ಸಾಣೇಹಳ್ಳಿ: ಚಿತ್ರದುರ್ಗದ ಸಾಣೇಹಳ್ಳಿಯ ಶಿವಕುಮಾರ ರಂಗಮಂದಿರದಲ್ಲಿ ಸಾಣೇಹಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ 7 ಆಗಸ್ಟ್ 2024ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ “ನಮ್ಮಲ್ಲಿ ಅಡಗಿರುವ ಶಕ್ತಿ ಸಾಮರ್ಥ್ಯವನ್ನು ಹೊರಹೊಮ್ಮಿಸಬೇಕು ಎನ್ನುವ ಅಭೀಷ್ಠೆ ಎಲ್ಲ ಮಗುವಿನಲ್ಲೂ ಇರುತ್ತದೆ. ಅದಕ್ಕೆ ಪೂರಕವಾದ ವಾತಾವರಣ ಸಿಕ್ಕರೆ ಆ ಮಗು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದಲು ಸಾಧ್ಯ. ಯಾವ ಮಕ್ಕಳೂ ಪ್ರತಿಭಾಹೀನರಲ್ಲ. ಎಲ್ಲ ಮಕ್ಕಳಲ್ಲೂ ಪ್ರತಿಭೆ ಅವ್ಯಕ್ತವಾಗಿರುತ್ತದೆ. ಅದನ್ನು ಪ್ರತಿಭಾ ಕಾರಂಜಿಯ ಮೂಲಕ ವ್ಯಕ್ತಪಡಿಸುವಂಥ ಕೆಲಸ ಮನೆಯಲ್ಲಿ, ಶಾಲೆಯಲ್ಲಿ, ಸಮಾಜದಲ್ಲಿ ನಡೆಯಬೇಕು. ಮಕ್ಕಳು ಪ್ರತಿಭಾಹೀನರೆಂದು ಅವಹೇಳನ ಮಾಡದೇ ಸ್ವಲ್ಪ ಅವಕಾಶ ಸಿಕ್ಕರೆ ನಮ್ಮ ಮಕ್ಕಳು ಯಾರಿಗಿಂತಲೂ ಕಡಿಮೆಯಿಲ್ಲ ಎನ್ನುವುದನ್ನು ಆ ಮಕ್ಕಳ ಮನೋಭೂಮಿಕೆಯಲ್ಲಿ ಬಿತ್ತುವ ಕಾರ್ಯವನ್ನು ಆಯಾ ಶಾಲೆಯ ಶಿಕ್ಷಕರು ಮಾಡಬೇಕಾಗುತ್ತದೆ. ಒಂದೊಂದು ಸಾರಿ ಪ್ರತಿಭಾವಂತರಿಗೆ ಎಲ್ಲ ಅವಕಾಶಗಳನ್ನು ಕೊಟ್ಟು ಉಳಿದವರನ್ನು ಹಿಂದೆ ತಳ್ಳುವ ಕೆಲಸ ಆಗುತ್ತದೆ. ಯಾವ ಮಗುವಿನಲ್ಲಿ ಪ್ರತಿಭೆ ಇಲ್ಲ ಅಂತ ಅಂದುಕೊಂಡು ದೂರ ತಳ್ಳುವಿರೋ ಆ ಮಗುವಿಗೆ ಹೆಚ್ಚು ಅವಕಾಶಗಳನ್ನು ಕಲ್ಪಿಸಿಕೊಡಬೇಕು ಮತ್ತು ಪ್ರೋತ್ಸಾಹವನ್ನು ನೀಡಬೇಕು ಎಂಬುವುದನ್ನೇ ನಾವು ಬಯಸುವುದು. ಆ ಮಗುವಿನ ಭಾವನೆಗಳನ್ನು ಅರಳಿಸುತ್ತಾ ಹೋಗಬೇಕು. ಆಗ ಆ ಮಗು ಪ್ರತಿಭಾವಂತನಾಗಿ ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯ. ಎಳೆಯ ವಯಸ್ಸು ತುಂಬಾ ಮುಖ್ಯವಾದದ್ದು. ಮಕ್ಕಳ ಮನಸ್ಸು ಹಸಿಗೋಡೆ ಇದ್ದ ಹಾಗೆ. ಮಕ್ಕಳ ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳನ್ನು