ಉಡುಪಿ : ಉಡುಪಿಯ ನೂತನ ರವೀಂದ್ರ ಮಂಟಪದಲ್ಲಿ ದಿನಾಂಕ 31 ಮೇ 2026ರಂದು ಉಡುಪಿಯ ‘ರಾಗಧನ’ ಸಂಸ್ಥೆಯು ನಡೆಸುತ್ತಿರುವ ‘ರಾಗರತ್ನ ಮಾಲಿಕೆ’ ಸರಣಿಯ 49ನೆಯ ಕಾರ್ಯಕ್ರಮವಾಗಿ ಒಂದು ಉತ್ಕೃಷ್ಟವಾದ ವೇಣುವಾದನ ಕಚೇರಿ ನಡೆಯಿತು.
ಯೋಗಾ ಯೋಗವೆಂಬಂತೆ ಇದೇ ಸಂದರ್ಭದಲ್ಲಿ ಉಡುಪಿಯ ಹಿರಿಯ ಕೊಳಲು ವಿದ್ವಾಂಸರು ಮತ್ತು ಹೆಸರಾಂತ ಸಂಗೀತ ಗುರುಗಳೂ ಆಗಿದ್ದು, ಇತ್ತೀಚೆಗಷ್ಟೇ ನಮ್ಮನ್ನಗಲಿದ ಪ್ರೊ. ಕೆ.ಯು. ರಾಘವೇಂದ್ರ ರಾವ್ ಇವರಿಗೆ ‘ನುಡಿ ನಮನ’ವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಗೀತವನ್ನೇ ಉಸಿರಾಡುತ್ತ, ನೂರಾರು ಉತ್ತಮ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿ ಸಾರ್ಥಕ ಜೀವನ ನಡೆಸಿದ್ದ ಶ್ರೀಯುತರಿಗೆ ಉಡುಪಿಯ ಅನೇಕ ಗಣ್ಯರು ಗೌರವಾರ್ಪಣೆಯನ್ನು ಮಾಡಿದರು. ಡಾ. ಮಹೇಶ್ ಭಟ್ ಹಾರ್ಯಾಡಿ ನುಡಿನಮನ ಭಾಷಣದ ಮೂಲಕ ತಾವು ಕಂಡಂತೆ ಅವರ ಜೀವನದ ವಿವಿಧ ಆಯಾಮಗಳನ್ನು ಸ್ಮರಿಸಿಕೊಂಡರು. ಅವರ ಪುತ್ರ ಶ್ರೀ. ಕೆ.ಯು. ಜಯಚಂದ್ರ ರಾವ್ ತಮ್ಮ ತಂದೆಯ ಸಂಗೀತ ಪ್ರೀತಿ, ಶಿಸ್ತಿನ ಅಭ್ಯಾಸ ಕ್ರಮ ಕುರಿತಾಗಿ ಮಾತಾಡುತ್ತಾ ಭಾವುಕರಾದರು.
ಆನಂತರ ಯುಗಳ ವೇಣುವಾದನವನ್ನು ನಡೆಸಿಕೊಟ್ಟವರು ಶ್ರೀ ಹೇರಂಭ್ ಮತ್ತು ಶ್ರೀ ಹೇಮಂತ್ -ಬೆಂಗಳೂರು. ಬಾಲ್ಯದಿಂದಲೇ ನಾದ ಸಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಇದೀಗ ವಿಶ್ವಪ್ರಸಿದ್ಧರಾಗಿರುವ ಸಹೋದರರು. ಪರಸ್ಪರ ಅದ್ಭುತವಾದ ಹೊಂದಾಣಿಕೆ ! ನಿರರ್ಗಳವಾಗಿ ಹರಿಯುವ ಗಾನ ಲಹರಿ ! ನಾಟ ರಾಗದ, ದೀಕ್ಷಿತರ ಗಣೇಶ ಸ್ತುತಿಯೊಂದಿಗೆ (ಮಹಾಗಣಪತಿಮ್) ಚೈತನ್ಯಪೂರ್ಣ ಪ್ರಾರಂಭ ! ಕ್ಷಪ್ರವಾದ ಮತ್ತು ಚುರುಕಾದ ಸ್ವರಕಲ್ಪನೆಗಳು ಮುದ ನೀಡಿದವು.

