ಮಕ್ಕಳೇ ಮನೆಗೆ ನಂದಾದೀಪ ಎಲ್ಲರ ಬಾಳಿಗೂ ಮಕ್ಕಳೇ ನಮ್ಮೆಲ್ಲರ ಬದುಕಿನ ಜೀವದ ಜೀವಾಳ. ಕೂಸು ಇದ್ದ ಮನೆಗೆ ಬೀಸಣಿಕೆ ಯಾತಾಕ? ಕೂಸು ಕಂದಯ್ಯ ಒಳ ಹೊರಗೂ ಆಡಿದರ ಬೀಸಣಕಿ ಗಾಳಿ ಸುಳಿದಾಂವ. ಎಂದು ನಮ್ಮ ಜನಪದರ ಹಾಡಿನಲ್ಲೂ ಮಕ್ಕಳ ಹಿರಿಮೆ ಗರಿಮೆಯ ಬಗ್ಗೆ ವ್ಯಕ್ತವಾಗಿದೆ. ಇಂಥ ಮಕ್ಕಳ ಮನಸ್ಸನ್ನು ಅರಿತು ಬೆರೆತು ಅವರ ಬುದ್ಧಿಮಟ್ಟಕ್ಕೆ ಇಳಿದು ಮನಮುಟ್ಟುವಂತೆ ಎದೆತಟ್ಟುವಂತೆ, ಅವರ ಅಭಿರುಚಿಗೆ ತಕ್ಕಂತೆ ಕವಿತೆ ಬರೆಯುವುದೆಂದರೆ ಸಾಮಾನ್ಯವಾದುದಲ್ಲ, ಅದೊಂದು ಮಹತ್ಕಾರ್ಯವೇ ಸರಿ. ಆ ನಿಟ್ಟಿನಲ್ಲಿ ನನ್ನ ನೆಚ್ಚಿನ ಹಿರಿಯ ಕವಿಗಳಾದ ಶ್ರೀಯುತ ನೀ. ಶ್ರೀಶೈಲ ಅವರು ತುಂಬಾ ಚೆನ್ನಾಗಿ ಪಳಗಿದ್ದಾರೆ. ಅದಕ್ಕೆ ಸಾಕ್ಷಿ ಅನ್ನುವಂತಿದೆ ಅವರ ಇತ್ತೀಚಿಗೆ ಲೋಕಾರ್ಪಣೆಗೊಂಡ ಕೃತಿಯಾದ “ಪ್ಯಾಂಟೂ ಇಲ್ಲ.. ಚಡ್ಡಿಯು ಇಲ್ಲ..” ಎಂಬ ಶಿಶುಗೀತೆಗಳ, ಮಕ್ಕಳ ಕವನಸಂಕಲನವು ಸಾಕ್ಷಿಯಾಗಿದೆ. ಇದೊಂದು ಅತ್ಯದ್ಭುತವಾದ ಕೃತಿ ಆಗಿದ್ದು, ಓದುಗರನ್ನು ಸರಾಗವಾಗಿ, ಸರಳವಾಗಿ ಓದಿಸಿಕೊಂಡು ಹೋಗುವ ಕೃತಿಯಾಗಿದೆ. ಇದರಲ್ಲಿ ಒಟ್ಟು 23 ಕವಿತೆಗಳಿವೆ. ಅತ್ಯಂತ ಸೊಗಸಾದ ಸುಲಾಲಿತ್ಯವಾದ ಈ ಕವಿತೆಗಳು ಕನ್ನಡ ನಾಡಿನ ಮಕ್ಕಳ ಹಾಗೂ ಹಿರಿಯ ಕಿರಿಯ ಕವಿವರ್ಯರ ಮನಸ್ಸನ್ನು ಗೆಲ್ಲುವಲ್ಲಿ ಸಂಶಯವಿಲ್ಲ. ಈ ಕೃತಿಗೆ ಅತ್ಯಂತ ಮನಮೋಹಕ ಹಾಗೂ ಚಿತ್ತಾಕರ್ಷಕ ಮುಖಪುಟ ವಿನ್ಯಾಸ ಹಾಗೂ ಪ್ರತಿ ಒಂದು ಪದ್ಯಗಳಿಗೂ ಅರ್ಥಪೂರ್ಣವಾದ ಆಕರ್ಷಕವಾದ ರೇಖಾಚಿತ್ರಗಳನ್ನು ನನ್ನ ಮಿತ್ರರಾದ ಶ್ರೀಯುತ ಸಂತೋಷ್ ಸಸಿಹಿತ್ಲು ಅವರು ಒದಗಿಸಿ ಕೊಟ್ಟಿದ್ದು ತುಂಬಾ ವಿಶೇಷವಾಗಿದೆ. ಇಂತಹ ಒಂದು ಸುಂದರವಾದ ಕೃತಿಗೆ ನಮ್ಮ ನಾಡಿನ ಹಿರಿಯ ಕವಿ ಸಾಹಿತಿಗಳಾದ ಶ್ರೀಯುತ ತಮ್ಮಣ್ಣ ಬೀಗಾರ್ ಅವರು ಹೊನ್ನುಡಿಯ ಚೆನ್ನುಡಿಗೆ ಮುನ್ನುಡಿಯ ಬರೆದು ನಾಂದಿ ಹಾಡಿ, ಶುಭ ಹಾರೈಸಿದ್ದಾರೆ. ಹಾಗೆಯೇ ಮತ್ತೋರ್ವ ಹಿರಿಯ ಸಾಹಿತಿಗಳಾದ ಶ್ರೀಯುತ ರಾಜಶೇಖರ್ ಕುಕ್ಕುಂದಾ ಅವರು ಈ ಕೃತಿಗೆ ಬೆನ್ನುಡಿ ಬರೆದು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಮಕ್ಕಳ ಸಾಹಿತ್ಯ ಲೋಕದಲ್ಲಿ ಈ ಕೃತಿಯು ಹೊಸ ಛಾಪು ಮೂಡಿಸಿ, ಹೊಸ ಭಾಷ್ಯ ಬರೆಯುವ ಎಲ್ಲ ಲಕ್ಷಣಗಳೂ ಇವೆ. “ಪ್ಯಾಂಟೂ ಇಲ್ಲ.. ಚಡ್ಡಿಯು ಇಲ್ಲ..” ಈ ಕೃತಿಯಲ್ಲಿ ಒಟ್ಟು 23 ಪದ್ಯಗಳಿವೆ. ಪ್ರತಿಯೊಂದು ಪದ್ಯವು ರಸಭರಿತವಾಗಿ ಅರ್ಥಗರ್ಭಿತವಾಗಿ ಇವೆ. ಪದ್ಯಕ್ಕೆ ತಕ್ಕಂತೆ ಅರ್ಥಪೂರ್ಣವಾದ ಒಳ ಚಿತ್ರಗಳಿವೆ. ಇದರಲ್ಲಿ ಬಹುಪಾಲು ಪದ್ಯಗಳು ನೀತಿ ಕಥೆಯನ್ನು ಬಿಂಬಿಸುವ ಕಥನ ಕವನಗಳಾಗಿವೆ. ಪದ್ಯಗಳಂತೆ ಒಳಗಿರುವ ಒಳ ಚಿತ್ರಗಳು ಸಹ ಕಿರಿಯರಿಂದ ಹಿಡಿದು ಹಿರಿಯರವರೆಗೂ ಎಲ್ಲರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗುವವು ಎಂಬ ಆಶಯವಿದೆ.
“ಬುದ್ಧಿಹೀನ ನಾಯಿ” ಎಂಬ ಪದ್ಯದಿಂದ ಆರಂಭವಾಗುವ ಈ ಕೃತಿಯು ಪ್ರತಿಯೊಂದು ಪದ್ಯದಲ್ಲಿ ಲೇಖಕರು ಬಳಸಿದ ಸರಳ ಪದಗಳು, ಪ್ರಾಸ ಪದಗಳು, ಲಯಬದ್ಧತೆ ಎಲ್ಲಾ ಕವನಗಳು ಗಮಕ ಕವನಗಳಂತೆ ಭಾಸವಾಗುವವು. ಈ ಪದ್ಯದಲ್ಲಿ ನದಿಯ ನೀರಿನಲ್ಲಿ ನಾಯಿಯು ತನ್ನ ಬಿಂಬವನ್ನು ಕಂಡು ತಾನೇ ಮೂರ್ಖನಾದ ಪರಿ ಮತ್ತು ಅದರ ಪೆದ್ದುತನವಿದ್ದರೆ, “ಸೋತ ಸಿಂಹ” ಪದ್ಯದಲ್ಲಿ ಸಿಂಹ ನೊಣಗಳ ಶಕ್ತಿಯ ಬಲಾಬಲ ಪ್ರದರ್ಶನವಿದೆ. ಟೋಪಿ ಮಾರುವ ಹನುಮನ ಬುದ್ಧಿಶಕ್ತಿಯು “ಹನುಮನ ಉಪಾಯ” ಪದ್ಯದಲ್ಲಿ ಸೊಗಸಾಗಿ ಮೂಡಿಬಂದಿದೆ. “ಮೂರ್ಖ ಮಂಗ” ಎಂಬ ಪದ್ಯವು ನಾವು ಪ್ರೈಮರಿಯಲ್ಲಿದ್ದಾಗ ಹಿಂದಿ ಪುಸ್ತಕದಲ್ಲಿನ “ಮೂರ್ಖ್ ಬಂದರ್” ಎಂಬ ಪಾಠವನ್ನು ನೆನಪಿಸಿತು. ತೆನಾಲಿ ರಾಮನ ಬುದ್ಧಿಮತ್ತೆಯನ್ನು “ಜಾಣ ತೆನಾಲಿ” ಎಂಬ ಪದ್ಯದಲ್ಲಿ ಅತ್ಯಂತ ಮಧುರವಾಗಿ ವ್ಯಕ್ತಪಡಿಸಿದ್ದಾರೆ. ಮುಂದುವರೆದು ಬೀರಬಲ್ಲನ ಬುದ್ಧಿವಂತಿಕೆಯನ್ನು “ಬೀರಬಲ್ಲನ ಕಿಚಡಿ” ಎಂಬ ಪದ್ಯದಲ್ಲಿ ತುಂಬಾ ರಸಭರಿತವಾಗಿ ಆಸಕ್ತಿದಾಯಕವಾಗಿ ಅಭಿವ್ಯಕ್ತ ಪಡಿಸಿದ್ದಾರೆ. “ಹಸಿರು ಕುದುರೆ”, “ಬಾನಗೀತೆ”, “ಪುಟ್ಟಿಯ ಆಸೆ” , “ಗುಬ್ಬಿಮರಿ” ಪದ್ಯಗಳು ಸಹಿತ ಗಮನ ಸೆಳೆಯುತ್ತವೆ. “ಇಲಿ ಮತ್ತು ಸಿಂಹ” ಕಥಾರೂಪದ ಪದ್ಯ ತುಂಬಾ ಸೊಗಸಾಗಿದೆ ಮತ್ತೆ ಮತ್ತೆ ಕುತೂಹಲ ಕೆರಳಿಸುವ ಪದ್ಯಗಳೆಂದರೆ “ಕೋತಿಮರಿಯ ಫಜೀತಿ”, “ಕಂದನ ಸ್ಪಂದನ”, “ನೀರ ಜೀವ”, “ಗಾಳಿಪಟ” ಹೀಗೆ ಒಂದಕ್ಕಿಂತ ಒಂದು ಬಲು ಸೊಗಸಾದ ಪದ್ಯಗಳಿವೆ. “ನೆರವಾಗುವ ನಾವು” ಎಂಬ ಪದ್ಯವು ಮನುಷ್ಯನ ವಾಸ್ತವ ಕುಹಕ ಬದುಕಿನ ಕನ್ನಡಿಯಾಗಿದೆ. “ನಮ್ಮೂರ್ ಕೆರೆ” , “ಮನುಜುಪಕಾರಿ”, “ಬಾರೋ ಮೋಡ..” ಎಂದು ಬೆಳ್ಳಿ ಮೋಡಗಳನ್ನು ಮಕ್ಕಳು ಧರೆಗೆ ಕರೆಯುವ ರೀತಿ ವಿಧಾನ ಮನಮುಟ್ಟುವಂತಿದೆ. ಈ ಕೃತಿಯಲ್ಲಿರುವ ಎಲ್ಲರ ಹೃದಯ ಗೆಲ್ಲುವ ಮತ್ತೊಂದು ಪದ್ಯ ಅಂದರೆ “ಅಮ್ಮನ ಸೆರಗು” ಅಮ್ಮನ ಸೆರಗಿನ ಮಹತ್ವ ಹಿರಿಮೆ ಗರಿಮೆಯನ್ನು ಎಲ್ಲರೂ ಮರೆಯುವಂತಿಲ್ಲ, ಅಮ್ಮನ ಜೊತೆಗೆ ಕಳೆದ ಬಾಲ್ಯದ ದಿನಗಳನ್ನು ಮತ್ತೆ ಮತ್ತೆ ನೆನಪಿಸುತ್ತದೆ.
