ಮೂಡುಬಿದಿರೆ : ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಕನ್ನಡ ಸಂಘ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮೂಡುಬಿದಿರೆ ಘಟಕದ ಸಹಯೋಗದಲ್ಲಿ ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ದಿನಾಂಕ 17 ಅಕ್ಟೋಬರ್ 2025ರಂದು ‘ನುಡಿನಮನ’ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಡಾ. ಎಸ್.ಎಲ್. ಭೈರಪ್ಪರವರ – ವ್ಯಕ್ತಿತ್ವ ಮತ್ತು ಬರಹಗಳಲ್ಲಿನ ಜೀವನ ಮೌಲ್ಯಗಳ ಕುರಿತು ಮಾತನಾಡಿದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ್ ಭಟ್ ಇವರು “ಕನ್ನಡ ಸಾರಸ್ವತ ಲೋಕದಲ್ಲಿ ಅತ್ಯಂತ ಹೆಚ್ಚು ರಾಯಧನ (ರಾಯಲ್ಟಿ) ಪಡೆಯುತ್ತಿದ್ದವರು ಎಸ್.ಎಲ್. ಭೈರಪ್ಪನವರು. ಸಾಹಿತ್ಯದಿಂದ ಪಡೆದ ಹಣವನ್ನು ಸಂಪೂರ್ಣವಾಗಿ ಸಮಾಜಕ್ಕೆ ಹಿಂದಿರುಗಿಸಿದ ಕೀರ್ತಿಯು ಭೈರಪ್ಪರವರಿಗೆ ಸಲ್ಲುತ್ತದೆ. ಎಸ್.ಎಲ್. ಭೈರಪ್ಪನವರು ಬಾಲ್ಯದಿಂದಲೇ ಕಷ್ಟದ ಬದುಕನ್ನು ಬಾಳಿದವರು. ಇದರಿಂದಾಗಿ ಅವರ ಸಾಹಿತ್ಯದಲ್ಲಿ ಅನುಭವ ಶ್ರೀಮಂತಿಕೆ ಇದೆ. ಲೇಖಕನಿಗೆ ಅನುಭವ ಮುಖ್ಯ. ಅನುಭವ ಮತ್ತು ಕಲ್ಪನೆಯನ್ನು ಸಾಹಿತ್ಯದಲ್ಲಿ ಬೆರೆಸಿದಾಗ ಮಾತ್ರ ಸಾಹಿತ್ಯ ಓದುಗನಿಗೆ ಕಾಣುತ್ತದೆ. ಓದುಗನು ಪಾತ್ರವನ್ನು ತನ್ನಲ್ಲಿ ಕಂಡಾಗ ಮಾತ್ರ ಅದು ಲೇಖಕ ಯಶಸ್ವಿಯಾಗುತ್ತಾನೆ ಎಂದರು. ಭೈರಪ್ಪನವರು ಎಂದೂ ಪ್ರಚಾರವನ್ನು ನಿರೀಕ್ಷಿಸದ ವ್ಯಕ್ತಿ. ಅವರು ಸಮಾಜದಿಂದ ಪಡೆದುಕೊಂದದ್ದನ್ನು ಸಮಾಜಕ್ಕೆ ಹಿಂತಿರುಗಿಸಬೇಕು ಎಂಬ ದೃಢ ನಿಲುವನ್ನು ಹೊಂದಿದ್ದರು. ತಾನು ಸತ್ತಾಗ ತನ್ನ ಖಾತೆಯಲ್ಲಿ ಯಾವುದೇ ಹಣ ಉಳಿದಿರಬಾರದು. ಸಮಾಜ ತನಗೆ ನೀಡಿದ ಕೊಡುಗೆಯನ್ನು ಸಮಾಜಕ್ಕೆ ಸೇರಬೇಕು ಎನ್ನುತ್ತಿದ್ದರು. ಭೈರಪ್ಪ ಒಬ್ಬ ಸಾಹಿತಿ, ತತ್ವಜ್ಞಾನಿ, ಪಂಡಿತರಾಗಿ, ಮೌಲ್ಯಪ್ರಜ್ಞೆ, ಕಾಳಜಿ, ಸ್ನೇಹ, ವಾತ್ಸಲ್ಯ ಮುಂತಾದ ಮೌಲ್ಯಗಳಿಂದ ಶ್ರೇಷ್ಠತ್ವವನ್ನು ಹೊಂದಿದ್ದರು. ಅವರ ತಂತು, ಪರ್ವ, ವಂಶವೃಕ್ಷ, ತಬ್ಬಲಿ ನೀನಾದೆ ಕಾದಂಬರಿಗಳಲ್ಲಿ ದೇಶ ಪ್ರೇಮ, ಪರಿಸರ ಪ್ರೇಮ, ಪ್ರಾಣಿ ದಯೆ, ಸ್ನೇಹ, ಕಾಳಜಿ, ಜೀವನಾನುಭವ ಅಡಕವಾಗಿದ್ದವು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷರಾದ ವೇಣುಗೋಪಾಲ್ ಶೆಟ್ಟಿ ಕೆ., ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಜೀವನ್ ರಾಮ್ ಸುಳ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶ್ರೀಲಕ್ಷ್ಮಿ ನಿರೂಪಿಸಿ, ಪ್ರನುಷ ವಂದಿಸಿದರು.