ಮಾಸ್ತಿ ವೆಂಕಟೇಶ ಅಯ್ಯಂಗಾರರ 135ನೇ ಜನ್ಮದಿನದ ಅಂಗವಾಗಿ ಈ ಲೇಖನ.
ಕನ್ನಡ ಸಣ್ಣಕತೆಯ ಇತಿಹಾಸದಲ್ಲಿ ಮಹತ್ವದ ಸಾಧನೆಯನ್ನು ಮಾಡಿದ ಮಾಸ್ತಿ ವೆಂಕಟೇಶ ಅಯ್ಯಂಗಾರರು (1891-1986) ಸೃಷ್ಟಿಸಿದ ಕತೆಗಳ ಜಗತ್ತು ಮಾನವೀಯ ಆಶಯಗಳಿಂದ ಕೂಡಿದೆ. ಪಾತ್ರಗಳ ವ್ಯಾಪ್ತಿಯು ದೊಡ್ಡದು. ಅಲ್ಪಜೀವಿಗಳಿಂದ ಹಿಡಿದು ಐತಿಹಾಸಿಕ ವ್ಯಕ್ತಿಗಳವರೆಗೆ ಅವರ ಪಾತ್ರಗಳ ವೈವಿಧ್ಯವಿದೆ. ಮಾಸ್ತಿಯವರ ಕಾದಂಬರಿಗಳಿಗೂ ಈ ಮಾತು ಅನ್ವಯವಾಗುತ್ತದೆ. ಚಾರಿತ್ರಿಕ ಕಾದಂಬರಿಗಳಾದ ‘ಚೆನ್ನಬಸವ ನಾಯಕ’ (1950) ಮತ್ತು ‘ಚಿಕವೀರ ರಾಜೇಂದ್ರ’ (1956) ಅವುಗಳಲ್ಲಿ ಶಿಖರಪ್ರಾಯವಾಗಿವೆ. ಹೆಚ್ಚೇನೂ ಚರ್ಚೆಗೊಳಗಾಗದ ‘ಶೇಷಮ್ಮ’ (1976) ಕಾದಂಬರಿ ತನ್ನದೇ ಆದ ವಿಶೇಷತೆಗಳಿಂದ ಕಂಗೊಳಿಸುತ್ತದೆ. 238 ಪುಟಗಳ ಈ ಕೃತಿಯನ್ನು ಮಾಸ್ತಿಯವರು ‘ಕಥೆ’ ಎಂದು ಕರೆದರೆ ನಿರೂಪಕನು ಅದನ್ನು ‘ಚರಿತ್ರೆ’ ಎನ್ನುತ್ತಾನೆ. ಮೊದಲ 234 ಪುಟಗಳಲ್ಲಿ ಕಥನವು ಪ್ರಥಮ ಪುರುಷ ನಿರೂಪಣೆಯ ಮೂಲಕ ಸಾಗುವುದರಿಂದ ಕಥೆಯ ನಿರೂಪಕನು ಯಾರು ಎಂದು ತಿಳಿಯದಿದ್ದರೂ ಕೊನೆಯ ಪುಟಗಳನ್ನು ಓದುವಾಗ ಶೇಷಮ್ಮನ ಹಿರಿಯ ಮಗ ರಾಜಣ್ಣನ ಸಹಪಾಠಿಯಾದ ರಾಮ ಶೆಟ್ಟಿಯು ಈ ಕಾದಂಬರಿಯ ನಿರೂಪಕನೆಂದು ಗೊತ್ತಾಗುತ್ತದೆ. ಉತ್ತಮ ಪುರುಷ ನಿರೂಪಕನಂತೆ ಕಾಣಿಸಿಕೊಳ್ಳದೆ ಪಾತ್ರವಾಗಿ ಕಾಣಿಸಿಕೊಳ್ಳುವ, ಪ್ರಥಮ ಪುರುಷ ನಿರೂಪಣೆಯಲ್ಲಿ ತನಗೆ ತಾನೇ ನಿರೂಪಣೆಗೊಂಡ ರಾಮ ಶೆಟ್ಟಿಯು ಕಾದಂಬರಿಯ ವಿಶಿಷ್ಟ ಪಾತ್ರವಾಗಿ ಕಾಣಿಸಿಕೊಳ್ಳುತ್ತಾನೆ.
ಶೇಷಮ್ಮನ ಬದುಕಿನ ಕೊನೆಯ ದಿನಗಳಲ್ಲಿ ರಾಮ ಶೆಟ್ಟಿಯು “ಮಕ್ಕಳಾದಾಗಿನ ಸಂತೋಷ ತಿರುಗಿ ಬರೋದಿಲ್ಲ ಅಲ್ಲ?” ಎಂದು ಆಕೆಯಲ್ಲಿ ಕೇಳಿದಾಗ “ದೇವರ ಕೃಪೆ ಇದ್ದರೆ ಆ ಎಳೆ ಮಗುವಿನ ಸಂತೋಷ ತನ್ನ ವಯಸ್ಸಿನಲ್ಲಿ ತಿರಿಗಿ ಬರುತ್ತೆ” ಎನ್ನುತ್ತಾಳೆ. “ಅದೆಷ್ಟು ಕಷ್ಟ, ಅದೇನು ನಿಷ್ಠುರ, ಎಷ್ಟು ನೋವು, ನನ್ನ ವಯಸ್ಸಿಗೇ ಸಾಕು ಅನಿಸತದೆಯಲ್ಲ” ಎಂದು ಮರುಪ್ರಶ್ನಿಸಿದಾಗ “ನಿನ್ನ ವಯಸ್ಸಿಗೆ ಸಾಕು ಅನ್ನಿಸುತ್ತಿರುತ್ತೆ, ಸಂಸಾರ ಅಟ್ಟುತಾ ಇರುತ್ತೆ. ನೀ ಓಡುತಾ ಇರುತೀಯ. ಓಡುವಾಗ ಏದಬೇಕು. ನಾನು, ನಿಮ್ಮಜ್ಜಿ ನಿಂತು ಬಿಟ್ಟಿದ್ದೇವೆ. ಈಗ ನಮಗೆ ಓಡುವ ಧಾವಂತವಿಲ್ಲ” ಎಂದು ಹೇಳುತ್ತಾಳೆ. “ಈ ಮುಪ್ಪಿನಲ್ಲಿ ಶೇಷಮ್ಮನವರಿಗೆ ಅವರ ಜೀವನದ ಎಲ್ಲ ಶ್ರಮದ ನೆನಪು ಅಳಿಸಿತೊ ಎನ್ನುವ ಮಟ್ಟಿಗೆ ಮರೆತಿತ್ತು. ಮಾಯದ ಗಾಯದಂತೆ ಅವರಿಗೆ ಈಗ ಯಾವ ಬೇನೆಯೂ ನೋವನ್ನುಂಟು ಮಾಡುತ್ತಿರಲಿಲ್ಲ. ಉಳಿದವರ ಮಾತು ಹೇಗೊ, ಈ ಅಜ್ಜಿಯ ವಿಷಯಕ್ಕೆ, ತನ್ನ ಅಜ್ಜಿಯ ವಿಷಯಕ್ಕೆ, ಮುಪ್ಪು ಹಸುಳೆಯ ದಿನದಂತೆ ಒಂದು ತೃಪ್ತಿಯ ಕಾಲ ಅಹುದು” ಎಂದು ರಾಮ ಶೆಟ್ಟಿ ಒಪ್ಪಿಕೊಳ್ಳುತ್ತಾನೆ. “ಈ ಜೀವ ಎಷ್ಟು ಕಷ್ಟ ಎಷ್ಟು ಬೇಸರವನ್ನು ನೋಡಿತ್ತು. ಮಗುವಾಗಿದ್ದ ಹತ್ತು ವರುಷದ ಕಾಲ, ಏನೂ ಕಾಣದ ನಿಷ್ಕಲ್ಮಶ ಚೇತನದ ಸುಖದ ಕಾಲ. ಆಮೇಲೆ ಎಷ್ಟು ನಿರೀಕ್ಷೆ, ಎಷ್ಟು ಆಶಾಭಂಗ, ಎಷ್ಟು ಬೇಸರದ ಸಹವಾಸ, ಏನು ಅತೃಪ್ತಿಯ ಬಾಳು. ಎಷ್ಟು ಕ್ಲೇಶ, ದುಃಖ, ತೊಳಲಾಟ, ದಣಿವು. ಅಜ್ಜಿ ತನಗೆ, ತನ್ನ ಹೆಂಡತಿಗೆ, ಮನೆಯ ಜನರಿಗೆ, ಬೇರೆ ಬೇರೆ ಸಂದರ್ಭದಲ್ಲಿ ಒಮ್ಮೆ ಒಂದು ಸಂಗತಿ, ಇನ್ನೊಮ್ಮೆ ಇನ್ನೊಂದು ಸಂಗತಿ. ಹೀಗೆ ತಮ್ಮ ಜೀವನದ ಹತ್ತಾರು ಸಂದರ್ಭಗಳನ್ನು ಹೇಳಿದ್ದರು. ತನ್ನ ಮನಸ್ಸು ಹೇಗಿತ್ತು ಎನ್ನುವುದನ್ನು ತಿಳಿಸಿದ್ದರು. ಇದೊಂದು ಅಪೂರ್ವ ರೀತಿಯ ಜೀವ. ಇವರ ಅನುಭವವನ್ನು ತಿಳಿಸಿ ಈ ಸಂಗತಿಗಳನ್ನು ಬರೆದರೆ ಜನರಿಗೆ ತಿಳುವಳಿಕೆ ಕೊಡುವ ಚರಿತ್ರೆ ಆದೀತು. ರುಚಿಯಾಗಿರಲಿ ಅಂತ ಒಂದು ಕಥೆಯಾಗಿ ಬರೆಯೋದು ಮುಖ್ಯವಲ್ಲ, ತಿಳಿಯುವ ಹಾಗೆ ಹೇಳುವುದು ಮುಖ್ಯ” ಎಂದುಕೊಂಡು ಈ ಬಗ್ಗೆ ಶೇಷಮ್ಮನನ್ನು ಕೇಳಿದಾಗ “ಬರೀಬೇಕು ಅಂತ ಅನಿಸಿದರೆ ಬರಿ. ಒಳ್ಳೆ ಮನಸ್ಸಿನಿಂದ ಬರಿ. ಜನಕ್ಕೆ ಪ್ರಯೋಜನವಾಗಲಿ ಅಂತ ಬರಿ. ಒಳ್ಳೇದೇ ಆಗುತ್ತೆ” ಎಂದು ಒಪ್ಪಿಕೊಳ್ಳುತ್ತಾಳೆ. ಇವುಗಳು ಕೇವಲ ಲೋಕಾಭಿರಾಮದ ಮಾತುಗಳಾಗಿರದೆ ಮಾಸ್ತಿಯವರ ಕಥನ ಮೀಮಾಂಸೆಯೇ ಆಗಿದೆ. ಕಥೆಯ ಹುಟ್ಟು, ಉದ್ದೇಶ, ಭಾಷೆಯ ಬಳಕೆ, ಸಾಹಿತ್ಯದ ಪ್ರಯೋಜನಗಳು ಮುಂತಾದ ವಿಚಾರಗಳನ್ನು ಕಥೆಯ ಓಟಕ್ಕೆ ಭಂಗವಾಗದಂತೆ ಮಂಡಿಸಿರುವುದರಿಂದ ಇವುಗಳು ಕೃತಿಗೆ ಭಾರವೆನಿಸದೆ, ಓದುಗರ ಸಾಹಿತ್ಯಕ ತಿಳುವಳಿಕೆ ಮತ್ತು ಲೋಕಗ್ರಹಿಕೆಯನ್ನು ಹಿಗ್ಗಿಸಲು ಸಹಾಯ ಮಾಡುತ್ತವೆ.
