ಶ್ರೀನಿವಾಸರಾವ್ ರುಕ್ಮಿಣಿಯಮ್ಮ ದಂಪತಿಗಳ ಪುತ್ರ ಸಮೇತನಹಳ್ಳಿ ರಾಮ ರಾವ್ ಇವರು 24 ನವೆಂಬರ್ 1917ರಲ್ಲಿ ಬೆಂಗಳೂರಿನ ಹೊಸಕೋಟೆ ತಾಲೂಕಿನ ಸಮೇತನಹಳ್ಳಿಯಲ್ಲಿ ಜನಿಸಿದರು. ಬೆಂಗಳೂರು ಸೆಂಟ್ರಲ್ ಹೈಸ್ಕೂಲ್ ನಿಂದ ಎಸ್.ಎಸ್.ಎಲ್.ಸಿ. ತೇರ್ಗಡೆ ಹೊಂದಿದ ನಂತರ ಉದ್ಯೋಗಕ್ಕಾಗಿ ಪ್ರಯತ್ನ ಮಾಡಿದವರು ರಾಮರಾಯರು ವೈಮಾನಿಕ ಕಚೇರಿ, ಸೈನಿಕ ಕಚೇರಿಗಳಲ್ಲಿ ಕಾರ್ಯನಿರ್ವಹಿಸಿ ನಂತರ ಮೈಸೂರು ಸರಕಾರದ ಆರೋಗ್ಯ ಇಲಾಖೆಯಲ್ಲಿ ಸ್ಯಾನಿಟರಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದವರು. ಬೆಂಗಳೂರು ಪುರಸಭೆ, ಹಾಸನ ಪುರಸಭೆ, ಬ್ಯುರೋ ಆಫ್ ಮಲೇರಿಯಾಲಜಿ ಮುಂತಾದ ಕಡೆಗಳಲ್ಲಿ ಹಿರಿಯ ಆರೋಗ್ಯ ತಪಾಸಣಾಧಿಕಾರಿಯಾಗಿಯೂ, ಮಧುಗಿರಿ ಪುರಸಭೆ, ಪಾಂಡವಪುರ ಆರೋಗ್ಯ ಕೇಂದ್ರ, ನಂಜನಗೂಡು ತಾಲೂಕು, ಹೊಸಕೋಟೆ ಆರೋಗ್ಯ ಕೇಂದ್ರ ಹೀಗೆ ಹಲವು ಕಡೆ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರು.
ಸಾಹಿತ್ಯ ಲೋಕದಲ್ಲಿ ವಿಹರಿಸದಿದ್ದರೂ ಸಾಹಿತ್ಯದ ಬಗ್ಗೆ ಅಪಾರ ಒಲವು ಇದ್ದ ಕಾರಣ ಅನೇಕ ಕೃತಿಗಳನ್ನು ರಚಿಸಿ ಗುರುತಿಸಿಕೊಂಡವರು ರಾಮರಾಯರು. ಭೀಷ್ಮ ಸಂಕಲ್ಪ, ತಲಕಾಡುಗೊಂಡ, ಮಹಾಶ್ವೇತೆ, ದ್ರೋಹಾಡಂಬರ, ಶ್ರೀ ಕೃಷ್ಣ ಮಾನಸ, ಶಿಲ್ಪ ಸಂಗೀತ ಇತ್ಯಾದಿ 10 ನಾಟಕಗಳನ್ನು ರಚಿಸಿದ್ದಾರೆ. ಎರೆಮರೆಯ ಹೂ, ಮೊನೆಗಾರ, ನೃತ್ಯ ಸರಸ್ವತಿ, ಯದುವೊಡೆಯ, ಸಿರಿಯಲ ದೇವಿ ಇತ್ಯಾದಿ 9 ಕಾದಂಬರಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಸ್ವರ್ಗ ಸೋಪಾನ, ಪ್ರಾಣವೀಣೆ, ಈಸಬೇಕು ಇತ್ಯಾದಿ ಇವರ ಕಥಾಸಂಕಲನಗಳು ಮತ್ತು ರಾಸಲೀಲೆ ಎಂಬ ಗೀತಾ ನಾಟಕ, ಶಾಕುಂತಲ ಮಹಾಕಾವ್ಯ, ಟಿಪ್ಪು ಸುಲ್ತಾನ್ ಎಂಬ ಅನುವಾದ ಕೃತಿಯನ್ನು ಇವರ ಲೇಖನಿಯಿಂದ ಮೂಡಿ ಬಂದವುಗಳು. ‘ಕೋಟೆಮನೆ’ ಇತ್ಯಾದಿ 29ಕ್ಕೂ ಹೆಚ್ಚು ಆತ್ಮಕಥೆಯ ಕೃತಿಗಳನ್ನು ಪ್ರಕಟಪಡಿಸಿದ ಹೆಗ್ಗಳಿಕೆ ಇವರದು.
