಾದ ಹೊಸ್ತೋಟದವರ ಮಾರ್ಗದರ್ಶನವನ್ನು ನೆನಪಿಸಿಕೊಂಡರು. ತಾವು ನಿರಂತರವಾಗಿ  ಯಕ್ಷಗಾನ ಸೇವೆಯನ್ನು ಮಾಡಲು ಅನುವು ಮಾಡಿಕೊಟ್ಟಿರುವ ತಮ್ಮ ಪತ್ನಿಯನ್ನು, ಮನೆಯವರನ್ನು, ತಂದೆಯವರನ್ನು ಸ್ಮರಿಸಿಕೊಂಡರು. ತಮ್ಮ ಕಲಾ ಬದುಕಿನ ಪಯಣದ ಬಗ್ಗೆ ತಿಳಿಸಿದರು.”
    ಮುಖ್ಯ ಅತಿಥಿಯಾಗಿ  ಆಗಮಿಸಿದ್ದ  ಖ್ಯಾತ ಅಂಕಣಕಾರ ಹಾಗೂ ಬಹ್ರೈನ್ ಕನ್ನಡ ಸಂಘದ ನೇತಾರ  ಶ್ರೀ ಕಿರಣ್ ಉಪಾಧ್ಯಾಯರು ಮಾತನಾಡುತ್ತಾ ತಾವು ಶಿರಸಿಯಲ್ಲಿದ್ದಾಗ ತಮ್ಮ ಹಾಗೂ ಶ್ರೀ ಐನಬೈಲು ಪರಮೇಶ್ವರ ಹೆಗಡೆಯವರ ಜೊತೆಗಿನ ಒಡನಾಟವನ್ನು ನೆನೆಸಿಕೊಂಡರು. ಜೊತೆಗೆ ಯಕ್ಷಗಾನದ ಉಳಿವಿಗೆ ಎಲ್ಲರೂ ಕಂಕಣಬದ್ಧರಾಗಬೇಕಾದ ಅಗತ್ಯವನ್ನು  ತಿಳಿಸಿದರು.
     ಮುಖ್ಯ ಅತಿಥಿಗಳಾಗಿದ್ದ ವಿದ್ವಾನ್ ಜಗದೀಶ್ ಶರ್ಮ ಸಂಪ ಅವರು “ಪೌರಾಣಿಕ ಲೋಕವನ್ನು ಜನರಿಗೆ ಪರಿಚಯಿಸುವಲ್ಲಿ  ಯಕ್ಷಗಾನದ ಪಾತ್ರ ಮಹತ್ವದ್ದು. ಜನರಿಗೆ ಒಳ್ಳೆಯ ಬದುಕನ್ನು ರೂಪಿಸಲು ಯಕ್ಷಗಾನ ಕಲೆ ಸಹಕಾರಿ” ಎಂದರು.  ಕಾರ್ಯಕ್ರಮದಲ್ಲಿ ಯಕ್ಷಗುರು ಶ್ರೀ ಕೃಷ್ಣಮೂರ್ತಿ ತುಂಗ ಅವರು ಉಪಸ್ಥಿತರಿದ್ದರು. ಸುಹಾಸ್ ಮರಾಠೆಯವರು  ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀಮತಿ ಪೂರ್ಣಿಮಾ  ಹೆಗಡೆಯವರು ಪ್ರಶಸ್ತಿ ವಾಚನವನ್ನು ಮಾಡಿ, ಕೊನೆಯಲ್ಲಿ ಶ್ರೀ ಶಶಿರಾಜ ಸೋಮಯಾಜಿಯವರು  ಧನ್ಯವಾದಗಳನ್ನು ಸಮರ್ಪಿಸಿದರು.
     ಕಾರ್ಯಕ್ರಮದ ಆರಂಭದಲ್ಲಿ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಬಾಲ ಕಲಾವಿದರಿಂದ ಶ್ರೀ ದಿವಾಕರ ಹೆಗಡೆ ಅವರ ರಂಗಸಂಪಾದನೆಯಲ್ಲಿ ‘ಭರತಾಗಮನ’ ಪ್ರಸಂಗ ಬಹು ಅಚ್ಚುಕಟ್ಟಾಗಿ ಮೂಡಿಬಂತು. ಇದರಲ್ಲಿ ಭಾಗವತರಾಗಿ  ಕುಮಾರಿ  ಚಿತ್ಕಲಾ ತುಂಗ ಅವರು ಇಡೀ ಪ್ರದರ್ಶನವನ್ನು ಸಮರ್ಥವಾಗಿ ನಡೆಸಿಕೊಟ್ಟರು. ಪ್ರಸಂಗದಲ್ಲಿನ ಉತ್ತಮವಾದ ಮುಟ್ಟುಗಳನ್ನು ಸಮರ್ಥವಾಗಿ ಹಾಡಿ ವಿಶಿಷ್ಟತೆಯನ್ನು ಮೆರೆದರು. ಮದ್ದಲೆಯಲ್ಲಿ ಚಿನ್ಮಯ್ ಅಂಬಾರಗೋಡ್ಲು ಹಾಗೂ ಚಂಡೆಯಲ್ಲಿ ಮನೋಜ್ ಆಚಾರ್ಯರು ಸಹಕರಿಸಿದರು.  ಈ ಪ್ರಸಂಗದಲ್ಲಿ ದಶರಥನಾಗಿ ಅಶ್ವಿನ್ ಹಾಗೂ   ಗುಹನಾಗಿ   ರಜತ್ ಭಾವುಕ ಅಭಿನಯವನ್ನು ನೀಡಿದರು.   ಭರತನಾಗಿ ಕುಮಾರಿ ಪಂಚಮಿ,   ರಾಮನಾಗಿ ವೈಷ್ಣವಿಯು ತಮ್ಮ ನರ್ತನ, ಅಭಿನಯಗಳಿಂದ ನೆರದಿದ್ದ  ಪ್ರೇಕ್ಷಕರನ್ನು ರಂಜಿಸಿದರು. ಶತ್ರುಘ್ನನಾಗಿ  ಸೃಜನ್ ,  ಲಕ್ಷ್ಮಣನಾಗಿ ಭಾರ್ಗವಿ  ಅಭಿನಯಿಸಿದರು. ಪ್ರಸಂಗದ ಕೇಂದ್ರ ದೃಶ್ಯವಾದ ಭರತ ಹಾಗೂ ರಾಮರ ಸಂವಾದವೂ ಭಾವಪೂರ್ಣವಾಗಿತ್ತು. ಇಡೀ  ಮಕ್ಕಳ ಪ್ರದರ್ಶನದಲ್ಲಿ ಗುರು ತುಂಗರ ಶ್ರಮ, ಕಲಿಸುವ ಶಕ್ತಿಯ ಪಾರಮ್ಯವು  ಎದ್ದು ಕಾಣುತ್ತಿತ್ತು. ಇಂತಹ ಭಾವ ಪ್ರಧಾನವಾದ ಪ್ರಸಂಗವನ್ನು ಮಕ್ಕಳಿಂದ ಪ್ರದರ್ಶನವನ್ನು ಮಾಡಿಸಿ, ಅದಕ್ಕೆ ಅಣಿಗೊಳಿಸಿರುವುದನ್ನು ಮೆಚ್ಚಬೇಕು.  ಸಭಾ ಕಾರ್ಯಕ್ರಮದ ನಂತರ ಯಕ್ಷ ಸಿಂಚನ ತಂಡದಿಂದ ’ಭೃಗು ಶಾಪ’ ಪ್ರಸಂಗದ ಪ್ರದರ್ಶನವಾಯಿತು.  ಈಗಾಗಲೇ ತಾಳಮದ್ದಲೆಯಲ್ಲಿ ಜನಪ್ರಿಯವಾದ  ಈ ಆಖ್ಯಾನವನ್ನು    ಆಟದಲ್ಲಿ  ಪ್ರದರ್ಶಿಸುವುದು  ತೀರಾ ಅಪರೂಪ.   ಇಂತಹ ಅಪರೂಪದ ಪ್ರಸಂಗವನ್ನು  ಪ್ರದರ್ಶನಕ್ಕೆ ಮನಸ್ಸು ಮಾಡಿರುವುದು  ಮೆಚ್ಚುವ  ವಿಚಾರವಾಗಿದೆ. ಜೊತೆಗೆ ಈ ಪ್ರಸಂಗದ ಪ್ರಸಂಗಕರ್ತರಾದ  ಶ್ರೀಧರ ಡಿಎಸ್ ಎದುರಿನಲ್ಲಿ  ಈ ಪ್ರಸಂಗವನ್ನು  ಪ್ರದರ್ಶಿಸಿದ್ದು ಕೂಡ  ವಿಶಿಷ್ಟವೆನಿಸಿತು.
    ಈ ಪ್ರಸಂಗದ ಮೊದಲ ಭಾಗದಲ್ಲಿ ಸಾರ್ಥಕ ಸಾಧಕ ಪ್ರಶಸ್ತಿಯನ್ನು ಸ್ವೀಕರಿಸಿದ್ದ ಐನ್ಬೈಲ್ ಅವರು ಭಾಗವತಿಕೆಯನ್ನು ಮಾಡಿದರೆ ನಂತರ ಭಾಗವನ್ನು ಶ್ರೀ ಎ.ಪಿ. ಪಾಠಕ್ ಅವರು ನಿರ್ವಹಿಸಿದರು. ಮದ್ದಲೆಯಲ್ಲಿ ಚಿನ್ಮಯ್  ಹಾಗೂ ಚಂಡೆಯಲ್ಲಿ  ಮನೋಜ್ ಆಚಾರ್ಯ ಸಾಥ್ ನೀಡಿದರು.   ಈ ಪ್ರಸಂಗವು ಮೊದಲಿಗೆ ದೇವೇಂದ್ರನ ತೆರೆ ಒಡ್ಡೋಲಗದಿಂದ ಪ್ರಾರಂಭವಾಯಿತು. ರವಿ ಮಡೋಡಿ ಅವರು ಈ ಪಾತ್ರವನ್ನು ನಿರ್ವಹಿಸಿದರೆ, ದೇವ ಪಡೆಗಳಾಗಿ ಪುರುಜಿತ್ ಹಾಗೂ ಆದಿತ್ಯ ಅಭಿನಯಿಸಿದರು. ಬೃಹಸ್ಪತಿ ಪಾತ್ರವನ್ನು ಮಾಡಿದ  ಶ್ರೀ ಅಜಿತ್ ಕಾರಂತರು    ರಕ್ಕಸರ ಉಪಟಳ,   ಅದಕ್ಕೆ  ಮಾಡಬೇಕಾದಂತಹ ಸೂಚನೆಗಳನ್ನು  ಬಿಡಿಬಿಡಿಯಾಗಿ ತಿಳಿಸಿದರು. ಇಲ್ಲಿ  ಬೃಹಸ್ಪತಿ ಹಾಗೂ ದೇವೇಂದ್ರನ  ಸಂಭಾಷಣೆ ಗಾಂಭೀರ್ಯಪೂರ್ಣವಾಗಿತ್ತು.   