ಮಂಗಳೂರು : ಸನಾತನ ನಾಟ್ಯಾಲಯದ ವತಿಯಿಂದ ನಡೆದ ‘ಸನಾತನ ಸಂಗೀತ ನೃತ್ಯೋತ್ಸವ’ದಲ್ಲಿ ಮಣಿಕೃಷ್ಣ ಸ್ವಾಮಿ ಅಕಾಡೆಮಿ ವತಿಯಿಂದ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳದ ಕೃತಿಗಳನ್ನಾಧರಿಸಿದ 20ನೇ ಸಂಗೀತ ಕಛೇರಿ ‘ಮಂಜುನಾದ’ ಮತ್ತು ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ‘ಭರತನಾಟ್ಯ’ ಕಾರ್ಯಕ್ರಮವು ದಿನಾಂಕ 09-12-2023ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಭಾರತ್ ಸ್ಕೌಟ್ ಮತ್ತು ಗೈಡ್ ಉಡುಪಿ ಜಿಲ್ಲೆಯ ಗೈಡ್ ಕಮಿಷನ್ ಜ್ಯೋತಿ ಜೆ. ಪೈ ಕಾರ್ಕಳ ಮಾತನಾಡಿ “ಲಲಿತಕಲೆಗಳಲ್ಲಿ ಒಂದನ್ನಾದರೂ ಮಕ್ಕಳು ಕಲಿಯುತ್ತಿದ್ದರೆ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿಯೂ ಹೆಚ್ಚಿನ ಸಾಧನೆ ಮಾಡುವ ಛಲ ಮೂಡುತ್ತದೆ. ನೃತ್ಯ ಕಲಿಕೆಯಿಂದಾಗಿ ದೊರೆಯುವ ಏಕಾಗ್ರತೆಯು ಅವರ ಜೀವನವನ್ನು ಉತ್ತಮ ಮಟ್ಟಕ್ಕೆ ಏರಿಸುತ್ತದೆ. ನೃತ್ಯ ತರಗತಿಗಳನ್ನು ಸೇರಿದ ಮಕ್ಕಳಲ್ಲಿ ಕಲಿಕೆಯ ಹುಮ್ಮಸ್ಸು ಇದ್ದಂತೆಯೇ, ಅವರ ತಾಯಂದಿರಲ್ಲಿಯೂ ಹುಮ್ಮಸ್ಸು ಇರುತ್ತದೆ. ಹಾಗಿದ್ದಾಗ ಮಾತ್ರ ಮಕ್ಕಳು ಹೆಚ್ಚಿನ ಕಲಿಕೆಗೆ ಮನಸ್ಸು ಮಾಡಬಹುದಾಗಿದೆ. ಆದ್ದರಿಂದ ಪೋಷಕರು ಮಕ್ಕಳ ಪಠ್ಯೇತರ ಚಟುವಟಿಕೆಗಳ ಆಸಕ್ತಿಯನ್ನು ನಿರ್ಲಕ್ಷ ಮಾಡಬಾರದು” ಎಂದು ಹೇಳಿದರು.
‘ಮಂಜುನಾದ’ ಸಂಗೀತ ಕಛೇರಿಯಲ್ಲಿ ಬೆಂಗಳೂರಿನ ಅದಿತಿ ಪ್ರಹ್ಲಾದ್, ಸ್ಮೃತಿ ಭಾಸ್ಕರ್, ಕಿನ್ನಿಗೋಳಿಯ ಆಶ್ವೀಜಾ ಉಡುಪ ಮತ್ತು ಮಂಗಳೂರಿನ ಮೇಧಾ ಉಡುಪ ಇವರ ಹಾಡುಗಾರಿಕೆಗೆ ಪುತ್ತೂರಿನ ತನ್ಮಯೀ ಉಪ್ಪಂಗಳ ವಯಲಿನ್ ಮತ್ತು ಬೆಂಗಳೂರಿನ ಪ್ರಣವ್ ಸುಬ್ರಹ್ಮಣ್ಯ ಮೃದಂಗದಲ್ಲಿ ಸಾಥ್ ನೀಡಿದರು. ಸಂಗೀತ ಕಛೇರಿಯ ಬಳಿಕ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ, ನೃತ್ಯಗುರುಗಳಾದ ವಿದುಷಿ ಶಾರದಾಮಣಿ ಶೇಖರ್ ಮತ್ತು ಶ್ರೀಲತಾ ನಾಗರಾಜ್, ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ನಿರ್ದೇಶಕರಾದ ನಿತ್ಯಾನಂದ ರಾವ್, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ , ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು, ನೈರೋಬಿಯ ಆರ್.ಕೆ. ಶಿರೂರು, ನಾಗರಾಜ್ ಶೆಟ್ಟಿ ಅವರು ಉಪಸ್ಥಿತರಿದ್ದರು.