ಪ್ರಸಿದ್ಧ ‘ಸಾಧನ ಸಂಗಮ ಡಾನ್ಸ್ ಸೆಂಟರ್‘ ಇದರ ನೃತ್ಯಗುರುಗಳಾದ ಜ್ಯೋತಿ ಪಟ್ಟಾಭಿರಾಮ್ ಮತ್ತು ಡಾ. ಸಾಧನಾ ಶ್ರೀ ಗುರುದ್ವಯರ ಕಾಳಜಿಪೂರ್ಣ ಬದ್ಧತೆಯ ಭರತನಾಟ್ಯ ಮಾರ್ಗದರ್ಶನದಲ್ಲಿ ರೂಹು ತಳೆದ ಕಲಾಶಿಲ್ಪ ಕು. ಧೃತಿ ಪಿ. ಶೆಟ್ಟಿ ಬಹುಮುಖ ಪ್ರತಿಭೆ. ಶ್ರೀಮತಿ ಶೈಲಜಾ ಮತ್ತು ಪ್ರಶಾಂತ್ ಟಿ. ಇವರ ಪುತ್ರಿಯಾದ ಧೃತಿ ಕಳೆದ ಹತ್ತು ವರ್ಷಗಳ ತನ್ನ ಸತತ ಪರಿಶ್ರಮದ ಅಭ್ಯಾಸದಿಂದ, ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದ 5 ಹಂತಗಳ ಪರೀಕ್ಷೆಗಳು ಮತ್ತು ಕರ್ನಾಟಕ ಸರ್ಕಾರದ ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯಪರೀಕ್ಷೆಗಳಲ್ಲಿ ಅತ್ಯುಚ್ಚ ಅಂಕಗಳನ್ನು ಗಳಿಸಿದ ವೈಶಿಷ್ಟ್ಯ ಅವರದು. ಎನ್. ಸಿ. ಸಿ. ಯಲ್ಲಿ ಮೆಡಲ್ ಗಳಿಸಿರುವ ಬಿ. ಕಾಂ. ವಿದ್ಯಾರ್ಥಿನಿ ಧೃತಿ, 8 ಸೆಪ್ಟೆಂಬರ್ 2024ರ ಭಾನುವಾರ ಬೆಳಗ್ಗೆ 10 ಗಂಟೆಗೆ ಬಸವೇಶ್ವರ ನಗರದ ಕೆ. ಇ. ಎ. ಪ್ರಭಾತ್ ರಂಗಮಂದಿರದಲ್ಲಿ ವಿದ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ‘’ನೃತ್ಯ ದ್ಯುತಿ’’ ಎಂಬ ವಿಶಿಷ್ಟ ಶೀರ್ಷಿಕೆಯಲ್ಲಿ ನೆರವೇರಿಸಿಕೊಳ್ಳಲಿದ್ದಾರೆ. ಇವರ ಸುಮನೋಹರ ನೃತ್ಯವಲ್ಲರಿಯನ್ನು ಕಣ್ತುಂಬಿಕೊಳ್ಳಲು ಎಲ್ಲಾ ಕಲಾರಸಿಕರಿಗೂ ಆದರದ ಸುಸ್ವಾಗತ.