ಇಂಪಾದ ಆಲಾಪನೆಯನ್ನು ಅನುಸರಿಸಿದ ಕಾನಡಾ (ಮಾಮ ವಸದಾ) ಕೃತಿಯ ನಿರೂಪಣೆ ಮತ್ತು ಪರ್ಯಾಯವಾಗಿ ನುಡಿಸಲಾದ ಸ್ವರ ವಿನ್ಯಾಸಗಳು, ವೈವಿಧ್ಯಪೂರ್ಣ ಏಕಾವರ್ತಗಳು ಶ್ರೋತೃಗಳ ಕುತೂಹಲವನ್ನು ಕಾದುಕೊಂಡವು. ಮುಂದಿನ ರಾಗ ನೀಲಾಂಬರಿ (ಮಾಮವ ಮಾಧವ). ಸಹಜವಾಗಿಯೇ ವಿಳಂಬ ಕಾಲದಲ್ಲಿದ್ದು ರಾಗಭಾವಕ್ಕೆ ಪ್ರಾಧಾನ್ಯ ನೀಡಲಾಗಿ ಸುಶ್ರಾವ್ಯನೆಸಿತು ರಾಗಂ-ತಾನಂ-ಪಲ್ಲವಿಗಾಗಿ ಪೂರ್ವಿಕಲ್ಯಾಣಿಯನ್ನು ಆಯ್ದುಕೊಂಡ ಸೋದರರು ಸೊಗಸಾದ ರಾಗಾಲಾಪನೆ ಮತ್ತು ತಾನಂ ನಿರೂಪಣೆಯ ನಂತರ ‘ನಿನ್ನು ವಿನಾಗ ಮರಿ ದಿಕ್ಯವೃನ್ನಾರು ನಿಖಿಲ ಲೋಕ ಜನನಿ ನನ್ನು ಬ್ರೋಚುಟಕ್ಕು’ ಎಂಬ ಕೃತಿಯನ್ನು ವಿಲೋಮ ಮಿಶ್ರ ಚಾಪು ತಾಳದಲ್ಲಿ 4+3 ಎಂಬ ಚೌಕಟ್ಟಿನಲ್ಲಿ ಪ್ರಸ್ತುತ ಪಡಿಸಿದರು. ಇದು ತಾಳ ಪ್ರಧಾನವಾಗಿದ್ದು, ಪಕ್ಕವಾದ್ಯವರನ್ನು ಒಳಗೊಂಡಂತೆ ನೀಡಲಾದ ತಾಳದ ಲೆಕ್ಕಾಚಾರಗಳು, ವಿಂಗಡನೆಗಳು, ಗತಿ, ನಡೆ ಭೇದಗಳ ಸ್ವರ ಕಲ್ಪನೆಗಳು ಅತ್ಯಂತ ಸಹಜವೆಂಬಂತೆ ಮೂಡಿಬಂದು ರಸಿಕರ ಮುಕ್ತ ಪ್ರಶಂಸೆಗಳನ್ನು ಪಡೆದವು.
ಮುಖ್ಯ ಕಲಾವಿದರ ಇಂಗಿತವನ್ನು ಮುಂದಾಗಿ ತಿಳಿದು ಸಹ ವಾದನ ನೀಡಿದ ಲಯ ವಿದ್ವಾಂಸರು ಶ್ರೀ ಕೆ.ಯು. ಜಯಚಂದ್ರ ರಾವ್ (ಮೃದಂಗ) ಮತ್ತು ಶ್ರೀ ವಾಳಪಲ್ಲಿ ಕೃಷ್ಣಕುಮಾರ್ (ಘಟ) ತನಿ ಆವರ್ತನದಲ್ಲಿ ತಮ್ಮ ಕೌಶಲವನ್ನು ವಿಶಾಲವಾದ ಅನುಭವವನ್ನು ಪರಿಚಯಿಸಿ ನಮ್ಮ ಲಯಪ್ರಿಯರಿಗೆ ತುಂಬು ಸಂತಸವನ್ನು ನೀಡಿದರು. ಸಾಮಾನ್ಯವಾಗಿ ಕೊಳಲಿನ ತುತ್ತೂಕಾರದ ಧ್ವನಿ ತರಂಗಗಳು ಬಹು ದೂರದವರೆಗೆ ಕೇಳಿಸುತ್ತವೆ. ಆದಕಾರಣ ಇಲ್ಲಿ ಧ್ವನಿವರ್ಧಕದ ಅಬ್ಬರ, ಕೊಳಲಿನ ನಿಜ ಮಾಧುರ್ಯಕ್ಕೆ ಎರವಾಗುವುದೇನೋ ಎಂದು ಅನಿಸಿದ್ದು ಸತ್ಯ! ದರ್ಬಾರಿ ಕಾನಡಾ (ಗೋವರ್ಧನ ಗಿರಿಧಾರಿ) ರಾಗದ ತರಂಗಿಣಿ ಮತ್ತು ರಾಗ ಮಾಲಿಕೆಯಲ್ಲಿ ನುಡಿಸಲಾದ ದೇವರ ನಾಮ (ಬಾರೋ ಕೃಷ್ಣಯ್ಯ)ದೊಂದಿಗೆ ಈ ಕಚೇರಿ ಯಶಸ್ವಿಯಾಗಿ ಸಂಪನ್ನಗೊಂಡಿತು.
– ವಿದುಷಿ ಸರೋಜಾ ಆರ್. ಆಚಾರ್ಯ, ಉಡುಪಿ.
