ಉಡುಪಿ : ಕಟೀಲು ಮೇಳದ ಪ್ರಧಾನ ಭಾಗವತ ಬಲಿಪ ಶಿವಶಂಕರ ಭಟ್ ಮತ್ತು ಬಹುಮುಖ ಪ್ರತಿಭೆಯ ಹಿರಿಯ ವೇಷಧಾರಿ ನಾರಾಯಣ ಕುಲಾಲ್ ವೇಣೂರು ಇವರಿಗೆ ‘ಪೂಲ ವಿಠ್ಠಲ ಶೆಟ್ಟಿ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ರಾಧಾ ವಿಠ್ಠಲ ಶೆಟ್ಟಿ ಮತ್ತು ಮಕ್ಕಳು ಇವರ ವತಿಯಿಂದ ಎರ್ಮಾಳು ಜನಾರ್ದನ ದೇವಸ್ಥಾನದ ಬಳಿ ದಿನಾಂಕ 18 ಜನವರಿ 2026ರಂದು ನಡೆದ ಕಟೀಲು ಮೇಳದ 28ನೇ ವರ್ಷದ ಯಕ್ಷಗಾನ ಸೇವೆ ಬಯಲಾಟ ವೇದಿಕೆಯಲ್ಲಿ ಕಟೀಲು ಲಕ್ಷ್ಮೀ ನಾರಾಯಣ ಆಸ್ರಣ್ಣರು ಸನ್ಮಾನಿಸಿ ಅಭಿನಂದಿಸಿದರು. ಬಲಿಪ ಪರಂಪರೆ ಹಾಗೂ ಕಟೀಲು ಮೇಳದ ಅನುಬಂಧವನ್ನು ಉಲ್ಲೇಖಿಸಿ ಬಲಿಪ ಭಾಗವತರುಗಳ ಸಾಧನೆಯನ್ನು ಸ್ಮರಿಸಿದರು. ಕಟೀಲು ಮೂಲ ಕುದುರಿನ ಸ್ಥಳ ದಾನಿಗಳಾಗಿ ನಿರಂತರ ಧಾರ್ಮಿಕ ಸೇವೆಗೈಯುವ ಸೇವಾಕರ್ತ, ಉದ್ಯಮಿ ಎರ್ಮಾಳ್ ಸತೀಶ್ ವಿಠ್ಠಲ ಶೆಟ್ಟಿ ಪರಿವಾರದ ಕಲಾಪ್ರೀತಿಯನ್ನು ಶ್ಲಾಘಿಸಿದರು.
“ಕಂಬಳ ಕ್ಷೇತ್ರದಲ್ಲಿ ಕೋಣಗಳ ಯಜಮಾನರಾಗಿ ಮೂರು ದಶಕಗಳ ಹಿಂದೆ ದಾಖಲೆ ಮಾಡಿದ್ದ ಘಾಟ್ ಕೋಪರ್ ನ ಭಾರತ್ ಕೆಫೆಯ ಸ್ಥಾಪಕ ಪೂಲ ವಿಠ್ಠಲ ಶೆಟ್ಟಿಯವರ ಸ್ಮರಣಾರ್ಥ ಪ್ರತೀ ವರ್ಷ ಯಕ್ಷ ಕಲಾ ಸಾಧಕರನ್ನು ಗೌರವಿಸಿ ಸನ್ಮಾನಿಸಲಾಗುತ್ತಿದೆ.” ಎಂದು ಸಂಯೋಜಕ ಐಕಳ ವಿಶ್ವನಾಥ ಶೆಟ್ಟಿ ತಿಳಿಸಿದರು.
ಕದ್ರಿ ನವನೀತ ಶೆಟ್ಟಿ ಅಭಿನಂದನಾ ನುಡಿ ಗೌರವ ಸಲ್ಲಿಸಿದರು. ಉದ್ಯಮಿ ಎರ್ಮಾಳ್ ನಾರಾಯಣ ಶೆಟ್ಟಿ, ಯಶ್ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು. ವಿಶು ಕುಮಾರ್ ಬ್ರಹ್ಮಾವರ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಬಲಿಪ ನಾರಾಯಣ ಭಾಗವತರು ರಚಿಸಿದ ‘ಮದನ ಸುಂದರಿ-ಸ್ವಯಂ ಪ್ರಭಾ’ ಯಕ್ಷಗಾನ ಬಯಲಾಟ ಜರಗಿತು.
