ಮಂಗಳೂರು : ಮಂಗಳೂರಿನ ಉರ್ವದಲ್ಲಿರುವ ನಾಟ್ಯಾರಾಧನಾ ಕಲಾ ಕೇಂದ್ರ ಇದರ ತ್ರಿಂಶೋತ್ಸವದ ಅಂಗವಾಗಿ ನಡೆಯುವ ಸರಣಿ ನೃತ್ಯ ಕಾರ್ಯಕ್ರಮ ‘ನೃತ್ಯಾಮೃತ -8’ ಅಂಗವಾಗಿ ನಾಟ್ಯಾರಾಧನಾ ಕಲಾ ಕೇಂದ್ರದ ಪ್ರೌಢ ಹಂತದ ನೃತ್ಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಂದ “ಪದ್ಮ ಪಲ್ಲವ” ವೈವಿಧ್ಯಮಯ ಭರತನಾಟ್ಯ ಕಾರ್ಯಕ್ರಮವು 18 ಆಗಸ್ಟ್ 2024ರ ಭಾನುವಾರದಂದು ಸಂಜೆ ಘಂಟೆ 4.00 ರಿಂದ 7.30ರವರೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಭವನ ಪುರಭವನದಲ್ಲಿ ಜರುಗಲಿದೆ.
ತ್ರಿಂಶೋತ್ಸವದ ಸಹ ಸಮಿತಿಗಳ ಸಹಕಾರದೊಂದಿಗೆ ನಡೆಯುವ ಈ ಕಾರ್ಯಕ್ರಮವನ್ನು ಮುಲ್ಕಿ ಸೀಮೆಯ ಅರಸರಾದ ಶ್ರೀ ಎಂ. ದುಗ್ಗಣ್ಣ ಸಾವಂತರು ಉದ್ಘಾಟಿಸಲಿದ್ದು, ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದಾರೆ. ಯು.ಎ.ಇ ಇಲ್ಲಿನ ಯಕ್ಷಗಾನ ಅಭ್ಯಾಸ ಕೇಂದ್ರದ ಯಕ್ಷ ಗುರುಗಳಾದ ಶ್ರೀ ಡಿ. ಶೇಖರ ಶೆಟ್ಟಿಗಾರ್, ದುಬೈ ಬ್ರಾಹ್ಮಣ ಸಂಘದ ಕಾರ್ಯದರ್ಶಿಗಳಾದ ಶ್ರೀ ಕೃಷ್ಣಪ್ರಸಾದ್ ರಾವ್, ಶಾರದಾ ನಾಟ್ಯಾಲಯ ಹೊಸಬೆಟ್ಟು ಇದರ ನಿರ್ದೇಶಕರಾಗಿರುವ ವಿದುಷಿ ಭಾರತೀ ಸುರೇಶ್, ಬಜ್ಪೆ ಅಂಚೆ ಕಚೇರಿಯ ಎಲ್.ಎಸ್.ಜಿ.ಪಿ.ಎ ಶ್ರೀಮತಿ ಶಶಿಕಲಾ ನಿತ್ಯಾನಂದ ಶೆಟ್ಟಿಗಾರ್ ಹಾಗೂ ನಾಟ್ಯಾರಾಧನಾ ಕಲಾ ಕೇಂದ್ರದ ಹಿರಿಯ ವಿದ್ಯಾರ್ಥಿನಿ ಹಾಗೂ ತಂತ್ರಜ್ಞೆ ವಿದುಷಿ ಶ್ರೇಯಾ ಎಸ್. ಶೆಟ್ಟಿ ಮುಖ್ಯ ಅಭ್ಯಾಗತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಉದ್ಘಾಟನೆಯ ಬಳಿಕ ವಿದುಷಿ ಸುಮಂಗಲಾ ರತ್ನಾಕರ ರಾವ್ ಇವರ ನಿರ್ದೇಶನದಲ್ಲಿ ನೃತ್ಯ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಪ್ರವೇಶಾವಕಾಶವನ್ನು ಕಲ್ಪಿಸಲಾಗಿದೆ.

