ಒಡಿಯೂರು : ಶ್ರೀ ಗುರುದೇವಾನಂದ ಸ್ವಾಮೀಜಿ ಇವರ ಮಾರ್ಗದರ್ಶನದಲ್ಲಿ ದಿನಾಂಕ 27 ಮತ್ತು 28 ಜನವರಿ 2025ರಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಡೆಯುವ ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ – ಬ್ರಹ್ಮಕಲಶೋತ್ಸವ ಅಂಗವಾಗಿ ಒಡಿಯೂರು ಬೀದಿ ನಾಟಕ ಸ್ಪರ್ಧೆ ಆಯೋಜಿಸಲಾಗಿದೆ.
ಒಡಿಯೂರು ರಥೋತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ವಂದೇ ಮಾತರಂ ಹಾಡಿಗೆ 150 ವರ್ಷ ತುಂಬಿರುವ ಸವಿನೆನಪಿಗೆ ದಿನಾಂಕ 27 ಜನವರಿ 2025ರಂದು ‘ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನವು ನಡೆಯಲಿದೆ. ಇದು ಶ್ರೀ ಸಂಸ್ಥಾನದಲ್ಲಿ ನಡೆಯುವ 26ನೇ ಸಮ್ಮೇಳನ ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ವ್ಯಾಪ್ತಿಯಲ್ಲಿ ಒಡಿಯೂರು ಬೀದಿ ನಾಟಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ದಿನಾಂಕ 19 ಮತ್ತು 20 ಜನವರಿ 2025ರಂದು ನಡೆಯುವ ಸ್ಪರ್ಧೆಯಲ್ಲಿ ವಂದೇ ಮಾತರಂ ವಿಷಯದ ಬಗ್ಗೆ ಬೀದಿ ನಾಟಕ ಪ್ರದರ್ಶಿಸಬೇಕು. ನಾಟಕದ ಸಮಯ 10+2 ನಿಮಿಷಗಳು, ಕನ್ನಡ ಅಥವಾ ತುಳು ಭಾಷೆಯಲ್ಲಿ ಬೀದಿ ನಾಟಕ ಮಾಡಬಹುದು. ಮುಕ್ತ ವಿಭಾಗದ ಸ್ಪರ್ಧೆಯಾಗಿದ್ದು ಶಾಲೆ, ಕಾಲೇಜು, ಮಂಡಳಿ-ಬಳಗ-ಸಂಘಗಳ ಹೆಸರಿನ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ತಂಡಗಳು ಭಾಗವಹಿಸಬಹುದು. ನಟನೆ ಹಾಗೂ ಸಂಗೀತ ಸೇರಿ ತಂಡದಲ್ಲಿ ಕನಿಷ್ಠ 10 ಸದಸ್ಯರು ಹಾಗೂ ಗರಿಷ್ಠ 15 ಸದಸ್ಯರಿಗೆ ಅವಕಾಶ. ಯಾವುದೇ ಸಂಗೀತ ಪರಿಕರ, ರಂಗ ಪರಿಕರ, ವೇಷ ಭೂಷಣಗಳಿಗೆ ಅವಕಾಶವಿದೆ. ಯಾವುದೇ ಜಾತಿ, ಧರ್ಮ, ಪಂಗಡ, ಲಿಂಗ ನಿಂದನೆಗಳಿಗೆ ಅವಕಾಶವಿಲ್ಲ. ಅಸಭ್ಯ ವರ್ತನೆ, ಭಾಷೆ ಬಳಕೆಯಾದಲ್ಲಿ ಅಂತಹ ತಂಡವನ್ನು ಅನರ್ಹಗೊಳಿಸಲಾಗುವುದು.
ಮೊದಲ ಸುತ್ತಿನಲ್ಲಿ 2 ಅಥವಾ 3 ಕಡೆಗಳಲ್ಲಿ ಸ್ಪರ್ಧೆ ನಡೆಸಲಾಗುವುದು. ಅಂತಿಮ ಸುತ್ತು ಒಡಿಯೂರಿನಲ್ಲಿ ನಡೆಯಲಿದ್ದು, ಆಯ್ಕೆಯಾದ ತಂಡಗಳಿಗೆ ಪೂರ್ಣ ಸ್ಪರ್ಧಾ ಮಾಹಿತಿ ನೀಡಲಾಗುವುದು. ಪ್ರಥಮ ರೂ.25,000/-, ದ್ವಿತೀಯ ರೂ.15,000/-, ತೃತೀಯ ರೂ.10,000/- ಬಹುಮಾನ ಹಾಗೂ ಶಾಶ್ವತ ಫಲಕ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗೆ ತಲಾ ರೂ.2,000/- ಗೌರವಧನ ನೀಡಲಾಗುವುದು. ಆಸಕ್ತ ತಂಡಗಳು navaneeth.shetty@ gmail.com ಅಥವಾ ದೂ. 9448123061 ಸಂಖ್ಯೆಯ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

