ಧಾರವಾಡ : ಗೋಕಾಕದ ನಾಡಿನ ಸಮಾಚಾರ ಸೇವಾ ಸಂಘ ಹಾಗೂ ಪತ್ರಿಕಾ ದಿನಾಚರಣೆಯ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ವಿತರಣಾ ಸಮಾರಂಭವು ಧಾರವಾಡದ ರಂಗಾಯಣ ಸಾಂಸ್ಕೃತಿಕ ಸಮುಚ್ಚಯ ಸಭಾಭವನದಲ್ಲಿ ದಿನಾಂಕ 29-07-2023ರಂದು ಜರುಗಿತು. ಈ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಶ್ರೀಮತಿ ಉಳುವಂಗಡ ಕಾವೇರಿ ಉದಯ ಅವರನ್ನು ‘ಸಾಹಿತ್ಯ ರತ್ನ ರಾಷ್ಟ್ರೀಯ ಪ್ರಶಸ್ತಿ’ಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ಉಳುವಂಗಡ ಕಾವೇರಿಯವರು ಚಂಗುಲಂಡ ಸಿ. ಮಾದಪ್ಪ ಮತ್ತು ಸರಸ್ವತಿ ದಂಪತಿಯರ ಸುಪುತ್ರಿ. ಬಹುಭಾಷಾ ಕವಿಯಾಗಿ ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚನ ಮಾಡಿರುವರು. ಇವರ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಹುಮುಖ ಪ್ರತಿಭೆಯ ಕಾವೇರಿಯವರು ವಿವಿಧ ಸಂಘಟನೆಗಳಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದವರು. ಟಿ.ಶೆಟ್ಟಿಗೇರಿಯ ಸಂಭ್ರಮ ಮಹಿಳಾ ಸಂಸ್ಥೆಯ ಸ್ಥಾಪಕ ಸದಸ್ಯೆ ಮತ್ತು ಕಾರ್ಯದರ್ಶಿಯಾಗಿ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವರು. ಕೊಡವ ತಕ್ಕ್ ಎಳ್ತ್’ಕಾರಡ ಕೂಟ ಮತ್ತು ಕೊಡವಾಮೆರ ಕೊಂಡಾಟ ಕೂಟದ ಸದಸ್ಯೆ, ಸಿರಿಗನ್ನಡ ವೇದಿಕೆ ಮಹಿಳಾ ಘಟಕ ಪೊನ್ನಂಪೇಟೆಯ ಅಧ್ಯಕ್ಷೆ, ಕನ್ನಡ ಸಾಹಿತ್ಯ ಪರಿಷತ್ತು ಪೊನ್ನಂಪೇಟೆ ತಾಲ್ಲೂಕಿನ ಮಹಿಳಾ ಸಾಹಿತ್ಯ ಪ್ರತಿನಿಧಿ, ಶ್ರೀಮಂಗಲ ಹೋಬಳಿಯ ಮಹಿಳಾ ಪ್ರತಿನಿಧಿ, ಗುರುಕುಲ ಕಲಾಪ್ರತಿಷ್ಟಾನ ಕೊಡಗು ಜಿಲ್ಲಾ ಘಟಕದ ಗೌರವಾಧ್ಯಕ್ಷೆ, ಕರ್ನಾಟಕ ಕೊಡಗು ಲೇಖಕಿಯರ ಸಂಘದ ಸಹ ಕಾರ್ಯದರ್ಶಿ, ಕೊಡಗು ಸಿರಿಗನ್ನಡ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆ ಹಾಗೂ ಉಳುವಂಗಡ ಕುಟುಂಬದ ಕ್ರಿಕೆಟ್ ತಂಡದ ಮ್ಯಾನೇಜರ್ ಮತ್ತು ಕುಟುಂಬದ ಕ್ರೀಡಾ ಸಮಿತಿಯ ಅಧ್ಯಕ್ಷೆಯಾಗಿ ಹೀಗೆ ಹಲವು ಸಂಘಟನೆಗಳಲ್ಲಿ ಯಶಸ್ವೀ ಕಾರ್ಯ ನಿರ್ವಹಿಸಿದವರು.
ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಮಕ್ಕಳ ಪುಸ್ತಕ ಚಂದಿರ ರಾಜ್ಯ ಪ್ರಶಸ್ತಿ, ಸಾಹಿತ್ಯ ತಪಸ್ವಿ ರಾಜ್ಯ ಪ್ರಶಸ್ತಿ, ಕುಶ ದತ್ತಿನಿಧಿ ಪ್ರಶಸ್ತಿ, ಗುರುಕುಲ ಶಿರೋಮಣಿ ಪ್ರಶಸ್ತಿ ಮತ್ತು ಪುಸ್ತಕ ಪ್ರಶಸ್ತಿ ಇವು ಉಳುವಂಗಡ ಕಾವೇರಿಯವರ ಸಾಹಿತ್ಯ ಕೃಷಿಗೆ ದೊರೆತ ಗೌರವವಾಗಿದೆ. ಇವುಗಳ ಜೊತೆಗೆ ಈಗ ದೊರೆತ ‘ಸಾಹಿತ್ಯ ರತ್ನ ರಾಷ್ಟ್ರೀಯ ಪ್ರಶಸ್ತಿ’ಯು ಪ್ರಶಸ್ತಿಗಳ ಮಾಲೆಗೆ ಸೇರಿದ ಇನ್ನೊಂದು ಅಮೂಲ್ಯ ಮಣಿಯಾಗಿದೆ.
ಇವರು ಬರೆದಿರುವ ಕೊಡಗ್‌ರ ಸಿಪಾಯಿ, ಚಾಯಿ, ಶ್ರೀ ಈಶ್ವರ ಅಯ್ಯಪ್ಪ ದೇವಸ್ಥಾನ ಇತಿಹಾಸ, ಒತ್ತೋರ್ಮೆ, ಕೊದಿರ ಪೂಮಳೆ, ಕವನ ಕಾವೇರಿ, ಕೊಡಗ್‌ರ ದೇವನೆಲೆ, ಶ್ರೀ ಶನೀಶ್ವರ ದೇವಸ್ಥಾನ ಇತಿಹಾಸ, ಭೂಲೋಕತ್‌ರ ಜನ್ಮ, ಕೊಡಗ್‌ರ ಸಂಗೀತ ಸಾಹಿತ್ಯ ಕಲಾವಿದಂಗ, ಕೊಡಗಿನ ಸಂಗೀತ ಸಾಹಿತ್ಯ ಕಲಾವಿದರು ಮತ್ತು ಚಿಗುರೆಲೆಗಳು ಇತ್ಯಾದಿ ಇಪ್ಪತೈದು ಇವರ ಪ್ರಕಟಿತ ಕೃತಿಗಳು.