ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ಆಯೋಜಿಸಿದ್ದ 222ನೇ ತಿಂಗಳ ‘ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ’ವು ದಿನಾಂಕ 25-02-2024ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ಣಾಟಕ ಬ್ಯಾಂಕ್ ಪ್ರಾದೇಶಿಕ ಜಿಲ್ಲಾ ಕಚೇರಿ ಸಹಾಯಕ ಪ್ರಬಂಧಕ ಎಚ್.ಎ. ನಾಗರಾಜ್ ಇವರು ಮಾತನಾಡಿ “ಸಾಹಿತ್ಯದ ಒಲವು ಕಡಿಮೆಯಾಗುತ್ತಿರುವ ಈ ಹೊತ್ತಿನಲ್ಲಿ ಸೃಜನಶೀಲತೆಯ ವೃದ್ಧಿಗೆ ಸಾಹಿತ್ಯ ಹುಣ್ಣಿಮೆ ಪ್ರೇರಣಾದಾಯಕ. ಸಾಹಿತ್ಯ ಕ್ಷೇತ್ರಕ್ಕೆ ಶಿವಮೊಗ್ಗ ಜಿಲ್ಲೆಯ ಕೊಡುಗೆ ಅಪಾರ. ಹೊಸತನದ ಪ್ರಬುದ್ಧತೆಗೆ ಸಾಹಿತ್ಯ ಸಾಕಾರವಾಗಿದ್ದು, ಮುಂದಿನ ದಿನಗಳಲ್ಲಿ ಕರ್ಣಾಟಕ ಬ್ಯಾಂಕ್ ವತಿಯಿಂದ ಸಾಹಿತ್ಯ ಹುಣ್ಣಿಮೆ ನಡೆಸಲು ಅನುವು ಮಾಡಿಕೊಡಬೇಕು” ಎಂದು ಕೋರಿದರು.
“2004ರಲ್ಲಿ ಪ್ರಾರಂಭವಾದ ಸಾಹಿತ್ಯ ಹುಣ್ಣಿಮೆಯನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ. ಸಾಹಿತ್ಯ ಹಾಗೂ ಸಾಂಸ್ಕೃತಿಕ ಮನಸ್ಸುಗಳನ್ನು ಕಟ್ಟುವಲ್ಲಿ ಸಾಹಿತ್ಯ ಹುಣ್ಣಿಮೆಯನ್ನು ಪ್ರೇರಕ ವೇದಿಕೆಯಾಗಿ ರೂಪಿಸುತ್ತಾ ಬಂದಿದ್ದೇವೆ” ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಮಂಜುನಾಥ ಹೇಳಿದರು.
ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದ ರಿಚರ್ಡ್ ಲೂಯಿಸ್ ಹಾಗೂ ಕಿರ್ಲೋಸ್ಕರ್ ಸತ್ಯ ತಂಡ ನಡೆಸಿಕೊಟ್ಟ ನಗೆಹಬ್ಬ ನೆರೆದಿದ್ದವರ ಮನಸೂರೆಗೊಂಡಿತು. ಕವಿಗಳಾದ ಯೋಗೇಂದ್ರ ನಾಯ್ಕ, ಶ್ರೀನಿವಾಸ ನಗಲಾಪುರ, ಉಮಾಪತಿ, ಬಾಲರಾಜ್ ಕವನ ವಾಚಿಸಿದರು. ಕುವೆಂಪು ಕ್ಷೇಮಾಭಿವೃದ್ಧಿ ಸೇವಾ ಸಂಘದ ಗೌರವ ಅಧ್ಯಕ್ಷ ಬಾಲಸುಬ್ರಹ್ಮಣ್ಯಂ, ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಎಸ್.ಕೆ. ಲೋಕೇಶ್, ಸಾಹಿತ್ಯ ವೇದಿಕೆ ಕೋಶಾಧ್ಯಕ್ಷ ಎಂ. ಮಧುಸೂದನ್ ಐತಾಳ್, ಉಪಾಧ್ಯಕ್ಷರಾದ ಟಿ. ಕೃಷ್ಣಪ್ಪ, ಭಾರತಿ ರಾಮಕೃಷ್ಣ ಉಪಸ್ಥಿತರಿದ್ದರು. ಕೆ. ಮಂಜಪ್ಪ ನಿರೂಪಿಸಿ, ಕಸಾಪ ತಾಲೂಕು ಘಟಕದ ಅಧ್ಯಕ್ಷೆ ಮಹಾದೇವಿ ಸ್ವಾಗತಿಸಿ, ಎಂ.ಎಂ. ಸ್ವಾಮಿ ವಂದಿಸಿದರು.