ಮಾಸ್ತಿಯವರು ವಾಸ್ತವವಾದಿ ಲೇಖಕರಾಗಿದ್ದರೂ ಅವರ ಕಥನದಲ್ಲಿ ಅಲೌಕಿಕ ಅನುಭವಗಳಿಗೆ ಅವಕಾಶವಿದೆ. ಆದರೆ ಅವುಗಳು ಓದುಗರನ್ನು ಬೆಚ್ಚಿಬೀಳಿಸುವಂತಿರದೆ, ಬದುಕಿನಲ್ಲಿ ಎದುರಾಗುವ ಸಹಜ ಅನುಭವ ಎಂಬ ರೀತಿಯಲ್ಲಿ ಮೂಡಿ ಬಂದಿರುತ್ತವೆ. ಇದರಿಂದ ಪಾತ್ರಗಳ ವ್ಯಕ್ತಿತ್ವಕ್ಕೆ ನೈತಿಕ ಆಧ್ಯಾತ್ಮಿಕ ಆಯಾಮಗಳು ಸೇರಿಕೊಳ್ಳುತ್ತವೆ. ಶೇಷಮ್ಮ ಐದು ವಯಸ್ಸಿನವಳಾಗಿದ್ದಾಗ ಕಲ್ಮಾಡಿಯ ಮಾರಿ ಹಬ್ಬದಲ್ಲಿ ದೇವರು ತನ್ನತ್ತ ನೋಡಿ ನಕ್ಕು ಮಾತನನಾಡಿಸಿದಂತೆನಿಸುತ್ತದೆ. ಆಕೆಯ ತಂದೆತಾಯಿಯರು ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆಕೆಯು ಮುದುಕಿಯಾದಾಗ “ನಾನು ಎಂಬ ಭಾವ ನಮಗೂ ದೇವರಿಗೂ ಅಡ್ಡ ಬರುತ್ತದೆ. ಎಳೆಮಗು ‘ನಾನು’ ಅನ್ನುವುದಿಲ್ಲ. ಆಗ ದೇವರು ನಗುವುದು ಮಾತನಾಡಿಸುವುದು ಕಾಣುತ್ತದೆ. ಹಾಗೆಯೇ ಮುಪ್ಪಿನಲ್ಲಿ ‘ನಾನು’ ಎಂಬುದನ್ನು ಕಳೆದುಕೊಂಡರೆ ಮತ್ತೆ ದೇವರು ಮಾತನಾಡಿಸುವುದು ಕೇಳಿಸುತ್ತದೆ” ಎಂದು ತಾವು ಕೇಳಿ, ತಿಳಿದು, ಅನುಭವಿಸಿದ್ದನ್ನು ರಾಮಶೆಟ್ಟಿಗೆ ಮನವರಿಕೆ ಮಾಡಿಸುತ್ತಾಳೆ. ಆಕೆ ಚಿಕ್ಕಂದಿನಲ್ಲೇ ರಾಮಾಯಣ, ಮಹಾಭಾರತ, ಭಾಗವತದ ಪ್ರಸಂಗಗಳನ್ನು ಕೇಳಿ ಬೆಳೆದಿದ್ದು, ಆಕೆಯ ಎಳೆಯ ಮನಸ್ಸು ದೇವರಲ್ಲಿ ನಂಬಿಕೆಯನ್ನು, ಕಷ್ಟಕಾಲದಲ್ಲಿ ಅವನು ಕಾಪಾಡುತ್ತಾನೆ ಎಂಬ ಧೈರ್ಯವನ್ನು ಬೆಳೆಸಿಕೊಂಡಿತ್ತು. ಅಂಥ ಹೆಂಗಸೊಬ್ಬಳ ಬದುಕಿನ ಘಟ್ಟಗಳು, ಕಷ್ಟಕಾರ್ಪಣ್ಯಗಳನ್ನು ಎದುರಿಸುತ್ತಾ ಅವರ ವ್ಯಕ್ತಿತ್ವ ಮಾಗುವ ರೀತಿ, ಪ್ರಬುದ್ಧ ನೋಟದಲ್ಲಿ ಬದುಕನ್ನು ವ್ಯಾಖ್ಯಾನಿಸುವ ಬಗೆಯನ್ನು ಕಥೆಯು ಸರಳ ನುಡಿಗಟ್ಟಿನಲ್ಲಿ ನಿರೂಪಿಸುತ್ತಾ ಸಾಗುತ್ತದೆ. ಇದನ್ನು ಶೇಷಮ್ಮನ ನಿರೂಪಣೆಯಲ್ಲಿ ಕಥಿಸದೆ, ಅಷ್ಟೇನೂ ವಿದ್ಯಾವಂತನಲ್ಲದ ರಾಮ ಶೆಟ್ಟಿಯ ಮೂಲಕ ಕಥಿಸಿದ್ದರಿಂದ ಕಥನವು ಭಾವುಕವಾಗದೆ, ನೀತಿಪಾಠವಾಗದೆ ವಸ್ತುನಿಷ್ಠತೆಯನ್ನು ಕಾಪಾಡಿಕೊಳ್ಳುತ್ತದೆ. ರಾಮಶೆಟ್ಟಿಯು ತನಗೆ ಬೇಕಾದ ವಿವರಗಳನ್ನು ಶೇಷಮ್ಮನಿಂದ ಮಾತ್ರ ಪಡೆಯದೆ ಆಕೆಯನ್ನು ಬಲ್ಲವರಿಂದಲೂ ಕೇಳಿ ಪಡೆದಿರುವುದರಿಂದ ಬರವಣಿಗೆಯು ಅಧಿಕೃತವೆನಿಸಿಕೊಳ್ಳುತ್ತದೆ.
