ಬೈಲಹೊಂಗಲ: ರಂಗ ಚಿನ್ನಾರಿ ಕಾಸರಗೋಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರು ಅಕ್ಕಮಹಾದೇವಿ ವಿಮೆನ್ಸ್ ಆಂಡ್ ಕಾಮರ್ಸ್ ಪದವಿ ಕಾಲೇಜು ಸಹಕಾರದೊಂದಿಗೆ ಬೈಲಹೊಂಗಲದಲ್ಲಿ ಏರ್ಪಡಿಸಿದ ‘ರಂಗ ರಸಗ್ರಾಹಿ’ ಶಿಬಿರವು ದಿನಾಂಕ 08-07-2023 ಹಾಗೂ 09-07-2023 ರಂದು ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಬೇವಿನಕೊಪ್ಪದ ಆನಂದಾಶ್ರಮದ ಶ್ರೀ ಶ್ರೀ ವಿಜಯಾನಂದ ಸ್ವಾಮೀಜಿ “ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಒರೆಗೆ ಹಚ್ಚಿ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಕೆಲಸವನ್ನು ರಂಗ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಮಾಡಿದ್ದಾರೆ. ಗಡಿನಾಡು ಕಾಸರಗೋಡಿನಿಂದ ‘ರಂಗ ಚಿನ್ನಾರಿ’ ತಂಡದ ನೇತೃತ್ವದಲ್ಲಿ ಬೆಳಗಾಂನ ಗಡಿಯಲ್ಲಿರುವ ಬೈಲಹೊಂಗಲದ ವಿದ್ಯಾರ್ಥಿಗಳಿಗೆ ‘ರಂಗ ರಸಗ್ರಾಹಿ’ ಶಿಬಿರವನ್ನು ಮಾಡುವ ಮೂಲಕ ಹೊಸ ಸಾಹಸದೊಂದಿಗೆ ರಂಗಭಾಷೆಯನ್ನು ಬರೆದಿದ್ದಾರೆ. ರಂಗಭೂಮಿ ಅನ್ನುವುದು ಜಾತಿ, ಮತ ಮತ್ತು ಧರ್ಮವನ್ನು ಮೀರಿದ ವೇದಿಕೆ. ಅಲ್ಲಿ ಸಿಗುವ ಅನುಭವ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ. ಪೂರ್ವಾಶ್ರಮದಲ್ಲಿ ದೇಶಪ್ರೇಮಿ ಎಂಬ ನಾಟಕವನ್ನು ರಚಿಸಿ ನಿರ್ದೇಶಿಸಿದ ಮೂಲತಃ ಗಡಿಪ್ರದೇಶವಾದ ಮಂಜೇಶ್ವರದ ನಿವಾಸಿಯಾಗಿದ್ದ ನಾನು ಕಾಸರಗೋಡು ಚಿನ್ನಾ ಅವರ ಬೆಳವಣಿಗೆಯನ್ನು ಕಂಡು ಸ್ವತಃ ಅವರ ಅಭಿಮಾನಿಯಾಗಿದ್ದೇನೆ.” ಎಂದರು.
ಸುಮಾರು 175 ವಿದ್ಯಾರ್ಥಿನಿಯರು ಈ ಶಿಬಿರದಲ್ಲಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಗಣಾದಾರಿಯವರು ಮಾತನಾಡಿ “ಗ್ರಾಮೀಣ ಪ್ರದೇಶದ ಮಕ್ಕಳಿಗೆ ಈ ರೀತಿಯ ಅನುಭವ ಹೊಸತು. ನಮ್ಮ ಕಾಲೇಜಿನ ನೇತೃತ್ವದಲ್ಲಿ ಮತ್ತಷ್ಟು ರಂಗಭೂಮಿ ಹಾಗೂ ಸಾಹಿತ್ಯಿಕ ಕೆಲಸಗಳನ್ನು ಮಾಡುತ್ತೇವೆ” ಎಂದರು.
ರಂಗನಟ ಮತ್ತು ನಿರ್ದೇಶಕ ಕಾಸರಗೋಡು ಚಿನ್ನಾಅವರು ಮಾತನಾಡಿ “ರಂಗಭೂಮಿ ಅನ್ನೋದು ನನ್ನ ಪ್ರೀತಿಯ ಕ್ಷೇತ್ರ ಮತ್ತು ನನ್ನನ್ನು ಈ ಮಟ್ಟಕ್ಕೆ ಬೆಳೆಸಿರೋ ಕ್ಷೇತ್ರ. ನಾನು ಕಲಿತ ವಿದ್ಯೆಯನ್ನು ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವ ಕೆಲಸವನ್ನು ಬಹಳ ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ.” ಎನ್ನುತ್ತಾ ‘ರಂಗ ಚಿನ್ನಾರಿ’ ಸಂಸ್ಥೆಯು ಕಾಸರಗೋಡಿನ 3000 ಮಕ್ಕಳಿಗೆ ‘ರಂಗ ಸಂಸ್ಕೃತಿ’ ಕಾರ್ಯಕ್ರಮವನ್ನು ಏರ್ಪಡಿಸಿದ ಕುರಿತು ಹೇಳಿದರು.
ಮೂಕಾಭಿನಯ, ಮುಖವಾಡ ತಯಾರಿಕೆ, ಹಾಡುಗಳು, ಪ್ರಸಾಧನ, ಸೇರಿದಂತೆ ನಟನಾ ಶಿಬಿರವನ್ನು ನಡೆಸಲಾಯಿತು. ಚಲನಚಿತ್ರನಟ ಮತ್ತು ನಿರ್ದೇಶಕ ಪ್ರಕಾಶ್ ಬೋಸ್ನವರ್ಕರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ರಂಗನಟ ಮತ್ತು ನಿರ್ದೇಶಕ ಅರುಣ್ ಪ್ರಕಾಶ್ ನಾಯಕ್, ಕಾಶಿನಾಥ್ ಬಿರಾದಾರ್ ಎಂ.ಎಚ್.ಪೇಂಟೇಲ್ ವೇದಿಕೆಯಲ್ಲಿದ್ದರು.
ವಿದ್ಯಾರ್ಥಿನಿ ಅನುರಾಧ ಯಮನಪ್ಪನವರ್ ಸ್ವಾಗತಿಸಿ ನಿರ್ವಹಿಸಿದರು. ರಂಗ ನಟ, ನಿರ್ದೇಶಕ ಮತ್ತು ಶಿಬಿರದ ನಿರ್ದೇಶಕರಾದ ಕಾಸರಗೋಡು ಚಿನ್ನಾ ಅವರನ್ನು ಕಾಲೇಜಿನ ಪರವಾಗಿ ಶಾಲು ಹೊದಿಸಿ, ಬಸವಣ್ಣನವರ ಭಾವಚಿತ್ರವನ್ನು ನೀಡಿ ಸನ್ಮಾನಿಸಲಾಯಿತು.
ಶಿಬಿರಾರ್ಥಿಗಳಾದ ಕುಮಾರಿ ನಿಶಾ ಮುಕುಂದ ಮತ್ತು ನಂದಿತಾ ಅವರು ರಂಗಾನುಭವವನ್ನು ಹಂಚಿಕೊಂಡರು.