ವಿರಾಜಪೇಟೆ : ಸೈಂಟ್ ಆನ್ಸ್ ಪದವಿ ಪೂರ್ವ ಮತ್ತು ಪದವಿ ಪೂರ್ವ ಕಾಲೇಜು ಕನ್ನಡ ಭಾಷಾ ವಿಭಾಗ ಮತ್ತು ಕನ್ನಡ ವಿದ್ಯಾರ್ಥಿ ಬಳಗದ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸಂಭ್ರಮ 50 ಪ್ರಯುಕ್ತ ಆಯೋಜಿತ ‘ನುಡಿ ನೃತ್ಯ ಸಂಭ್ರಮ-2023’ ಕಾರ್ಯಕ್ರಮ ದಿನಾಂಕ 25-11-2023ರಂದು ಕಾಲೇಜಿನ ಆವರಣದಲ್ಲಿ ನಡೆಯಿತು.
ಈ ಕಾರ್ಯಕ್ರಮಕ್ಕೆ ಗೋಣಿಕೊಪ್ಪಲು ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಜಿ. ಕಾವೇರಿಯಪ್ಪ ಇವರು ಚಾಲನೆ ನೀಡಿ ಮಾತನಾಡಿ “ಪ್ರಾಚೀನ ಭಾಷೆಯಾಗಿರುವ ಕನ್ನಡವನ್ನು ಹಲವಾರು ಸಾಹಿತಿಗಳು, ಸಂತರು ಬೆಳೆಸಿದ್ದಾರೆ. ಧೀಮಂತ ಭಾಷೆಯಾಗಿರುವ ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಸ್ವಾಭಿಮಾನ ಮತ್ತು ಅಭಿಮಾನದಿಂದ ಬೆಳೆಸುವಂತಾಗಬೇಕು. ಆದರೆ, ಇಂದು ನಾವು ಪರಭಾಷೆಯ ವ್ಯಾಮೋಹವನ್ನು ಬೆಳೆಸಿಕೊಂಡು ತಾಯಿನೆಲದ ಭಾಷೆಯನ್ನು ಮರೆಯಲಾರಂಭಿಸಿದ್ದೇವೆ. ಕನ್ನಡ ನುಡಿ, ನೆಲ, ಜಲವನ್ನು ಎಂದಿಗೂ ಮರೆಯದೆ ಸ್ವಾಭಿಮಾನ, ಅಭಿಮಾನದಿಂದ ಕನ್ನಡವನ್ನು ಬೆಳೆಸಿ ಉಳಿಸಬೇಕು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಎಂ.ಬಿ. ಕಾವೇರಿಯಪ್ಪ ಮತ್ತು ಕಸಾಪ ತಾಲೂಕು ಅಧ್ಯಕ್ಷ ಡಿ.ರಾಜೇಶ್ ಪದ್ಮನಾಭ ಹಾಗೂ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅರ್ಜುನ್ ಮೌರ್ಯ ಅವರನ್ನು ಸನ್ಮಾನಿಸಲಾಯಿತು.