ಶೇಷಮ್ಮನ ದೈವಶ್ರದ್ಧೆಯು ಆಕೆಯ ಬದುಕಿಗೆ ಸುಖಸಮೃದ್ಧಿಗಳನ್ನೇನೂ ಒದಗಿಸುವುದಿಲ್ಲ. ಮದುವೆಯಾಗುವವರೆಗೆ ತಂದೆತಾಯಿಯರ ವಾತ್ಸಲ್ಯದ ರಕ್ಷಣೆ ಅವಳಿಗಿತ್ತು. ಮದುವೆಯಾದ ಬಳಿಕ ಆಕೆಯ ಮೈಮನಗಳಿಗೆ ಹಲವು ಕಡೆಗಳಿಂದ ಪೆಟ್ಟುಗಳು ಬೀಳುತ್ತವೆ. ಏನು ಮಾಡಿದರೂ, ಹೇಗೆ ಇದ್ದರೂ ಅತ್ತೆಯ ಕಣ್ಣಲ್ಲಿ ತಪ್ಪಾಗಿ ಕಾಣುತ್ತದೆ. ಮನೆಯ ಮರ್ಯಾದೆ ಹೋಗಬಾರದೆಂದು ಮಾತನಾಡದೆ ಸುಮ್ಮನಿದ್ದರೆ ಊರಿನ ಹೆಂಗಸರು ಅವಳನ್ನು ಜಂಭಗಾರ್ತಿ ಎನ್ನುತ್ತಾರೆ. ಗಂಡನು ಆಕೆಯನ್ನು ಕಡೆಗಣಿಸಿ ಸೂಳೆಯ ಸಂಗ ಮಾಡುತ್ತಾನೆ. ಇನ್ನೇನು ಮುಳುಗಿ ಹೋಗುವೆನೆಂದು ಶೇಷಮ್ಮನಿಗೆ ಅನಿಸಿದಾಗ ನೆರೆಮನೆಯ ಅಚ್ಚಮ್ಮ ಮತ್ತು ಆಕೆಯ ಗಂಡನ ಬೆಂಬಲ ಸಹಾನುಭೂತಿಗಳ ನೆರವು ಸಿಗುತ್ತದೆ. ಇದನ್ನೇ ಶೇಷಮ್ಮ ದೈವಕೃಪೆ ಎನ್ನುತ್ತಾಳೆ. ಇಂಥ ದೈವಕೃಪೆಗಳು ಆಕೆಯ ಸಂಕಟಗಳನ್ನು ಪವಾಡದಂತೆ ದೂರ ಮಾಡದೆ, ಅವುಗಳನ್ನು ತಾಳಿಕೊಳ್ಳುವ, ಎದುರಿಸುವ, ಚಿತ್ತವನ್ನು ಕಾಯ್ದುಕೊಳ್ಳುವ ಶಕ್ತಿಯನ್ನು ಕೊಡುತ್ತವೆ. ಕಹಿಪ್ರಸಂಗಗಳಿಂದ ಶೇಷಮ್ಮ ಎಷ್ಟೇ ಘಾಸಿಗೊಂಡರೂ ಧೈರ್ಯವನ್ನು ಕಳೆದುಕೊಂಡು ಕುಸಿಯುವುದಿಲ್ಲ.
ಕಾದಂಬರಿಯು ಶೇಷಮ್ಮನ ಗಂಡ ರಂಗಪ್ಪನ ದೃಷ್ಟಿಯಿಂದಲೂ ಲೈಂಗಿಕ ಸಂಬಂಧಗಳನ್ನು ಪರಿಶೀಲಿಸುತ್ತದೆ. “ರಂಗಪ್ಪ ಬಹಳ ಕೆಟ್ಟ ಮನುಷ್ಯನೇನಲ್ಲ. ಅವನಂತೆ ನಡೆಯುವ ಗಂಡಂದಿರು ಅಪರೂಪವಲ್ಲ. ಮಾದಾವರದಲ್ಲಿ ಇವರ ಸಮಾಜ ಅದನ್ನು ಬಹು ದೊಡ್ಡ ಅಪರಾಧ ಎಂದೆಣಿಸುತ್ತಿರಲಿಲ್ಲ. ಆದರೆ ಈ ನಡತೆಯನ್ನು ಜನ ಒಪ್ಪಿದ್ದರು ಎಂದಲ್ಲ.” ಆದರೆ ಕಥನವು ರಂಗಪ್ಪನನ್ನು ಸಮರ್ಥಿಸುವುದಿಲ್ಲ. ಆತನು ಸೂಳೆಯ ವಿಲಾಸವನ್ನು ಮಾತ್ರ ಅನುಭವಿಸುವುದಿಲ್ಲ. ಅದರ ವಿಕಾರಕ್ಕೂ ಬಲಿಯಾಗುತ್ತಾನೆ. ಇದು ಶೇಷಮ್ಮನ ಎರಡನೇ ಮಗ ಗೋಪಣ್ಣನ ಬದುಕಿನಲ್ಲಿ ಪುನರಾವರ್ತನೆಯಾಗುತ್ತದೆ. ಆದರೆ ಆತನು ರೋಗಗ್ರಸ್ತನಾಗುವ ಮುನ್ನವೇ ಸೂಳೆಯ ಸಂಗವನ್ನು ಬಿಡುತ್ತಾನೆ. ಈ ಪ್ರಕರಣವನ್ನು ನಿಭಾಯಿಸುವಲ್ಲಿ ಶೇಷಮ್ಮನ ಘನತೆ ಗಾಂಭೀರ್ಯಗಳು ಎದ್ದು ಕಾಣುತ್ತವೆ. “ನಿಮ್ಮಪ್ಪ ಒಂದು ಸಂಗತಿಯಲ್ಲಿ ದಾರಿ ತಪ್ಪಿದರು. ಗಂಡಸಾದವರು ಹೀಗೆ ದಾರಿ ತಪ್ಪೋದು ಸಾಮಾನ್ಯ. ಹೆಂಡತಿ ಮನೆಗೆ ಬರೋ ಮುನ್ನವೇ ನೀನು ಆ ದಾರೀಲಿ ಹೋಗಿದ್ದೆ. ಅದನ್ನು ಬಿಡು ಅಂತ ನಾನು ಹೇಳಿ ಪ್ರಯೋಜನವಿಲ್ಲ. ಇದರಲ್ಲಿ ನೀನು ಇನ್ನು ಮುಂದೆ ಹೋಗಬಾರದು. ನೀನು ನಿನ್ನ ಹೆಂಡತಿ ಸುಖವಾಗಿರಬೇಕು ಅಂತ ನನ್ನ ಆಸೆ. ಆದರೆ ಅದು ತಿಳೀದ ಹುಡುಗಿ. ನೀನು ಬೇರೆ ಕಡೆ ಕಾಣೋ ಜಾಣು ಇವಳಿಗಿರೋದಿಲ್ಲ. ಅವಳ ಮಾತು ನಿನಗೆ ಒಪ್ಪಿಗೆ ಆಗಲಿಲ್ಲ ಅಂದರೆ ನೀನು ಕೋಪ ಮಾಡಿಕೊಳ್ಳಬೇಡ. ಒಳ್ಳೆ ಮಾತಿನಲ್ಲಿ ಬುದ್ಧಿ ಹೇಳು. ನೀನು ಗದರಿಸೋದು, ಅವಳು ಅಳತಾ ಕೂತುಕೊಳ್ಳೋದು, ಇದು ಆಗಬಾರದು.” ಗೋಪಣ್ಣನ ಸೂಳೆಯ ಕುರಿತು ಶೇಷಮ್ಮ ಆಡುವ ಮಾತಿನಲ್ಲಿ ದ್ವೇಷ, ವ್ಯಂಗ್ಯ, ಸಿಟ್ಟು ಇಲ್ಲ. “ಬಿಟ್ಟಿತು ಅನ್ನು ತಾಯಿ. ನಿನ್ನ ಕುಲದ ಬಾಳನ್ನು ನೀನು ಬಾಳಿದೆ. ನಿನಗೆ ಅದು ಪಾಪ ಅಲ್ಲ. ಅದು ನಿನ್ನ ಧರ್ಮ.”
ಗಂಡ ಸತ್ತ ಮೇಲೆ ತಮ್ಮನ ಮನೆಯಲ್ಲಿದ್ದ ಆರು ತಿಂಗಳುಗಳಲ್ಲಿ ನಾದಿನಿಯಿಂದ, ಅವರ ತಾಯಿಯಿಂದ ಅವಮಾನಕ್ಕೊಳಗಾದ ಶೇಷಮ್ಮ ತನ್ನ ಮೇಲಿನ ಆಕ್ರಮಣಗಳನ್ನು ಯಾವ ವಿರೋಧವಿಲ್ಲದೆ ಸಹಿಸಿಕೊಂಡಳು ಎಂದಲ್ಲ. ಮಾತಿಗೆ ಪ್ರತಿಮಾತು, ಚಾಡಿ, ದೂರುಗಳು ಪರಿಹಾರವಲ್ಲ ಎಂದು ಅವಳಿಗೆ ಗೊತ್ತು. ಇದರಿಂದ ತಮ್ಮ ಮತ್ತು ಅವನ ಹೆಂಡತಿಯ ನಡುವೆ ಮನಸ್ತಾಪ ಉಂಟಾಗುವುದು ಅವಳಿಗೆ ಇಷ್ಟವಿಲ್ಲ. ಬಾಳು ಅಸಹನೀಯವಾದಾಗ, ಸ್ವತಂತ್ರವಾಗಿ, ಸ್ವಾವಲಂಬಿಯಾಗಿ ಬಾಳಲು ನಿರ್ಧರಿಸಿ, ಮಕ್ಕಳನ್ನು ಕರೆದುಕೊಂಡು ಬೆಂಗಳೂರಿಗೆ ಹೋಗುತ್ತಾಳೆ. ಛತ್ರದಲ್ಲಿ ತಂಗಿದ್ದಾಗ ಮುದುಕಿಯೊಬ್ಬಳು ಪರಂಗಿಯವನನ್ನು ಕರೆ ತಂದು ಆತನನ್ನು ತೃಪ್ತಿಪಡಿಸಿ ಹಣ ಸಂಪಾದನೆ ಮಾಡು ಎಂದು ಆಕೆಗೆ ಉಪದೇಶಿಸುತ್ತಾಳೆ. ಶೇಷಮ್ಮ ಇದಕ್ಕೆ ಒಪ್ಪದೆ ಜೋರಾಗಿ ಕೂಗಿದಾಗ ಇನ್ನೊಬ್ಬ ಬಿಳಿಯನು ಆಕೆಯನ್ನು ಕಾಪಾಡುತ್ತಾನೆ. ಆಕೆಯ ಮೇಲೆ ಗೌರವ ವಿಶ್ವಾಸಗಳನ್ನು ವ್ಯಕ್ತಪಡಿಸುತ್ತಾನೆ. ಆಕೆಯ ಮನಸ್ಸನ್ನು ಅರಿತುಕೊಳ್ಳುತ್ತಾನೆ. ಮುಂದಿನ ದಿನಗಳಲ್ಲಿ ಆಕೆಯ ಹಿರಿಯ ಮಗನಿಗೆ ಸಹಾಯವನ್ನು ಮಾಡುತ್ತಾನೆ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಗೌರವಸ್ಥರಿಂದ ಮರುಮದುವೆಯ ಪ್ರಸ್ತಾಪ ಬಂದಾಗ, ಅದರಿಂದ ತನಗೊಂದು ಬಾಳು ದೊರಕಿ ಸಂಕಷ್ಟಗಳನ್ನು ನೀಗಿಕೊಳ್ಳುವ ಅವಕಾಶ ಒದಗಿದರೂ ಶೇಷಮ್ಮ ಅದನ್ನು ಒಪ್ಪುವುದಿಲ್ಲ. ಇದು ಶೇಷಮ್ಮ ತನ್ನ ಲೈಂಗಿಕತೆಯನ್ನು ನಿರಾಕರಿಸಿದ ಪರಿ. ಕಠಿಣವಾದ ದುಡಿಮೆಯಲ್ಲಿ, ದೇವರ ಸೇವೆಯಲ್ಲಿ ಸಾಂಪ್ರದಾಯಿಕ ನಂಬಿಕೆಗಳಲ್ಲಿ ಆಕೆಯು ತನ್ನ ಕಾಮನೆಗಳನ್ನು ನಿಯಂತ್ರಿಸಿಕೊಳ್ಳುತ್ತಾಳೆ. ಆದರೆ ಈ ವಿಷಯದಲ್ಲಿ ಜಾರಿದವರನ್ನು ಆಕೆ ಹೀನಾಯವಾಗಿ ಕಾಣುವುದಿಲ್ಲ.
ನೆಂಟರ, ನೆರೆಹೊರೆಯವರಿಂದ ಶೇಷಮ್ಮ ಒಂದು ಬಗೆಯ ಹಿಂಸೆ ಅನುಭವಿಸಿದರೆ ತಾನು ಕೆಲಸ ಮಾಡುತ್ತಿದ್ದ ಮನೆಯವರಿಂದ ಮತ್ತೊಂದು ಬಗೆಯ ಹಿಂಸೆ ಮುಜುಗರಗಳನ್ನು ಅನುಭವಿಸುತ್ತಾಳೆ. ಪ್ರತಿಷ್ಠಿತ ಮನೆತನದ ಸೊಸೆ ತಂಗಮ್ಮಳು ಶೇಷಮ್ಮ ಕೂಲಿ ಮಾಡುವ ಹೆಂಗಸು ಎಂದು ಅಪಹಾಸ್ಯವನ್ನು ಮಾಡುತ್ತಾಳೆ. ಅವಳ ಅತ್ತೆಯು ಶೇಷಮ್ಮನಿಗೆ ನಾಲ್ಕು ಉಂಡೆಗಳನ್ನು ಕೊಟ್ಟಿದ್ದರೆ ಇವಳು ಅವುಗಳನ್ನು ಕದ್ದಳೆಂಬ ಅಪವಾದವನ್ನು ಹೊರಿಸುತ್ತಾಳೆ. ಶೇಷಮ್ಮ ಆ ಮನೆಯನ್ನು ಬಿಟ್ಟು ಹೋಗುತ್ತಾಳೆಯೇ ಹೊರತು ಪ್ರತಿದಾಳಿಯನ್ನು ಮಾಡುವುದಿಲ್ಲ. ಮುಂದೆ ಆಕೆಯ ಸ್ಥಿತಿ ಉತ್ತಮವಾಗಿ ಶ್ರೀಮಂತರ ಮನೆಯ ಬೀಗಿತ್ತಿಯಾದರೂ ಸಮಾರಂಭದಲ್ಲಿ ತಂಗಮ್ಮ ಶೇಷಮ್ಮನ ಬಗ್ಗೆ ಹಗುರವಾಗಿ ಮಾತನಾಡಿ ಮುಜುಗರಕ್ಕೊಳಪಡಿಸುತ್ತಾಳೆ. “ಕೂಲಿ ಹೆಂಗಸಿಗೆ ಸೊಸೆಯಾದೆನೆಂದು ಹುಡುಗಿಗೆ, ಬೀಗಿತಿಯಾದೆನೆಂದು ಹುಡುಗಿಯ ತಾಯಿಗೆ ಹೀನಾಯವಾಗಿತ್ತು. ಶೇಷಮ್ಮ ಮನೆಗೆ ಬಂದರು. ತುಂಬ ದುಃಖಪಟ್ಟರು. ಊರಲ್ಲೇ ಇದ್ದು, ಇದ್ದ ಕೊಂಚದರಲ್ಲಿ ಉಂಡು ಬಾಳಿದ್ದರೆ ತಮ್ಮನ್ನು ಯಾರೂ ಕೂಲಿ ಹೆಂಗಸರು ಎನ್ನುತ್ತಿರಲಿಲ್ಲ. ಗಂಡ ಬಾಳಿಸಲಿಲ್ಲ ಎಂಬ ಬೇಸರಕ್ಕಾಗಿ ಊರು ಬಿಟ್ಟು ಬಂದು, ಮಕ್ಕಳನ್ನು ಸಾಕುವುದಕ್ಕೆ ಕೆಲಸದ ಹೆಂಗಸಾಗಿ ದುಡಿದಿದ್ದರು. ಮಕ್ಕಳನ್ನು ತಾನೇ ಸಾಕಿದೆ ಎಂದು ಹೆಮ್ಮೆ ಪಟ್ಟಿದ್ದರು. ಆ ಹೆಮ್ಮೆಯನ್ನು ಮುರಿಯುವುದಕ್ಕಾಗಿ ದೇವರು ಆಕೆಯ ಕೈಲಿ ಇಂಥ ಮಾತನಾಡಿಸಿದರು. ಅವರು ದೇವರ ಪೀಠದಲ್ಲಿ ಕುಳಿತು ‘ನಾನು ಅಹಂಕಾರಪಟ್ಟಿದ್ದು ತಪ್ಪಾಯಿತು. ಆದರೆ ಅದನ್ನು ಮುರಿಯುವುದಕ್ಕೆ ಈ ಕೊಡಲಿ ಪೆಟ್ಟು ಬೇಕಾಯಿತೇ? ನಿನ್ನ ಇಚ್ಛೆ. ತಲೆ ಎತ್ತಿರು ಎನ್ನು; ಎತ್ತಿರುತ್ತೇನೆ. ತಗ್ಗಿಸಿರು ಎನ್ನು; ತಗ್ಗಿಸಿರುತ್ತೇನೆ. ನಿನ್ನ ಇಷ್ಟದಂತೆ ಮಾಡು, ಕೈ ಮಾತ್ರ ಭದ್ರವಾಗಿ ಹಿಡಿದಿರು” ಎಂದು ಬೇಡಿಕೊಳ್ಳುತ್ತಾರೆ. ತನಗೆ ಅವಮಾನ ಮಾಡಿದವರನ್ನು ಆಕೆ ಸೇಡಿನಿಂದ ಕಾಣುವುದಿಲ್ಲ. ಕಷ್ಟ ಬಂದಾಗ ದೇವರು ತನ್ನನ್ನು ಪರೀಕ್ಷಿಸುತ್ತಿದ್ದಾನೆ ಎಂದು ತಿಳಿಯುವ ಶೇಷಮ್ಮ ತನಗೆ ಒಳಿತಾದಾಗ ಅದು ದೇವರ ಕರುಣೆ ಎಂದು ನಂಬುತ್ತಾಳೆ. ಆದರೆ ಅದು ದೇಶಾವರಿ ಮಾತಲ್ಲ. ಬದುಕಿನ ಉರಿಯಲ್ಲಿ ಬೇಯುತ್ತಾ, ನೋಯುತ್ತಾ ಗಳಿಸಿಕೊಂಡ ಕಾಣ್ಕೆ. ತಂಗಮ್ಮನ ಸಂಸಾರ ಮುರಿದಾಗ ಶೇಷಮ್ಮನೇ ಅದನ್ನು ಸರಿಪಡಿಸುತ್ತಾಳೆ. ಮಾದಾವರದಲ್ಲಿ ಕಾಟಕೊಟ್ಟಿದ್ದ ಸುಬ್ಬಮ್ಮ “ನೀನು ಪುಣ್ಯವಂತೆ. ಬಾಯಿ ಮುಚ್ಚಿಕೊಂಡು ಲೋಕವನ್ನು ಗೆದ್ದೆ. ಬಾಯಿ ಬಿಚ್ಚಿ ಕೆಟ್ಟವರು ಅನಿಸಿಕೊಂಡೆವು. ನಮ್ಮ ಮೇಲೆ ಕೋಪ ಇರಿಸಿಕೊಳ್ಳಬೇಡಮ್ಮ” ಎಂದಾಗ ಶೇಷಮ್ಮ ಬೀಗುವುದಿಲ್ಲ. “ನೀವು ಹೇಳಿದ ಮಾತು ಆ ಹೊತ್ತು ಸೀಯಾಗಿತ್ತೋ ಕಹಿಯಾಗಿತ್ತೋ, ಈ ಹೊತ್ತಿಗಂತೂ ಆಶೀರ್ವಾದವಾಗಿದೆ. ಬಾಯಿ ಮುಚ್ಚಿಕೊಂಡು ಯಾರು ಗೆದ್ದದ್ದು? ನೀವು ಯಾವಾಗಲೂ ಮಾತನಾಡುತ್ತಾ ಇರಿ. ಅದರಿಂದ ಎಲ್ಲರಿಗೂ ಒಳ್ಳೆಯದಾಗತಾ ಇರಲಿ” ಎಂದ ಶೇಷಮ್ಮನ ಉತ್ತರದಲ್ಲಿ ಬಾಳಿನ ವಿವೇಕವಿದೆ.