ಬೆಂಗಳೂರಿನ ಬಿ. ಎಂ. ಎಸ್. ಮಹಿಳಾ ಕಾಲೇಜಿನಲ್ಲಿ ಆಡಳಿತ ವಿಭಾಗದ ಉದ್ಯೋಗಿಯಾಗಿರುವ ಶ್ರೀಮತಿ ಎಸ್. ಡಿ. ಶೈಲಜಾ ಮತ್ತು ಹಿರಿಯ ಸಾಫ್ಟ್ ವೇರ್ ಉದ್ಯೋಗಿ ಟಿ. ಪ್ರಶಾಂತ ಇವರ ಮುದ್ದಿನ ಮಗಳಾದ ಧೃತಿಗೆ ನೃತ್ಯ ಬಾಲ್ಯದ ಒಲವು. ತನ್ನ 6ನೆಯ ವಯಸ್ಸಿನಲ್ಲಿಯೇ ಭರತನಾಟ್ಯ ಕಲಿಯಲಾರಂಭಿಸಿದ ಇವರು, ಕಳೆದ 10 ವರ್ಷಗಳಿಂದ ಡಾ. ಸಾಧನಾ ಶ್ರೀ ಬಳಿ ನೃತ್ಯ ಕಲಿಯುತ್ತಿದ್ದಾರೆ . ಓದಿನಲ್ಲೂ ಬುದ್ಧಿವಂತೆಯಾಗಿರುವ ಧೃತಿ ಇವರು ಶ್ರೀ ವಾಣಿ ಎಜುಕೇಷನ್ ಸೆಂಟರ್ ನಿಂದ ಶೇ. 94 ಉಚ್ಚ ಅಂಕಗಳನ್ನು ಪಡೆದು ಹತ್ತನೆಯ ತರಗತಿಯಲ್ಲಿ ತೇರ್ಗಡೆಯಾಗಿದ್ದು, ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಪಿ.ಯೂ. ಸಿ. ಯಲ್ಲಿ ಶೇ. 93 ಅಂಕಗಳನ್ನು ಪಡೆದು ಪ್ರಸ್ತುತ ಎರಡನೆಯ ವರ್ಷದ ಬಿ. ಕಾಂ. ಡಿಗ್ರಿ ವ್ಯಾಸಂಗ ಮಾಡುತ್ತಿದ್ದು, ಅಕೌಂಟ್ಸ್ ಮತ್ತು ಫೈನಾನ್ಸ್ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಭವಿಷ್ಯದಲ್ಲಿ ಇಂಟರ್ ನ್ಯಾಷನಲ್ ಫೈನಾನ್ಸ್ ಕ್ಷೇತ್ರದಲ್ಲಿ ಉನ್ನತವಾದುದನ್ನು ಸಾಧಿಸುವ ಆಕಾಂಕ್ಷೆ ಇವರದು.
ಈಗಾಗಲೇ ನಾಡಿನ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯಪ್ರದರ್ಶನಗಳನ್ನು ನೀಡಿರುವ ಧೃತಿ ಅಂತರ ಕಾಲೇಜು ನೃತ್ಯ ಸ್ಪರ್ಧೆ-ಉತ್ಸವಗಳಲ್ಲಿ ಭಾಗವಹಿಸಿದ್ದು, ‘ಹೊಂಬೆಳಕು’ ನೃತ್ಯೋತ್ಸವದಲ್ಲಿ ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವ ಹೆಗ್ಗಳಿಕೆ ಇವರದ್ದು. ಕಾಲೇಜಿನಲ್ಲಿ ಎನ್. ಸಿ. ಸಿ. ಗುಂಪಿನ ನೃತ್ಯಗಳಿಗೆ ನೃತ್ಯ ಸಂಯೋಜಿಸಿ ಸೃಜನಾತ್ಮಕತೆ ಪ್ರದರ್ಶಿಸಿದ್ದಾರೆ. ಸಾಧನ ಸಂಗಮದ ‘ನೃತ್ಯ ನಿಪುಣ ಡಾನ್ಸ್ ಎನ್ಸೆಂಬಲ್’ ಗುಂಪಿನಲ್ಲಿರುವ ಧೃತಿ ನಾಡಿನ ವಿವಿಧ ನೃತ್ಯೋತ್ಸವ-ನೃತ್ಯ ರೂಪಕಗಳಲ್ಲಿ ಮುಖ್ಯ ಪಾತ್ರವನ್ನು ವಹಿಸಿ ಕಲಾರಸಿಕರ ಗಮನ ಸೆಳೆದಿದ್ದಾಳೆ. ಅವುಗಳಲ್ಲಿ ಮುಖ್ಯವಾದುವುಗಳೆಂದರೆ – ಉತ್ತರಖಂಡ- ರಿಷಿಕೇಷದ ಗುರುಕುಲದಲ್ಲಿ ‘ಶ್ರೀ ಕೃಷ್ಣ’, ‘ವಿಶ್ವಾಮಿತ್ರ ಗಾಯತ್ರಿ’, ‘ಪ್ರೇಕ್ಷಾಗೃಹ’, ‘ನೃತ್ಯ ನಿರಂತರ’ ಮತ್ತು ‘ಬೊಂಬೆ ಜೀವ ಭಾವ’ ಮುಂತಾದ ಹಲವಾರು ನೃತ್ಯರೂಪಕಗಳಲ್ಲಿ ನರ್ತಿಸಿದ್ದಾಳೆ.