ಮುಂದೆ ಶೋಣೀತಾಪುರದ ದೊರೆ  ತಮಾಸುರನ ಪಾತ್ರವನ್ನು ಶಶಾಂಕ ಕಾಶಿಯವರು  ನಿರ್ವಹಿಸಿದರು. ಉತ್ತಮವಾದ ಅಭಿನಯ ಹಾಗೂ ನರ್ತನದಿಂದ ಎಲ್ಲರನ್ನು ರಂಜಿಸಿದರು.  ಈ ಪಾತ್ರದ ಜೊತೆಗೆ ಬಣ್ಣದ ವೇಷದಲ್ಲಿ ಧೂಮಾಸುರನನ್ನು ಗುರುರಾಜ ಭಟ್ ಅಂಪಾರು ನಿರ್ವಹಿಸಿದರು. ದೇವ ದೂತ ಹಾಗೂ ವಟುವಿನ ಪಾತ್ರದಲ್ಲಿ ಕೃಷ್ಣಶಾಸ್ತ್ರಿ ಅವರು ತಿಳಿಹಾಸ್ಯದ ಮೂಲಕವಾಗಿ ರಂಜಿಸಿದರು.  ಕಥೆಯ ಮುಖ್ಯ ಪಾತ್ರಗಳಾದ ಭೃಗುವಾಗಿ ಆದಿತ್ಯ ಹೊಳ್ಳ ,ವಿಷ್ಣುವಾಗಿ ಶಶಿರಾಜ ಸೋಮಯಾಜಿ,  ಖ್ಯಾತಿದೇವಿಯಾಗಿ ಮನೋಜ್ ಭಟ್ ಅಭಿನಯಿಸಿದರು.ತಮಾಸುರ ಹಾಗೂ ಖ್ಯಾತಿ , ದೇವೇಂದ್ರ ಹಾಗೂ ಖ್ಯಾತಿ, ಭೃಗು ಹಾಗೂ ವಿಷ್ಣುವಿನ ಸಂವಾದದ ಸನ್ನಿವೇಶವು ಪ್ರೇಕ್ಷಕರನ್ನು ರಂಜಿಸಿದವು. ಇದೆಲ್ಲದಕ್ಕೂ ಪಾಠಕ್ ಅವರ ಭಾಗವತಿಕೆ ಬಹಳ ಆಕರ್ಷಕವಾಗಿತ್ತು. ಪದ್ಯವನ್ನ ಬಿಡಿಸಿ ಹೇಳುವಲ್ಲಿ ಹಾಗೂ  ಸಮರ್ಥವಾಗಿ ರಂಗಸ್ಥಳದಲ್ಲಿ ಪಾತ್ರವನ್ನು ದುಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೃಷ್ಣಮೂರ್ತಿ ತುಂಗರು ಈ ಪ್ರದರ್ಶನದ  ನಿರ್ದೇಶನವನ್ನು  ಮಾಡಿದ್ದಾರೆ. ಇದು ತಂಡದ ಮೊದಲ ಪ್ರಯೋಗವಾಗಿದ್ದರಿಂದ ಇನ್ನಷ್ಟು ಸುಧಾರಣೆಯನ್ನು ಮಾಡಿಕೊಳ್ಳುವ ಅವಕಾಶ ಖಂಡಿತವಾಗಿಯೂ ಇದೆ. ಹೀಗೆ ಹವ್ಯಾಸ ಬಳಗವೊಂದು ಹೊಸ ಪ್ರಸಂಗವನ್ನು  ರಂಗಕ್ಕೆ ತಂದಿದ್ದು  ಅಭಿನಂದನೆಗೆ ಅರ್ಹವಾಗಿದೆ.
    -ಡಾ. ಆನಂದರಾಮ ಉಪಾಧ್ಯ
    ಕನ್ನಡ ವಿದ್ವಾಂಸ, ವಿಮರ್ಶಕ, ಪ್ರಬಂಧ ಬರಹಗಾರ ರಾಗಿರುವ ಇವರು ಕನ್ನಡದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಮೊದಲ ಪಿಎಚ್‌ಡಿ ಪದವಿ ಪಡೆದವರಾಗಿದ್ದಾರೆ. ಯಕ್ಷ ಚಿಂತನೆ, ಯಕ್ಷಗಾನ ಮಹಾಭಾರತ ಪ್ರಸಂಗಗಳು, ಯಕ್ಷ ದರ್ಶನ, ಯಕ್ಷಗಾನ ರಾಮಾಯಣ ಪ್ರಸಂಗಗಳು, ಯಕ್ಷ ಪಥ, ಸಮಾಹಿತ  ಮುಂತಾದ ಕೃತಿಗಳನ್ನು ರಚಿಸಿರುವ ಇವರ ಸಾಹಿತ್ಯ ಸೇವೆಗೆ ಆರ್ಯಭಟ್ಟ ಪ್ರಶಸ್ತಿ, ನರಸಿಂಹ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ (ಕರ್ನಾಟಕ ಸರ್ಕಾರ), ಕೆರೆಮನೆ ಶಂಬು ಹೆಗಡೆ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ.

