ಮಂಗಳೂರು : ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಶ್ರಯದಲ್ಲಿ ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಇದರ ವತಿಯಿಂದ ಆಯೋಜಿಸಿದ್ದ ‘ಸಮರ್ಪಣಂ ಕಲೋತ್ಸವ 2024’ ಕಾರ್ಯಕ್ರಮವು ದಿನಾಂಕ 13-04-2024ರಂದು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆವರಣದಲ್ಲಿ ಜರಗಿತು.
ಅಯೋಧ್ಯೆಯ ಶ್ರೀರಾಮಲಲ್ಲಾ ವಿಗ್ರಹದ ನಿರ್ಮಾತೃ ಮೈಸೂರಿನ ಶ್ರೀ ಅರುಣ್ ಯೋಗಿರಾಜ್ ಅವರನ್ನು ಶೃಂಗಾರಗೊಂಡ ವಾಹನದಲ್ಲಿ ಪೀಠದಲ್ಲಿ ಕುಳ್ಳಿರಿಸಿ ಟೆಂಪಲ್ ಸ್ಕ್ವೇರ್ ವೃತ್ತದಿಂದ ರಥ ಬೀದಿಯ ತನಕ ಮೂಲಕ ಮೆರವಣಿಗೆ ಮಾಡಲಾಯಿತು. ಭಾವುಕರಾದ ಅರುಣ್ ಯೋಗಿರಾಜ್ ದಾರಿಯುದ್ದಕ್ಕೂ ವಿನಮ್ರವಾಗಿ ನಮಸ್ಕರಿಸುತ್ತಾ ಸಾಗಿದರು.
ಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅರುಣ್ ಯೋಗಿರಾಜ್ ಇವರಿಗೆ ವಿಶ್ವಕರ್ಮ ಕಲಾ ಪರಿಷತ್ ವತಿಯಿಂದ ‘ವಿಶ್ವಕರ್ಮ ಕುಲ ತಿಲಕ’ ಬಿರುದು ನೀಡಿ ಸನ್ಮಾನಿಸಲಾಯಿತು. ಗೌರವ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅರುಣ್ ಯೋಗಿರಾಜ್ “ಶ್ರೀರಾಮ ಮೂರ್ತಿ ನಿರ್ಮಾಣಕ್ಕಾಗಿಯೇ ನಾನು ಹುಟ್ಟಿರುವುದೇನೋ ಅನ್ನಿಸುತ್ತಿದೆ. ರಾಮಲಲ್ಲಾನ ವಿಗ್ರಹ ನಿರ್ಮಾಣ ಕೆಲಸ ಸವಾಲಿನದ್ದಾಗಿತ್ತು. ದಕ್ಷಿಣ ಭಾರತ ಮತ್ತು ಉತ್ತರ ಭಾರತದ ಜನರಿಗೆ ಇಷ್ಟ ಆಗುವಂತಿರ ಬೇಕು ಎನ್ನುವ ಮನೋಭಾವ ದಿಂದ ಕೆಲಸ ಮಾಡಿದ್ದೇನೆ. ಕುಲದೇವರು, ಗುರುಗಳು ಮತ್ತು ತಂದೆಯವರನ್ನು ಪ್ರಾರ್ಥಿಸಿ ಕೆಲಸ ಮಾಡಿದ್ದೆ. ವಿಶ್ವಕರ್ಮ ಸಮುದಾಯದಲ್ಲಿ ಹುಟ್ಟಿದ್ದು ನನ್ನ ಪುಣ್ಯ. ಕೋಟ್ಯಂತರ ಜನರ ಪ್ರೀತಿ, ಆಶೀರ್ವಾದ ಹಾಗೂ ಪ್ರೋತ್ಸಾಹದಿಂದ ಧನ್ಯನಾಗಿದ್ದೇನೆ. ಯುವ ತಲೆಮಾರು ಈ ಕಲೆಯನ್ನು ಕಲಿತು ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಇದನ್ನು ಕಲಿಸುವ ಉದ್ದೇಶವಿದೆ” ಎಂದು ಹೇಳಿದರು.