ಬಿತ್ತುತಾ ಹೋದರೆ ಕ್ರಮೇಣ ಅವು ಸತ್ಫಲವನ್ನು ನೀಡಿ ಸಮಾಜಮುಖಿ ಕೆಲಸ ಮಾಡಲು ಸಾಧ್ಯ. ಜಗತ್ತಿನ ಚರಾಚರದಲ್ಲೂ ಚೇತನ ಅಡಗಿದೆ. ಅದರಲ್ಲೂ ಮಾನವನಲ್ಲಿ ಬೇರೆಲ್ಲವುಗಳಿಗಿಂತ ಅದ್ಭುತವಾದ ಚೈತನ್ಯ ಅಡಗಿದೆ. ಯಾರಲ್ಲಿ ಎಂಥ ಪ್ರತಿಭೆ ಅಡಗಿದೆ ಎನ್ನುವಂಥದ್ದನ್ನು ತಿಳಿಯುವ ವಿವೇಕ ಹಾಗೂ ಜಾಣ್ಮೆ ದೊಡ್ಡವರಿಗಿರಬೇಕು. ಕೆಲ ಮಕ್ಕಳು ಆಟ, ಹಾಡು, ಓದು, ನೃತ್ಯ, ನಾಟಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುತ್ತಾರೆ. ಈ ದೃಷ್ಟಿಯಲ್ಲಿ ಕ್ಲಸ್ಟರ್ ಹಂತದಲ್ಲಿ ನಡೆಯುತ್ತಿರುವ ಈ ಪ್ರತಿಭಾ ಕಾರಂಜಿ ಮಕ್ಕಳ ಪ್ರತಿಭೆಯನ್ನು ಹೊರತರಲು ಸೂಕ್ತ ವೇದಿಕೆ ಕಲ್ಪಿಸಿದೆ. ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ಬಹುಮಾನ ಪಡೆಯಲಿಕ್ಕೆ ಅನ್ನುವ ಛಲ ವಿದ್ಯಾರ್ಥಿಗಳಲ್ಲಿ ಬರಬೇಕು. ಬಹುಮಾನ ಬರದೇ ಇದ್ದರೂ ಪರವಾಗಿಲ್ಲ ಪ್ರೇಕ್ಷಕರ ಗಮನವನ್ನು ತನ್ನಡೆ ಸೆಳೆಯುವಂತೆ ಇರಬೇಕು. ಮಕ್ಕಳಿಗೆ ಭಯ ಇರೋದಿಲ್ಲ. ಅವರು ಬಹಳ ಧೈರ್ಯಶಾಲಿಗಳು. ಶಿಕ್ಷಕರು, ಪೋಷಕರು ಸ್ವಲ್ಪಮಟ್ಟಿನ ಸ್ಪೂರ್ತಿ ತುಂಬಿದರೆ ಅದ್ಭುತ ಕಲೆಯನ್ನು ಅವರಲ್ಲಿ ನೋಡಬಹುದು.” ಎಂದರು.
ಪ್ರಾಸ್ತಾವಿಕವಾಗಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸುರೇಶ್, ಸಹಶಿಕ್ಷಕ ಯೋಗರಾಜ್ ಹೆಚ್. ಸಿ., ಮುಖ್ಯಶಿಕ್ಷಕ ಬಸವರಾಜ್ ಕೆ. ಆರ್. ಮಾತನಾಡಿದರು. ವೇದಿಕೆಯ ಮೇಲೆ ಶಿಕ್ಷಣ ಸಂಯೋಜಕ ಶಶಿಧರ ಎಂ., ಮುಖ್ಯೋಪಾಧ್ಯಾಯರಾದ ಶಿವಕುಮಾರ ಬಿ. ಎಸ್., ಶಿಲ್ಪ ಎ. ಎಸ್. ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಜನ್ಯತಾ, ಚಾರುಪ್ರಿಯಾ, ಚಾರ್ವಿ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಪ್ರಭು ಬಿ. ಎಸ್. ಸ್ವಾಗತಿಸಿ, ಕವಿತಾ ಎಸ್. ಹೆಚ್. ನಿರೂಪಿಸಿ, ವಂದಿಸಿದರು.