    Share. Facebook Twitter Pinterest LinkedIn Tumblr WhatsApp Email
    Previous Articleಪರಿಚಯ ಲೇಖನ | “ವೈಕಲ್ಯ ಮೆಟ್ಟಿನಿಂತ ಯಕ್ಷ ಮದ್ದಳೆ ವಾದಕ” – ವಿಜಯ ನಾಯ್ಕ (ಕಲಾವಿದನ ಕಂಬನಿಗೆ ಕಾರುಣ್ಯವಿರಲಿ)
    Next Article ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಕಾಡುವ ಕಿರಂ ಆಹೋರಾತ್ರಿ ಸಾಹಿತ್ಯ ಸಂಭ್ರಮ
    roovari

    Add Comment Cancel Reply


    Related Posts

    ನಾಟಕ ವಿಮರ್ಶೆ | ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ – ‘ಶರ್ಮಿಷ್ಠೆ’

    May 7, 2025

    ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ತಾಳಮದ್ದಳೆ

    May 7, 2025

    ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಪಾರ್ತಿಸುಬ್ಬ ವಿರಚಿತ ‘ಪಂಚವಟಿ’ ಯಕ್ಷಗಾನ ತಾಳಮದ್ದಳೆ

    May 7, 2025

    ಕನ್ನರ್ಪಾಡಿಯಲ್ಲಿ ನೂತನ ‘ಶ್ರೀ ಜಯದುರ್ಗಾ ಪರಮೇಶ್ವರಿ ಯಕ್ಷಗಾನ ಕಲಾಮಂಡಳಿ’ ಉದ್ಘಾಟನೆ

    May 6, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.