ಶಾಲೆಯಲ್ಲಿದ್ದಾಗಿನಿಂದ ಎನ್. ಸಿ. ಸಿ. ಯಲ್ಲಿ ಒಲವು. ಎನ್. ಸಿ. ಸಿ. ಕೆಡೆಟ್ ಆಗಿ ಬದ್ಧತೆಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಅದರ ಎ. ಬಿ. ಸಿ. ಎಲ್ಲಾ ಪರೀಕ್ಷೆಗಳಲ್ಲೂ ಯಶಸ್ವಿಯಾಗಿದ್ದು, ಕೆಡೆಟ್ ಅಂಡರ್ ಆಫೀಸರ್ ಆಗಿ ಪದವಿ ಗಳಿಸಿದ ಹೆಮ್ಮೆ ಇವರದ್ದು. ಸ್ಟೂಡೆಂಟ್ ಕೌನ್ಸಿಲ್ ಭಾಗವಾಗಿ ಎನ್. ಸಿ. ಸಿ. ಸೆಕ್ರೆಟರಿಯಾಗಿ ಸೇವೆ ಸಲ್ಲಿಸಿದ್ದಾರೆ. ಕಂಚಿನ ಪದಕವನ್ನು ಪಡೆದ ವಿಶೇಷ ಇವರದು. ರಾಷ್ಟ್ರೀಯ ಭಾವೈಕ್ಯತಾ ಜಾಗೃತಿ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ತನ್ನ ವಾಗ್ಶಕ್ತಿಯನ್ನು ಪ್ರದರ್ಶಿಸಿದ್ದಾಳೆ. ಜೊತೆಗೆ ಅಲ್ಲಿ ಸಮೂಹ ನೃತ್ಯ , ನೃತ್ಯ ರೂಪಕಗಳಲ್ಲೂ ಗಮನಾರ್ಹ ಸಾಧನೆ ತೋರಿದ್ದಾರೆ. ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದು ತನ್ಮೂಲಕ ತನ್ನ ನಾಯಕತ್ವದ ಗುಣವನ್ನು ಮೆರೆದಿದ್ದಾರೆ. ಈ ಎಲ್ಲ ಚಟುವಟಿಕೆಗಳೊಂದಿಗೆ ಧೃತಿಗೆ , ಡಿಜಿಟಲ್ ಆರ್ಟ್ ಬಗ್ಗೆ ವಿಶೇಷ ಒಲವು. ಇದನ್ನು ಫ್ರೀಲಾನ್ಸ್ ಉದ್ಯೋಗವಾಗಿಯೂ ಬಳಸಿಕೊಳ್ಳುತ್ತಿದ್ದು, ಕೆಲವು ಕಂಪೆನಿಗಳಿಗೆ ವಿನ್ಯಾಸಕಾರ್ತಿಯಾಗಿ ಸೇವೆ ಸಲ್ಲಿಸುತ್ತಿರುವುದು ಧೃತಿಯ ಕಲಾತ್ಮಕ ಸೇವೆಯ ಇನ್ನೊಂದು ಆಯಾಮ.
ವೈ.ಕೆ.ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.