ಶೇಷಮ್ಮ ಚರಿತ ಎಂದು ಕರೆಯಬಹುದಾದ ಈ ಕಾದಂಬರಿಯು ಶೇಷಮ್ಮನ ಚಾರಿತ್ರ್ಯದ ಶಕ್ತಿಯನ್ನು ಬಿಂಬಿಸುತ್ತದೆ. ಈ ಕೃತಿಯು ಯಾರನ್ನೂ ವೈಭವೀಕರಿಸುವುದಿಲ್ಲ; ತುಚ್ಛೀಕರಿಸುವುದಿಲ್ಲ. ಶೇಷಮ್ಮನ ಕಷ್ಟನಷ್ಟಗಳನ್ನು ಭಾವಾತಿರೇಕದಿಂದ ಬಣ್ಣಿಸಿ ಕಣ್ಣೀರು ತರಿಸುವುದಿಲ್ಲ. ಶೇಷಮ್ಮನ ಸ್ಥಿತಿಯನ್ನು ನಿರೂಪಿಸುತ್ತಾ ಆಕೆಯ ವ್ಯಕ್ತಿತ್ವದೊಳಗಿನ ಸಾಧ್ಯತೆಗಳನ್ನು ಅನಾವರಣಗೊಳಿಸುತ್ತದೆ. ಶೇಷಮ್ಮನ ದೈವ ಶ್ರದ್ಧೆಯನ್ನಷ್ಟೇ ಒತ್ತಿ ಹೇಳದೆ ಆಕೆಯ ಶ್ರಮಜೀವನ, ಕರ್ಮಯೋಗದೆಡೆಗೆ ಗಮನ ಹರಿಸುತ್ತದೆ. ಆಕೆಯ ತಾಳ್ಮೆಯನ್ನು ಮಾತ್ರ ಹೊಗಳದೆ ಛಲ ಮತ್ತು ಸಂಕಲ್ಪ ಬಲವನ್ನು ಮುಂದಿಡುತ್ತದೆ. ಬಡ ಹೆಣ್ಣು ಮಗಳೊಬ್ಬಳು ತನ್ನದೇ ರೀತಿಯಲ್ಲಿ ತತ್ವಜ್ಞಾನಿಯಾಗಿ ಬೆಳೆದ ರೀತಿಯನ್ನು ವಿವರಿಸುತ್ತದೆ. ಆಕೆಯ ಲೋಕಗ್ರಹಿಕೆ, ತತ್ವಜ್ಞಾನವನ್ನು ಒಪ್ಪದಿರುವವರು ಕೂಡ ಆಕೆಯ ಗಟ್ಟಿತನ ಮತ್ತು ಸಾಚಾತನವನ್ನು ಅನುಮಾನಿಸಲಾರರು. ಈ ರೀತಿಯಲ್ಲಿ ಮಾಸ್ತಿಯವರು ಆಧುನಿಕ ಕನ್ನಡ ಸಾಹಿತ್ಯಕ್ಕೆ ಘನವಾದ ಪಾತ್ರ ಮಾದರಿಯನ್ನು ನೀಡಿದ್ದಾರೆ. ಆದರೆ ಶಿವರಾಮ ಕಾರಂತ, ಎಂ.ಕೆ. ಇಂದಿರಾ ಅವರ ಕಾದಂಬರಿಗಳಲ್ಲಿ ಇಂಥ ಮಹಿಳೆಯರು ಕಾಣಿಸಿಕೊಂಡಿರುವುದರಿಂದ ಶೇಷಮ್ಮನ ಪಾತ್ರವನ್ನು ಒಂಟಿ ಮಾದರಿ ಎನ್ನಲಾಗುವುದಿಲ್ಲ.
ಶೇಷಮ್ಮನ ಮೂಲಕ ಒಂದು ಕಾಲ ಧರ್ಮ ಮತ್ತು ಯುಗಧರ್ಮವನ್ನು ಮನಗಾಣಿಸುವ ಈ ಕಾದಂಬರಿಯು ವ್ಯಕ್ತಿಚರಿತವಲ್ಲ. ವಸಾಹತುಶಾಹಿ ವ್ಯವಸ್ಥೆ, ರಾಜರ ಕಾಲದ ಆಡಳಿತ ಮತ್ತು ಶಿಕ್ಷಣ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಕೃತಿಯು ಸ್ವಾತಂತ್ರ್ಯ ಪೂರ್ವ ಕಾಲದ ಜೀವನ ಕ್ರಮವನ್ನು ಕಟ್ಟಿಕೊಟ್ಟಿದೆ. ಮತಾಂತರದ ಬಿಕ್ಕಟ್ಟು, ಆಂಗ್ಲ ಶಿಕ್ಷಣಕ್ಕೆ ದೊರೆತ ಮಹತ್ವ, ಬದಲಾಗುವ ಆಶೋತ್ತರಗಳು, ಅದರಿಂದ ಉಂಟಾಗುವ ಸಮಸ್ಯೆ ಮುಂತಾದವುಗಳನ್ನು ಉಚಿತ ಪ್ರಮಾಣದಲ್ಲಿ ಒಳಗೊಂಡಿದೆ. ಶೇಷಮ್ಮನ ವೈಯಕ್ತಿಕ ಬದುಕು ಮತ್ತು ಸಂವೇದನೆ ಪರಂಪರಾಗತ ಹಿಂದೂ ಸಂಸ್ಕೃತಿ ಸಂಪ್ರದಾಯಗಳ ಹಿನ್ನೆಲೆಯಲ್ಲಿ ರೂಪುಗೊಂಡಿದ್ದರೂ ಬದಲಾಗುತ್ತಿದ್ದ ಕಾಲ ಮತ್ತು ಆಕೆಯ ಜೀವನ, ಆ ಪಲ್ಲಟದ ನಡುವೆ ಒಂದು ವ್ಯಕ್ತಿತ್ವ ಮತ್ತು ಬಾಳು ರೂಪುಗೊಂಡ ಬಗೆಯನ್ನು ಪರವಿರೋಧಗಳ ಸರಳ ನೆಲೆಯನ್ನು ಮೀರಿದ ಹದದಲ್ಲಿ ನಿರೂಪಿಸಿದ ಕಾದಂಬರಿಯು ಸಾತ್ವಿಕವಾದದ್ದು ದುರ್ಬಲವಾಗಿರಬೇಕಿಲ್ಲ ಎಂದು ತೋರಿಸಿಕೊಡುವಲ್ಲಿ ಯಶಸ್ವಿಯಾಗಿದೆ.

ವಿಮರ್ಶಕರು | ಡಾ. ಸುಭಾಷ್ ಪಟ್ಟಾಜೆ
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್, ಸುನಂದಾ ಬೆಳಗಂವಕರ ಜೀವನ ಮತ್ತು ಸಾಹಿತ್ಯ, ಬಹುಮುಖಿ: ಮೋಹನ ಕುಂಟಾರ್ ಬದುಕು ಮತ್ತು ಸಾಧನೆ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.