ಶ್ರೀಮಜ್ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಪೀಠಾಧೀಶ್ವರರಾದ ಪರಮಪೂಜ್ಯ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿ ಆಶೀರ್ವಚನ ನೀಡಿ, “ಕಲಾ ಜಗತ್ತಿನಲ್ಲಿ ಅರುಣನ ಉದಯ ಆಗಿದೆ. ಐನೂರು ವರ್ಷಗಳ ಸಂಘರ್ಷದ ಅನಂತರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿ, ಬಾಲರಾಮನ ಪ್ರತಿಷ್ಠೆ ಆಗಿದೆ. ಇದಕ್ಕೆ ಅರುಣ್ ಯೋಗಿರಾಜರ ಕೊಡುಗೆ ಅಪಾರವಾದುದು. ಮುಂದಿನ ದಿನಗಳಲ್ಲಿ ಮಥುರಾದಲ್ಲಿ ‘ಬಾಲಮುರಳಿ ಕೃಷ್ಣನ’ ವಿಗ್ರಹ ನಿರ್ಮಾಣವೂ ಅವರಿಂದಲೇ ಆಗಲಿ’ ಎಂದು ಹಾರೈಸಿದರು. ಶಿಲ್ಪಗುರು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಥಶಿಲ್ಪಿ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ ಕೋಟೇಶ್ವರ ಶುಭಾಶಂಸನೆಗೈದರು. ಉಪಾಧ್ಯಕ್ಷೆ ರತ್ನಾವತಿ ಜೆ. ಬೈಕಾಡಿಯವರು ಪರಿಷತ್ತಿನ ಚಟುವಟಿಕೆಗಳ ವರದಿ ನೀಡಿದರು. ಪರಿಷತ್ ಅಧ್ಯಕ್ಷ ಡಾ. ಎಸ್.ಪಿ. ಗುರುದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಕಲಾಸಾಧಕರಿಗೆ ಸನ್ಮಾನ ಮತ್ತು ‘ಪಿ.ಎನ್. ಆಚಾರ್ಯ ವಿಶ್ವಕರ್ಮ ಕಲಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಶ್ರೀಯುತರಾದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತಾಧಿಕಾರಿ ಕೆ. ಉಮೇಶ ಆಚಾರ್ಯ, ಅವಿಭಜಿತ ದ.ಕ. ಜಿಲ್ಲೆಯ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ಬೆಂಗಳೂರಿನ ವಿಜ್ಞಾನಿ ಡಾ. ಜಿ.ಕೆ. ಆಚಾರ್ಯ, ಉದ್ಯಮಿ ಪ್ರಜ್ವಲ್ ಆಚಾರ್ಯ, ಪರಿಷತ್ ಗೌರವಾಧ್ಯಕ್ಷ ಪಿ.ಎನ್. ಆಚಾರ್ಯ, ಗೌರವ ಸಲಹೆಗಾರ ಅಲೆವೂರು ಯೋಗೀಶ ಆಚಾರ್ಯ, ವಿಶ್ವಕರ್ಮ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಸ್.ಆರ್. ಹರೀಶ ಆಚಾರ್ಯ, ಎಸ್.ಕೆ.ಜಿ. ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಶ್ರೀ ಪಿ. ಉಪೇಂದ್ರ ಆಚಾರ್ಯ ಮತ್ತು ವಿದುಷಿ ಶಾರದಾಮಣಿ ಶೇಖರ್ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಶ್ರೀ ಸುಂದರ ಆಚಾರ್ಯ ಬೆಳುವಾಯಿ ಸ್ವಾಗತಿಸಿ, ವಿದ್ವಾನ್ ಎನ್.ಆರ್. ದಾಮೋದರ ಶರ್ಮ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಉದಯಭಾಸ್ಕರ್ ಸುಳ್ಯ, ಕು. ಶ್ರೇಯಾ ಆಚಾರ್ಯ ಆಲಂಕಾರು, ಮಾಸ್ಟರ್ ಯಶಸ್ ಆಚಾರ್ಯ ಆಲಂಕಾರು ಇವರು ಯಕ್ಷ, ಕಾವ್ಯ ಮತ್ತು ನೃತ್ಯಾಭಿವಂದನೆಯನ್ನು ಪ್ರಸ್ತುತ ಪಡಿಸಿದರು. ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.