ಈ ಪದ್ಯದಲ್ಲಿ ಮಕ್ಕಳು ಬೆಳೆದಂತೆಲ್ಲ ಅಣ್ಣ ತಮ್ಮಂದಿರು ಪರಸ್ಪರ ಹೋಲಿಕೆ ಮಾಡುವ ಗುಣಸ್ವಭಾವಗಳನ್ನು “ತುಂಟ ತಮ್ಮ” ಚನ್ನಾಗಿ ಚಿತ್ರೀಸಿದ್ದಾರೆ.
ಅಣ್ಣಗೆ ತರುವರು
ಹೊಸ ಹೊಸ ಬಟ್ಟೆ
ಉರಿಸುವರೆಲ್ಲರೂ ನನ್ನಯ ಹೊಟ್ಟೆ ||
ಪ್ಯಾಂಟೂ ಇಲ್ಲ
ಚಡ್ಡಿಯು ಇಲ್ಲ
ಆದರೂ ನಾನೇ ಸುಂದರನು…. ಎಂದು ಅಣ್ಣ ತಮ್ಮಂದಿರಲ್ಲಿ ನಡೆದ ಸಂಭಾಷಣೆಗಳನ್ನು ಪದ್ಯ ರೂಪದಲ್ಲಿ ಕವಿಗಳು ಅತ್ಯಂತ ಹಾಸ್ಯಮಯವಾಗಿ ಸರಳವಾಗಿ ಲಯಬದ್ಧವಾಗಿ ರಚಿಸಿದ್ದಾರೆ . ಹೀಗೆ ಎಲ್ಲಾ ಅಂಶಗಳಿಂದ ಈ ಕೃತಿಯು ಮುಂದೊಂದು ದಿನ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷವಾದ ಸ್ಥಾನಮಾನ ಪಡೆಯುವ ಅಮೂಲ್ಯವಾದ ಕೃತಿ ಎಂದೆನಿಸಿಕೊಳ್ಳುವಲ್ಲಿ ಸಂಶಯವಿಲ್ಲ. ತುಂಬಾ ಸುಂದರವಾದ ಈ ಕೃತಿಯನ್ನು ಕನ್ನಡಿಗರೆಲ್ಲರೂ ಕೊಂಡು ಓದಿ, ಕನ್ನಡ ಭಾಷೆ ಸಾಹಿತ್ಯ ಉಳಿಸಿ ಬೆಳೆಸಿ ಕವಿ ವೃಂದವನ್ನು ಪ್ರೋತ್ಸಾಹಿಸಿರಿ. ಇಂತಹ ಅಮೋಘ ಕೃತಿಯನ್ನು ಓದಲು ನೀಡಿದ ಕವಿಗಳಿಗೆ ಮತ್ತೊಮ್ಮೆ ತುಂಬು ಹೃದಯದಿಂದ ಅಭಿನಂದನೆಗಳು
ವಿಮರ್ಶೆ :
ಈರಪ್ಪ ಬಿಜಲಿ. ಕೊಪ್ಪಳ. ಕವಿ / ಸಾಹಿತಿಗಳು.
ಮೊಬೈಲ್ : 7019181570.
ಕವಿ : ನೀ. ಶ್ರೀಶೈಲ.
ಪ್ರಕಾಶನ : ಶರಭ ಪ್ರಕಾಶನ. ಬಸವೇಶ್ವರ ವೃತ್ತ. ಜಮಖಂಡಿ.
ಬೆಲೆ : 100 ರೂ. ಗಳು.
ಮೊಬೈಲ್ ಸಂಖ್ಯೆ :9448591167.