ಮಂಗಳೂರು : ಏಮ್ ಫಾರ್ ಸೇವಾ ಸಂಸ್ಥೆ ಚಾರಿಟಿ ಕಾರ್ಯಕ್ರಮಗಳಿಗೆ ಪೂರಕವಾಗಿ ದಿನಾಂಕ 12 ಜನವರಿ 2025ರಂದು ಸಂಜೆ 6-00 ಗಂಟೆಗೆ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ಸಂಗೀತ ಭಾರತಿ ಪ್ರತಿಷ್ಠಾನದ ಸಹಯೋಗದೊಂದಿಗೆ ಮ್ಯೂಸಿಕಲ್ ಸೆಲೆಬ್ರೇಷನ್ ಆಫ್ ರಾಮ ಎಂಬ ಪರಿಕಲ್ಪನೆಯೊಂದಿಗೆ ‘ರಾಮಂ ಭಜೇ’ ಸಂಗೀತ ಕಾರ್ಯಕ್ರಮ ಆಯೋಜಿಸಿದೆ. ದೇಶದ ಹೆಸರಾಂತ ಯುವ ಕಲಾವಿದೆ ಸೂರ್ಯಗಾಯತ್ರಿ ಇವರ ಹಾಡುಗಾರಿಕೆ ಇರಲಿದೆ.
ಏಮ್ ಫಾರ್ ಸೇವಾ ಸಂಸ್ಥೆ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೊದಲಬಾರಿಗೆ ಮಂಗಳೂರಿನಲ್ಲಿ ಸಂಗೀತಾಸಕ್ತರಿಗೆ ಹೊಸ ರೀತಿಯ ಸಂಗೀತಾನುಭವ ನೀಡಬೇಕು ಎಂಬ ಉದ್ದೇಶದಿಂದ ದೇಶ-ವಿದೇಶಗಳ ಪ್ರತಿಷ್ಠಿತ ವೇದಿಕೆಗಳಲ್ಲಿ ಸುಶ್ರಾವ್ಯ ಸಂಗೀತದಿಂದ ಹೆಸರುವಾಸಿಯಾಗಿರುವ ಸೂರ್ಯಗಾಯತ್ರಿಯವರ ಕಾರ್ಯಕ್ರಮ ಆಯೋಜಿಸಿದೆ. ಸೂರ್ಯಗಾಯತ್ರಿ ವಿವಿಧ ಹಾಡುಗಳ ಮೂಲಕ ರಾಮಾರಾಧನೆ ಮಾಡಲಿದ್ದು, ಸಂಗೀತ ಕ್ಷೇತ್ರದ ದಿಗ್ಗಜರೆನಿಸಿಕೊಂಡ ವಿದ್ವಾನ್ ಸುಂದರ ರಾಜನ್ ವೀಣೆ, ವಿದ್ವಾನ್ ಆದರ್ಶ ಅಜಯ್ ಕುಮಾರ್ ವಯೋಲಿನ್, ವಿ.ಪಿ.ವಿ. ಅನಿಲ್ ಕುಮಾರ್ ಮೃದಂಗ, ಪಂಡಿತ್ ಪ್ರಶಾಂತ್ ಶಂಕರ್ ತಬಲ, ಶೈಲೇಶ್ ಮಾರರ್ ತಾಳವಾದ್ಯದಲ್ಲಿ ಸಹಕರಿಸಲಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣಕ್ಕೆ ಉತ್ತೇಜನ ನೀಡಲು ಬಹುಪ್ರಕಾರದ ಬಹುಭಾಷಾ ಸಂಗೀತ ಕಾರ್ಯಕ್ರಮ ಇದಾಗಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ.
ಸ್ವಾಮಿ ದಯಾನಂದ ಸರಸ್ವತಿ :
ಸ್ವಾಮಿ ದಯಾನಂದ ಸರಸ್ವತಿ ಅವರು ಚಿಂತಕ, ತತ್ವಜ್ಞಾನಿ, ಆಧ್ಯಾತ್ಮಿಕ ಶಿಕ್ಷಕ ಮತ್ತು ವೇದಾಂತದ ಶ್ರೇಷ್ಠ ಗುರುಗಳಲ್ಲಿ ಒಬ್ಬರು. ತಮಿಳುನಾಡಿನ ತಿರುವರೂರು ಜಿಲ್ಲೆಯ ಕಾವೇರಿ ನದಿ ದಡದಲ್ಲಿರುವ ಮಂಜಕ್ಕುಡಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ಇವರು ಗ್ರಾಮೀಣ ಭಾರತದ ಮಹಿಳೆಯರ ಸಬಲೀಕರಣ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ಅಲ್ ಇಂಡಿಯಾ ಮೂವ್ ಮೆಂಟ್ ಆಫ್ ಸೇವಾ (ಏಮ್ ಫಾರ್ ಸೇವಾ) ಸಂಸ್ಥೆ ಸ್ಥಾಪಿಸಿದರು.
ಪ್ರಸ್ತುತ ನಮ್ಮ ದೇಶದ 17 ರಾಜ್ಯಗಳಲ್ಲಿ 95 ಛಾತ್ರಾಲಯ ಸ್ಥಾಪಿಸಿ, ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವಸತಿ ವ್ಯವಸ್ಥೆ ಮಾಡಿಕೊಂಡು ಬರುತ್ತಿದೆ. ವಿಶ್ವಪ್ರಸಿದ್ದ ಅಧ್ಯಾತ್ಮಿಕ ಶಿಕ್ಷಕ, ಚಿಂತಕರಾಗಿ ಬೆಳೆದು, ವಿಶ್ವ ಪ್ರಮುಖ ವೇದಿಕೆಯಲ್ಲಿ ಸ್ವಾಮಿ ದಯಾನಂದ ಸರಸ್ವತಿ ಪ್ರಭಾವ ಹೊಂದಿದ್ದರು. ಮರಣೋತ್ತರವಾಗಿ ಪದ್ಮಭೂಷಣ ಪ್ರಶಸ್ತಿ ಪಡೆದ ಅವರು, ಏಮ್ ಫಾರ್ ಸೇವಾ, ಸ್ವಾಮಿ ದಯಾನಂದ ಶೈಕ್ಷಣಿಕ ಟ್ರಸ್ಟ್ (ಎಸ್.ಡಿ.ಇ.ಟಿ.), ಅರ್ಷ ವಿದ್ಯಾ ರಿಸರ್ಚ್ ಮತ್ತು ಪಬ್ಲಿಕೇಷನ್ ಟ್ರಸ್ಟ್ ಮತ್ತು ಎಮ್ ಫಾರ್ ಸೇವಾ ಸಂಸ್ಥೆ ಭಾರತ ಮತ್ತು ಅಮೆರಿಕಾದ್ಯಂತ 25ಕ್ಕೂ ಅಧಿಕ ಘಟಕವನ್ನು ಹೊಂದಿದೆ.