ರಾಮರಾಯರ ಕೃತಿಗಳು ಶಾಲಾ ಕಾಲೇಜು ಮಟ್ಟದಲ್ಲಿಯೂ ಪಠ್ಯಪುಸ್ತಕಗಳಾಗಿ ಆಯ್ಕೆಯಾಗಿವೆ. ‘ಎಲೆ ಮರೆಯ ಹೂ’ ಪ್ರೌಢಶಾಲಾ ತರಗತಿಗೆ, ‘ತಲಕಾಡುಗೊಂಡ’ ನಾಟಕ ಬಿ.ಎ., ಬಿ.ಎಸ್.ಸಿ. ಮತ್ತು ಪದವಿ ಪೂರ್ವ ತರಗತಿಗಳಿಗೆ. ‘ಸವತಿಗಂಧವಾರಣೆ’ ಕಾದಂಬರಿ ಬಿ.ಕಾಂ. ತರಗತಿ, ‘ನಾಟ್ಯಮಂದಾರ’ ನಾಟಕ ಬಿ.ಎ. ತರಗತಿಗೆ ಹೀಗೆ ಇವರ ಸಾಹಿತ್ಯದ ರಸಸ್ವಾದವನ್ನು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಅನುಭವಿಸಿದ್ದಾರೆ.
ಸಮೇತನಹಳ್ಳಿ ರಾಮ ರಾಯರ ಪತ್ನಿಯ ಹೆಸರಿನಲ್ಲಿ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿ ಸ್ಥಾಪನೆ ಹಾಗೂ ರಾಮರಾಯ ಹೆಸರಿನಲ್ಲಿ ಬಿ.ಎಂ.ಶ್ರೀ ಪ್ರತಿಷ್ಠಾನ ಮತ್ತು ಗೋಖಲೆ ಸಾರ್ವಜನಿಕ ದತ್ತಿನಿಧಿ ಸಂಸ್ಥೆಯಲ್ಲಿ ದತ್ತಿನಿಧಿಗಳನ್ನು ಸ್ಥಾಪನೆಯ ಮೂಲಕ ಸಮೇತನಹಳ್ಳಿ ರಾಮರಾಯರ ಹೆಸರಿನಲ್ಲಿ ಉತ್ತಮ ಕೆಲಸಗಳು ಮುಂದುವರಿಯುತ್ತಾ, ಜೀವಿತಕಾಲದಲ್ಲಿ ಸಾಹಿತ್ಯದ ಬಗ್ಗೆ ಅವರಿಗಿದ್ದ ಒಲವನ್ನು ಮತ್ತು ಅವರು ಮಾಡಿದ ಸಾಧನೆಯನ್ನು ಜನತೆಗೆ ತಿಳಿಸುವ ಪ್ರಯತ್ನಗಳು ನಡೆಯುತ್ತಿದೆ. 5 ಅಕ್ಟೋಬರ್ 1999ರಲ್ಲಿ ರಾಮರಾಯರು ಇಹವನ್ನು ತೊರೆದರು.
ಇವರು ಮಾಡಿದ ಸಾಹಿತ್ಯ ಸೇವೆಗೆ ಹಲವಾರು ಪುರಸ್ಕಾರ ಸನ್ಮಾನಗಳು ಇವರಿಗೆ ಸಂದಿವೆ. ‘ಶಾಕುಂತಲ ಕಾವ್ಯ’ಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ‘ಸ್ವರ್ಗ ಸೋಪಾನ’, ‘ತಲಕಾಡುಗೊಂಡ’, ‘ಶಾಕುಂತಲ’ ಕೃತಿಗಳಿಗೆ ರಾಜ್ಯ ಸರಕಾರದ ಬಹುಮಾನ, ‘ಸಿರಿಯಲ ದೇವಿ’ ಕೃತಿಗೆ ಸಂಯುಕ್ತ ಕರ್ನಾಟಕ ಕಾದಂಬರಿ ಸ್ಪರ್ಧೆ ಬಹುಮಾನ, ‘ಶಿಲ್ಪ ಸಂಗೀತ’ ಮತ್ತು ‘ಶ್ರೀ ಕೃಷ್ಣ ದರ್ಶನ’ ಕೃತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ, ‘ಪರಶುರಾಮ’ ಕಾದಂಬರಿಗೆ ವಿಶ್ವೇಶ್ವರಯ್ಯ ಸ್ಮಾರಕ ಪ್ರತಿಷ್ಠಾನ ಪ್ರಶಸ್ತಿಗಳು ದೊರೆತಿವೆ. 1998ರಲ್ಲಿ ಕನ್ನಡ ಸಾಹಿತ್ಯ ಪ್ರೇಮಿಗಳು ಸೇರಿ ರಾಮರಾಯರಿಗೆ ‘ರಾಸ ದರ್ಶನ’ ಎಂಬ ಗೌರವ ಗ್ರಂಥವನ್ನು ಅರ್ಪಿಸಿದ್ದು, ಸಾಹಿತಿಗಳಿಗೆ ಅವರ ಮೇಲಿದ್ದ ಭಕ್ತಿ, ಪ್ರೀತಿ ಗೌರವವನ್ನು ತೋರಿಸುತ್ತದೆ. ರಾಮರಾಯರ ಜನ್ಮದಿನವಾದ ಇಂದು ಅವರ ಸಾಹಿತ್ಯ ಸೇವೆಯನ್ನು ಸ್ಮರಿಸೋಣ.
